ತಂಗಾಳಿ ಬರುತಲಿದೆ ಮೆಲ್ಲಮೆಲ್ಲಾ!   4(2081)

ಗಾಳಿಯಲ್ಲಿದೆ ಕಂಪು ಜಾಜಿಯದೆಲ್ಲಾ! (ಬೆ)
-ಳಿಗ್ಗಿನ ವೇಳೆಗದು ಹೊಂದಿಹುದಲ್ಲಾ!
ಲವರ್ಧಕ ಮನಕಾಗಿಹುದಲ್ಲಾ! (ಹ)
-ರುಷ ನಿತ್ಯಕರ್ಮಕ್ಕಾಗಿದೆಯಲ್ಲಾ!
ತ್ವ ಗೀತಾಗಾನ ಕೇಳುತಿದೆಯಲ್ಲಾ! (ಮಾ)
-ಲಿಕನ ದಯೆಯಿಂದಿದಾಗಿಹುದಲ್ಲಾ! (ಎ)
-ದೆಯೊಳಗವ ವಾಸವಾಗಿಹನಲ್ಲಾ! (ಉ)
-ಮೆಯೊಡಗೂಡ್ಯಾನಂದದಿಂದಿಹನಲ್ಲಾ! (ಒ)
-ಲ್ಲನವನೀಗನ್ಯ ವಿಚಾರವನ್ನೆಲ್ಲಾ! (ದ)
-ಮೆ, ಶಮಯಿಂದ ಶಕ್ತನಾಗಿಹನಲ್ಲಾ! (ಘು)
-ಲ್ಲಾ ನಿರಂಜನಾದಿತ್ಯನಿಷ್ಟವಿದೆಲ್ಲಾ!!!

ತಂಗಿಯಲ್ಲಲ್ಲಿ ನೋಡುವುದೇನು ತಂಗಿ? (ಭಂ)   3(1055)

-ಗಿ, ಲಿಂಗಿ, ರಂಗಿ, ಸಂಗಿ, ಬಾ ಬೇಗ ತಂಗಿ!
ಜಮಾನ ಕಾದಿಹನು ಬಾ ಬೇಗ ತಂಗಿ! (ನ)
-ಲ್ಲನಲ್ಲದೆ ಬೇರಾರು ಗತಿ, ಬಾ ತಂಗಿ! (ಅ)
-ಲ್ಲಿರುವ ಸುಖವೆಲ್ಲಿಹುದು ಬಾ ತಂಗಿ!
ನೋವು, ಬಾವು, ಸಾವು, ಅಲ್ಲಿಲ್ಲ ಬಾ ತಂಗಿ! (ನೋ)
-ಡುವುದೇನು, ಮೊಂಡಾಟ ಸಾಕು, ಬಾ ತಂಗಿ! (ಕಾ)
-ವುದವನ ಭಾರವೆಂದೋಡಿ ಬಾ ತಂಗಿ!
ದೇಶ, ಕಾಲಾನುಕೂಲವಿ ಬಾ ತಂಗಿ! (ಅ)
-ನುಪಮಾರ್ಯನೊಡಗೂಡಿರು, ಬಾ ತಂಗಿ!
ತಂಗಿ ಭಾಸುರಾಂಗಿಯಾಗಿರು ಬಾ ತಂಗಿ! (ಯೋ)
-ಗಿ ನಿರಂಜನಾದಿತ್ಯನಾಗು ಬಾ ತಂಗಿ!!!

ತಂಡ ತಂಡ ಮೋಡವಿದ್ದರೇನೋ ಗಂಡ? (ಹೆಂ)   4(2451)

-ಡತಿಯ ಬಿಟ್ಟಿರಬಹುದೇನೋ ಗಂಡ?
ತಂದೆ, ತಾಯಿ ನೀನೆಂದಿಲ್ಲವೇನೋ ಗಂಡ? (ಭಂ)
-ಡಳೆಂದೆನ್ನ ಷಂಡನಾಗ್ವುದೇಕೋ ಗಂಡ?
ಮೋಸವಿನ್ನಾದ್ರೂ ಮಾಡಬೇಡ್ವೋ ಗಂಡ! (ಗಂ)
-ಡ, ಹೆಂಡಿರಖಂಡವೆಂದೀಗ್ತೋರೋ ಗಂಡ!
ವಿಧಿ, ಹರಿ, ಹರರ್ಯಾರು ಹೇಳೋ ಗಂಡ! (ತ)
-ದ್ದರ್ಶನಾನಂದವನ್ನೀಗ ನೀಡೋ ಗಂಡ!
ರೇಗಿದ್ರೆ ಬಿಟ್ಟುಬಿಡ್ವೆನೇನೋ ನಾ ಗಂಡ?
ನೋವ್ಸಾವಪ್ಪಿ ಸೇರುವೆನಾ ನಿನ್ನ ಗಂಡ!
ಗಂಗೆಯ ಗಂಡ ಮಾರ್ತಾಂಡನೆನ್ನ ಗಂಡ! (ಮೋ)
-ಡವಟ್ಟಿ ಬಾ ನಿರಂಜನಾದಿತ್ಯ ಗಂಡ!!!

ತಂದೆ ತಾಯಿಯೆನಗೆ ದತ್ತ ಸತ್ಯ! (ತಂ)   5(3050)

-ದೆ, ತಾಯಿ ಬೇರೆಂದರಾಗ್ವುದಸತ್ಯ!
ತಾಪಸೋತ್ತಮನೆನ್ನ ತಂದೆ ಸತ್ಯ! (ಬಾ)
-ಯಿಗೆ ಬಂದಂತಾಡುವುದೆಲ್ಲಾ ಅಸತ್ಯ! (ಮಾ)
-ಯೆಯನು ಮೀರಿದವನಾತ ಸತ್ಯ! (ತ)
-ನಯನಿದನರಿತಿಹನು ನಿತ್ಯ! (ಬ)
-ಗೆ ಬಗೆಯ ನಾಮ, ರೂಪ ಅಸತ್ಯ! (ಸು)
-ದರ್ಶನಧಾರಿಯೂ ಅವನೇ ಸತ್ಯ! (ಕ)
-ತ್ತಲೆ ಕವಿದವಗಿದು ಅಸತ್ಯ!
ರ್ವರಿದನರಿತು ಬಾಳಿ ನಿತ್ಯ! (ನಿ)
-ತ್ಯ, ನಿರಾಮಯ ನಿರಂಜನಾದಿತ್ಯ!!!

ತಂದೆ ನಿನಗೆ ನಾನು ಕಾಮಾ! (ನಿಂ)   5(2620)

-ದೆಗೀಡುಮಾಡ್ಬೇಡೆನ್ನ ಕಾಮಾ!
ನಿನ್ನವಸ್ಥೆ ನೋಡಲಾರೆ ಕಾಮಾ!
ನ್ನಲ್ಲಿ ಐಕ್ಯವಾಗಿರೋ ಕಾಮಾ!
ಗೆಳೆಯರನ್ಯರೇಕೋ ಕಾಮಾ?
ನಾನೆಲ್ಲವೆಂದರಿಯೋ ಕಾಮಾ!
ನುತಿಸು ಸತತೆನ್ನ ಕಾಮಾ!
ಕಾಲ ಭಯವಿಲ್ಲಾಗ ಕಾಮಾ! (ಕಾ)
-ಮಾ,! ನಿರಂಜನಾದಿತ್ಯಾರಾಮಾ!!!

ತಂದೆ, ತಾಯಿ ನೀನಾಗಣ್ಣಾ! (ಬಂ)   6(3910)

-ದೆನ್ನನ್ನು ಸೇರಿಕೊಳ್ಳಣ್ಣಾ!
ತಾಮಸ ಮಾಡಬೇಡಣ್ಣಾ! (ಆ)
-ಯಿತ್ತೆಪ್ಪತ್ತೊಂದು ವರ್ಷಣ್ಣಾ!
ನೀನೇ ನಾನೆಂದ್ರಾಯ್ತೇನಣ್ಣಾ?
ನಾನದನ್ನು ಕಾಣ್ಬೇಕಣ್ಣಾ! (ಹ)
-ಗಲಿರುಳದೇ ಹುಚ್ಚಣ್ಣಾ! (ಅ)
-ಣ್ಣಾ, ನಿರಂಜನಾದಿತ್ಯಣ್ಣಾ!!!

ತಂದೆಗೆ ಹೋಳಿಗೆ, ಮಗನಿಗೆ ಜೋಳಿಗೆ! (ತಂ)   6(4252)

-ದೆ, ಮಗನ ಬಾಳದೇಕೆ ಬಗೆಬಗೆ? (ಹೇ)
-ಗೆ? ಎರಡೂ ಒಂದಾಗುವ ಬಗೆ ಹೇಗೆ?
ಹೋಗದಿರ್ಬೇಕು ಮಗ ಮನೆಮನೆಗೆ! (ಹೋ)
-ಳಿಗೆಯಲ್ಲೊಂದು ಭಾಗ ಆಗಾತನಿಗೆ! (ಬ)
-ಗೆಯದಿರಬೇಕು ಕೆಡುಕು ತಂದೆಗೆ!
ನೋವಾಕ್ಕಾಯ ಶುದ್ಧವಾಗ್ಬೇಕವಗೆ!
ತಿ ನೀನೆಂದು ಶರಣಾ

ಕ್ತಂದೆಗೆ!
ನಿಶ್ಚಲ ಭಕ್ತಿಯಿರಬೇಕು ಮುಕ್ತಿಗೆ! (ನೆ)
-ಗೆಯಲ್ಕಾಗದಾಗಸಕ್ಕೊಂದೇ ಹಾರಿಗೆ!
ಜೋಕೆ ತಪ್ಪಿದ್ರೆ ಮೃತ್ಯು ತನ್ನ ಪಾಲಿಗೆ! (ತಾ)
-ಳಿದವ ಬಾಳ್ಯಾನು!” ಬರ್ಲಿ ನೆನಪಿಗೆ! (ಆ)
-ಗೆ! ಹೀಗೆಲ್ಲರೂ ನಿರಂಜನಾದಿತ್ಯಾಗೆ!!!

ತಗೊಳ್ಳಿ ಬಿಸಿ ಬಿಸಿ ರೊಟ್ಟಿ!   6(3529)

ಗೊಲ್ಲಕೃಷ್ಣನ ಮನೇ ರೊಟ್ಟಿ!
(ಬೆ)-ಳ್ಳಿ ತಟ್ಟೆಯೊಳಗಿಟ್ಟ ರೊಟ್ಟಿ!
ಬಿಟ್ಟಿ ಕೊಡುತ್ತಿಹರೀ ರೊಟ್ಟಿ!
ಸಿಕ್ಕದು ಎಲ್ಲರಿಗೀ ರೊಟ್ಟಿ!
ಬಿಟ್ಟರೀಗ ಕೆಟ್ಟಿ, ಈ ರೊಟ್ಟಿ!
ಸಿಹಿಯಾಗಿಹಾ ಬೆಣ್ಣೆ ರೊಟ್ಟಿ!
ರೊಕ್ಕಾಕೊಟ್ರೂ ಸಿಕ್ಕದಾ ರೊಟ್ಟಿ!
(ಗ)-ಟ್ಟಿ ನಿರಂಜನಾದಿತ್ಯ ಜಟ್ಟಿ!!!

ತಟ್ಟೆ ಇಟ್ಟದ್ಯಾರಿಗೋ, ಉಂಡವರ್ಯಾರೋ? (ಪ)   5(3123)

-ಟ್ಟೆ ಮಡಿಯುಟ್ಟುಕೊಂಡು ಬಂದವರ್ಯಾರೋ!
ಡೀ ದಿನ ಧ್ಯಾನ ಮಾಡಿದವರ್ಯಾರೋ! (ಪ)
-ಟ್ಟವೇರಿದ್ದು ಯಾರೋ, ಆಳಿದವರ್ಯಾರೋ! (ವಿ)
-ದ್ಯಾವಂತರು ಯಾರೋ, ಪಾಠ ಹೇಳಿದ್ಯಾರೋ!
ರಿಸಿ, ಮುನಿಗಳ್ಯಾರೋ ಹರಸಿದ್ಯಾರೋ!
ಗೋಪುರ ಕಟ್ಟಿದ್ಯಾರೋ, ವಾಸಿಸಿದ್ಯಾರೋ!
ಉಂಡಾಡಿಗಳ್ಯಾರೋ, ದಂಡ ತೆತ್ತವ್ರ್ಯಾರೋ!
ಮರುಧರನ್ಯಾರೋ, ಬಾರಿಸಿದ್ಯಾರೋ!
ರದನ್ಯಾರೋ, ವರಕೊಡುವುದ್ಯಾರೋ! (ಸೂ)
-ರ್ಯಾರಾಧಕಾರೋ, ವಿವರ ಹೇಳ್ವುದಾರೋ! (ಯಾ)
-ರೋ, ನಿರಂಜನಾದಿತ್ಯಾ ವಿಧಿಯ ತೋರೋ!!!

ತಡಕದಿರತ್ತಿತ್ತಾಗು ಗುರುಚಿತ್ತ! (ಬ)   3(1047)

-ಡ ಬಡಿಸುವುದೆಲ್ಲಾ ಕೆರಳಿ ಪಿತ್ತ!
ನಸಿನಾ ಸಂಸಾರವದಸ್ತವ್ಯಸ್ತ!
ದಿವ್ಯ ನಾಮಾಮೃತ ಪಾನವೇ ಪ್ರಶಸ್ತ!
ಸಾಸ್ವಾದಾನಂದಿಸುವನು ವಿರಕ್ತ! (ಅ)
-ತ್ತಿತ್ತೋಡಾಡುತಿರ್ಪುದು ಚಂಚಲ ಚಿತ್ತ! (ದ)
-ತ್ತಾತ್ರೇಯನನುಗ್ರಹದಿಂದ ನಿವೃತ್ತ!
ಗುಹ್ಯ, ಜಿಹ್ವಾ ಚಾಪಲ್ಯದಿಂದ ಸ್ವಸ್ತ!
ಗುಣಾತೀತನಾದಾಗ ಬಂಧ ವಿಮುಕ್ತ! (ತ)
-ರು, ಲತಾದಿಯಂತರ್ಯಾಮಿ ಸರ್ವಶಕ್ತ!
ಚಿರಂಜೀವಿ ಹನುಮಂತ ರಾಮಭಕ್ತ! (ಚಿ)
-ತ್ತ, ನಿರಂಜನಾದಿತ್ಯ ತಾ ಗುರುದತ್ತ!!!

ತಡಮಾಡಿ ಬಂದೆ ನೀನು! (ಒ)   5(2804)

-ಡನಾಟಕ್ಕಾತುರ ನಾನು!
ಮಾಯೆಗೊಳಗಾದೆ ನೀನು!
(ಆ)ಡಿ ಫಲವೇನೀಗ ನಾನು?
ಬಂದ ಮೇಲರಿವೆ ನೀನು!
ದೇವರಿಗೆ ದೇವರು ನಾನು!
ನಿಡೆಲ್ಲವೆನಗೆ ನೀನು! (ನೀ)
-ನು ನಿರಂಜನಾದಿತ್ಯಾನು!!!

ತದೇಕಧ್ಯಾನಿಗಿನ್ನೇನು ಬೇಕಮ್ಮಾ?   2(705)

ದೇವಿಯಾಗಿರುವುದಿದರಿಂದಮ್ಮಾ!
ನಸು, ನೆನಸಿನಲೀ ರೀತ್ಯಮ್ಮಾ!
ಧ್ಯಾನ ಲಯಿಸಿದಾಗರ್ಧಾಂಗಿಯಮ್ಮಾ!
ನಿದ್ರಾ, ಸಮಾಧಿಯಲೆರಡಿಲ್ಲಮ್ಮಾ!
ಗಿರಿಜಾಪತಿಗಿದಾನಂದವಮ್ಮಾ! (ಇ)
-ನ್ನೇನನುಗ್ರಹ ಬೇಕು ನಿನಗಮ್ಮಾ! (ಅ)
-ನುನಯದ ಸೇವಾ ಫಲವಿದಮ್ಮಾ!
ಬೇಡುವಗತ್ಯ ಸ್ವಧರ್ಮಿಗಿಲ್ಲಮ್ಮಾ!
ರ್ಮವೇ ಫಲರೂಪವಪ್ಪುದಮ್ಮಾ! (ಅ)
-ಮ್ಮಾ! ನಿರಂಜನಾದಿತ್ಯ ಸಾಕ್ಷಿಯಮ್ಮಾ!!!

ತನಗೆ ತಾನು ಗುರುವಾಗ್ವುದೇ ಗುರಿ!   6(3848)

ರರಿಗಿದಕ್ಕೆ ನೆರವಾಗ್ಬೇಕ್ಹರಿ!
ಗೆಳೆಯ ಅರ್ಜುನನಿಗಾದ ಪರಿ!
ತಾನೇಕಾಗ್ಬೇಕನ್ಯರ ಮೇಲಧಿಕಾರಿ?
ನುಡಿದಂತೆ ನಡೆಯದೇ ಹಾಳಾದಿರಿ!
ಗುಹ್ಯಾದಿಂದ್ರಿಯಕ್ಕಾಳಾಗೀಗ ಕೆಟ್ಟಿರಿ!
ರುಜುಮಾರ್ಗದಲ್ಲೇ ಸದಾ ನಡೆಯಿರಿ!
ವಾದದಲ್ಲೇ ಆಯುಷ್ಯ ಕಳೆಯದಿರಿ! (ಆ)
-ಗ್ವುದೆಲ್ಲಾ ಒಳ್ಳೆಯದಕ್ಕೆಂದರಿಯಿರಿ!
ದೇವರೇ ನೀವಾಗ್ವುದಕ್ಕೆ ಯತ್ನಿಸಿರಿ
ಗುಡಿ ನಿಮ್ಮ ದೇಹವೆಂದು ತಿಳಿಯಿರಿ! (ಹ)
-ರಿ ನಿರಂಜನಾದಿತ್ಯನೆಂದರಿಯಿರಿ!!!

ತನಗೆ ಬೇಕಾದರನೃತವೂ ಅಮೃತ!   5(3232)

ರಹರಿ ಹಿರಣ್ಯಕಶ್ಯಪಗನೃತ!
ಗೆಳೆಯನಾಗಿ ಬಾಲ ಪ್ರಹ್ಲಾದಗಮೃತ!
ಬೇವಾರಸಿ ಬೀದಿನಾಯಿಗಮೇಧ್ಯಮೃತ!
ಕಾರಿರುಳಿಗೆ ಬೆಳಕಾದರೂ ಅನೃತ!
ತ್ತನಾಮ ಅವನ ಭಕ್ತನಿಗಮೃತ!
ತಿಯ ಬಿಟ್ಟಿನ್ನೆಲ್ಲವೂ ಕಾಮಗನೃತ!
ನೃತ್ಯ, ನಾಟಕ ರಸಿಕನಿಗೆ ಅಮೃತ!
ತ್ವ ಚಿಂತಕನಿಗೆ ಅವೆಲ್ಲಾ ಅನೃತ! (ಆ)
-ವೂರಾದರೂ ವಿರಕ್ತನಿಗೆ ಪಂಚಾಮೃತ!
ದ್ವೈತಿಗೆ ದ್ವೈತವೆಂಬುದೆಲ್ಲಾ ಅನೃತ!
ಮೃತ್ಯುಂಜಯಗೆಲ್ಲಾ ಸಿದ್ಧಾಂತವೂ ಅಮೃತ! (ಆ)
-ತ ನಿರಂಜನಾದಿತ್ಯಾನಂದನಾಗ್ಯಮೃತ!!!

ತನು ಮನ ಧನ ಘನ ಶ್ಯಾಮ! (ಅ)   2(550)

-ನುಪಮ ಪ್ರೇಮಧನ ಆ ಶ್ಯಾಮ!
ಧುರ ಮುರಲೀಧರಾ ಶ್ಯಾಮ!
ಟವರ, ರಾಧಾವರಾ ಶ್ಯಾಮ! (ಅ)
-ಧರ, ಮಧುರ ಸುಂದರಾ ಶ್ಯಾಮ!
ಗಧರ, ಅಘಹರಾ ಶ್ಯಾಮ!
ಮಘಮ ಸುಶರೀರಾ ಶ್ಯಾಮ! (ಮ)
-ನ ಮಂದಿರ ಅಲಂಕಾರಾ ಶ್ಯಾಮ! (ದೃ)
-ಶ್ಯಾನಂದ ವರ ಗಂಭೀರಾ ಶ್ಯಾಮ!
-ಮಮ ನಿರಂಜನಾದಿತ್ಯಾ ಶ್ಯಾಮ!!!

ತನು ಮಾನಸ ಮಂದಿರಕ್ಕಾ! (ಅ)   4(1532)

-ನುಭವಕಿದಿರಬೇಕಕ್ಕಾ!
ಮಾಧವನಾಗಬೇಕಿಲ್ಲ್ಯಕ್ಕಾ!
ರಜನ್ಮ ಬಹು ಶ್ರೇಷ್ಠಕ್ಕಾ!
ತ್ಸಂಗದಕಿರಬೇಕಕ್ಕಾ!
ಮಂಗ ರಂಗನಿದರಿಂದಕ್ಕಾ!
ದಿವ್ಯನಾಮ ಸೀತಾರಾಮಕ್ಕಾ! (ವ)
-ರ ಗುರೂಪದೇಶವಿದಕ್ಕಾ! (ಅ)
-ಕ್ಕಾ, ಶ್ರೀ ನಿರಂಜನಾದಿತ್ಯಕ್ಕಾ!!!

ತನು, ಮನ ಪ್ರಾಣ ನಿನ್ನದು![ಅ]   2(892)

-ನುದಿನದ ಸೇವೆ ನಿನ್ನದು! (ಅ)
-ಮನಸ್ಕನೆಂಬಾಟ ನಿನ್ನದು!
ರ, ನಾರಿ ರೂಪ ನಿನ್ನದು!
ಪ್ರಾಬ್ಧ, ಸಂಚಿತ ನಿನ್ನದು! (ತೃ)
-ಣ, ಕಾಷ್ಠ, ಪಾಷಾಣ ನಿನ್ನದು!
ನಿತ್ಯ ನಿಜ ಬೋಧ ನಿನ್ನದು! (ನ)
-ನ್ನ, ನಿನ್ನ ಅಭೇದ ನಿನ್ನದು! (ಅ)
-ದು ನಿರಂಜನಾದಿತ್ಯನದು!!!

ತನು, ಮನಕ್ಕೆ ಬೇಕಿಲ್ಲನ್ಯಸಾಧನ! (ಮ)   5(2934)

-ನುಜಾವತಾರಕ್ಕೆ ಬೇಕಾತ್ಮ ಚಿಂತನ! (ಮ)
-ಮಕಾರಕ್ಕೆ ಕಾರಣ ದೇಹ ವಾಸನ!
ರ ನಾರಾಯಣನ್ಲಾಕ್ಕೀ ಜೀವನ! (ಅ)
-ಕ್ಕೆಲ್ಲರ ಜನ್ಮವಿದರಿಂದ ಪಾವನ!
ಬೇಕಿಲ್ಲ ಬೆಸ್ತರ ಸಂಘದ ಸ್ಥಾಪನ!
ಕಿತ್ತು ತಿನ್ನುವುದು ಮೀನನ್ನೀ ಯೋಚನ! (ಪು)
-ಲ್ಲನಾಭನಿಗಿದು ಸತತ ವೇದನ! (ವ)
-ನ್ಯ ಮೃಗಗಳ್ಗಾಗ್ಬಾರ್ದು ಶಿರಚ್ಛೇದನ!
ಸಾವೀವುಗಳು ಪರಮಾತ್ಮನಾಧೀನ!
ರ್ಮ, ಕರ್ಮ ಬಿಟ್ಟವ ಪಶು ಸಮಾನ!
ರ ನಿರಂಜನಾದಿತ್ಯ ನಾರಾಯಣ!!!

ತನ್ನ ಕೆಲಸದಲ್ಲಿ ತಾನು ಮೈಮರೆತಿರ್ಬೇಕು! (ಉ)   6(3847)

-ನ್ನತಿಗೆ ಇದು ಅತ್ಯಗತ್ಯವೆಂದರಿತಿರ್ಬೇಕು!
ಕೆತ್ತಿದಂತೆ ಗೊಂಬೆಯೆಂಬ ಮಾತು ನಿಜವಾಗ್ಬೇಕು!
ಗ್ನ, ಮುಹೂರ್ತ ನೋಡುವಭ್ಯಾಸ ಬಿಟ್ಟುಬಿಡ್ಬೇಕು!
ರ್ವೇಶ್ವರನಿಗೊಪ್ಪಿಸಿ ಎಲ್ಲಾ ಮಾಡುತ್ತಿರ್ಬೇಕು!
ಡ ಸೇರುವ ತನಕ ಎದೆಗೆಡದಿರ್ಬೇಕು ! (ಮ)
-ಲ್ಲಿಕಾರ್ಜುನನ ಭಜನೆ “ಅಕ್ಕ” ನಂತೆ ಮಾಡ್ಬೇಕು!
ತಾಯಿ, ತಂದೆ, ಅವನೇ ಎಂಬ ನಂಬಿಗೆಯಿರ್ಬೇಕು! (ತ)
-ನು, ಮನ, ಧನವೆಲ್ಲಾ ಅವನಿಗರ್ಪಿಸ್ಬೇಕು!
ಮೈಥಿಲಿಯೇ ತಾನಾಗಿ ಪಟ್ಟ ಕಟ್ಟಿಸಿಕೊಳ್ಬೇಕು!
ದಾಂಧ ರಾವಣಾಸುರನ ಲಕ್ಷಿಸದಿರ್ಬೇಕು! (ಮೇ)
-ರೆ ಮೀರಿತೆಂದಾಗ ತಾನೇ ಮಹಾ ಕಾಳಿಯಾಗ್ಬೇಕು!
ತಿತಿಕ್ಷೆ, ವೈರಾಗ್ಯ, ಜೀವನಲ್ಲಿ ಬಲವಾಗ್ಬೇಕು! (ಇ)
-ರ್ಬೇಕು, ಸರ್ವಸಂಗಪರಿತ್ಯಾಗಿಯಾಗಿ ಇರ್ಬೇಕು!
ಕುಲ ನಿರಂಜನಾದಿತ್ಯನಿಂದುದ್ಧಾರವಾಗ್ಬೇಕು!!!

ತನ್ನ ತಾ ತಿದ್ದಿಕೊಂಡಾಗಾನಂದ! (ಭಿ)   5(3208)

-ನ್ನ ಭಾವವಿಲ್ಲದಾದಾಗಾನಂದ!
ತಾಯಿ ಶ್ರೀ ದೇವಿಯಾದಾಗಾನಂದ!
ತಿಮ್ಮಪ್ಪ ನಮ್ಮಪ್ಪಾದಾಗಾನಂದ! (ಸ)
-ದ್ದಿಲ್ಲದಿದ್ದಾಗ ಸಹಜಾನಂದ!
ಕೊಂದರರಿಷಡ್ವರ್ಗವಾನಂದ! (ದುಂ)
-ಡಾವರ್ತಿ ಬಿಟ್ಟಾಗ ರಾಮಾನಂದ!
ಗಾರ್ಧಭದಂತಿದ್ದರೇನಾನಂದ?
ನಂದಕಂದನಂತಿದ್ದ್ರಾತ್ಮಾನಂದ!
ತ್ತ ನಿರಂಜನಾದಿತ್ಯಾನಂದ!!!

ತನ್ನ ತಾ ಹೊಗಳಿಕೊಳಬಾರದಯ್ಯಾ! (ಅ)   1(362)

-ನ್ನದಾತ ದೇವರಂತೆ ಇರಬೇಕಯ್ಯಾ! (ಆ)
-ತಾವುದೂ ಅರಿಯದಂತಿಲ್ಲವೇನಯ್ಯಾ?
ಹೊಗಳಿದರೂ ಹಿಗ್ಗದಿರಬೇಕಯ್ಯಾ!
ರ್ವದಿಂದ ಪತನವಾಗುವುದಯ್ಯಾ! (ಆ)
-ಳಿಗೂ ಆಳಿಂಬ ವಿನಯವಿರಲಯ್ಯಾ!
ಕೊಡುವ ದಾತನಿಗೆ ಲೋಭವಿಲ್ಲಯ್ಯಾ! (ಅ)
-ಳವಟ್ಟರಿದು ಸುಖದಾಯಕವಯ್ಯಾ!
ಬಾಯಿ ವೇದಾಂತ ಕನಸಿನ ಗಂಟಯ್ಯಾ!
ತ್ನ ಪೀಠವೇರಿದರಾನಂದವಯ್ಯಾ!
ರ್ಬಾರು ಆವಾಗ ಶೋಭಿಸುವುದಯ್ಯಾ! (ಅ)
-ಯ್ಯಾ! ನಿರಂಜನಾದಿತ್ಯ ಹರಿರಾಯಯ್ಯಾ!!!

ತನ್ನ ತಾನರಿತವಗನ್ಯ ಪೂಜೆ ಬೇಕಿಲ್ಲ! (ಉ)   6(4055)

-ನ್ನತದ ಕೈಲಾಸಕ್ಕಿಂತೆತ್ತರವಿನ್ನೊಂದಿಲ್ಲ!
ತಾನೇ ಸಕಲವೂ ಆದ ಮೇಲೆ ಎರಡಿಲ್ಲ!
ರ ನಾರಾಯಣನಾಗಿ ನಿಶ್ಚಿಂತನಾಗ್ಬಲ್ಲ!
ರಿಪುಗಳವನೆದ್ರು ತಲೆಯೆತ್ತುವುದಿಲ್ಲ!
ರಿದಿಕ್ಕುವನವನು ಆ ನೀಚರನ್ನೆಲ್ಲಾ!
ರ ಗುರುವಾಗುವನವ ಜಗತ್ತಿಗೆಲ್ಲಾ!
ರ್ವವೆಳ್ಳಷ್ಟೂ ಅವನಲ್ಲಿ ಇರುವುದಿಲ್ಲ! (ಧ)
-ನ್ಯನೆನಿಸುವನವ ಸುರಾ, ಸುರರಿಂದೆಲ್ಲಾ!
ಪೂಜೆಗರ್ಹನಾಗುವನವ ಅವರಿಗೆಲ್ಲಾ! (ಸ)
-ಜೆಗೊಳಗಾಗುವರು ನಿಂದಿಸಿದವರೆಲ್ಲಾ!
ಬೇಕಾದುದಾವುದೂ ಆ ಮಹಾನುಭಾವಗಿಲ್ಲ!
ಕಿರ್ಕಿರಿಯ ಸಂಸಾರ ಬಂಧನವನಿಗಿಲ್ಲ! (ಪು)
-ಲ್ಲ ನಿರಂಜನಾದಿತ್ಯಾನಂದವೊಂದೇ ಎಲ್ಲೆಲ್ಲಾ!!!

ತನ್ನ ತಾನಾಳದವನ್ಯರನ್ನಾಳ! (ತ)   4(2130)

-ನ್ನ ತಾ ಜೈಸಿ ಸರಿಪಡಿಸ್ಬೇಕ್ಬಾಳ!
ತಾಪಸೋತ್ತಮನಾರನ್ನೇನೂ ಕೇಳ! (ಅ)
-ನಾವಶ್ಯವಾಗಿ ಯಾರಿಗೇನೂ ಹೇಳ! (ಆ)
-ಳ ತಿಳಿಯದೇ ಹಾಕ್ಬಾರದು ಗಾಳ! (ಅಂ)
-ದ ಚಂದ ಕ್ಷಣಕಾಲದೊಂದು ಮೇಳ! (ಭಾ)
-ವ, ಭಕ್ತಿ ಗಾನಕ್ಕಿರಬೇಕು ತಾಳ! (ಅ)
-ನ್ಯ ವ್ಯವಹಾರದ ರೂಪ ಕರಾಳ! (ವ)
-ರ ಗುರು ಹೃದಯ ಸದಾ ಧಾರಾಳ! (ಮ)
-ನ್ನಾಥನಾಥನಾಥ ದತ್ತ ಕೃಪಾಳ! (ಬೋ)
-ಳ, ನಿರಂಜನಾದಿತ್ಯ ಬಲ್ಲನಾಳ!!!

ತನ್ನ ತಾನಾಳುವವ ದೇವರು! (ಚಿ)   5(3095)

-ನ್ನ, ಬೆಳೀ ಗೊಂಬೆಯಲ್ಲಾ ದೇವರು!
ತಾನೆಲ್ಲವಾಗಿರ್ಪವಾ ದೇವರು!
ನಾಮ, ರೂಪಾತೀತ್ಮಾ ದೇವರು! (ಕೀ)
-ಳು,ಮೇಲು ಇಲ್ಲದವಾ ದೇವರು!
ರ್ಣಾಶ್ರಮ ರಹಿತಾ ದೇವರು!
ರಗುರು ಸ್ವರೂಪಾ ದೇವರು!
ದೇಹಾಭಿಮಾನಾತೀತಾ ದೇವರು! (ಭ)
-ವಪಾಶ ಹರಿದವಾ ದೇವರು! (ಗು)
-ರು ನಿರಂಜನಾದಿತ್ಯಾ ದೇವರು!!!

ತನ್ನ ತಾನು ಸಮರ್ಥಿಸಿಕೊಳ್ಳುವನು ಮಾನವ! (ಉ)   6(4253)

-ನ್ನತದಾದರ್ಶವೇನೆಂದರಿಯಜ್ಞಾನಿ ಯಾದವ!
ತಾಮಸ ವೃತ್ತಿಯಿಂದ ಕಾಲ ಕಳೆಯುವನವ! (ತ)
-ನು ಬಾವದಿಂದಹಂಕಾರಿಯಾಗುತ್ತಿಹನವ!
ತ್ಯಾ ಸತ್ಯ ವಿಮರ್ಶೆಗೆ ಬುದ್ಧಿಯೋಡಿಸನವ!
ಮಕಾರದಿಂದನ್ಯಾಯ ಮಾಡುತ್ತಿರುವನವ! (ಪ್ರಾ)
-ರ್ಥಿಸಿ, ಭಜಿಸಿ, ಜಪಿಸಿ ಧನ್ಯ ತಾನಾಗನವ!
ಸಿರಿ ಸಂಪತ್ತಿಗಾಗಿ ದರೋಡೆ ಮಾಡುವನವ!
ಕೊಲ್ಲುವುದಕ್ಕೂ ಹಿಂದು, ಮುಂದು ನೋಡಿ ಹೇಸನವ! (ಸು)
-ಳ್ಳು ಹೇಳಿ ಗಿಟ್ಟಿಸುವುದರಲ್ಲಿ ನಿಸ್ಸೀಮನವ!
ನಿತೆಯರೊಡನಾಟದಲ್ಲಿ ಆಸಕ್ತನವ!
ನುಡಿವುದೊಂದು, ಮಾಡುವುದು ಮಗುದೊಂದವ!
ಮಾಯೆಗೆ ಮರುಳಾಗಿ ಕಾಲವಶವಪ್ಪನವ!
ರ, ನಾರಾಯಣರೊಂದೆಂದರಿಯ ಬೇಕೀಗವ! (ಅ)
-ವ ನಿರಂಜನಾದಿತ್ಯ ನಂತಾಗಬೇಕೀಗ ಶಿವ!!!

ತನ್ನ ತೂತ್ಮುಚ್ಚಲಾರ್ದವನ್ಯರದ್ದೇನ್ಮಾಡ್ಬಲ್ಲ? (ತ)   6(4059)

-ನ್ನ ಹೊಟ್ಟೆಪಾಡಿಗಾಗಿ ಅವನ ಆಟವೆಲ್ಲಾ!
ತೂಕವಿಲ್ಲದ ಮಾತು ಗಾಳಿ ಪಾಲಾಗ್ವುದೆಲ್ಲಾ! (ಸೋ)
-ತ್ಮುಖ ತೋರಿಸದಂತಾಗ್ವ ಬಾಳವನದೆಲ್ಲಾ! (ಎ)
-ಚ್ಚರವಾಗಿರ್ಬೇಕು ಇಂಥಾ ಜನರೊಡನೆಲ್ಲಾ!
ಲಾಗ ಹಾಕ್ಬಲ್ಲವ ಅನ್ಯರಿಂದ್ಲೂ ಹಾಕಿಸ್ಬಲ್ಲ! (ಗಾ)
-ರ್ದಭವೆಂದೆಂದಿಗೂ ಕುದುರೆಯಾಗುವುದಿಲ್ಲ!
ಡವೆ ಹೇರಳವಿದ್ದವಳ್ಲಕ್ಷ್ಮಿಯೇನಲ್ಲ! (ಶೂ)
-ನ್ಯ ಬುದ್ಧಿಯವಗೆ ಬ್ರಹ್ಮಾನಂದ ಲಭ್ಯವಿಲ್ಲ! (ಪ)
-ರತತ್ವ ಚಿಂತನೆಯಿಂದದಸಾಧ್ಯವೇನಲ್ಲ! (ತ)
-ದ್ದೇವತ್ವಕ್ಕಾಗಿ ದುಡಿಯಬೇಕ್ಮಾನವರೆಲ್ಲಾ! (ಉ)
-ನ್ಮಾದ ಇಂದ್ರಿಯ ಸುಖಕ್ಕಾಗಿರುವುದೆಲ್ಲೆಲ್ಲಾ! (ಬಿ)
-ಡ್ಬಹುದಿದನ್ನು ಶ್ರೀ ಗುರುಕೃಪೆಯಾದಾಗೆಲ್ಲಾ! (ಪು)
-ಲ್ಲ, ನಿರಂಜನಾದಿತ್ಯ ಧ್ಯಾನ ಮಾಡಿದ್ದಕ್ಕೆಲ್ಲಾ!!!

ತನ್ನ ದರ್ಶನದಿಂದ ತನಗೆ ಶಾಂತಿ!   6(3501)

(ತ)-ನ್ನನ್ನು ತಾನು ನೋಡದಿದ್ರಿಂದ ಅಶಾಂತಿ!
ತ್ತ ಬೇರೆ, ತಾನು ಬೇರೆಂಬುದು ಭ್ರಾಂತಿ!
(ದ)-ರ್ಶನವೆಂದ್ರೆ ಭೇದವಳಿದ ಪ್ರಶಾಂತಿ!
ಡೆ, ನುಡಿಯೊಂದಾದವನೇ ವೇದಾಂತಿ!
ದಿಂಡಾಗಿ ಬೆಳೆದ ಮಾತ್ರಕ್ಕಲ್ಲ ಕಾಂತಿ!
ಶೇಂದ್ರಿಯಗಳ ಜಯ ಸೂರ್ಯಕಾಂತಿ!
ಪಸ್ಸಿದಕ್ಕಾಗಿ ಎಂಬುದೇ ವಿನಂತಿ!
ರ, ನಾರಿಯರ್ಗೀಗಾನಂದಾ ವದಂತಿ! (ಬ)
-ಗೆ ಬಗೆ ಮಣಿಮಾಲೆಗಾಧಾರ ತಂತಿ!
ಶಾಂಬವಿ ಜೀವಕೋಟಿಗೆಲ್ಲಾ ಆತಂತಿ! (ಗ)
-ತಿ ಶ್ರೀ ನಿರಂಜನಾದಿತ್ಯತಾ ವೇದಾಂತಿ!!!

ತನ್ನ ಬೆಲೆ ತಾನೇ ಕಳಕೊಂಡ ಚಿನ್ನ! (ತ)   4(2432)

-ನ್ನನ್ನು ಮಣ್ಣಲ್ಲಿ ಬೆರೆಸಿಕೊಂಡಾ ಚಿನ್ನ!
ಬೆಟ್ಟ, ತಿಟ್ಟುಗಳಡಿಯಲ್ಲಿದ್ದಾ ಚಿನ್ನ! (ನೆ)
-ಲೆಬಿಟ್ಟು ಹೊರಗೆ ಬರದಿದ್ದಾ ಚಿನ್ನ!
ತಾನ್ಯಾರೆಂದಾರಿಗೂ ಹೇಳದಿದ್ದಾ ಚಿನ್ನ!
ನೇತ್ರಕ್ಕಾಕರ್ಷಣೆ ನೀಡದಿದ್ದಾ ಚಿನ್ನ!
ಲ್ಮಷ ಬಳಿದುಕೊಂಡಿರ್ತಿದ್ದಾ ಚಿನ್ನ! (ಥ)
-ಳಥಳಿಸಿ ಹೊಳೆವಾಗಮೌಲ್ಯ ಚಿನ್ನ!
ಕೊಂಡುಕೊಳ್ಳಲಿಕ್ಕೂ ಸಿಕ್ಕದಾಗಾ ಚಿನ್ನ! (ಒ)
-ಡನಾಟೋತ್ತಮವಾಗೀಗದೊಳ್ಳೇ ಚಿನ್ನ!
ಚಿರ ಸ್ಮರಣೀಯವಾದುದೀಗಾ ಚಿನ್ನ! (ಚೆ)
-ನ್ನ, ಶ್ರೀನಿರಂಜನಾದಿತ್ಯಾನಂದ ಚಿನ್ನ!!!

ತನ್ನ ಮನೆ ಅನ್ಯರ ಪಾಲಾಗ್ವಂತಿದೆ! (ಉ)   6(3545)

-ನ್ನತಿ ಅವರಿಗದ್ರಿಂದಾಗದಂತಿದೆ!
ನಸ್ಸಿನ ಆಟ ವಿಚಿತ್ರವಾಗಿದೆ!
ನೆನಪದಕ್ಕುದ್ಧಾರದ್ದಿಲ್ಲದಾಗಿದೆ!
ಪಚಾರ ಆಪ್ತರಿಗೆ ಆಗುತಿದೆ! (ವ)
-ನ್ಯ ಮೃಗಗಳಿಗಿಂತಲೂ ಕೀಳಾಗಿದೆ! (ವ)
-ರ ಗುರುಕೃಪೆ ಅದಕ್ಕಾಗ್ಬೇಕಾಗಿದೆ!
ಪಾತಕವೆಲ್ಲಾ ನಾಶವಾಗ್ಬೇಕಾಗಿದೆ! (ಲೀ)
-ಲಾ ನಾಟಕದಾನಂದ ಪಡ್ಬೇಕಾಗಿದೆ! (ಆ)
-ಗ್ವಂತೆ ತನ್ನಂತನುಗ್ರಹಿಸ್ಬೇಕಾಗಿದೆ!
ತಿಳಿದವನಿಗೆಷ್ಟು ಹೇಳ್ಬೇಕಾಗಿದೆ? (ತಂ)
-ದೆ, ನಿರಂಜನಾದಿತ್ಯ ತಾನೆಂದಾಗಿದೆ!!!

ತನ್ನ ಮಾನ ತಾನೇ ಕಳಕೊಂಡ! (ಉ)   3(1347)

-ನ್ನತದ ಸೇವೆ ಮಾಡಿಸಿಕೊಂಡ!
ಮಾತು ಮಾತಿಗೂ ಸ್ಮರಿಸಿಕೊಂಡ!
ಶ್ವರವಿದೆಂದು ಅಂದುಕೊಂಡ!
ತಾಳ ಮೇಳ ಗಾನ ಕೇಳಿಕೊಂಡ!
ನೇಮ, ನಿಷ್ಠೆಯನಿರಿಸಿಕೊಂಡ!
ಷ್ಟ, ಸುಖವ ಸಹಿಸಿಕೊಂಡ! (ಬ)
-ಳಸಿ ವೇದಾಂತಿಯಾಗಿದ್ದುಕೊಂಡ!
ಕೊಂಡ ಕೋತಿಯಂತಾಡಿಸಿಕೊಂಡ! (ಗಂ)
-ಡ ನಿರಂಜನಾದಿತ್ಯ ಪ್ರಚಂಡ!!!

ತನ್ನಾಟವೆಲ್ಲಾ ಶಾಸ್ತ್ರೋಕ್ತಂತೆ!   5(2594)

ನ್ನಾನಂದ ಬ್ರಹ್ಮಾನಂದವಂತೆ! (ಕಾ)
-ಟದೂಟವಳು ಮೊಡಳಂತೆ! (ಸಾ)
-ವೆನಗಿಲ್ಲೆಂದಿರುವಳಂತೆ!
(ಎ)ಲ್ಲಾ ಕಡೆ ತಾನಿರುವಳಂತೆ!
ಶಾಸಕಳೆಲ್ಲಕ್ಕವಳಂತೆ! (ಅ)
-ಸ್ತ್ರೋಪಯೋಗ ಮಾಡಳೀಗಂತೆ! (ಭ)
-ಕ್ತಂಗಾಕೆ ವರದಾತೆಯಂತೆ! (ಮಾ)
-ತೆ, ನಿರಂಜನಾದಿತ್ಯನಂತೆ!!!

ತನ್ನಾರೋಗ್ಯ ತಾನೀವಾ ಸೂರ್ಯ! (ತ)   5(3262)

-ನ್ನಾರಾಧನೆ ಮಾಡೆನ್ನಾ ಆರ್ಯ!
ರೋಗಿಗಿರ್ಬೇಕು ಮನೋಸ್ಥೈರ್ಯ! (ಭಾ)
-ಗ್ಯವಿದಕ್ಛಕ್ತಿ ಅನಿವಾರ್ಯ!
ತಾಳಿದ್ರೆ ಬಾಳ್ಯಾನೆಂಬ ಧೈರ್ಯ!
ನೀರ ಮೇಲ್ಪರೆವಂತಾ ಕಾರ್ಯ!
ವಾದಕ್ಕರಿವಾಗ್ದಾ ಆಶ್ಚರ್ಯ!
ಸೂಕ್ತಾನುಗ್ರಹ ಮಾಡ್ಲಾಚಾರ್ಯ! (ಆ)
-ರ್ಯ ನಿರಂಜನಾದಿತ್ಯಾಚಾರ್ಯ!!!

ತನ್ನಿಷ್ಟದಂತೆ ಎಲ್ಲಾ ಆಗ್ಬೇಕು! (ಸ)   5(2889)

-ನ್ನಿಧಿ ಸದಾ ಸ್ವಚ್ಛವಾಗಿರ್ಬೇಕು! (ಇ)
-ಷ್ಟಸಿದ್ಧಿಗಾರು ಕಷ್ಟ ಪಡ್ಬೇಕು?
ದಂಭ ಬಿಟ್ಟು ತಾನೇ ದುಡಿಯ್ಬೇಕು!
ತೆಗಳಿಕೆಗೆ ಕಿವುಡಾಗಿರ್ಬೇಕು!
ಲ್ಲವೂ ಪ್ರಸಾದವೆಂದಿರ್ಬೇಕು! (ಕ)
-ಲ್ಲಾದ್ರೂ ಕರಗ್ವ ಹೃದಯಾಗ್ಬೇಕು!
ತ್ಮಾನಂದ ಸತತವಿರ್ಬೇಕು! (ಆ)
-ಗ್ಬೇಕ್ಬಲ್ಲವರ ಬೆಲ್ಲಾಗಿರ್ಬೇಕು! (ಬೇ)
-ಕು ನಿರಂಜನಾದಿತ್ಯಾನಾಗ್ಬೇಕು!!!

ತನ್ನಿಷ್ಟದಂತೆ ಕುಣಿವ ದೇಹಕ್ಕಿಂದಲಂಕಾರ! (ತ)   6(4157)

-ನ್ನಿಷ್ಟ ಪೂರ್ತಿಗಾಗಿರ್ಬೇಕದಕ್ಕೆ ಸುಂದರಾಕಾರ! (ಅ)
-ಷ್ಟ

ದೋನ್ಮತ್ತ ಮನಕ್ಕೆ ಬೇಕದ್ರೆ ಸಹಕಾರ!
ದಂಭ, ದರ್ಪವೆಂತು ತೊರಿಸೀತು ದುರ್ಬಲಾಕಾರಾ?
ತೆಪ್ಪಗೊಂದೆಡೆ ಬಿದ್ದಿರಬೇಕು ಅಂಥಾ ಶರೀರ!
ಕುಲ, ಗೋತ್ರ ಸ್ಮರಿಸಿ ತಿದ್ದಿಕೊಳ್ಳಬೇಕಾಚಾರ! (ದ)
-ಣಿದು ವೃಥಾ ಮಣ್ಣಾದರೇನು ಫಲ ಈ ಶರೀರ!
ರ ಗುರು ಸೇವೆಯಿಂದ ಪಾಪಗಳ್ಪರಿಹಾರ!
ದೇವರೆಂದು ಪೂಜಿಸಲ್ಪಡುವುದಾ ಸುಶರೀರ!
ರಿ, ಹರರದೆನ್ನುವರು ಅಂಥಾ ಅವತಾರ! (ಹ)
-ಕ್ಕಿಂಥಾದ್ದನ್ನು ಸಾಧಿಸಲಿಕ್ಕೆಂದರಿ ಈ ಶರೀರ!
ರೊಡೆ ಮಾಡುವುದಾದರದಕ್ಕೇಕಲಂಕಾರ?
ಲಂಕೇಶ್ವರನ ಅಲಂಕಾರ ಬಂಜೆಯ ಶೃಂಗಾರ!
ಕಾರ್ತಿಕೇಯನಲಂಕಾರ ಧರ್ಮಸ್ಥಾಪಕಾರ! (ವ)
-ರ ಗುರುದತ್ತ ಶ್ರ ನಿರಂಜನಾದಿತ್ಯನಾಕಾರ!!!

ತನ್ನೆಚ್ಚರದಲ್ಲಿ ತಾನಿದ್ದ್ರನ್ಯರ ಶಪ್ಪಿಸ್ಬೇಕಿಲ್ಲ! (ಹ)   6(4120)

-ನ್ನೆರಡು ವರ್ಷದ ತಪಸ್ಸುವ್ಯರ್ಥ ಮಾಡ್ಬೇಕಾಗಿಲ್ಲ! (ಅ)
-ಚ್ಚರಿಯಾಗುತಿದೆ ಋಷಿ, ಮುನಿಗಲಾಚಾರವೆಲ್ಲ! (ಕ)
-ರಗದಿದ್ದ್ರೆ ತ್ರಿಕರಣ ಪರಬ್ರಹ್ಮನಲ್ಲಿದೆಲ್ಲ!
ತ್ತ ಗುರುವಿನಾದರ್ಶದಂತಿರ್ಪ ಮಹಿಮನಿಲ್ಲ! (ಬ)
-ಲ್ಲಿದಾಚಾರ್ಯರ್ತಾವೆಂದೆಲ್ಲೆಲ್ಲೂ ಮರೆವವರೇ ಎಲ್ಲ!
ತಾಳ್ಮೆಯಿಲ್ಲದ ಅವರ ಬಾಳು ಆದರ್ಶವೇ ಅಲ್ಲ!
ನಿತ್ಯಾನಿತ್ಯ ಜ್ಞಾನ ಪರಿಪೂರ್ಣ ಶಪಿಸುವುದಿಲ್ಲ! (ಇ)
-ದ್ದ್ರನಲ್ಲೇನಾದ್ರೂ ಆತ ವಂಚನೆ ಮಾಡುವುದಿಲ್ಲ! (ಅ)
-ನ್ಯರಾಸ್ತಿಗೆ ಆತನೆಂದಿಗೂ ಆಸೆ ಪಡುವುದಿಲ್ಲ! (ಪ)
-ರಮಾರ್ಥ ಸಿದ್ಧಾಂತದಂತಾತನಿರದಿರುವುದಿಲ್ಲ!
ಮೆ, ದಮೆಯ, ಸಾಕಾರ ಸ್ವರೂಪವೇ ಅವನೆಲ್ಲ!
ಪಿಸುಣರ ಮಾತಿಗವನೇನೂ ಹೆದರುವುದಿಲ್ಲ! (ಈ)
-ಸ್ಬೇಕಿದ್ದು ಜೈಸ್ಬೇಕೆಂಬುದೇ ಅವನ ಸಿದ್ಧಾಂತವೆಲ್ಲ!
ಕಿರಿಯನೂ, ಹಿರಿಯನೂ ಅವನೇ ಜಗತ್ತಿಗೆಲ್ಲ! (ಫೂ)
-ಲ್ಲ ನಿರಂಜನಾದಿತ್ಯಾನಂದ ಸ್ವರೂಪಿ ಅವನೆಲ್ಲ!!!

ತನ್ಮಯನಾಗು ಚಿನ್ಮಯನಲ್ಲಿ! (ಜ)   4(1990)

-ನ್ಮ ಮುಗಿಸದಿರೈಹಿಕದಲ್ಲಿ! (ಜ್ಞೇ)
-ಯ ಸಾಧಕನಾಗು ಬಾಳಿನಲ್ಲಿ!
ನಾರಾಯಣನಾಗು ನಾಮದಲ್ಲಿ!
ಗುಹೇಶ್ವರನಾಗು ಗುಣದಲ್ಲಿ!
ಚಿರಾಯುವಾಗು ಚಿದ್ರೂಪದಲ್ಲಿ! (ಮ)
-ನ್ಮಥಾರಿಯಾಗು ಮನಸ್ಸಿನಲ್ಲಿ! (ಭ)
-ಯದೂರನಾಗು ಭವಾಬ್ಧಿಯಲ್ಲಿ!
“ನ ಗುರೋರಧಿಕಂ” ಭಕ್ತಿಯಲ್ಲಿ! (ಇ)
-ಲ್ಲಿ ನಿರಂಜನಾದಿತ್ಯಾತ್ಮನಲ್ಲಿ!!!

ತಪಸಿಗಸಾಧ್ಯವಾವುದಿಲ್ಲೆಂದೆ! (ತ)   3(1220)

-ಪಸ್ವಿಗಳ ತಪಸ್ಸು ನಾನೇ ಎಂದೆ! (ಹು)
-ಸಿಯಲ್ಲ ನನ್ನ ಮಾತೆಂದು ನೀನಂದೆ!
ತಿಗೇಡು ಹರಿದಿಲ್ಲೇಕೆ ತಂದೆ?
ಸಾಧನೆಗೆ ಪ್ರೋತ್ಸಾಹ ನೀಡು ತಂದೆ! (ಬಾ)
-ಧ್ಯನ ಬಾಧೆ ಹೋಗಲಾಡಿಸು ತಂದೆ!
ವಾಸುದೇವ ನೀ ಜಗಕ್ಕೆಲ್ಲಾ ತಂದೆ! (ಕಾ)
-ವುದೀಗ ನೀ ಬಂದು ಮಗನ ತಂದೆ!
ದಿನ, ರಾತ್ರಿ ಕಳೆಯಲೆಂತು ತಂದೆ? (ಒ)
-ಲ್ಲೆಂದುಪೇಕ್ಷಿಸದೆ ಬಾ ಬೇಗ ತಂದೆ! (ಬಂ)
-ದೆ, ನಿರಂಜನಾದಿತ್ಯ ನಾನಾ ತಂದೆ!!!

ತಪಸಿಗೆ ನೀನೇ ಆಧಾರ! (ತ)   5(3109)

-ಪಸೇ ನಿನ್ನ ಇಂದಿನಾಕಾರ!
ಸಿದ್ಧಿಯ್ಬಾಗೇಕಂದಿನಾಕಾರ! (ಹ)
-ಗೆಗಳಾಗಮನತ್ನಕಾರ!
ನೀನಭ್ಯಸಿಸು ನಿರಾಕಾರ!
ನೇಮ, ನಿಷ್ಠೆ ಬೇಕು ಅಪಾರ!
ಡದೇ ಮಾಡ್ಬೇಕು ವಿಚಾರ!
ಧಾರಾಕಾರಾಗ್ಲಾತ್ಮ ಸಂಚಾರ! (ಹ)
-ರ, ನಿರಂಜನಾದಿತ್ಯಾಕಾರ!!!

ತಪಸು, ಕನಸು, ಮನಸು, ಇರಿಸು!   1(134)

ತಿಸು, ಗತಿಸು, ಮತಿಸು, ಸ್ಥಿತಿಸು!
ಸುರಿಸು, ಕೇರಿಸು, ಆರಿಸು, ಕೂರಿಸು!
ಲಿಸು, ನಿಲಿಸು, ಬಲಿಸು, ಜ್ವಲಿಸು!
ಡೆಸು, ಕೂಡ್ಸಿಸು, ಆಡಿಸು, ನಿದ್ರಿಸು!
ಸುಲಿಸು, ಇಳಿಸು, ಘಳಿಸು, ಸಲಿಸು!
ರಿಸು, ಹರಿಸು, ತರಿಸು, ಬೆರಿಸು!
ಮಿಸು, ದಮಿಸು, ಶಮಿಸು, ಗಮಿಸು!
ಸುಡಿಸು, ಗುಡಿಸು, ಬಡಿಸು, ಬಿಡಿಸು!
ಡಿಸು, ಕೂಡಿಸು, ತೊಡಿಸು, ಓಡಿಸು!
ರಿಪಿಸು, ಕುಪಿಸು, ಶಪಿಸು, ದಪಿಸು!
ಸುಪುತ್ರನಿರಂಜನಾದಿತ್ಯನೆನಿಸು!!!

ತಪಸ್ಸೆಂದರೇನೆಂದರಿಯಪ್ಪ!   5(3125)

ರಮಾತ್ಮನೇ ತಾನಪ್ಪುದಪ್ಪ! (ಬು)
-ಸ್ಸೆಂದೆಲ್ಲರ ಕಚ್ಚದಿರ್ವುದಪ್ಪ!
ರ್ಪ, ದಂಭವೆಲ್ಲಾ ಬಿಡ್ವುದಪ್ಪ!
ರೇಗಾಟವಿಲ್ಲದಿರುವುದಪ್ಪ!
ನೆಂಟ, ಭಂಟ ತಾನೇ ಆಗ್ವುದಪ್ಪ!
ತ್ತನಾದರ್ಶದಂತಿರ್ಪುದಪ್ಪ!
ರಿಪುಗಳಾರ ಜೈಸವುದಪ್ಪ!
ಮ, ನಿಯಮ ಪಾಲಿಪುದಪ್ಪ! (ಅ)
-ಪ್ಪ, ನಿರಂಜನಾದಿತ್ಯಾನಂದಪ್ಪ!!!

ತಪಸ್ಸೇ ನಿಗ್ರಹಾನುಗ್ರಹ ಶಕ್ತಿ!   3(1312)

ತಿತ ಪಾವನಾ ಪರಮ ಶಕ್ತಿ! (ದು)
-ಸ್ಸೇನಾ ವಿನಾಶಕಾ ದೈವಿಕ ಶಕ್ತಿ!
ನಿತ್ಯ ಬಲಿಸಬೇಕೀ ದಿವ್ಯ ಶಕ್ತಿ!
ಗ್ರಹಚಾರ ಕಳೆವುದಿದೇ ಶಕ್ತಿ!
ಹಾಲಾಹಲವ ಜೀರ್ಣಿಸಿತಾ ಶಕ್ತಿ! (ಅ)
-ನುಗ್ರಹಿಸಿತು ಧ್ರುವಪಟ್ಟಾ ಶಕ್ತಿ! (ಉ)
-ಗ್ರ ನರಸಿಂಹನ ತಂದಿತಾ ಶಕ್ತಿ!
ರಿ ಹರಜರೇಕ ರೂಪ ಶಕ್ತಿ!
ಕ್ತಿ ಭಕ್ತಿ, ಭಾವ, ಭಜನಾ ಶಕ್ತಿ! (ಶ)
-ಕ್ತಿ, ನಿರಂಜನಾದಿತ್ಯಾನಂದಾ ಮುಕ್ತಿ!!!

ತಪೋನಿಧಿಯಿಂದ ಜಗತ್ತಿನಾಗು, ಹೋಗೆಲ್ಲಾ!   6(3422)

ಪೋಷಣೆ, ವೀಕ್ಷಣೆ, ರಕ್ಷಣೆ ಮುಂತಾದುವೆಲ್ಲಾ!
ನಿತ್ಯಾನಿತ್ಯ ವಿವೇಕದಾಗುರು ಬಲ್ಲನೆಲ್ಲ!
(ವ್ಯಾ)-ಧಿಹರಕ್ಕವ್ನ ದಿವ್ಯನಾಮ ಭಜಿಸ್ಬೇಕೆಲ್ಲ!
(ತಾ

)-ಯಿಂದಧಿಕ ಪ್ರೀತಿ ಅವಗೆ ನಮ್ಮಮೇಲೆಲ್ಲಾ!
ರ್ಶನಾನುಗ್ರಹ ಅವನಿಷ್ಟದಂತೆಯೆಲ್ಲಾ!
ಪ, ಧ್ಯಾನ, ಇತ್ಯಾದಿಗಳ್ಮಾರ್ಗ ಅದಕ್ಕೆಲ್ಲಾ!
(ಯೋ)-ಗ ಮಾರ್ಗದಲ್ಲೂ ಸಂಶಯ ಪಡಬೇಕಾಗಿಲ್ಲ!
(ಬಿ)-ತ್ತಿದ ಜಾಗಕ್ಕನುಸರಿಸಿ ಫಲಿಸದಿಲ್ಲ!
ನಾಟಿಯಾದ ಮೇಲೆ ಕೀಳಬೇಕು ಕಳೆಯೆಲ್ಲಾ!
ಗುರುವಿನ ಮಾರ್ಗದರ್ಶನ ಬೇಕಿದಕೆಲ್ಲಾ!
ಹೋಮ, ಹವನಗಳಲ್ಲೂ ಅರ್ಥವಿಲ್ಲದಿಲ್ಲಾ!
(ಬ)-ಗೆ ಬಗೆಯ ದಾರಿ ಊರು ಸೇರುವುದಕ್ಕೆಲ್ಲಾ!
(ಎ)-ಲ್ಲಾ, ನಿರಂಜನಾದಿತ್ಯಾನಂದದಿಂದಾಯಿತಲ್ಲಾ!!!

ತಪೋವೃತ್ತಿಯಿಂದ ತಾಪ ನಿವೃತ್ತಿ! (ಕೋ)   4(2062)

-ಪೋದ್ರೇಕದಿಂದ ಸಂಮೋಹ ಸಂಪ್ರಾಪ್ತಿ!
ವೃತ್ತಿ ನಿವೃತ್ತಿಯಿಂದ ಜೀವನ್ಮುಕ್ತಿ! (ಬು)
-ತ್ತಿ ಹಳಸಿದರನಾರೋಗ್ಯ ಪ್ರಾಪ್ತಿ (ನಾ)
-ಯಿಂದ ಮುನಿದರೆ ಕ್ಷೌರ ಅತೃಪ್ತಿ!
ಧಿ ಕ್ಷೀರದಿಂದ ಸಾತ್ವಿಕ ವೃತ್ತಿ!
ತಾಮಸಾಹಾರದಿಂದಾಸುರೀ ವೃತ್ತಿ (ಅ)
-ಪಕಾರಾಪಚಾರಾಚಾರ ದುರ್ವೃತ್ತಿ!
ನಿಶ್ಚಲ ಭಕ್ತ್ಯುಪಚಾರ ಸದ್ವೃತ್ತಿ!
ವೃಷಭೇಂದ್ರನ ಭಕ್ತ್ಯಾದರ್ಶ ವೃತ್ತಿ! (ವೃ)
-ತ್ತಿ, ನಿರಂಜನಾದಿತ್ಯಾತ್ಮ ಸಂತೃತ್ತಿ!!!

ತಪ್ಪನೊಪ್ಪಮಾಡಿತಪ್ಪನ ಕೃಪೆ! (ಬೆ)   4(2182)

-ಪ್ಪನಾಗಿ ಕುಳಿತಿದ್ದಾಗಾಯ್ತಾ ಕೃಪೆ! (ತಾ)
-ನೊಡನೆ ಲೋಪ ಸರಿಗೈದಾ ಕೃಪೆ! (ಅ)
-ಪ್ಪನಲ್ಲದಾರು ಮಾಡಬೇಕಾ ಕೃಪೆ?
ಮಾರಹರನಿಂದ ಸತತಾ ಕೃಪೆ! (ಅ)
-ಡಿಗಡಿಗೆತ್ತಿಕೊಂಬಾದರ್ಶ ಕೃಪೆ! (ಸ)
-ತತ ಬೆಂಗಾವಲಾಗಿರುವಾ ಕೃಪೆ! (ತ)
-ಪ್ಪ ಮಾಡಬೇಡಿನ್ನೆಂಬನ್ಯೋನ್ಯ ಕೃಪೆ! (ಅ)
-ನನ್ಯ ಭಕ್ತಿಯೊಂದಿರಲೆಂಬ ಕೃಪೆ!
ಕೃತ ತ್ರೇತಾನಂದವಿದೆಂಬ ಕೃಪೆ! (ಕೃ)
-ಪೆ, ನಿರಂಜನಾದಿತ್ಯಾತ್ಮನಾ ಕೃಪೆ!!!

ತಪ್ಪಿಗಾಗ್ಬೇಕು ಪ್ರಾಯಶ್ಚಿತ್ತ! (ಅ)   4(2433)

-ಪ್ಪಿ, ಅಪ್ಪನಂತಾಗ್ಬೇಕು ಚಿತ್ತ! (ತಂ)
ಗಾಳಿಯಾಗಿ ಬೀಸ್ಬೇಕಾ ಚಿತ್ತ! (ಆ)
-ಗ್ಬೇಕದ್ರಿಂದ ಪ್ರಪುಲ್ಲ ಚಿತ್ತ! (ವ್ಯಾ)
-ಕುಲವಿಲ್ಲದಿರ್ಬೇಕಾ ಚಿತ್ತ!
ಪ್ರಾಮಾಣಿಕನಾಗ್ಬೇಕಾ ಚಿತ್ತ! (ಧ್ಯೇ)
-ಯಕ್ಕನ್ಕೂಲವಾಗ್ಬೇಕಾ ಚಿತ್ತ! (ನಿ)
-ಶ್ಚಿತ ಕಾರ್ಯ ಮಾಡ್ಬೇಕಾ ಚಿತ್ತ! (ದ)
-ತ್ತ ನಿರಂಜನಾತ್ಯ ಚಿತ್ತ!!!

ತಪ್ಪಿಲ್ಲದಪ್ಪನಂತಾಗ್ಬೇಕು ನಾನಪ್ಪ! (ಕ)   6(3602)

-ಪ್ಪಿನ ಲೇಪ ಮುಖಕ್ಕಾಗಬಾರದಪ್ಪಾ! (ಕೊ)
ಲ್ಲಬೇಡ ಹಿಂಸೆ ಕೊಟ್ಟೇ ಶರೀರವಪ್ಪಾ!
ಯಾನಿಧಿ ನೀನೆಂಬುದು ಸುಳ್ಳೇನಪ್ಪಾ? (ಕೊ)
-ಪ್ಪರಿಗೆ ನಿಧಿ ನಾನು ಬಯಸಿಲ್ಲಪ್ಪಾ!
ನಂಬಿಕೆ ಫಲಿಸಬೇಕೆಂಬೆ ನಾನಪ್ಪಾ!
ತಾಳಿದ್ದಕ್ಕೆ ಪಾತಾಳ ಗತಿಯೇನಪ್ಪಾ! (ಆ)
-ಗ್ಬೇಕೀಗ ನಿನ್ನ ದಿವ್ಯ ದರ್ಶನವಪ್ಪಾ!
ಕುಪಿತನಾಗ್ಬೇಡ ನನ್ನೀ ಹಠಕ್ಕಪ್ಪಾ!
“ನಾನೇ ನೀನೆಂದು” ನೀನಂದಿಲ್ಲವೇನಪ್ಪಾ?
ನ್ನಾಸೆ ಆ ಸತ್ಯ ಕಾಣುವುದಕ್ಕಪ್ಪಾ! (ಅ)
-ಪ್ಪಾ! ನಿರಂಜನಾದಿತ್ಯಾನಂದನಾಗಪ್ಪಾ!!!

ತಪ್ಪು ತಿಳಿವಳಿಕೆಯ ಮುಖ ಕಪ್ಪು! (ಒ)   6(4153)

-ಪ್ಪು, ಈ ಮಾತಿನಲ್ಲಿ ಸುಳ್ಳಿಲ್ಲೆಂದೀಗಪ್ಪು!
ತಿರುಪತಿ ತಿಮ್ಮಪ್ಪನ ಬಣ್ಣ ಕಪ್ಪು! (ಅ)
-ಳುತ್ತಿರ್ಪೆ ಅವನಾಲಿಂಗನಕ್ಕೆಂದೊಪ್ಪು!
ರವ ಬೇಡುವೆ ಬಾರದಂತೆ ಮುಪ್ಪು! (ಉ)
-ಳಿಯಲಾರೆನೀ ಸಂಸಾರದಲ್ಲೆಂದಪ್ಪು!
ಕೆಟ್ಟ ಬುದ್ಧಿ ಬಿಡಿಸೆಂದೊಡನೆ ಅಪ್ಪು!
ದುನಾಥ ಕಪ್ಪಾದರೇನಾಯ್ತು ತಪ್ಪು!
ಮುಗ್ಧೆ ಗೋಪಿಕಾ ಸ್ತ್ರೀಯರಾದರು ಬೆಪ್ಪು! (ಸು)
-ಖ ನಿನ್ನ ಸಂಗವೆಂದರೆಂಬುದನ್ನೊಪ್ಪು!
ಪ್ಪು, ಕೆಂಪು, ಬಿಳಿಗೆಲ್ಲಕ್ಕುಂಟು ಮುಪ್ಪು! (ಮು)
-ಪ್ಪು ನಿರಂಜನಾದಿತ್ಯಗಿಲ್ಲೆಂದೀಗೊಪ್ಪು!!!

ತಪ್ಪು ಮಾಡುವುದ ತಪ್ಪಿಸಿಹನೆನ್ನಪ್ಪ! (ನೆ)   6(4096)

-ಪ್ಪು ಅವನದೆನಗೆ ಸದಾ ಇದೆಯಪ್ಪಾ!
ಮಾದಿಸುತ್ತಿಹನೆನ್ನಿಂದ ಸೂಕ್ತ ಕಾರ್ಯಪ್ಪಾ! (ದು)
-ಡುಕುವ ಸ್ವಭಾವ ಮಾಯ ಮಾಡಿಹನಪ್ಪಾ! (ಸಾ)
-ವು, ನೋವುಗಳ, ಭಯ ತಪ್ಪಿಸಿಹನಪ್ಪಾ!
ತ್ತಾತ್ರೇಯನೇ ನನ್ನಾ ಪೂಜ್ಯ ತಂದೆಯಪ್ಪಾ!
ರತರದಲ್ಲೆನ್ನಾತ ಪರಿಕಿಪಪ್ಪಾ! (ಒ)
-ಪ್ಪಿಕೊಂಡಿರುವನಾತನೀಗ ನನ್ನನ್ನಪ್ಪಾ!
ಸಿಹಿ, ಕಹಿಗಳೆರಡೂ ಸಮವೀಗಪ್ಪಾ!
ಣ್ಣು, ಹಂಪಲುಗಳ ಸುಭಿಕ್ಷೆಯೀಗಪ್ಪಾ! (ಮ)
-ನೆಮನೆಗಲೆವುದ ತಪ್ಪಿಸಿಹನಪ್ಪಾ! (ಉ)
-ನ್ನತಿಗೆ ದಾರಿಯೇನೆಂದರುಹಿಹನಪ್ಪಾ! (ಇ)
-ಪ್ಪ, ನಿರಂಜನಾದಿತ್ಯಾನಂದನಾಗೀಗಪ್ಪಾ!!!

ತಪ್ಪೆಣಿಸಲಾರೆ, ಇಪ್ಪೆಡೆ ಬಿಡ್ಲಾರೆ! (ಸಿ)   6(3694)

-ಪ್ಪೆ ತಿನ್ನಲಾರೆ, ಹಣ್ಣು ಬಿಸಾಡಲಾರೆ! (ಋ)
-ಣಿ ಗುರುವಿಗೆಂಬುದ ಮರೆಯಲಾರೆ!
ತತ ಸ್ಮರಣೆ ಮಾಡದಿರಲಾರೆ!
ಲಾಭ, ನಷ್ಟಗಳನ್ನು ಲಕ್ಷಿಸಲಾರೆ! (ಕ)
-ರೆದಾಗ ಬರಬೇಕೆನ್ನದಿರಲಾರೆ!
ನ್ನಾರನ್ನೂ ಎಂದಿಗೂ ಪೂಜಿಸಲಾರೆ! (ಮು)
-ಪ್ಪೆನಗಡಸಿದರೂ ನಾನಳಲಾರೆ! (ರಂ)
-ಡೆ, ಮುಂಡೆ ಎಂದು ಬೈಸಿಕೊಂಡಿರಲಾರೆ!
ಬಿಟ್ಟು ನಿನ್ನನ್ನೆಂದಿಗೂ ನಾನಿರಲಾರೆ! (ನೋ)
-ಡ್ಲಾಗದ ನೋಟವೆಲ್ಲಿದ್ರೂ ನೋಡಲಾರೆ! (ಇ)
-ರೆ, ನಿರಂಜನಾದಿತ್ಯನನ್ನಗಲಿರೆ!!!

ತಪ್ಪೆಣಿಸಿದವನಪ್ಪ ಬೆಪ್ಪ! (ತ)   5(2992)

-ಪ್ಪೆಗೆಸೆವನವನನ್ನಯ್ಯಪ್ಪ! (ಮ)
-ಣಿಕಂಠಗೆ ಬಳಿವರಾರ್ಕಪ್ಪ?
ಸಿದ್ಧಯೋಗಿಯವನೆಲ್ಲರಪ್ಪ!
ತ್ತನ ಪಂಚಪ್ರಾಣವನಪ್ಪ!
ರಗುರು ಸ್ವರೂಪ ತಾನಪ್ಪ!
ರರ ಕಾಮಧೇನು ಅವ್ನಪ್ಪ! (ಇ)
-ಪ್ಪ ಶಬರಿಮಲೆಯ ಮೇಲಪ್ಪ!
ಬೆರೆತರವನಲ್ಲಿ ಸುಖಪ್ಪ! (ಅ)
-ಪ್ಪ, ನಿರಂಜನಾದಿತ್ಯ ತಾನಪ್ಪ!!!

ತಪ್ಪೇಕನ್ಯರ ಮೇಲೆ ಹೇರುವೆ? (ಸಿ)   6(3771)

-ಪ್ಪೇಕ್ತೆಗೆಯದೇ ತಿನ್ನುತ್ತಿರುವೆ!
ರ್ತವ್ಯ ಭ್ರಷ್ಟ ನೀನಾಗಿರುವೆ! (ಧ)
-ನ್ಯಳಾದಳು ಶಿವನಿಂದ ಶಿವೆ!
ಘುಪತಿಯ ಪ್ರಾಣಾ ಮಂತ್ರವೇ!!
ಮೇಲನೆಸಗುವ ಮಂತ್ರದುವೇ! (ತ)
-ಲೆ ಶೂಲೆ ನಿವಾರಕಾ ಜಪವೇ!
ಹೇಳಿದ್ದನ್ನು ಮಾಡ್ಬೇಕು ಮಗುವೇ! (ಗು)
-ರು ಶಿವಗಾಗ್ಬೇಕೆಲ್ಲರ ಸೇವೆ! (ಶಿ)
-ವೆ, ನಿರಂಜನಾದಿತ್ಯಾನುಭವೆ!!!

ತಪ್ಪೊಪ್ಪ ಮಾಡಿ ಕಪ್ಪ ಕೊಳ್ಳಯ್ಯಾ! (ಇ)   6(3823)

-ಪ್ಪೊಡಲ್ನಿನ್ನ ಸೇವೆಗಾಗಿರ್ಲಯ್ಯಾ! (ಅ)
-ಪ್ಪ ನೀನೆಲ್ಲರಿಗಲ್ಲವೇನಯ್ಯಾ?
ಮಾಡ್ಬೇಡ ಪಕ್ಷಪಾತವೆನ್ನಯ್ಯಾ! (ಅ)
-ಡಿಗೆಡದಂತೆ ನೋಡಿಕೊಳ್ಳಯ್ಯಾ!
ಪ್ಪ, ಕಾಣಿಕೆ ನಾಟಕವಯ್ಯಾ! (ಕೊ)
-ಪ್ಪರಿಗೆ ಕೊಟ್ರೂ ಸಾಕಾಗದಯ್ಯಾ!
ಕೊಳ್ಬೇಕೆಲ್ಲರ ವಿಶ್ವಾಸವಯ್ಯಾ! (ಹ)
-ಳ್ಳಕ್ಕೆ ತಳ್ಳಿದ್ರೇನು ಲಾಭವಯ್ಯಾ! (ಅ)
-ಯ್ಯಾರ್ಯ ಶ್ರೀ ನಿರಂಜನಾದಿತ್ಯಯ್ಯಾ!!!

ತಪ್ಪೋ, ಬೆಪ್ಪೋ, ಒಪ್ಪಿ ಅಪ್ಪಿಕೋ! (ಕ)   6(4166)

-ಪ್ಪೋ, ಕೆಂಪೋ ನಿನ್ನದೆಂದಪ್ಪಿಕೋ!
ಬೆತ್ತಲೆಯಾದ್ರೇನಂದಪ್ಪಿಕೋ! (ಮು)
-ಪ್ಪೋ, ಜವ್ವನವೋ, ನೀನಪ್ಪಿಕೋ!
ಡನಾಡಿಯೊಡಗೂಡಿಕೋ! (ತ)
-ಪ್ಪಿಸಿಕೊಳ್ಳದೇ ನೀ ನೋಡಿಕೋ!
ವ್ಯಯಾತ್ಮಾನೆಂದೆನ್ನಪ್ಪಿಕೋ! (ಮು)
-ಪ್ಪಿರಿಯಾಂದು ಮಾಡಿ ಅಪ್ಪಿಕೋ! (ಸಾ)
-ಕೊ? ನಿರಂಜನಾದಿತ್ಯ ಬೇಕೋ???

ತಬ್ಬಲಿಯನ್ನುದ್ಧರಿಸೋ ಗುರುದೇವಾ! (ದ)   6(3428)

-ಬ್ಬಬೇಡ ಅದನ್ನು ನರಕಕ್ಕೆ ದೇವಾ! (ಆ)
-ಲಿಸೀಗದ್ರ ಮೊರೆಯ ಸದ್ಗುರು ದೇವಾ!
ಮ ಸ್ವರೂಪಿಗಳಾದರಾಪ್ತರ್ದೇವಾ! (ತಿ)
-ನ್ನುವನ್ನಕ್ಕೂ ಮಣ್ಣುಬಿತ್ತು ಗುರುದೇವಾ?
(ಶು)-ದ್ಧ ಜೀವನಕ್ಕೆ ಬೆಲೆಯಿಲ್ಲವೇ ದೇವಾ?
(ವೈ)-ರಿಗಳನ್ನು ಸನ್ಮಾರ್ಗಕ್ಕೆಳೆಯೋ ದೇವಾ!
“ಸೋಹಂ, ಹಂಸಃ” ಸತ್ಯತೋರೋ ಗುರುದೇವಾ!
ಗುಹ್ಯಾದಿಂದ್ರಿಯ ಸೌಖ್ಯ ಸಾಕ್ಮಹಾದೇವಾ!
(ಕ)-ರುಣೆ ತೋರಿ ಕಾಪಾಡೀಗ ಗುರುದೇವಾ!
ದೇವದೇವ ದತ್ತಾತ್ರೇಯ ಗುರುದೇವಾ!
(ಧ)-ವಾ ನಿರಂಜನಾದಿತ್ಯಾನಂದ ಮಾಧವಾ!!!

ತಬ್ಬಲಿಯನ್ನೇಕೆ ನೋಯಿಸಿದೆ? (ಉ)   5(3169)

-ಬ್ಬಸ ಬರುವಷ್ಟೋಡಾಡಿಸಿದೆ! (ಒ)
-ಲಿದೀಗಾದರೂ ಬರಬಾರದೇ? (ಪ್ರಾ)
-ಯ ನಿನಗಾಗಿ ವ್ರಯ ಮಾಡಿದೆ! (ಇ)
-ನ್ನೇನೆನ್ನಿಂದಾಗಬೇಕಾದದ್ದಿದೆ?
ಕೆರೆಗೆ ಬೀಳುವುದುಳಿದಿದೆ!
ನೋಡ್ಬೇಕಾದರದ ಹೇಳ್ಬಾರದೇ? (ಬಾ)
-ಯಿ ಮುಚ್ಚಿಸಿದರೂ ಸಾಕಾಗದೇ? (ಘಾ)
-ಸಿಯಾದಮೇಲೇನಾದರೇನ್ತಂದೇ? (ತಂ)
-ದೆ, ನಿರಂಜನಾದಿತ್ಯ ನೀನೆಂದೆ!!!

ತಬ್ಬಿ ಮುತ್ತಿಕ್ಕಬೇಕು ನಾ ನಿನ್ನ! (ಕೊ)   6(3912)

-ಬ್ಬಿಹೆ ನಾನೆಂದು ದೂರ್ಬೇಡ ನನ್ನ!
ಮುನಿಸಿಂದೇಕೆ ಹೊರಗಿಟ್ಟೆನ್ನ? (ಅ)
-ತ್ತಿತ್ತಲ್ಲಾಡದಂತಿರ್ಸಿಕೊಳ್ಳೆನ್ನ! (ಸಿ)
-ಕ್ಕದಂತನ್ಯರಿಗೆ ಇರಿಸೆನ್ನ!
ಬೇರೇನನ್ನೂ ಬೇಡೆ ನಾನು ನಿನ್ನ!
ಕುಲ ಸ್ತ್ರೀಯೆಂದು ಸ್ವೀಕರಿಸೆನ್ನ!
ನಾನೆಂದೆಂದೂ ಸೇವಕಳು ನಿನ್ನ!
ನಿಜವೆಂದು ನಂಬು ಈ ಮಾತನ್ನ! (ನ)
-ನ್ನ ನಿರಂಜನಾದಿತ್ಯಾ! ಬಾ!! ರನ್ನಾ!!!

ತಬ್ಬಿಬ್ಬಾಗದೆ ಅಬ್ಬೆಯಾಗಿ ತಬ್ಬಿಕೋ! [ಮ]   3(1217)

-ಬ್ಬಿನಿಂದ ಬೆಳಕಿಗೆ ಬಂದು ತಬ್ಬಿಕೋ! (ಹ)
-ಬ್ಬಾಚರಿಸಿ ಉಪಚರಿಸಿ ತಬ್ಬಿಕೋ!
ಮನವೆನ್ನದತಿ ದೂರ ತಬ್ಬಿಕೋ! (ಹಿಂ)
-ದೆ, ಮುಂದೆ, ನೋಡದೆ ನೀನೆನ್ನ ತಬ್ಬಿಕೋ!
ರುಣ ಕಿರಣದಿಂದೆನ್ನ ತಬ್ಬಿಕೋ! (ಕ)
-ಬ್ಬೆನಿಂದ ಬರೆಸ್ಯಾನಂದಿಸಿ ತಬ್ಬಿಕೋ!
ಯಾವಾಗಲೂ ನಿನ್ನದಿದೆಂದು ತಬ್ಬಿಕೋ!
ಗಿರಿಜಾತನಯ ನಾನೆಂದು ತಬ್ಬಿಕೋ!
ಡವೇಕೆಂದೋಡಿ ನಾ ಬಂದೆ ತಬ್ಬಿಕೋ! (ಎ)
-ಬ್ಬಿಸುತೀಗಜ್ಞಾನದಿಂದೆನ್ನ ತಬ್ಬಿಕೋ! (ಅ)
-ಕೋ, ಶ್ರೀ ನಿರಂಜನಾದಿತ್ಯಾತ್ಮ ತಬ್ಬಿಕೋ!!!

ತಮಟೆ ಹೊಡಿಯೋ ಸಂಜೀವಾ!   4(1639)

ಹಾತ್ಮ ನಾನೆಂದು ಸಂಜೀವಾ! (ಪೇ)
-ಟೆ, ಬೀದಿಲಿ ನಿಂದು ಸಂಜೀವಾ!
ಹೊಲೆಯಾನಲ್ಲೆಂದು ಸಂಜೀವಾ! (ಗು)
-ಡಿಯೊಡೆಯಾನೆಂದು ಸಂಜೀವಾ!
ಯೋಗೇಶ್ವರಾನೆಂದು ಸಂಜೀವಾ!
ಸಂಪೂಜ್ಯಾತ್ಮಾನೆಂದು ಸಂಜೀವಾ!
ಜೀವನ್ಮುಕ್ತಾನೆಂದು ಸಂಜೀವಾ! (ಜೀ)
-ವಾ ನಿರಂಜನಾದಿತ್ಯ ಶಿವಾ!!!

ತರ ತರಾಲಂಕಾರ್ಯಮೃತಾ! (ಪ)   4(1799)

-ರಮಾನಂದದ ಊಟಮೃತಾ!
ನು, ಮನ ಸುಂದರಾಮೃತಾ!
ರಾಜೀವಾ ಸಖಾನಂದಾಮೃತಾ!
ಲಂಕೇಶ್ವರಾರಿಯಾತ್ಮಾಮೃತಾ!
ಕಾಮಾರಿಯರ್ಧನಾರ್ಯಮೃತಾ! (ಆ)
-ರ್ಯ ವೀಣಾವಾದ್ಯಾನಂದಾಮೃತಾ!
ಮೃಗನಯನಾ ವಾಣ್ಯಮೃತಾ!
ತಾ, ನಿರಂಜನಾದಿತ್ಯಾಮೃತಾ!!!

ತರತರ ಹೂಗಳೊಂದು ಮಾಲೆ! (ವ)   3(1020)

-ರ ಗುರುವಿಗೆಲ್ಲಾ ಬಾಲಲೀಲೆ!
ನು, ಮನೇಂದ್ರಿಯಗಳ ಲೀಲೆ!
ಸ, ಕಸವೆಲ್ಲಾ ಸಮ ಲೀಲೆ!
ಹೂಡಿ ಗುರಿ ಸೇರಿಸುವ ಲೀಲೆ!
ಣಪತಿಯ ವಿಚಿತ್ರ ಲೀಲೆ! (ಬಾ)
-ಳೊಂದವನಿಗತ್ಯಾನಂದ ಲೀಲೆ!
ದುಃಖ, ಸುಖವೇಕರಸ ಲೀಲೆ!
ಮಾತಡಗಲಾತ್ಮಾರಾಮ ಲೀಲೆ! (ಮಾ)
-ಲೆ, ಶ್ರೀ ನಿರಂಜನಾದಿತ್ಯ ಲೀಲೆ!!!

ತರತರದ ನಾಟಕ ನಾ ನೋಡಿದೆ!   6(3750)

ಸಗಳೊಂಭತ್ತರಿಂದದು ತುಂಬಿದೆ!
ರಲೆ, ತಂಟೆಗಳನ್ನೆಲ್ಲಾ ನೋಡಿದೆ!
ತಿ ಸುಖಕ್ಕಾಗಿ ಸತ್ತದ್ದೂ ನೋಡಿದೆ!
ನುಜ ದಮನವನ್ನೂ ನಾ ನೋಡಿದೆ!
ನಾನಾರೆಂದರಿತವರನ್ನೂ ನೋಡಿದೆ!
ಗರು ಕಾಳಗವನ್ನೂ ನಾ ನೋಡಿದೆ!
ಳವು, ಸುಲಿಗೆಗಳನ್ನೂ ನೋಡಿದೆ!
ನಾಸ್ತಿಕ ಸ್ತ್ರೀ, ಪುರುಷರನ್ನೂ ನೋಡಿದೆ!
ನೋವು, ಸಾವಿಲ್ಲದವರನ್ನೂ ನೋಡಿದೆ!
ಡಿಕ್ಕಿಯಿಂದುರುಳಿದವ್ರನ್ನೂ ನೋಡಿದೆ! (ತಂ)
-ದೆ ನಿರಂಜನಾದಿತ್ಯ ನಾನೆನಿಸಿದೆ!!!

ತರತರದ ಯಾಗ ಯಜ್ಞಾದಿಗಳೂ ವಿಜ್ಞಾನ!   6(3321)

ಹಸ್ಯವಿದು ಬಹು ಗೂಢವೆಂಬುದಾ ವಿಜ್ಞಾನ!
ತ್ತ್ವಸಿದ್ಧಾಂತಾನುಷ್ಠಾನ ಶ್ರೇಷ್ಠವೆಂಬುದು ಜ್ಞಾನ!
ಘುವೀರೋತ್ಪತ್ತಿಗೂ ಬೇಕಾಯ್ತುಯಜ್ಞ ವಿಜ್ಞಾನ!
ಮೆ, ಶಮಾದಿಗಳಿಂದಾಗುವುದು ಆತ್ಮಜ್ಞಾನ!
ಯಾಗ, ಯಜ್ಞಾದಿಗಳಿಷ್ಟಸಿದ್ಧಿಗಾಗಿದ್ದ ವಿಜ್ಞಾನ!
ತಿಗೆಟ್ಟೀಗಿನ ಸ್ಥಿತಿ ಅರಿಯದಾ ವಿಜ್ಞಾನ!
ಮ ನಿಯಮಾದ್ಯಷ್ಟಾಂಗ ಯೋಗಕ್ಕಿದು ಸಮಾನ!
ಜ್ಞಾನ ಮಾತ್ರದಿಂದಲೇ ಜೀವನ್ಮುಕ್ತಾತ್ಮದರ್ಶನ!
ದಿವ್ಯ ಜ್ಞಾನಾನಂದಸಿದ್ಧಿಯೇ ಇಂದ್ರಿಯದಮನ!
ದಾದ್ಯಾಯುಧಧಾರಿಗಳಿಂದಲ್ಪೋಪಶಮನ!
(ಆ)-ಳೂಳಿಗೆ ಮಾಡಿದಾಗ ಮಾತ್ರ ಅವ್ರಿಂದ ವೇತನ!
ವಿಕಲ್ಪ ಸಂಕಲ್ಪಾತೀತಾತ್ಮ ಪರಮಪಾವನ!
ಜ್ಞಾನೇಶ್ವರಗೆ ವಿಜ್ಞಾನದಿಂದೇನು ಪ್ರಯೋಜನ?
ಭೋಮಣಿ ನಿರಂಜನಾದಿತ್ಯಾಜ್ಞಾನ, ವಿಜ್ಞಾನ!!!

ತರತರದಾಪ್ತರ್ಭಗವಂತನಿಗೆ!   6(4045)

ಹಸ್ಯರಿವಾಗದೊಬ್ಬ್ರದಿನ್ನೊಬ್ಬ್ರಿಗೆ!
ನ್ನಂತರಂಗ ಹೇಳನವನಾರಿಗೆ!
ಮಿಸುವನವನು ಎಲ್ಲರೊಂದಿಗೆ!
ದಾರಿ ತನ್ನೂರಿಗೆ ತೋರ್ಪನೆಲ್ಲರಿಗೆ! (ಆ)
-ಪ್ತರಲ್ಲಿ ಗುದ್ದಾಟ ಒಪ್ಪದವನಿಗೆ! (ಅ)
-ರ್ಭಕರು ನಾವ್ಸಕಲರೂ ಅವನಿಗೆ!
ಮನ್ಸಿದನ್ನು ಪಾತ್ರರಾಗ್ಬೇಕ್ಪ್ರೀತಿಗೆ!
ವಂದಿಸಬೇಕವನ ಪಾದಗಳಿಗೆ!
ನ್ನಂತೆಲ್ಲರನ್ನೂ ಮಾಳ್ಪಾ ಗುರುವಿಗೆ!
ನಿತ್ಯಾನಿತ್ಯ ವಿಚಾರ ತತ್ಪರನಿಗೆ!
ಗೆಳೆಯ ಶ್ರೀ ನಿರಂಜನಾದಿತ್ಯನಿಗೆ!!!

ತರುವವರೂ ನೀವೇ ಹೊರುವವರೂ ನೀವೇ! (ತಿ)   2(491)

-ರುಮಲೇಶನ ಲೀಲೆ ಎನ್ನುವವರೂ ನೀವೇ! (ಭಾ)
-ವ ಭಕ್ತಿ ಬಹುಕಾಲದಿಂದ ತುಂಬಿದ್ದೂ ನೀವೇ! (ಭಾ)
-ವವದೇ ಮಹಿಮೆಯಾದುದ ಕಂಡದ್ದೂ ನೀವೇ! (ಆ)
-ರೂ, ಬೇರೆಯಾರೂ ಕಾರಣರಲ್ಲ? ಎಲ್ಲಾ ನೀವೇ!
ನೀಡುವವರೂ ನೀವೇ ಬೇಡುವವರೂ ನೀವೇ!
ವೇಷ, ಭಾಷೆಗಳು ಹೇಗಿದ್ದರೇನೆಲ್ಲಾ ನೀವೇ!
ಹೊಸ ಹೊಸ ಯೋಜನೆಗಳ ಮಾಳ್ಪುದೂ ನೀವೇ! (ಉ)
-ರು ಪ್ರಯೋಜನ ಹೊಂದಿ ಕುಣಿದವರೂ ನೀವೇ! (ಭಾ)
-ವ ಸಾಗರದಲ್ಲಿ ಬಿದ್ದೊದ್ದಾಡ್ವವರೂ ನೀವೇ!
ರ ಗುರುಕೃಪಾ ಭಿಕ್ಷೆಕೇಳ್ವವರೂ ನೀವೇ! (ಆ)
-ರೂಢರಾಗಿ ನಿತ್ಯಾನಂದದಲ್ಲಿಪ್ಪುದೂ ನೀವೇ!
‘ನೀ’ ‘ನಾ’ ನೊಂದಾದ ವಿಶಾಲ ವಿಶ್ವವೆಲ್ಲಾ ನೀವೇ!
ವೇದ ವೇದ್ಯ ನಿರಂಜನಾದಿತ್ಯ ಗುರು ನೀವೇ!!!

ತಲೆಗೆ ತೈಲ ತಿಕ್ಕಿದ್ಲು ಗಂಗಾತಾಯಿ! (ಜ್ವಾ)   4(2473)

-ಲೆಯೆಲ್ಲಾ ಇಳಿಸಿಬಿಟ್ಟಾ ಗಂಗಾತಾಯಿ! (ಬ)
-ಗೆಬಗೆಯ ತತ್ವಹಾಡಿದ್ಲಾಗಾ ತಾಯಿ!
ತೈಲ ಕೈಗೇನಂಟಿಲ್ಲೆಂದ್ಲಾ ಮಹಾತಾಯಿ! (ಕಾ)
-ಲವೆನಗಿನ್ನಾವಾಗೆಂದ್ಲಾ ಪ್ರಿಯ ತಾಯಿ!
ತಿರಿಗೊಮ್ಮೆ ಬರ್ತೇನೆಂದ್ಲಾ ಪೂಜ್ಯ ತಾಯಿ! (ಉ)
-ಕ್ಕಿ ಬಂದ ದುಃಖ ನುಂಗಿಕೊಂಡ್ಲಾಗಾ ತಾಯಿ! (ತಿಂ)
-ದ್ಲು ಗುರುಪ್ರಸಾದಾನಂದದಿಂದಾ ತಾಯಿ!
ಗಂಟ್ಲು ಕೆರೆತವೀಗಿಲ್ಲೆಂದಳಾ ತಾಯಿ!
ಗಾರುಡಿಗಾರ ನೀನು ಎಂದಳಾ ತಾಯಿ!
ತಾನೇತಾನಾಗೈಕ್ಯ ಸುಖ ಕಂಡ್ಳಾ ತಾಯಿ! (ತಾ)
-ಯಿ, ನಿರಂಜನಾದಿತ್ಯಾನಂದಪ್ರದಾಯಿ!!!

ತಲೆನೋವಿಗೇನು ಕಾರಣ? (ನೆ)   5(2849)

-ಲೆ ತಪ್ಪಿ ಆಡಿದ್ದು ಕಾರಣ!
ನೋಟ, ಕೂಟದಾಸೆ ಕಾರಣ!
ವಿಕಲ್ಪ, ಸಂಕಲ್ಪ ಕಾರಣ! (ಯೋ)
-ಗೇಶ್ವರನಾಗ್ರಹ ಕಾರಣ!
ನುಸುಳಿ ಬಿದ್ದದ್ದು ಕಾರಣ!
ಕಾಲನಂಜಿಕೆಯೂ ಕಾರಣ! (ಅ)
-ರಗದನ್ನಾಹಾರ ಕಾರಣ! (ಕಾ)
-ಣ ನಿರಂಜನಾದಿತ್ಯವಗುಣ!!!

ತಲೆಯ ಮೇಲಿನ ಮಲ್ಲಿಗೆ! [ಬೆ]   3(1134)

-ಲೆಯುಳ್ಳ ಗೊಬ್ಬರ ಮೊಲ್ಲೆಗೆ! (ಕಾ)
-ಯಕ್ಕೀಗಭಿಮಾನ ಜಿಲ್ಲೆಗೆ! (ಅ)
-ಮೇಲದು ಹೋಗುವುದಲ್ಲಿಗೆ? (ಬ)
-ಲಿ ರಾಜೇಂದ್ರ ನಿರುವಲ್ಲಿಗೆ!
ದಿಯೊಡಗೂಡಿ ಕೊಲ್ಲಿಗೆ!
ತ್ತೋಡುವುದು ಬಂದಲ್ಲಿಗೆ! (ಅ)
-ಲ್ಲಿಲ್ಲೆಲ್ಲೆಲ್ಲಿರ್ಪವನಲ್ಲಿಗೆ! (ಹೀ)
-ಗೆ ನಿರಂಜನಾದಿತ್ಯನಾಗೆ!!!

ತಲೆಯ ಮೇಲಿರುವುದಾರಲರು? (ಮಾ)   5(3203)

-ಲೆ ಮಾಡಿ ಮಾರುವವರದೆಂಬರು! (ನ್ಯಾ)
-ಯವಲ್ಲಾ ಮಾತೆಂಬರ್ಬೆಳೆದವರು!
ಮೇಲ್ಮೇಲದಕೆ ನೀರೆರೆದವರು! (ನಿ)
-ಲಿಸಿಕೊಂಡಳು ಭೂ ತಾಯಿಯೆಂಬರು! (ತು)
-ರು, ಕರು, ತೊಪ್ಪೆ, ಗೊಬ್ರದಕ್ಕೆಂಬರು! (ಮೇ)
-ವುಣ್ಸಿ ನಾವ್ಸಾಕಿದೆವವ್ಗಳೆಂಬರು! (ಆ)
-ದಾಯ ಪಡೆವುದಾರೆಂದರಿಯರು! (ಹ)
-ರಟೆಯಲ್ಲೇ ಕಾಲ ಕಳೆಯುವರು!
ಕ್ಷ್ಯವೇನೆಂಬುದ ಮರೆತಿಹರು! (ಗು)
-ರು ನಿರಂಜನಾದಿತ್ಯನರಿಯರು!!!

ತಲೆಯ ಮೇಲೆ ಶಿವ ಪಾದ! (ಬಾ)   4(1952)

-ಲೆಗಾನಂದವಿತ್ತಾ ಶ್ರೀ ಪಾದ! (ಕಾ)
-ಯ ಕ್ಲೇಶ ಹರಿದಾ ಶ್ರೀ ಪಾದ! (ರಾ)
-ಮೇಶ್ವರೇಶ್ವರನಾ ಶ್ರೀ ಪಾದ! (ಲೀ)
-ಲೆ ಅವರ್ಣನೀಯಾ ಶ್ರೀ ಪಾದ!
ಶಿವಗಣದ ಪ್ರಾಣಾ ಶ್ರೀ ಪಾದ!
ರಗುರು ಸ್ವರೂಪಾ ಶ್ರೀ ಪಾದ!
ಪಾರ್ಥಗಾಯುಧವಿತ್ತಾ ಶ್ರೀ ಪಾದ! (ಪಾ)
-ದ, ನಿರಂಜನಾದಿತ್ಯ ಪಾದ!!!

ತಳಮಳಗೊಳಬೇಡ! (ತಾ)   6(3506)

-ಳ, ತಂಬೂರಿ, ಬಿಡಬೇಡ!
ದ, ಮತ್ಸರ, ಪಡ್ಬೇಡ! (ಥ)
-ಳಕಿನ ಬಾಳು ಬಾಳ್ಬೇಡ!
ಗೊಡವೆ ಅನ್ಯರದ್ಬೇಡ! (ಕ)
-ಳವು, ದರೋಡೆ, ಮಾಡ್ಬೇಡ!
ಬೇಯದ ಅನ್ನ ನೀಡ್ಬೇಡ! (ನೀ)
-ಡ, ನಿರಂಜನಾದಿತ್ಯಾಡ!!!

ತಳಮಳಗೊಳ್ಳ ತಪಸಿ! (ತಾ)   4(1807)

-ಳ, ಮೇಳ ರಸಿಕ ತಪಸಿ!
ನ ಸದಾರಾಮ ತಪಸಿ! (ಒ)
-ಳ, ಹೊರಗಮಲ ತಪಸಿ!
ಗೊಡ್ಡಾಕಳೇನಲ್ಲ ತಪಸಿ! (ಕು)
-ಳ್ಳ ಅಗಸ್ತ್ಯ ಪುಲ್ಲ ತಪಸಿ!
ರಣಿ ಸಮಾನ ತಪಸಿ!
ತಿತ ಪಾವನ ತಪಸಿ! (ದ)
-ಸಿ ನಿರಂಜನಾದಿತ್ಯ ರಿಸಿ!!!

ತಳಮಳದಿಂದ ಕಳೆಗುಂದಬೇಡ! (ಒ)   6(3564)

-ಳ, ಹೊರ ನಾಮಾಮೃತ ತುಂಬದಿರ್ಬೇಡ!
ದನ ಬಾಧೆಗೆ ಗುರಿಯಾಗಬೇಡ! (ಖ)
-ಳ ಕುಲದ ಸ್ಮರಣೆ ಕನ್ಸಲ್ಲೂ ಬೇಡ! (ಅಂ)
-ದಿಂದಿನುಪದೇಶ ಬೇರ್ಬೇರೆನಬೇಡ!
ತ್ತಾತ್ರೇಯನ ಭಜನೆ ಬಿಡಬೇಡ!
ಳಂಕ ಅವನ ಪಾದಕ್ಕೆ ತರ್ಬೇಡ! (ವೇ)
-ಳೆ ವಿಷಯ ಸುಖಕ್ಕೆ ಹಾಳ್ಮಾಡ್ಬೇಡ!
ಗುಂಡಪ್ಪ ನೀನಾಗಿ ಉಂಡಾಡಿಯಾಗ್ಬೇಡ!
ರಿದ್ರಾವಸ್ಥೆಗೆ ಅಂಜಿ ಅಳಬೇಡ!
ಬೇರೆಯವರನುಕರಣೆ ಮಾಡ್ಬೇಡ! (ಬಿ)
-ಡ, ನಿರಂಜನಾದಿತ್ಯ ಸ್ವಧರ್ಮ ಬಿಡ!!!

ತಾತ ದೇವಾಂಶ ಸಂಭೂತಾತ!   2(788)

ರಣಿ ಕುಲಾಧೀಶನಾತ!
ದೇಶ, ಕಾಲಕ್ಕನುಸಾರಾತ!
ವಾಂಛಲ್ಯ ಸರ್ವತ್ರವಿರ್ಪಾತ!
ಶಿ, ತಾರಾಗಣಪತ್ಯಾತ!
ಸಂಕೀರ್ತನಾ ಪ್ರೇಮಾನಂದಾತ!
ಭೂರ್ಭುವಸ್ಸುವರ್ಲೋಕಕ್ಕಾತ!
ತಾತ, ಪರಬ್ರಹ್ಮ ದತ್ತಾತ! (ಆ)
-ತ, ನಿರಂಜನಾದಿತ್ಯತಾತ!!!

ತಾನಟ್ಟಡಿಗೆ ತನಗಾರೋಗ್ಯ!   1(311)

ಡೆಯಂತೆ ನುಡಿವವ ಯೊಂಗ್ಯ! (ಅ)
-ಟ್ಟಹಾಸ, ಕೆಟ್ಟ ಮಾತು, ಅಯೋಗ್ಯ! (ಅ)
-ಡಿಗಟ್ಟು ಭದ್ರದ ಮನೆ ಭವ್ಯ!
ಗೆಜ್ಜಲು ಹತ್ತಿದರೆಲ್ಲಯೊಂಗ್ಯ!
ಡವಾಗೇಳ್ವಭ್ಯಾಸನಾರೋಗ್ಯ! (ಅ)
-ನಗತ್ಯದಾಹಾರ ಅನಾರೋಗ್ಯ!
ಗಾನ ಕೇಳುವಭ್ಯಾಸ ಆರೋಗ್ಯ!
ರೋಧಿಸುತ್ತಿರುವುದನಾರೋಗ್ಯ! (ಯೋ)
-ಗ್ಯ! ನಿರಂಜನಾದಿತ್ಯೆಲ್ಲಾ ಭಾಗ್ಯ!!!

ತಾನಾಗಿ ಬಂತು ತನ್ನಂತಾಯಿತು!   3(1328)

ನಾಯಿ ನರಿಯ ಭಯ ಹೋಯಿತು! (ಕೂ)
-ಗಿ ಕೂಗಿ ಪ್ರೀತಿಸುವಂತಾಯಿತು!
ಬಂದದ್ದನ್ನುಂಡಿರುವಂತಾಯಿತು! (ಮಾ)
-ತು ವಿನಯ ಭರಿತವಾಯಿತು!
ನ್ನವನಾನೆಂಬರಿವಾಯಿತು! (ತ)
-ನ್ನಂಗ ಸವರಿಸುವಂತಾಯಿತು!
ತಾರತಮ್ಯದರಿವುಂಟಾಯಿತು! (ಆ)
-ಯಿತು, ಶುದ್ಧ ಸಾತ್ವಿಕವಾಯಿತು! (ಹೇ)
-ತು, ನಿರಂಜನಾದಿತ್ಯನಾಯಿತು!!!

ತಾನೇ ಯೋಚಿಸಿ ಮಾಡ್ಬೇಕ್ತನ್ನ ಕರ್ತವ್ಯ!   6(3952)

ನೇಮ, ನಿಷ್ಠೆಯಿಂದ ಮಾಡ್ಬೇಕು ಕರ್ತವ್ಯ!
ಯೋಗ ಮಾರ್ಗಾವಲಂಬನೆಲ್ರ ಕರ್ತವ್ಯ!
ಚಿರಾಯುರಾರೋಗ್ಯಕ್ಕಿದಾದ್ಯ ಕರ್ತವ್ಯ!
ಸಿಟ್ಟು ಬಿಡ್ವುದು ಮೊಟ್ಟಮೊದ್ಲ ಕರ್ತವ್ಯ!
ಮಾಯಾ ಜಯವೆಂಬುದು ದೊಡ್ಡ ಕರ್ತವ್ಯ! (ತೊ)
-ಡ್ಬೇಕ್ದೀಕ್ಷೆಯಿದಕ್ಕೆಂಬುದೆಲ್ರ ಕರ್ತವ್ಯ! (ಮು)
-ಕ್ತನಾಗಲಿಕ್ಕಿದೇ ಜೀವನ ಕರ್ತವ್ಯ! (ಅ)
-ನ್ನ, ವಸ್ತ್ರದಾನ ಉಳ್ಳವನ ಕರ್ತವ್ಯ!
ನಿಕರಾರ್ತರಲ್ಲೆಲ್ಲರ ಕರ್ತವ್ಯ! (ಕ)
-ರ್ತನನ್ನರಿಯುವುದು ಮರ್ತಕರ್ತವ್ಯ!
ವ್ಯವಸ್ಥೆ ನಿರಂಜನಾದಿತ್ಯ ಕರ್ತವ್ಯ!!!

ತಾಪಸಿಗಾಗಿ ಮಹಿಮೆಯಲ್ಲ! (ತಾ)   6(4260)

-ಪಸಿ ಮಹಿಮೆಗಾಗಿಯೂ ಅಲ್ಲ! (ಹು)
-ಸಿ ಮಾಯೆಯಾಟ ಮಹಿಮೆಯಲ್ಲ!
ಗಾಳಿ ಬಂದಾಗ ತೂರುವರೆಲ್ಲ! (ಯೋ)
-ಗಿ ಸ್ಥಿತಪ್ರಜ್ಞನಾಗದಾಗೋಲ್ಲ!
ನೋ ನಾಶಕ್ಕಾಗಿ ತಪಸ್ಸೆಲ್ಲಾ!
ಹಿತೈಷಿವನೆಂಬುದು ಸುಳ್ಳಾಲ್ಲಾ!
ಮೆರೆವಣಿಗೆಯನ್ನವನೊಲ್ಲ! (ಸಾ)
-ಯದಿಹನು, ಸತ್ತ್ರೂ ದೇಹವೆಲ್ಲಾ! (ಫು)
-ಲ್ಲ ನಿರಂಜನಾದಿತ್ಯಸತ್ತಲ್ಲ!!!

ತಾಪಸಿಗೇಕೆ ತಾಸಿನ ಲೆಃಖ?   2(896)

ರಮಾತ್ಮನ ಧ್ಯಾನವನ ಲೆಃಖ! (ಹೇ)
-ಸಿಗೆ ಸಂಸಾರದ ತುಚ್ಛ ಲೆಃಖ! (ಯೋ)
-ಗೇಚ್ಛೆಯವನ ಉಚ್ಛ ಲೆಃಖ!
ಕೆಲಸಕಾರ್ಯದ್ದೇನಿಲ್ಲ ಲೆಃಖ!
ತಾನವನಾಗಿರ್ಪುದೊಂದೇ ಲೆಃಖ!
ಸಿರಿತನವೆಲ್ಲಾ ಸುಳ್ಳು ಲೆಃಖ!
ಶ್ವರ ಮಾಯೆಯಾದಾವ ಲೆಃಖ?
ಲೆಃಖವೆಲ್ಲಾತ್ಮಾರಾಮನ ಲೆಃಖ! (ಸು)
-ಖ ನಿರಂಜನಾದಿತ್ಯನ ಲೆಃಖ!!!

ತಾಪಸೇಶ್ವರನೆಲ್ಲಿ ಹೇಗಿಹನಪ್ಪಾ?   4(2133)

ರಮಾತ್ಮನಾಗ್ಯೆಲ್ಲೆಲ್ಲೂ ಇದ್ದಾನಪ್ಪಾ!
ಸೇವೆಯವನದೇಕೆ ಮಾಡಬೇಕಪ್ಪಾ? (ಶಾ)
-ಶ್ವತ ಸುಖಾನುಭವಿಯಾಗಲಿಕ್ಕಪ್ಪಾ! (ವ)
-ರ ಪ್ರಸಾದನುಗ್ರಹಿಸುವನೇನಪ್ಪಾ?
ನೆನಪವನದಿದ್ರೆಲ್ಲಾ ಸಿಗ್ವುದಪ್ಪಾ! (ಅ)
-ಲ್ಲಿ, ಇಲ್ಲಿ, ಹೇಗಿಹನೆಂದು ಧ್ಯಾನಿಸ್ಲಪ್ಪಾ!
ಗಿಡ, ಮರಾದಿಗಳೂ ಅವನೇನಪ್ಪಾ?
ದಿನಾಲ್ಕು ಲೋಕದೆಲ್ಲವೂ ಅವನಪ್ಪಾ!
ಮ್ಮೆಲ್ಲರ ನಿಜರೂಪವನೇನಪ್ಪಾ? (ಅ)
-ಪ್ಪಾ! ನಿರಂಜನಾದಿತ್ಯಾ ತಾಪಸಿಯಪ್ಪಾ!!!

ತಾಯಿಯಲ್ಲವಿಶ್ವಾಸೆನಗಿಲ್ಲ! (ಸಾ)   5(2887)

-ಯಿಸಿದರೂ ದುಃಖ ನನಗಿಲ್ಲ! (ಧ್ಯೇ)
-ಯ ನನ್ನದಪವಿತ್ರವಾಗಿಲ್ಲ! (ಬ)
-ಲ್ಲಳಿದನಾ ಪ್ರಿಯ ತಾಯಿಯೆಲ್ಲ!
ವಿಚಾರ ನನ್ನದು ತಪ್ಪಾಗಿಲ್ಲ!
ಶ್ವಾನವೂ ನನಗಪ್ರಿಯವಲ್ಲ! (ದೋ)
-ಸೆ ತೂತು ನಾನೆಣಿಸುವುದಿಲ್ಲ!
ರ ಹರನೆಂಬುದು ಸುಳ್ಳಲ್ಲ!
ಗಿರಿಜೆಯನ್ನಗಲಿವನಿಲ್ಲ! (ಪು)
-ಲ್ಲ ನಿರಂಜನಾದಿತ್ಯನ್ಯನಲ್ಲ!!!

ತಾಯಿಯಾದರೆ ಹೆಂಡತಿ ಕೀರ್ತಿ! (ತಾ)   5(3093)

-ಯಿ ಹೆಂಡತಿಯಾದರಪಕೀರ್ತಿ!
ಯಾಗ, ಯಜ್ಞದಿಂದ ಭೂತ ತೃಪ್ತಿ!
ರ್ಶನವಾದಮೇಲ್ಜೀವನ್ಮುಕ್ತಿ!
(ಸೆ)ರೆ ಕುಡಿಯುವುದೊಂದು ದುರ್ವ

ತ್ತಿ!
ಹೆಂಗಸಿಗಿರಬೇಕ್ಪತಿಭಕ್ತಿ!
ಕಾಯಿತಿ ಬಹು ನೀಚ ವೃತ್ತಿ!
ತಿಳಿನೀರಂತಿರ್ಬೇಕ್ಪರಮಾರ್ಥಿ!
ಕೀಚಕನೊಬ್ಬ ಕಾಮುಕ ವ್ಯಕ್ತಿ! (ಸ್ಫೂ)!!!
-ರ್ತಿ, ನಿರಂಜನಾದಿತ್ಯಾನಂದೋಕ್ತಿ!!!

ತಾರಾನಾಥ ತ್ಯಾಗರಾಜನಾದ!   4(1546)

ರಾತ್ರಿ, ದಿನಾತ್ಮ ನಿರತನಾದ!
ನಾಟ್ಯ, ನಾಟಕಕ್ಕಾಧಾರನಾದ! (ಪಂ)
-ಥ, ಪರಮಾರ್ಥಕ್ಕುದ್ಧಾಮನಾದ! (ನಿ)
-ತ್ಯಾನಿತ್ಯ ನಿರ್ದೇಶಾತ್ಮಕನಾದ!
ಗನಾದಿ ಲೋಕಕ್ಕಾಪ್ತನಾದ!
ರಾಮ, ಕೃಷ್ಣ ಗಾನಾನಂದನಾದ!
ರಾ, ಜನ್ಮ ದುಃಖ ದೂರನಾದ ನಾಮ, ರೂಪ ಗುಣಾತೀತನಾದ!
ತ್ತ ನಿರಂಜನಾದಿತ್ಯನಾದ!!!

ತಾಳ ಹಾಕಬೇಡ್ವೇನಮ್ಮಾ? (ಹ)   4(2397)

ಬಳಿಗೇನು ಹೇಳ್ಲಮ್ಮಾ?
ಹಾಡಿಗದಿರ್ಲೇ ಬೇಕಮ್ಮಾ!
ಷ್ಟಪಟ್ಟು ಕಲಿಯಮ್ಮಾ!
ಬೇಸರ ಪಡಬೇಡಮ್ಮಾ! (ಬೇ)
-ಡ್ವೇ ಪಾಠ ನಿನಗೀಗಮ್ಮಾ?
ಗುನಗುತ ಹಾಡಮ್ಮಾ! (ಅ)
-ಮ್ಮಾ, ನಿರಂಜನಾದಿತ್ಯಮ್ಮಾ!!!

ತಾಳ್ಮೆಯಿಂದೆಲ್ಲಾ ನೋಡುತ್ತಿರಯ್ಯಾ!   6(3356)

(ಕಾ)-ಳ್ಮೆದ ಹಾಕದಿದ್ದ್ರು ದರದಯ್ಯಾ!
(ಬಾ

)-ಯಿಂದಂದದ್ಕಾರ್ಯಕ್ಕೆ ಬರ್ಬೇಕಯ್ಯಾ!
(ಎ)-ದೆಗುಂದಿದರದೆಂತಾದೀತಯ್ಯಾ?
(ಉ)-ಲ್ಲಾಸದಿಂದ ಕರ್ತವ್ಯ ಮಾಡಯ್ಯಾ!
ನೋವ್ನಿನ್ನದನ್ನೀಗ ಸಹಿಸಯ್ಯಾ!
(ಮಾ)-ಡು ಗುರುನಾಮ ಭಜನೆಯಯ್ಯಾ!
(ಅ)-ತ್ತಿತ್ತ ಸುತ್ತಾಡಿ ಸುಸ್ತಾಗ್ಬೇಡಯ್ಯಾ!
ಘುವೀರಗಾರ ಬಲವಯ್ಯಾ?
(ಅ)-ಯ್ಯಾ ನಿರಂಜನಾದಿತ್ಯನದ್ದಯ್ಯಾ!!!

ತಾವರೆಲೆಯಲ್ಲಿ ನೀರು ಮುತ್ತಿನಂತೆ!   5(2638)

ರ ಗುರುವಿನಲ್ಲೈಹಿಕದರಂತೆ!
(ಧ)ರೆಯ ಜೀವಿಗಳಿಗಿದಂಟಿಕೊಂಡಂತೆ! (ನೆ)
-ಲೆನಿಂತ ಮನಸ್ಸಲಿಪ್ತವಾಗ್ವುದಂತೆ!
ಮ, ನಿಯಮಾಭ್ಯಾಸದಕೆ ಬೇಕಂತೆ! (ಅ)
-ಲ್ಲಿಲ್ಲಿ ಹುಡುಕಿದರದು ಸಿಕ್ಕದಂತೆ!
ನೀಚರೊಡನಾಟವಿರಬಾರದಂತೆ! (ಪು)
-ರುಷೋತ್ತಮನೊಬ್ಬನೇ ಆತ್ಮೀಯನಂತೆ!
ಮುನಿಸೆಂಬುದವನಿಗೇನಿಲ್ಲವಂತೆ! (ಸು)
-ತ್ತಿಹನವನೀರೇಳು ಲೋಕಗಳಂತೆ!
ನಂಬಿದವರಿಗಿಂಬು ಅವನಿಂದಂತೆ! (ಸೀ)
-ತೆ ನಿರಂಜನಾದಿತ್ಯನ ದಾಸಿಯಂತೆ!!!

ತಿಂಡಿ ತಿಂದೆ, ಪುರಿ ಉಂಡೆ ತಿಂದೆ! (ಪು)   4(1620)

-ಡಿ ಮಾಡಿ ಚೆನ್ನಾಗ್ಯಗಿದು ತಿಂದೆ!
ತಿಂದೆ, ಜೀರ್ಣವಾಗುವಷ್ಟೇ ತಿಂದೆ! (ತಂ)
-ದೆಯನ್ನು ನೆನೆನೆನೆದು ತಿಂದೆ!
ಪುರಾಣ, ಕತೆ ಸ್ಮರಸಿ ತಿಂದೆ! (ಹ)
-ರಿ ಕರುಣಾಳೆಂದರಿತು ತಿಂದೆ!
ಉಂಡಾಡಿ ನಾನಲ್ಲವೆಂದು ತಿಂದೆ! (ಬಿ)
-ಡೆ ಗುರುಪಾದವನ್ನೆಂದು ತಿಂದೆ!
ತಿಂದೆ, ತಿಂದೆ ಕಂಠಪೂರ್ತಿ ತಿಂದೆ! (ತಂ)
-ದೆ ನಿರಂಜನಾದಿತ್ಯಗಾಗ್ಯೆಂದೆ!!!

ತಿಂಡಿ ತೀರ್ಥವೇನು ಸ್ವಾಮಿ? [ಕೊ]   3(1058)

-ಡಿ ನೀವಾಗಿ ಅವ ಸ್ವಾಮಿ!
ತೀರ್ಥರೂಪ ಅವ ಸ್ವಾಮಿ! (ವ್ಯ)
-ರ್ಥವೆಲ್ಲಾ ಬಾಹ್ಯಾರ್ಥ ಸ್ವಾಮಿ!
ವೇದಾಂತಾರ್ಥತ್ಮಾರ್ಥ ಸ್ವಾಮಿ!
ನುಡಿ ನಡೆಯೊಂದೇ ಸ್ವಾಮಿ!
ಸ್ವಾಮಿ ಶಿವಾನಂದ ಸ್ವಾಮಿ! (ನೇ)
-ಮಿ ನಿರಂಜನಾರ್ಕ ಸ್ವಾಮಿ!!!

ತಿಂಡಿ ಬೇಡೆವೇಕೆಂದನಾ ಕೃಷ್ಣ! [ಉಂ]   4(2340)

-ಡಿಹೆನಪಾರವೆಂದನಾ ಪೂಷ್ಣ!
ಬೇಕಾದದ್ದಿನ್ನೇನೆಂದನಾ ಕೃಷ್ಣ! (ಬೇ)
-ಡತಕ್ಕದ್ದೇನಿದೆಂದನಾ ಪೂಷ್ಣ!
ವೇದಾಂತಜ್ಞ ನೀನೆಂದನಾ ಕೃಷ್ಣ! (ಸಾ)
-ಕೆಂದಿರ್ಬಾರದೇನೆಂದನಾಪೂಷ್ಣ!
ತ್ತಗೇನೆನ್ನಲೆಂದನಾ ಕೃಷ್ಣ!
ನಾನೂ, ನೀನವನೆಂದನಾ ಪೂಷ್ಣ!
ಕೃಪಾಶೀರ್ವಾದದೆಂದನಾ ಕೃಷ್ಣ! (ಕೃ)
-ಷ್ಣ ನಿರಂಜನಾದಿತ್ಯಾತ್ಮಾ ಪೂಷ್ಣ!!!

ತಿಂಡಿಗಾಗಿ ತಟ್ಟೆ ತಂದಿಟ್ಟೆ! [ನೋ]   4(2459)

-ಡಿ ಹಣ್ಣನ್ನು ನಿರಾಶೆಪಟ್ಟೆ! (ಆ)
-ಗಾಗ್ತಿಂಡಿ ಕೊಡ್ಬೇಡಿರೆಂದ್ಬಿಟ್ಟೆ! (ಈ)
-ಗಿನಭ್ಯಾಸಾರೋಗ್ಯವೆಂದ್ಬಿಟ್ಟೆ!
ಪ್ಪುತಿಳ್ಕೊಳ್ಬೇಡಿರೆಂದ್ಬಿಟ್ಟೆ! (ಹೊ)
-ಟ್ಟೆ ಕೆಟ್ಟೆ ಕೆಟ್ರೆ ವಾಸ್ನೆಂದ್ಬಿಟ್ಟೆ!
ದಿವ್ಯ ಜೀವನಕ್ಕಿದೆಂದ್ಬಿಟ್ಟೆ! (ಉ)
-ಟ್ಟೆ ನಿರಂಜನಾದಿತ್ಯ ಬಟ್ಟೆ!!!

ತಿಂಡಿಗಾಗಿ ತಪಸಲ್ಲವಯ್ಯಾ! (ಅ)   1(340)

-ಡಿಗೆಯೂಟ ಮಿತವಾಗಲಯ್ಯಾ! (ಆ)
-ಗಾಗ ತಿನುವಾಸೆ ಬೇಡವಯ್ಯಾ!
-ಗಿರಿಜಾಪತಿ ವಿರಕ್ತನಯ್ಯಾ! (ಆ)
-ತನಂತಿರಬೇಕು ತಪಕಯ್ಯಾ!
ರಿಣಾಮ ನಿತ್ಯ ಸುಖವಯ್ಯಾ! (ಆ)
-ಸನ, ಪ್ರಾಣಾಯಾಮವಿರಲಯ್ಯಾ! (ಅ)
-ಲ್ಲದಿರಲಾರೋಗ್ಯ ಹಾನಿಯಯ್ಯಾ! (ಅ)
-ವರಿವರ ಮಾತುಗಳೇಕಯ್ಯಾ? (ಅ)
-ಯ್ಯಾ! ನಿರಂಜನಾದಿತ್ತಾ ಶಿವಯ್ಯಾ!!!

ತಿಂದು ಕೆಟ್ಟೆನೆನಬೇಡಪ್ಪಾ!   3(1321)

ದುಡುಕಿದರಕ್ಕು ಕೇಡಪ್ಪಾ!
ಕೆಟ್ಟಾಹಾರ ತಿನ್ನಬೇಡಪ್ಪಾ! (ಹೊ)
-ಟ್ಟೆ ಕೆಟ್ಟರೆ ದುಷ್ಟ ರೋಗಪ್ಪಾ! (ಬೇ)
-ನೆಗೆಡೆಗೊಡಬಾರದಪ್ಪಾ! (ಮ)
-ನ ಬಿಗಿ ಹಿಡಿದು ಆಡಪ್ಪಾ!
ಬೇಲಿ ಹೊಲಕ್ಕಿರಬೇಕಪ್ಪಾ! (ಗೌ)
-ಡಗಿದರಿಂದಲೇ ಲಾಭಪ್ಪಾ! (ತ)
-ಪ್ಪಾಡ ನಿರಂಜನಾದಿತ್ಯಪ್ಪಾ!!!

ತಿಂದು ದೂರುವುದಾವ ಹಿರಿಮೆ?   6(3469)

ದುರ್ವಿಧಿಯದಿದೊಂದು ಮಹಿಮೆ!
ದೂರಿದ್ರೆ ದಾತಗೇನು ಕಡಿಮೆ? (ಗು)
-ರುದೇವನದ್ದು ಒಂದೇ ನಿಲುಮೆ!
(ಸಾ)-ವು, ನೋವಿಗಂಜದೇ ಮಾಳ್ಪಗೈಮೆ!
ದಾಸರ ದಾಸರಲ್ಲದ್ರ ಜಮೆ! (ಭ)
-ವ ಪಾಶನಾಶಕ್ಕೆ ಶಮೆ, ದಮೆ!
ಹಿತೈಷಿ ಲೋಕಕ್ಕೆ ಸತ್ಯಭಾಮೆ! (ವೈ)
-ರಿ ನಿಗ್ರಹಕ್ಬೇಕವಳೊಲುಮೆ! (ಉ)
-ಮೆ ನಿರಂಜನಾದಿತ್ಯಾತ್ಮ -ಧಾಮೆ!!!

ತಿಥಿ, ವಾರ, ನಕ್ಷತ್ರ, ಮಾಸ ಸೇರಿ ಬಂದ ವರ್ಧಂತಿ! (ಪ)   6(4176)

-ಥಿಕನಿಗೆ ಸ್ವರೂಪ ಚಿಂತನೆಯ ಶುಭ ವರ್ಧಂತಿ!
ವಾಸನಾ ಕ್ಷಯನದಾಯಿತೀಗೆಂದರಿತ ವರ್ಧಂತಿ! (ವ)
-ರ ಗುರುದತ್ತ ಭಜನೆಯಲ್ಲಿ ಬೆರೆತ ವರ್ಧಂತಿ!
ರ, ನಾರಿಯರ್ಸಹೋದರರೆಂದರಿತ ವರ್ಧಂತಿ! (ಪ)
-ಕ್ಷಪಾತಾತೀತ ಅಕ್ಷಯಾತ್ಮನೆಂದರಿತ ವರ್ಧಂತಿ!
ತ್ರಯ್ಮೂರ್ತಿ ದತ್ತ ಸ್ವರೂಪವಿದೆಂದರಿತ ವರ್ಧಂತಿ!
ಮಾನಾಭಿಮಾನಗಳವನದೆಂದರಿತ ವರ್ಧಂತಿ!
ರ್ವ ಕಲ್ಯಾಣಕರ್ತ ಅವನೆಂದರಿತ ವರ್ಧಂತಿ!
ಸೇರ್ಬಾರದು ದುರ್ಜನರೊಡನೆಂದರಿತ ವರ್ಧಂತಿ!
ರಿಪುಗಳ್ಕಾಮ, ಕ್ರೋಧಾದಿಗಳೆಂದರಿತ ವರ್ಧಂತಿ!
ಬಂಧನಕ್ಕೆ ಕಾರಣಾಸೆಗಳೆಂದರಿತ ವರ್ಧಂತಿ!
ಶೇಂದ್ರಿಯಗಳ್ದತ್ತ ಸೇವೆಗೆಂದರಿತ ವರ್ಧಂತಿ!
ಚನವನದ್ವೇದವಾಕ್ಯವೆಂದರಿತ ವರ್ಧಂತಿ! (ವ)
-ರ್ಧಂತ್ಯಾಚರಣೆ ವಿಶ್ವಶಾಂತಿಗೆಂದರಿತ ವರ್ಧಂತಿ! (ನೀ)
-ತಿ ಜಾತಿಯೆಂದರಿತ ನಿರಂಜನಾದಿತ್ಯ ವರ್ಧಂತಿ!!!

ತಿಥಿ, ವಾರ, ನಕ್ಷತ್ರದ ಹಂಗಿಲ್ಲ ಲಭ್ಯಕ್ಕೆ! (ಮೈ)   6(4232)

-ಥಿಲೀಪತಿಯ ದಯೆಯಿದ್ದರೆ ಸಾಕದಕ್ಕೆ!
ವಾಕ್ಕಾಯ ಮನಶ್ಶುದ್ಧಿಯಿರಬೇಕದಕ್ಕೆ! (ಪ)
-ರ ನಾರೀ ಸಹೋದರನಾಗಿರಬೇಕದಕ್ಕೆ!
ರಹರಿಯ ದಾಸನಾಗಿರಬೇಕದಕ್ಕೆ!
ಕ್ಷತ್ರಿಯ ಬ್ರಾಹ್ಮಣಾದಿಗಳಾಗ್ಬೇಕಿಲ್ಲದಕ್ಕೆ! (ಯಂ)
-ತ್ರ, ಮಂತ್ರ, ತಂತ್ರಾದಿಗಳ್ಬೇಕೆಂಬುದಿಲ್ಲದಕ್ಕೆ!
ರಿದ್ರ, ಶ್ರೀಮಂತರೆಂಬ ಭೇದವಿಲ್ಲದಕ್ಕೆ! (ಅ)
-ಹಂಕಾರವೆಂಬುದು ಪರಮ ವೈರಿ ಅದಕ್ಕೆ!
ಗಿರಿಜಾರಮಣನೇ ಯಜಮಾನ ಅದಕ್ಕೆ! (ಎ)
-ಲ್ಲರೂ ಶರಣಾಗಬೇಕಾ ಶ್ರೀಪಾದಕ್ಕದಕ್ಕೆ!
ಕ್ಷ್ಯಕ್ಕೆ ಬರಲೀ ಮಾತೆಲ್ಲರ ಗಮನಕ್ಕೆ! (ಅ)
-ಭ್ಯರ್ಥಿಗಳಾಗುವರಾಗ ಸಾಯುಜ್ಯ ಸುಖಕ್ಕೆ! (ಅ)
-ಕ್ಕೆ ನಿರಂಜನಾದಿತ್ಯಾನಂದ ಸುಖವೆಲ್ಲಕ್ಕೆ!!!

ತಿದ್ದಿಕೊಳ್ಳುವುದಿಲ್ಲ ತನ್ನನ್ನು! (ಉ)   5(2841)

-ದ್ದಿಶ್ಯ ಗಣ್ಯನೆನಬೇಕ್ತನ್ನನ್ನು!
ಕೊಳ್ಳೆ ಹೊಡೆಯವನನ್ಯರನ್ನು! (ಸು)
-ಳ್ಳು ಹೇಳಿ ನಿಂದಿಪನೆಲ್ಲರನ್ನು! (ಬೇ)
-ವು ಬಿತ್ತಿ ಬಯಸುವ ಮಾವನ್ನು!
ದಿಗ್ಭ್ರಮೆ ಕೊಯ್ಯುವಾಗ ಬೇವನ್ನು! (ಬ)
-ಲ್ಲವರೇನನ್ನಬೇಕವನನ್ನು?
ನುವೇ ತಾನೆನ್ನುವವನನ್ನು! (ಚೆ)
-ನ್ನಕೇಶವ ತಿದ್ದಲವನನ್ನು! (ಅ)
-ನ್ನು ನಿರಂಜನಾದಿತ್ಯಕಾಯೆನ್ನು!!!

ತಿನುವಾಸೆ ಹೋಗಿಲ್ಲ!   1(205)

ನುಡಿವಾಸೆ ಬಂದಿಲ್ಲ!
ವಾಸದಾಸೆ ಹೋಗಿಲ್ಲ!
ಸೆಜ್ಜೆಯಾಸೆ ಬಂದಿಲ್ಲ!
ಹೋಗುವಾಸೆ ಹೋಗಿಲ್ಲ!
ಗಿರಿಯಾಸೆ ಬಂದಿಲ್ಲ! (ಎ)
-ಲ್ಲ ನಿರಂಜನ ಬಲ್ಲ!!!

ತಿನ್ನಬಾರದ್ದು ತಿಂದಾಯ್ತು! (ಬ)   6(3735)

-ನ್ನ ಪಡುವಾಗಾಡದಾಯ್ತು!
ಬಾಯಿ ರುಚಿಗಾಶ್ಸಿಂತಾಯ್ತು! (ಪ)
-ರಮಾರ್ಥದಿಂದಾನಂದಾಯ್ತು! (ಬಿ)
-ದ್ದು, ಎದ್ದು ಕೂತ್ಕೊಳ್ಬೇಕಾಯ್ತು!
ತಿಂಗ್ಳುಗಳುರುಳಿ ಹೋಯ್ತು!
ದಾರಿ ತಪ್ಪಿ ಶಿಕ್ಷೆಯೂಯ್ತು! (ಕಾ)
-ಯ್ತು, ನಿರಂಜನಾದಿತ್ಯಾಯ್ತು!!!

ತಿನ್ನಬೇಕಿನ್ನೊಂದು ಮಾವಿನ ಹಣ್ಣೀಗ! (ನಿ)   4(2306)

-ನ್ನ ಪ್ರಸಾದವೆಂದದ ತಿನ್ನುವೆನೀಗ!
ಬೇಡವೆಂಬಧಿಕಾರವಿಲ್ಲವೆನಗೀಗ! (ಸಾ)
-ಕಿದವಗದರ್ಪಣೆಯಾಗ್ಲೆಂಬೆನೀಗ! (ನ)
-ನ್ನೊಂದು ಬಿನ್ನಹವಿರ್ಪುದವನಲ್ಲೀಗ!
ದುಡಿಸೀ ದೇಹವನು ನಿನಗಾಗೀಗ!
ಮಾಯೆಗೆ ಮರುಳಾಗದಂತಿರಿಸೀಗ!
ವಿಕಲ್ಪವೆಂದೂ ಬಾರದಂತೆ ಮಾಡೀಗ!
ನ್ನದು, ನಿನ್ನದೆಂಬುದ ಬಿಡಿಸೀಗ!
ರಿ, ಹರ, ಬ್ರಹ್ಮ ದತ್ತ ಬರಲೀಗ! (ಕ)
-ಣ್ಣೀರೆನ್ನದು ಬತ್ತದಾಗಿದೆ ಬಾ ಬೇಗ! (ಬೇ)
-ಗ ನಿರಂಜನಾದಿತ್ಯನವನಾಗೀಗ!!!

ತಿನ್ನೆನ್ನುತ್ತಲಿದೆ ಮನಸು! (ನಿ)   6(3611)

-ನ್ನೆಯಿಂದಲೇ ಹೊಟ್ಟೆ ಹೊಲಸು! (ತ)
-ನ್ನುವುದಿಲ್ಲೆನ್ನುವುದೇ ಲೇಸು! (ಚಿ)
-ತ್ತ ಸ್ಥಿರವಿದ್ದವನರಸು! (ಬ)
-ಲಿಯಾಗ್ಬಾರ್ದಾಸೆಗೆ ಮನಸು! (ತಂ)
-ದೆಯಂದದಲ್ಲಿರ್ಬೇಕು ಕೂಸು!
ಲಗಿಸಿದಾಗ ನಿದ್ರಿಸು! (ಅ)
-ನವರತವನ ಸ್ಮರಿಸು! (ಲೇ)
-ಸು ನಿರಂಜನಾದಿತ್ಯರಸು!!!

ತಿನ್ಲಿಕ್ಕಿದ್ದವಗೆ ತಿಂದ್ರಾಗುವುದಿಲ್ಲ! (ತಿ)   6(4086)

-ನ್ಲಿಕ್ಕಿಲ್ಲದವ್ಗೆ ತಿಂದ್ರೇನೂ ಆಗ್ವುದಿಲ್ಲ! (ಸೊ)
-ಕ್ಕಿದ ಮಾನವನಿಗಿದರರಿವಿಲ್ಲ! (ಮ)
-ದ್ದನ್ನಿದಕ್ಕೆ ಧನ್ವಂತರಿ ಕೂಡಬಲ್ಲ! (ಅ)
-ವನನ್ನು ಕಂಡವರಾರೆಂಬರಿವಿಲ್ಲ! (ಹೇ)
-ಗೆ ಈ ಸಮಸ್ಯಾ ನಿವೃತ್ತಿಯೋ ಗೊತ್ತಿಲ್ಲ!
ತಿಂದುಂಡು ಸಾಯುವುದಕ್ಕೀ ಜನ್ಮವಲ್ಲ! (ನಿ)
-ದ್ರಾಹಾರ, ಮೈಥುನದಿಂದೇ ದುಃಖವೆಲ್ಲಾ!
ಗುರುಹಿರಿಯರ ಮಾತಿದು ಸುಳ್ಳಲ್ಲ! (ಕಾ)
-ವುದವರೆಲ್ಲರ ಭಾರ ನಮ್ಮನ್ನೆಲ್ಲಾ!
ದಿನ, ರಾತ್ರಿ, ಪ್ರಾರ್ಥಿಸೋಣವರನ್ನೆಲ್ಲಾ! (ಫು)
-ಲ್ಲ ನಿರಂಜನಾದಿತ್ಯನ ಮೂಲಕೆಲ್ಲಾ!!!

ತಿಮ್ಮಪ್ಪನ ದಾಸ ನೀನಪ್ಪ! (ನ)   2(884)

-ಮ್ಮವ ನೀನೆಂದು ಬಲ್ಲೆನಪ್ಪ! (ಅ)
-ಪ್ಪನ ತಪ್ಪದೆ ಭಜಿಸಪ್ಪ!
ಶ್ವರವೀ ಕಾಯ ಕಾಣಪ್ಪ!
ದಾಸನ ಬಾಳು ಪಾವನಪ್ಪ!
ದಾ ನೆಮ್ಮದಿಯಿಂದಿರಪ್ಪ!
ನೀಚರೊಡನಾಟ ಬೇಡಪ್ಪ!
ತಜನೋದ್ಧಾರ ತಿಮ್ಮಪ್ಪ! (ಅ)
-ಪ್ಪ! ನಿರಂಜನಾದಿತ್ಯಾತಪ್ಪ!!!

ತಿರುಕನೆನುವೇಕೆ? ಭಿಕ್ಷುವೆನುವೇಕೆ? ನೀನಾಗಿಹೆ ತ್ರಿಲೋಕೇಶ ಗುರುರಾಯ?   1(31)

ರುಧಿರ, ಮಾಂಸದ ದೇಹದಲಿ ಮಾಯೆ ಮನಸಾಗಿ ಅಲ್ಲಿಲ್ಲಲೆದರೆ ತಿರುಕ ನೀನಲ್ಲ ಗುರುರಾಯ!
ಷ್ಟ, ನಷ್ಟಗಳಿಗಂಜಿ ಒಂದಿಷ್ಟು ಜಾಗದಲಿದ್ದು ಭ್ರಷ್ಟನೆನಿಸದಿರಬೇಕೆಂತ! ತಿರುಗುತಿಹೆ ಗುರುರಾಯ!
ನೆಪಮಾತ್ರಕ್ಕಲ್ಲಲ್ಲಿ ಸುತ್ತಾಡಿ, ನಿನ್ನ ನೀನೇ ಬಚ್ಚಿಟ್ಟಿರುವೆಯೆಂಬುದ ನಾನರಿತಿರುವೆ ಗುರುರಾಯ!
ನುಡಿಯಿಲ್ಲದೆ ನಡೆಮಾತ್ರದಿಂದಿರುತ ನೋಡುವವರ ಕಣ್ಣಿಗೆ ಮೂಢ ನಂತಿರುತಲೆಯುತಿಹೆ ಗುರುರಾಯ!
ವೇಷ ಭೂಷಣಗಲಳಿಲ್ಲರನು ಭ್ರಮೆಗೊಳಿಸುತಿಹ ನೀನೊಬ್ಬ ಅಧಿಕಾರಿ ತಿರುಕನೆಂದರಿತೆ ಗುರುರಾಯ!
ಕೆಲಸಕೆ ಬಾರದ ವ್ಯವಹಾರಗಳಿಗಂಟಿಸಿಕೊಂಡು ಗತಿಗೆಡಬಾರದೆಂಬುದಕೆ ನೀನು ತಿರುಕನಂತಿರುವೆ ಗುರುರಾಯ!
ಭಿಕ್ಷೆ ಜಗಕೆಲ್ಲಾ ಕಾಲಕಾಲಕ್ಕಿಕ್ಕುವ ಜಗದ್ರಕ್ಷಕನಾಗಿರಲು ಭಿಕ್ಷು ನಾನೆನುತ ನಟಿಸುತಿಹೆ ನೀನು ಗುರುರಾಯ!
ಕ್ಷುದ್ಭಾದ ನಿನಗುಂಟೆ? ಸದಾ ಸ್ವಸ್ಥಾನದ ಪಂಚ ಭಕ್ಷ್ಯಭೋಜನ ಗೈವ ನೀನೆಂತು ಭಿಕ್ಷುಕನಹೆ ಗುರುರಾಯ!
ವೆಗ್ಗಳದ ವಿಶ್ವ ಸಾಮ್ರಾಜ್ಯವೇ ನಿನ್ನಾಜ್ಞಾಬದ್ಧವಾಗಿರಲದೇಕೆ ನಿನ್ನ ನೀ ಭಿಕ್ಷುಕನಂತಿರುವೆ ಗುರುರಾಯ!
ನುತಿ, ತುತಿಗಳಿಂದೆಲ್ಲರ ಮತಿಗೆಡಿಸದಿಕ್ಕಿದನುಂಡು ಆನಂದಪಡುವ ನೀ ಭಿಕ್ಷುಕನೆಂತಹೆ ಗುರುರಾಯ!
ವೇಷ ಹಾಕಿ ಮೋಸಗೊಳಿಸುತೆಲ್ಲರ ಭವಿಷ್ಯ ಹೇಳಿ ಕಾಸು ಕೀಳದ ನೀನು ಭಿಕ್ಷುಕನೆಂತಹೆ ಗುರುರಾಯ!
ಕೆಟ್ಟ ಯೋಚನೆಗಳಿಲ್ಲದೆ ಕೊಟ್ಟುದ ಹೊಟ್ಟೆಗಿಟ್ಟು ಗುಟ್ಟಾಗಿ ನೀನೇ ನೀನಾಗುವ ನೀನು ಭಿಕ್ಷುಕನೆಂತಹೆ ಗುರುರಾಯ!
ನೀತಿ, ಜಾತಿ ವಿಶ್ವಕ್ಕೆಲ್ಲಾ ಒಂದೇ ಒಂದು ಶುದ್ಧ ಪ್ರೀತಿ ಅನ್ನುವ ನೀನು ತ್ರಿಲೋಕೇಶ ಗುರುರಾಯ!
ನಾನಾ ನಾಮ ರೂಪ ಮತಗಳಿಗೆಲ್ಲಾ ನಾನೇ ವಿಧಾತನೆನುವ ನೀನು ತ್ರಿಲೋಕೇಶ ಗುರುರಾಯ!
ಗಿರಿ, ಗುಹೆ, ಹೊಲ, ಮನೆ, ಕಾಡು, ನಾಡುಗಳಲ್ಲೆಲ್ಲಾನಂದದಿಂದೋಡಾ ಡುವ ನೀನು ತ್ರಿಲೋಕೇಶ ಗುರುರಾಯ!
ಹೆಸರಿಲ್ಲದಾಗಿದೆನ್ನೂರು ಮನೆಗಳಿಗೆಂಬ ನಿನ್ನ ವ್ಯಂಗ್ಯ ಮಾತು ಸಾಕು ನೀನು ತ್ರಿಲೋಕೇಶ ಗುರುರಾಯ
ತ್ರಿಕಾಲದ ಹಾಳು ಹಂಬಲವಿಲ್ಲದೆ ಹೆರವರಿಗರಿಯದಂತಿರುತಿರುವ ನೀನು ತ್ರಿಲೋಕೇಶ ಗುರುರಾಯ!
ಲೋಕವಾಸನೆಗಳಾದ ಶೋಕ ಸುಖ ದುಃಖಗಳಾನಂದದಿದನುಭವಿಸುತಿಹ ನೀನು ತ್ರಿಲೋಕೇಶ ಗುರುರಾಯ!
ಕೇಳುತೆಲ್ಲರ ಹೇಳಿಕೆಗಳ ತಳೆದೂಗುತೊಳಗೊಳಗೇ ನಗುತಲಿರುವತಿರು ನೀನು ತ್ರಿಲೋಕೇಶ ಗುರುರಾಯ!
ಕ್ತಿಯಿಲ್ಲದಶಕ್ತ ನಾನಾಗಿಹೆನೆಂದಶಕ್ಯ ಶಾಖದಲಿ ತಪವಾಚರಿಸುತಿಹ ನೀನು ತ್ರಿಲೋಕೇಶ ಗುರುರಾಯ!
ಗುರಿಗಾಗಿ ಕಾದಿಹೆನೆನುತ ಸದಾ ಗುರಿಯಲಿರುವ ಗುರುಗುಹೇಶ್ವರನಾಗಿಹ ನೀನು ತ್ರಿಲೋಕೇಶ ಗುರುರಾಯ!
ರುಜುಮಾರ್ಗಿಯಾಗಿ

ತುಗಳಿಗಂಜದೆ ”ಗುರುನಿರಂಜನ”ನಾಗಿಹ ನೀನು ತ್ರಿಲೋಕೇಶ ಗುರುರಾಯ!
ರಾಮ ಶ್ಯಾಮ ಗುಣ ನಾಮ ಸಂಕೀರ್ತನಾನಂದ ನೀಡುವ ನಿರಂಜನಾನಂದ ನೀನು ತ್ರಿಲೋಕೇಶ ಗುರುರಾಯ!
ದುನಾಥನುಸುರಿದ ಗೀತಾಮೃತದ ಸಾರ ನಿರಂಜನಾಮೃತವನಿತ್ತ ”ನಿರಂಜನ” ನೀನು ತ್ರಿಲೋಕೇಶ ಗುರುರಾಯ!

ತಿರುಗಣೆ ತಿರುಗಿತು ಬಲಕ್ಕೆ! (ನೀ)   5(2631)

-ರು ಬರುವುದು ನಿಂತಿತು ಹೊರಕ್ಕೆ!
ಳಗಳನಳುವುದೇಕಿದಕ್ಕೆ? (ಹೊ)
-ಣೆ ನಿರ್ವಹಣೆ ಸರಿಮಾಡದಕ್ಕೆ!
ತಿರುಗಿಸೀಗೆಚ್ಚರದಿಂದೆಡಕ್ಕೆ! (ನೀ)
-ರು ಬರಲು ದಾರಿಯಾಯ್ತೀಗದಕ್ಕೆ!
ಗಿಲ್ಗಿಲಿ ನಗ್ಬೇಡ ನೀರ್ಬಂದುದಕ್ಕೆ!
ತುಸಾಲೋಚ್ಸಿ ಹಚ್ಬೇಕು ಕೈ ಕೆಲ್ಸಕ್ಕೆ!
ದ್ಕಿಗಾಶಿಸಿ ಬೀಳ್ಬಾರ್ದು ಕೆಂಡಕ್ಕೆ! (ಸು)
-ಲಗ್ನಹರ್ನಿಶಿ ದಿವ್ಯ ಜೀವನಕ್ಕೆ! (ಅ)
-ಕ್ಕೆ, ನಿರಂಜನಾದಿತ್ಯಾದರ್ಶೆಲ್ಲಕ್ಕೆ!!!

ತಿರುತ್ತಣಿ ವಾಸ ಮುರುಗೇಶ! (ಗು)   2(927)

-ರುಗುಹ ಸ್ವರೂಪ ಪಳನೀಶ! (ದ)
-ತ್ತರೂಪಾ ಪ್ರಣವಾರ್ಥ ನಿರ್ದೇಶ! (ಮ)
-ಣಿ, ಮಂತ್ರೌಷಧ ಸಿದ್ಧ ವಲ್ಲೀಶ!
ವಾರಿಜೋದ್ಭವಾದಿ ವಂದ್ಯಾಪ್ತೇಶ!
ರ್ವಾರಿಷ್ಟ ಹರ ಉರಗೇಶ!
ಮುನಿಜನ ಮನ ಕಮಲೇಶ! (ಗು)
-ರುವರ ಸುಬ್ರಹ್ಮಣ್ಯ ಸರ್ವೇಶ! (ನಾ)
-ಗೇಶ, ಯೋಗೇಶ, ಭಯಹರೇಶ! (ಈ)
-ಶ, ನಿರಂಜನಾದಿತ್ಯ ಪೃಥ್ವೀಶ!!!

ತಿರುಪತಿ ಪ್ರಸಾದ ಬಹಳಾನಂದ! (ಬ)   2(736)

-ರುವುದನಿರೀಕ್ಷಿತವಾದರಾನಂದ!
ತಿತ ಪಾವನವಿದು ಆತ್ಯಾನಂದ!
ತಿನುತವನ ಸ್ಮರಿಸಿದರಾನಂದ!
ಪ್ರಗತಿ ಸಾಧನೆಗಿದಿದ್ದರಾನಂದ!
ಸಾಧು ಸಂತರಿಗಿದನುಭವಾನಂದ!
ರ್ಶನ ಪಡೆಯಲಿದುತ್ಸಾಹಾನಂದ!
ಳಲಿಕೆ ಹೋಗಲಿದ ಪೇಕ್ಷ್ಯಾನಂದ!
ರ್ಷಪ್ರದಾಯಕವಿದಮೃತಾನಂದ! (ವೇ)
-ಳಾವೇಳೆಯಿಲ್ಲದಿದು ಸತತಾನಂದ!
ನಂಬಿಗೆಯಿಂದಿದು ಲಭಿಸುವಾನಂದ! (ಅ)
-ದ ನಿರಂಜನಾದಿತ್ಯನರಿತಾನಂದ!!!

ತಿರುಪೆ ಎತ್ತಿ ತಿರುಪತಿಗೇಕೆ ಹೋಗಬೇಕು? (ಗು)   4(1953)

-ರುಪಾದದಲ್ಲಿ ಎಲ್ಲವನು ನೋಡುತ್ತಿರಬೇಕು!
ಪೆರ್ಮಾತನಿದನಲಕ್ಷಿಸದೆ ಪಾಲಿಸಬೇಕು!
ತ್ತೆತ್ತ ಸುತ್ತಿ ಬೇಸತ್ತೇಕೆ ಹೊತ್ತು ಹಾಕಬೇಕು? (ಇ)
-ತ್ತಿಹನು ಗುರುದೇವನಿಲ್ಲ್ಯೆಲ್ಲವೆಂದಿರಬೇಕು!
ತಿತಿಕ್ಷೆಯಭ್ಯಾಸ ಸತತ ಮಾಡುತ್ತಿರಬೇಕು! (ತಿ)
-ರುಪತಿಯ ಕ್ಷೆತ್ರ ನಿನ್ನ ಹೃದಯವಾಗಬೇಕು!
ರರ ದಾಕ್ಷಿಣ್ಯಕ್ಕಾಗ್ಯೇನೂ ಮಾಡದಿರಬೇಕು!
ತಿಳಿದಿದನು ಧರ್ಮ ಕರ್ಮವಾಚರಿಸಬೇಕು! (ನಾ)
-ಗೇಶ ಶೇಷಶಾಯಿ ನಿನ್ನಾತ್ಮನೆಂದರಿಯಬೇಕು!
ಕೆಲಸ ಕಾರ್ಯಾ ಶ್ರೀಪಾದಕ್ಕರ್ಪಿಸಿ ಮಾಡಬೇಕು!
ಹೋರಾಟಾ ಪರಮಾರ್ಥ ಸಿದ್ಧಿಗಾಗಿ ಸಾಗಬೇಕು!
ಟ್ಟಿಮನಸ್ಸು ಮಾಡಿ ಕೆಟ್ಟಾಭ್ಯಾಸ ಬಿಡಬೇಕು!
ಬೇಸಿಗೆಯ ರಜೆಯಿದಕ್ಕುಪಯೋಗಿಸಬೇಕು!
ಕುಲ, ಶೀಲ ನಿರಂಜನಾದಿತ್ಯನದ್ದಾಗಬೇಕು!!!

ತಿಲಕಾ ಯದುಕುಲ ತಿಲಕಾ! (ಬ)   2(663)

-ಲ ರಾಮಾನುಜ ವರ ತಿಲಕಾ!
ಕಾರ್ಯ, ಕಾರಣ ಗುರು ತಿಲಕಾ! (ಜ)
-ಯಪ್ರದಾತ ವಿಜಯ ತಿಲಕಾ!
ದುರಿತದೂರ ರಾಧಾ ತಿಲಕಾ!
ಕುಬ್ಜಾನುಗ್ರಹ ಪ್ರೇಮ ತಿಲಕಾ! (ಜ)
-ಲಕ್ರೀಡಾಲೋಲ ನಂದ ತಿಲಕಾ! (ಸ)
-ತಿ ಸತ್ಯಭಾಮಾಪ್ರಿಯ ತಿಲಕಾ! (ಏ)
-ಕಾ ನಿರಂಜನಾದಿತ್ಯ ತಿಲಕಾ!!!

ತಿಳಿದೊಂದಗಲಿ ಹೋಯಿತು! (ತಿ)   4(1476)

-ಳಿಯದಿನ್ನೊಂದು ಮಾಯವಾಯ್ತು! (ಒಂ)
-ದೊಂದೊಂದೊಂದು ವಿಧವಾಯಿತು!
ಯೆ ವಿಧಿಗಿಲ್ಲದಾಯಿತು! (ರಾ)
-ಗ, ದ್ವೇಷ, ಜೀವರಿಗಾಯಿತು! (ಅ)
-ಲಿಪ್ತತೆ ಆತ್ಮನಿಗಾಯಿತು! (ಅ)
-ಹೋರಾತ್ರಿ ಅವಗೊಂದಾಯಿತು! (ಬಾ)
-ಯಿ, ಕೈ, ಕಾಟ ತಪ್ಪಿ ಹೋಯಿತು! (ಹೇ)
-ತು, ನಿರಂಜನಾದಿತ್ಯಾಯಿತು!!!

ತಿಳಿಯತಕ್ಕದ್ದು ತಿಳಿದಾಯ್ತು! (ಅ)   3(1316)

-ಳಿವುದೀ ದೇಹವೆಂದರಿತಾಯ್ತು! (ಭ)
-ಯ ವ್ಯಾಮೋಹದಿಂದೆಂದರಿತಾಯ್ತು!
ನ್ನ ರೂಪವೇನೆಂದರಿತಾಯ್ತು! (ಅ)
-ಕ್ಕರೆಯ ಗುರುಕೃಪೆಯುಂಟಾಯ್ತು! (ತಿ)
-ದ್ದು ಪಾಡುಗಳವನಿಂದುಂಟಾಯ್ತು! (ಮ)
-ತಿ ವಿಕಾಸದಿಂದಾನಂದವಾಯ್ತು! (ಉ)
-ಳಿಯ ಬೇಕಾದದ್ದುಳಿದಂತಾಯ್ತು!
-ದಾರಿ ಬಹುದೂರ ಸಾಗಿಹೋಯ್ತು! (ಆ)
-ಯ್ತು, ನಿರಂಜನಾದಿತ್ಯ ತಾನಾಯ್ತು!!!

ತಿಳಿಯಿತು ನಿನ್ನಂತರಂಗ! (ಹೇ)   6(3559)

-ಳಿ ಫಲವೇನಾ ತೇಜೋಭಂಗ? (ಹೋ)
-ಯಿತು ತಿಪ್ಪೆಗೆ ಶಿವಲಿಂಗ!
ತುಚ್ಛವಾಯ್ತದರ ಸತ್ಸಂಗ!
ನಿನಗೀಗುಂಟಾಯ್ತು ದುಸ್ಸಂಗ! (ನ)
-ನ್ನಂತಾಗಿಸಿಲ್ಲ ನನ್ನ ಸಂಗ! (ಪ)
-ತನಕ್ಕೆ ಕಾರಣ ಅನಂಗ!
ರಂಗ, ಸಾರಂಗ, ಸುಂದರಾಂಗ! (ಲಿಂ)
-ಗ ಶ್ರೀ ನಿರಂಜನಾದಿತ್ಯಾಂಗ!!!

ತೀಟೆ ತೀರಿಸಲಿಕ್ಕಾಯ್ತನೇಕ ಜನ್ಮ!   6(3441)

(ವಾ)-ಟೆ ತಿಂದು ಹಣ್ಣೆಸೆದಂತಾಯ್ತೆಲ್ಲಾ ಜನ್ಮ!
ತೀರ್ಥಸ್ನಾನ ಬಹಳ ಮಾಡಿತ್ತಾ ಜನ್ಮ!
(ಹ)-ರಿ, ಹರ, ಕ್ಷೇತ್ರ ಮಾಡಿತ್ತಾ ಜನ್ಮ!
ಧ್ಯಕ್ಕೀಗಾದ್ರು ಸಾರ್ಥಕವಾಗ್ಲೀ ಜನ್ಮ!
(ಅ)-ಲಿಪ್ತವಾಗಿರ್ಲಿ ಸಂಸಾರದಿಂದೀ ಜನ್ಮ!
(ಹ)-ಕ್ಕಾವುದೋ ಅದನ್ನು ಸಾಧಿಸಲೀ ಜನ್ಮ!
(ಆ)-ಯ್ತರ್ಧಾಯುಷ್ಯ ಅರಿಯದಿದನ್ನೀ ಜನ್ಮ!
ನೇಮದಿಂದಾತ್ಮ ಧ್ಯಾನ ಮಾಡ್ಲೀಗೀ ಜನ್ಮ!
ಷ್ಟ ತಪ್ಪಿಲ್ಲಾದಾಗ್ವುದು ಪುನರ್ಜನ್ಮ!
ಯ ಸದ್ಗುರು ಪಾದಕ್ಕೆನ್ನಲೀ ಜನ್ಮ!
(ತ)-ನ್ಮಯ ನಿರಂಜನಾದಿತ್ಯನಲ್ಲೀ ಜನ್ಮ!!!

ತೀಟೆಯಾಟ ತಪ್ಪಿದಾಗ ದಿವ್ಯ ನೋಟ! (ಬೇ)   6(4266)

-ಟೆ ಫಲಸಿದಾಗ ತಪ್ಪುವುದು ಕಾಟ!
ಯಾಗ, ಯೋಗದಿಂದ ಊರ್ಧ್ವಗರೆಗೋಟ! (ಮಾ)
-ಟ, ಮಾರಣದಿಂದಧೋಗತಿಗೆ ಓಟ!
ತ್ವ ಚಿಂತನೆಯಿಂದಾತ್ಮನೊಡನಾಟ! (ಅ)
-ಪ್ಪಿ ಗುರುಪಾದ ಅನುಭವಿಸು ದಿಟ!
ದಾಸರ ದಾಸರಿಗೆಲ್ಲಾ ಅದೇ ಊಟ! (ಭೋ)
-ಗ ನಿರತಗಜೀಣ

ದಾಯಕಾ ಊಟ!
ದಿನ, ರಾತ್ರಿ ಅವನಿಗದೇ ದುಶ್ಚಟ! (ನ)
-ವ್ಯ ಭಕ್ತಿಯಿಂದಾ ತುಂಬದೇಕು ಈ ಘಟ!
ನೋಡಿ ಆನಂದಿಪನಾಗ ನೀಲಕಂಠ! (ದಿ)
-ಟ, ನಿರಂಜನಾದಿತ್ಯನಾ ಶಿಥಿಕಂಠ!!!

ತೀರ್ಥದಿಂದ ಕ್ಷೇತ್ರ ಪವಿತ್ರ! (ತೀ)   6(3641)

-ರ್ಥ ಕ್ಷೇತ್ರಗಳಿಂದ ಪವಿತ್ರ! (ಅಂ)
-ದಿಂದೆನ್ನದೇ ರೂಢಿ ಸರ್ವತ್ರ!
ರ್ಶನವೀವ ನಿತ್ಯ ಮಿತ್ರ!
ಕ್ಷೇಮಕ್ಕೆ ಬೇಕು ಪಾತ್ರಾಪಾತ್ರ! (ಮಂ)
-ತ್ರ ಜಪವೆಂಬುದೊಂದು ಸೂತ್ರ!
ರಮಾತ್ಮ ದರ್ಶನಾ ನೇತ್ರ!
ವಿಜ್ಞಾನಿ ನೊಡಲೀ ವಿಚಿತ್ರ! (ಮಂ)
-ತ್ರ, ಶ್ರೀ ನಿರಂಜನಾದಿತ್ಯ ಮಂತ್ರ!!!

ತೀರ್ಥಸ್ನಾನ ಕಾರ್ಯಕ್ರಮವಿಡ್ಲಿ! [ಅ]   3(1273)

-ರ್ಥವರಿತು ಮಾಳ್ಪ ನೇಮವಿಡ್ಲಿ!
ಸ್ನಾನ ಪಾಪನಾಶನವೆಂದಿಡ್ಲಿ!
ರ, ನಾರಿ, ಭೇದವಿಲ್ಲದಿಡ್ಲಿ!
ಕಾವೇರಿ ಮಹಾತ್ಮೆಯರಿತಿಡ್ಲಿ (ಆ)
-ರ್ಯ ಋಷಿ ಸಮ್ಮತವಿದೆಂದಿಡ್ಲಿ! (ಚ)
-ಕ್ರ ಪಾಣಿಗಿದಾನಂದವೆಂದಿಡ್ಲಿ!
ನಶ್ಯುದ್ಧಿಗಿದು ಬೇಕೆಂದಿಡ್ಲಿ!
ವಿದ್ಯಾ ಬುದ್ಧಿ ಸಿದ್ಧಿಗಾಗಿದಿಡ್ಲಿ! (ಇ)
-ಡ್ಲಿ ನಿರಂಜನಾದಿತ್ಯಗಾಗಿಡ್ಲಿ!!!

ತೀರ್ಮಾನ ತಿರ್ತಿರಿಗಿ ಬದ್ಲಾಯಿಸ್ಬೇಡ! (ಕ)   6(4121)

-ರ್ಮಾಕರ್ಮಾ, ವಿಕರ್ಮವರಿಯದಿರ್ಬೇಡ! (ಮ)
-ನಸ್ಸಿನಾಟದಲ್ಲಿ ಮೈ ಮರೆಯಬೇಡ!
ತಿಳಿತಿಳಿದೂ ಹಳ್ಳಕ್ಕೆ ಬೀಳಬೇಡ! (ಕೀ)
-ರಿ, ಮೂರ್ತಿ ದೊಡ್ಡದಿದ್ದ್ರೆ ಮತ್ರವೆನ್ಬೇಡ!
ರಿಸಿ ಅಗಸ್ತ್ಯ ಸಾಮಾನ್ಯನೆನಬೇಡ! (ತ್ಯಾ)
-ಗಿ ತ್ರಿಲೋಕಾಧಿಪತ್ಯಕ್ಕೂ ಇಷ್ಟ ಪಡ!
ಲ್ಲವನಾದರೂ ಪ್ರದರ್ಶನ ಮಾಡ! (ಗೊಂ)
-ದ್ಲಾದಿ ಗದ್ದಲಗಳಿಂದ ಧೃತಿಗೇಡ! (ಬಾ)
-ಯಿ, ಕಿ

, ಕಚ್ಚೆಗಧೀನ ತಾನಾಗಿ ಕೆಡ! (ಹೇ)
-ಸ್ಬೇಡ, ಅಂಥವನನ್ನಲಕ್ಷಿಸಬೇಡ! (ಆ)
-ಡ, ನಿರಂಜನಾದಿತ್ಯ ಮತ್ತೆರಡಾಡ!!!

ತೀರ್ಮಾನವಾದಮೇಲ್ವರಮಾನ! (ದು)   5(2541)

-ರ್ಮಾರ್ಗ ದೂರನಾದಮೇಲ್ಸನ್ಮಾನ!
ಶ್ವರಕ್ಕಿರ್ಬಾರದಭಿಮಾನ!
ವಾದದಿಂದಳಿಯದನುಮಾನ!
ತ್ತನಿಗಿಲ್ಲ ಮಾನಾಪಮಾನ! (ಉ)
-ಮೇಶನಿಗಿಲ್ಲ ಯಾರೂ ಸಮಾನ! (ಚೆ)
-ಲ್ವರಾಯನಿಗಿಲ್ಲ ಉಪಮಾನ!
ವಿಯಿರ್ಪನಂತ ಶತಮಾನ! (ಕಾ)
-ಮಾತೀತನಿಗಿಲ್ಲ ಕಾಲಮಾನ! (ಜ್ಞಾ)
-ನ ನಿರಂಜನಾದಿತ್ಯಾತ್ಮ ಧ್ಯಾನ!!!

ತುಂಬಿಟ್ಟ ದುಡ್ಡು ತಂಬಿಟ್ಟಾಯ್ತೇನೇ?   5(2656)

ಬಿಕ್ರಿನೂ ಆಗ್ಲೇ ಮಾಡಿಬಿಟ್ಯೇನೇ? (ಕೆ)
-ಟ್ಟಬುದ್ಧಿ ಸುಟ್ಟು ಹಾಕಬಾರ್ದೇನೇ?
ದುರ್ವಿಷಯವಿನ್ನೂ ಬಿಟ್ಟಿಲ್ವೇನೇ? (ಜ)
-ಡ್ಡು ಹಿಡಿದ್ರೂ ಬಿಡಲಾರಿಯೇನೇ?
ತಂಗಮ್ಮ, ಗಂಗಮ್ಮ ನೀನಲ್ವೇನೇ?
ಬಿಟ್ಟಾವ್ಯವಹಾರ! ಒಪ್ಪಿದ್ಯೇನೇ? (ಕ)
-ಟ್ಟಾಜ್ಞೆಯಿದೆನ್ನದು, ಪಾಲಿಸ್ತ್ಯೇನೇ? (ಹೋ)
-ಯ್ತೆನೇ ಮೌಢ್ಯ? ನೀನೆಲ್ಲಕ್ಕ್ತಾಯ್ತಾನೇ? (ನಾ)
-ನೇ ನಿರಂಜನಾದಿತ್ಯಾತ್ಮ ನೀನೇ!!!

ತುಂಬಿತುತ್ಸವದಲ್ಲಿ ಮನೆ (ಬೆಂ)   5(2525)

-ಬಿಡದೆ ಕಾಯ್ವ ರಾಮಾ ಮನೆ! (ಮಾ)
-ತು, ಕತೆ, ರಾಮಮಯಾ ಮನೆ! (ಮ)
-ತ್ಸರ, ಮದ ವಿದೂರಾ ಮನೆ! (ಭಾ)
-ವ, ಭಕ್ತಿ ಪರಿಪೂರ್ಣಾ ಮನೆ!
(ಮ)ದನಾರಿಗತಿಹಿತಾ ಮನೆ! (ಮ)
-ಲ್ಲಿಕಾದಿ ಸುಮ ಕಂಪಾ ಮನೆ! (ರಾ)
-ಮನಾಮದಿಂದಾರಾಮಾ ಮನೆ! (ಮ)
-ನೆ, ನಿರಂಜನಾದಿತ್ಮಾತ್ಮನೇ!!!

ತುಳಸೀ ಕಾಷ್ಠ ಬೇಕೇನಯ್ಯಾ? (ಬ)   4(1809)

-ಳಸಿಕೋ ನಿನ್ನಿಷ್ಟದಂತಯ್ಯಾ!
ಸೀತಾರಾಮ ಪ್ರಸಾದದಯ್ಯಾ!
ಕಾರ್ಯಜಯಕ್ಕಿದು ಬೇಕಯ್ಯಾ! (ಶ್ರೇ)
-ಷ್ಠತೆಯ ಹೇಳಿ ತೀರದಯ್ಯಾ!
ಬೇರೆ ಗಿಡದಂತಿದಲ್ಲಯ್ಯಾ!
ಕೇಶವಗಿದು ಪ್ರೀತಿಯಯ್ಯಾ! (ದಿ)
-ನ, ರಾತ್ರಿಯಿದ ಧರಿಸಯ್ಯಾ! (ಅ)
-ಯ್ಯಾ ನಿರಂಜನಾದಿತ್ಯಾಗಯ್ಯಾ!!!

ತುಳಸೀ ಛಾಯಾನಂದನಾರಪ್ಪಾ? (ಬಾ)   4(1503)

-ಳ ಲೋಚನಾತ್ಮಾ ನಿರಂಜನಪ್ಪಾ!
ಸೀತಾರಮಣನಿವ ಕಾಣಪ್ಪಾ!
ಛಾಯಾಪತಿ ರೂಪನವನಪ್ಪಾ! (ಕಾ)
-ಯಾಭಿಮಾನವನಿಗೇನಿಲ್ಲಪ್ಪಾ!
ನಂಬಿದವರಿಗಿಂಬನೀವಪ್ಪಾ!
ತ್ತರೂಪವನಿಗಿಷ್ಟವಪ್ಪಾ!
ನಾಮ ಭಜನಾನಂದವನಪ್ಪಾ!
ವಿ ವಂಶದಾದಿ ಪುರುಷಪ್ಪಾ! (ಅ)
-ಪ್ಪಾ ನಿರಂಜನಾದಿತ್ಯಾನಂದಪ್ಪಾ!!!

ತುಳಸೀ ಹಾರ ಧಾರೀ ಹರಿ! (ಖ)   2(739)

-ಳಕುಲ ಸಂಹಾರೀ ಉದಾರಿ!
ಸೀತಾನಂದಕಾರೀ ಖರಾರಿ!
ಹಾನಿ, ವೃದ್ಧಿಗಳಧಿಕಾರಿ!
ತಿಪತಿ ಪಿತ ಶೃಂಗಾರಿ! (ಸು)
-ಧಾಮಾರಿಷ್ಟ ದೂರೀ ಮುರಾರಿ!
ರೀತಿ, ನೀತಿಯ ಗೀತಾಧಾರಿ!
ರಿ ಹರಜರೊಟ್ಟುಸೇರಿ! (ಗು)
-ರಿ ನಿರಂಜನಾದಿತ್ಯೋದ್ಧಾರಿ!!!

ತುಳಸೀಮಾಲೆ ನಾನಿತ್ತೆ! (ಬ)   4(1531)

-ಳಸಬೇಕು ನೀನೆಂದಿತ್ತೆ!
ಸೀತಾಪತಿ ನೀನೆಂದಿತ್ತೆ!
ಮಾನ, ಪ್ರಾಣ ನೀನೆಂದಿತ್ತೆ! (ಮಾ)
-ಲೆ ಮೈ ಮೇಲಿರಲಿಂದಿತ್ತೆ!
ನಾಮ ಜಪಿಸಿ ಮಾಡಿತ್ತೆ!
“ನಿನ್ನಿಚ್ಛೆ” ಯೆಂದದನಿತ್ತೆ! (ಇ)
-ತ್ತೆ, ನಿರಂಜನಾದಿತ್ಯತ್ತೆ!!!

ತೂಗಿದರು ತಲೆದೂಗಿದರು!   1(246)

ಗಿರಿಜಾಪತಿಯ ನೋಡಿದರು! (ಮ)
-ದನಾರಿಯಾಡಿದಂತಾಡಿದರು! (ಮ)
-ರುಗಿದರ್ಮತ್ತೆ ಕೊಂಡಾಡಿದರು!
ಕ ತಕ ಕುಣಿದಾಡಿದರು! (ಭ)
-ಲೆ! ನಟರಾಜನಾಟವೆಂದರು!
ದೂರದರ್ಶಿಯ ಕೂಡಿದರು! (ತೆ)
-ಗಿ ನಿನ್ನ ತ್ರಿಶೂಲವೆಲ್ಲೆಂದರು! (ಹ)
-ದವಾಗಿದೆ ಸಂದರ್ಭವೆಂದರು! (ಗು)
-ರು ನಿರಂಜಣಾದಿತ್ಯನೆಂದರು!!!

ತೂತು ಮುಚ್ಚಿ ಬಣ್ಣ ಬಳಿಯಯ್ಯಾ! (ಮಾ)   3(1296)

-ತು ಮುಗಿಸಿ ಕೆಲಸ ಮಾಡಯ್ಯಾ!
ಮುನಿಸು ಬಿಟ್ಟು ಮುನಿಯಾಗಯ್ಯಾ! (ಮು)
-ಚ್ಚಿ ಬಾಯಿ ಸಚ್ಚರಿತನಾಗಯ್ಯಾ!
ಟ್ಟೆ ಬಿಚ್ಚಿ ಬಾವಿಗಿಳಿಯಯ್ಯಾ! (ಕ)
-ಣ್ಣ ತೆರೆದು ಉಣ್ಣ ಬಡಿಸಯ್ಯಾ!
ಲ ನೋಡಿ ಭಾರ ಹೊರಿಸಯ್ಯಾ! (ಕೇ)
-ಳಿ, ಹೇಳಿ, ವೇಳೆ ನಿರ್ಧರಿಸಯ್ಯಾ!
ಜ್ಞ ಮಾಡ್ಯಜ್ಞಾನ ಕಳೆಯಯ್ಯಾ! (ಅ)
-ಯ್ಯಾ, ನಿರಂಜನಾದಿತ್ಯಾನಂದಯ್ಯಾ!!!

ತೂಬು ಸರಿಯಾಗಿ ಮುಚ್ಚಪ್ಪಾ!   2(861)

ಬುದ್ಧಿವಂತನಾಗಿ ಬಾಳಪ್ಪಾ!
ಲಿಲ ಸಂಜೀವಿನಿಯಪ್ಪಾ! (ಅ)
-ರಿತದ ಜೋಪಾನವಿಡಪ್ಪಾ! (ಕಾ)
-ಯಾ, ಮನಸಾ ಕರ್ಮ ಮಾಡಪ್ಪಾ! (ಯೋ)
-ಗಿಯಾಗಿರುತಿರಬೇಕಪ್ಪಾ!
ಮುನಿಜನರಿಷ್ಟದಂತಪ್ಪಾ! (ಮ)
-ಚ್ಚರವೆಂದೆಂದಿಗೂ ಬೇಡಪ್ಪಾ! (ಅ)
-ಪ್ಪಾ! ನಿರಂಜನಾದಿತ್ಯಾಪ್ತಪ್ಪಾ!!!

ತೆಪ್ಪೆಗಿರ್ಪವ ಸಪ್ಪೆ ಏನಯ್ಯಾ? [ದ]   5(3247)

-ಪ್ಪವಾಗಿರ್ಪವ ಬೆಪ್ಪನೇನಯ್ಯಾ?
ಗಿರಿಧಾರಿ ಸಾಮಾನ್ಯನೇನಯ್ಯಾ? (ತೋ)
-ರ್ಪಡಿಸಿಕೊಳ್ಳರ್ಮಹಾತ್ಮರಯ್ಯಾ!
ನವಾಸ್ಯಾಗ್ಬೇಕೆಂದಿಲ್ಲವಯ್ಯಾ!
ರ್ವಸಂಗ ತ್ಯಾಗಿಗಳವ್ರಯ್ಯಾ! (ತಿ)
-ಪ್ಪೆಯೂ ಉಪ್ಪರಿಗೆ ಮನೆಯಯ್ಯಾ!
ರಿಳಿತ ಅವರ್ಗಿಲ್ಲವಯ್ಯಾ!
ಭೋಮಣಿಯಂತಿರುವರಯ್ಯಾ! (ಅ)
-ಯ್ಯಾ, ನಿರಂಜನಾದಿತ್ಯನಂತಯ್ಯಾ!!!

ತೇಜೋಮಯನ ಮೋಡ ಮುಚ್ಚಿಹುದಯ್ಯಾ! (ನಿ)   4(2109)

-ಜೋಪಯೋಗವನಿಂದೀಗಾಗ್ತಿಲ್ಲವಯ್ಯಾ! (ರಾ)
-ಮನಾಮ ಜಪವೀಗಾಗ್ತಿರಬೇಕಯ್ಯಾ! (ಭ)
-ಯ ನಿವಾರಣೆಯದರಿಂದಾಗ್ವುದಯ್ಯಾ! (ಅ)
-ನವರತವಾ ಹುಚ್ಚು ಹೆಚ್ಚಬೇಕಯ್ಯಾ!
ಮೋಸ ಹೋಗದಿರಬೇಕು ಮಾಯೆಗಯ್ಯಾ! (ಮೋ)
-ಡದಿಂದ ಬಿಡುಗಡೆಯಾಗಬೇಕಯ್ಯಾ! (ಕಾ)
-ಮುಕನಾದರಾವುದೂ ಸಿದ್ಧಿಸದಯ್ಯಾ! (ಸ)
-ಚ್ಚಿದಾನಂದ ಸುಖ ನಿಜ ಗುರಿಯಯ್ಯಾ!
ಹುಸಿಯ್ಯೆಹಿಕಾನಂದವೆಂದರಿಯಯ್ಯಾ!
ಮೆ, ಶಮೆಯಭ್ಯಾಸ ಮಾಡುತ್ತಿರಯ್ಯಾ! (ಅ)
-ಯ್ಯಾ, ನಿರಂಜನಾದಿತ್ಯ ನೀನಾಗಿರಯ್ಯಾ!!!

ತೇಜೋಮಯನಾರ್ಯ ಸೂರ್ಯ! (ಪ್ರ)   4(2107)

-ಜೋತ್ಪತ್ತಿ ಕಾರಣಾ ಸೂರ್ಯ! (ವಿ)
-ಮಲ ಗುರುವರಾ ಸೂರ್ಯ!
ಮ, ಶನಿಯಯ್ಯಾ ಸೂರ್ಯ!
ನಾಗಬ್ರಹ್ಮಾನಂದಾ ಸೂರ್ಯ! (ಧೈ)
-ರ್ಯ, ಸ್ಥೈರೈ ವೀರ್ಯಾರ್ಯಾ ಸೂರ್ಯ!
ಸೂತ್ರಾತ್ಮ ಸ್ವರೂಪಾ ಸೂರ್ಯ! (ಸೂ)
-ರ್ಯ, ನಿರಂಜನಾದಿತ್ಯಾರ್ಯ!!!

ತೈಲಾಭಿಷೇಕಾನಂದಾ ಗೋಪಾಲ! (ಲೀ)   4(1951)

-ಲಾವತಾರಿ ಮುರಾರೀ ಗೋಪಾಲ! (ಸ್ವಾ)
-ಭಿಮಾನ ಸಂರಕ್ಷಕಾ ಗೋಪಾಲ! (ಶೇ)
-ಷಶಾಯಿ ವಿಜಯ ಗೋಪಾಲ!
ಕಾಮಕೋಟಿ ಸುಂದರಾ ಗೋಪಾಲ!
ನಂದಕಂದ ಗೋವಿಂದಾ ಗೋಪಾಲ!
ದಾತ, ಪತಿತೋದ್ಧಾರಾ ಗೋಪಾಲ!
ಗೋಬ್ರಾಹ್ಮಣರಾಧಾರಾ ಗೋಪಾಲ! (ಕೃ)
-ಪಾಸಾಗರ ಶ್ರೀಧರಾ ಗೋಪಾಲ! (ಬಾ)
-ಲ ನಿರಂಜನಾದಿತ್ಯ ಗೋಪಾಲ!!!

ತೊಗಲ್ಗೊಂಬೆಗಾಶಿಸಬೇಡ! (ಅ)   6(3752)

-ಗಲಿದ್ರದಕ್ಕಾಗಳಬೇಡ! (ಕ)
-ಲ್ಗೊಂಬೆಯನ್ನು ಪೂಜಿಸಬೇಡ!
ಬೆಳಿಗ್ಗೆ ಬೇಗೇಳದಿರ್ಬೇಡ!
ಗಾಯತ್ರೀ ಜಪ ಮಾಡ್ದಿರ್ಬೇಡ!
ಶಿಷ್ಟ ಸಂಪ್ರದಾಯ ಬಿಡ್ಬೇಡ!
ಮದೃಷ್ಟಿ ಕೆಡಿಸಬೇಡ!
ಬೇರಿಗೆ ಬೆಂಕಿ ಹಾಕಬೇಡ! (ಸು)
-ಡ, ನಿರಂಜನಾದಿತ್ಯದ್ಮಾಡ!!!

ತೊಟ್ಟಿಕ್ಕುವುದಿಲ್ಲದಾಗುವ ತನಕ ಹಿಂಡು! (ಬಿ)   6(3659)

-ಟ್ಟಿ ಬಸವನಂತೇನೂ ಮಾಡಬಾರದು ಗಂಡು! (ಹ)
-ಕ್ಕು ಸಾಧಿಸುವಾಗ ಠಕ್ಕು ತೊರ್ಬಾರದು ಗಂಡು! (ಗೋ)
-ವುಗಳ ಪಾಲಿಸಿದ ಗೋಪಾಲನೊಬ್ಬ ಗಂಡು!
ದಿನವೆಲ್ಲಾ ಮೇಯಿಸಿದಾಕಳುಗಳಾ ಗಂಡು! (ಗೊ)
-ಲ್ಲ ಬಾಲೆಯರ ಪ್ರೀತಿಪಾತ್ರನಾಗಿದ್ದಾ ಗಂಡು!
ದಾಸರ ದಾಸನೂ ಆಗಿದ್ದಾ ವಿಚಿತ್ರ ಗಂಡು!
ಗುದ್ದಾಟದಲ್ಲಿ ಅದ್ವಿತೀಯನಾಗಿದ್ದಾ ಗಂಡು!
ಸ್ತ್ರ ದ್ರೌಪದಿಯದಕ್ಷಯ ಮಾಡಿತಾ ಗಂಡು!
ರಳನಾಗಿ ದುರುಳರ ಕೊಂದಿತಾ ಗಂಡು!
ರಕಾಸುರನಸು ಹೀರಿ ತೇಗಿತಾ ಗಂಡು!
ನಲಿ ಭೀಷ್ಮನಲಿ ಚಕ್ರವೆತ್ತಿತಾ ಗಂಡು!
ಹಿಂಡು ಕಲಮಲ ಜಲವನ್ನು ವೀರ ಗಂಡು (ಗಂ)
-ಡು, ಹೆಣ್ಣು ಭೇದ ನಿರಂಜನಾದಿತ್ಯ ನೀ ಹಿಂಡು!!!

ತೋಚದು ಮನಕೇನೂ ತೋಚದು!   5(2947)

ರ್ಯೆಯೀಗ ಬದಲಾಗಿಹುದು!
ದುರ್ಬುದ್ಧಿ ಸತ್ತುಹೋಗಿರುವುದು!
ನೆ, ಮಠ ಬೇಡಾಗಿರುವುದು!
ಶ್ವರವಿದೆಂದರಿತಿಹುದು!
ಕೇಡಾರಿಗೂ ಮಾಡದಿರುವುದು!
ನೂಕು ನುಗ್ಗುಲಲ್ಲಿಲ್ಲದಿಹುದು!
ತೋಟ ತುಳಸಿಗಾಗಿರುವುದು!
ರ್ಚೆ ಬಿಟ್ಟರ್ಚನೆಯಾಗ್ತಿಹುದು! (ಅ)
-ದು ನಿರಂಜನಾದಿತ್ಯಗಿಹುದು!!!

ತೋಟ ಶೃಂಗಾರ ಒಳಗೆ ಗೋಣಿ ಸೊಪ್ಪು! (ಆ)   2(860)

-ಟ ಮನೋಹರ, ದೃಷ್ಟಿ, ನೋಟ ತಾ ತಪ್ಪು!
ಶೃಂಗಾರದರಮನೆಯರಸ ಬೆಪ್ಪು!
ಗಾಳು ಶೀತಲದಲ್ಲಿ ಹೊಲಸು ಕಂಪು! (ಶ)
-ರಧಿ ಸೊಗಸಾದರದು ಬಲು ಉಪ್ಪು!
ಡೆಯ ಬಿಳುಪು, ಒಡತಿಯೇ ಕಪ್ಪು! (ಕಾ)
-ಳಗ ಬಿರುಸು, ಕಾವಲುಬಲ ಮುಪ್ಪು!
ಗೆಜ್ಜೆನಾದವಿಂಪು, ಪಾದಗತಿ ತಪ್ಪು!
ಗೋಮಾಳ ವಿಶಾಲದೊಳಗೊಣ ಹೆಪ್ಪು! (ಗ)
-ಣಿ ಬಹಳಾಳದಲ್ಲೆಲ್ಲಾ ಮಣ್ಣುಗುಪ್ಪು!
ಸೊಲ್ಲಾನಂದದಲಿಷ್ಟಾರ್ಥವಿದ್ದರೊಪ್ಪು! (ನೆ)
-ಪ್ಪು, ನಿರಂಜನಾದಿತ್ಯನದಿದ್ದರೊಪ್ಪು!!!

ತೋಡಿದ ಭಾವಿಗೆ ಜಲವೇ ಸಾಕ್ಷಿ! (ಹಿ)   2(457)

-ಡಿದ ಕರ್ಮಕ್ಕದರ ಸಿದ್ಧಿ ಸಾಕ್ಷಿ!
ಶೇಂದ್ರಿಯದಾಟಕ್ಕಾ ಸ್ಥಿತಿ ಸಾಕ್ಷಿ!
ಭಾನುವಿನುದಯಕ್ಕೆ ಬಾನೇ ಸಾಕ್ಷಿ!
ವಿಚಾರಿ ಎಂಬುದಕ್ಕಾ ಬಾಳೇ ಸಾಕ್ಷಿ! (ಮಿ)
-ಗೆ ಉಂಬವಗವನ ರೋಗ ಸಾಕ್ಷಿ!
ಲಜವರಳಿದಕಳಿ ಸಾಕ್ಷಿ! (ಶೀ)
-ಲಗಳಿಗೆ ನಡೆ, ನುಡಿಯೇ ಸಾಕ್ಷಿ!
ವೇಷ, ಭಾಷೆಗಳಿಗಾದೇಶ ಸಾಕ್ಷಿ!
ಸಾಗುವಳಿಗದರ ಬೆಳೆ ಸಾಕ್ಷಿ! (ಈ)
-ಕ್ಷಿ! ನಿರಂಜನಾದಿತ್ಯ ಸರ್ವಸಾಕ್ಷಿ!!!

ತ್ಯಾಗ, ಯೋಗ ಮೂರ್ತಿ ಬ್ರಾಹ್ಮಣ!   6(3873)

ರ್ವರಹಿತ ಪಂಚಪ್ರಾಣ!
ಯೋಚಿಸಿ ಕಾರ್ಯ ನಿರ್ವಹಣ!
ಣಿಸುತ್ತಿರನವ ಹಣ!
ಮೂರು ಲೋಕವಿವಗೆ ತೃಣ! (ಕಾ)
-ರ್ತಿಕೇಯನಂತಿವನೂ ಗಣ! (ಸಾಂ)
-ಬ್ರಾಣಿಯಂತೆ ಶುದ್ಧೀಕರಣ! (ಬ್ರಾ)
-ಹ್ಮಣ ಸರ್ವ ಸುಖ ಕಾರಣ!(ಪ್ರಾ)
-ಣ ನಿರಂಜನಾದಿತ್ಯಾರ್ಪಣ!!!

ತ್ಯಾಗರಾಜನಾಗಿ ರಾಮ ಗುಣ ಗಾನ ಹಾಡೋ! (ಭೋ)   5(3132)

-ಗ ಜೀವನವನ್ನಿಂದಿನಿಂದ ಕಡಿಮೆ ಮಾಡೋ!
ರಾಮರಸಮೃತವನ್ನೆಲ್ಲರಿಗೀಗ ನೀಡೋ!
ರಾ,ಜನ್ಮದಿಂದ ಪಾರಾಗುವ ದಾರಿ ನೋಡೋ!
ನಾಮ ಸಂಕೀರ್ತನಾಭ್ಯಾಸದಿಂದವನ ಕೂಡೋ!
ಗಿರಿಜಾಪತಿಯಂತರಂಗವನಲ್ಲಿ ಬೇಡೋ!
ರಾಗ, ದ್ವೇಷಾದಿಗಳ ಬೇರು ಸಹಿತ ಸುಡೋ!
ದ, ಮತ್ಸರಾಸುರರ್ಗೆ ರಾಮಬಾಣ ಹೂಡೋ!
ಗುರುಸೇವೆಗವನಂತಸು ಮೀಸಲಾಗಿಡೋ! (ಗ)
-ಣನಾಯಕನಾಗಲ್ಕೀಗಿನಿಂದೀ ಪಣ ತೊಡೋ!
ಗಾಳಿಯ ಮಗನಂತಾಗಿ ರಾಮನೊಡನಾಡೋ!
ಗುನಗುತ ಸೇವೆ ಮಾಡ್ಯಾತ್ಮಾನಂದ ಪಡೋ!
ಹಾಡಿ, ಪಾಡಿ, ನಲಿದಾಡಿ ದೇಹತ್ಯಾಗ ಮಾಡೋ! (ಹಾ)
-ಡೋ, ನಿರಂಜನಾದಿತ್ಯಾನಂದ ಸವಿದು ನೋಡೋ!!!

ತ್ಯಾಗರಾಜಾಳಬೇಕು; ಭೋಗರಾಜಳಿಯಬೇಕು!   6(4289)

ತಿ ಜಗತ್ತಿನದ್ದಾಗ ಉತ್ತಮವಾಗಬೇಕು!
ರಾಮರಾಜ್ಯ ಸುಖ ಆಗ ಅನುಭವಿಸಬೇಕು!
ಜಾತಿ ನೀತಿಯಿಂದ ಎಂದು ಆಗಾನಂದಿಸಬೇಕು! (ಒ)
-ಳಜಗಳಗಳಿಗಾಸ್ಪಸವಿಅಲ್ಲದಿರಬೇಕು!
ಬೇಟೆಯಾಡಿ ಹಿಂಸಾಪ್ರಾಣಿಗಳನ್ನು ಕೊಲ್ಲಬೇಕು!
ಕುಲಗೋತ್ರವಿಂತು ನೆಮ್ಮದಿಯಿಂದುಳಿಯಬೇಕು!
ಭೋಧಾತ್ಮ ಭೋಧೆಯಿಂದ ಪ್ರಜ್ವಲಿಸುತ್ತಿರಬೇಕು!
ಗನ ಸದೃಶ ಗುರುವೆಂಬರಿವಾಗಬೇಕು!
ರಾತ್ರಿ, ದಿನ, ಅವನ ಸ್ಮರಣೆಯಲ್ಲಿರಬೇಕು!
ನನ, ಮರಣದಿಂದ ಇಂತು ಪಾರಾಗಬೇಕು! (ಅ)
-ಳಿಯ ತಕ್ಕದ್ದಳಿಯತಕ್ಕದ್ದುಳಿಯ್ಬೇಕು!
ಮನ ಭಯ ಆಗ ಇಲ್ಲೆಂದು ತಿಳಿಯಬೇಕು!
ಬೇಕೆಲ್ಲಕ್ಕೂ ಸದ್ಗುರುವಿನ ಕೃಪೆಯಿರಬೇಕು! (ವ್ಯಾ)
-ಕುಲ ನಿರಂಜನಾದಿತ್ಯನಂದದಿಂದ ಹೋಗ್ಬೇಕು!!!

ತ್ಯಾಗಿ ಭೋಗಿಯಾಗಿ ಇರಲಾರ!   6(3520)

(ಭೋ)-ಗಿ ತ್ಯಾಗಿಯಾಗಿಯೂ ಇರಲಾರ!
ಭೋದ ವೀರ್ವರ್ದಜಗಜಾಂತರ!
ಗಿರಿಧರಗಪಾರ ಸಂಸಾರ!
ಯಾದವಗವರಿಂದಲಂಕಾರ!
(ಯೋ)-ಗಿ ರಾಜರಾಜೇಶ್ವರ ಶಂಕರ!
ವನ ರೀತಿ, ನೀತಿ, ಓಂಕಾರ!
ಮೇಶ, ಉಮೇಶ, ಪರಾತ್ಪರ!
(ಲೀ)-ಲಾನುಸಾರ ಆಚಾರ, ವಿಚಾರ!
(ವಿ)-ರಕ್ತ ನಿರಂಜನಾದಿತ್ಯಾಕಾರ!!!

ತ್ಯಾಗೇಂದ್ರ ಬಾರಯ್ಯಾ, ರಾಗೇಂದ್ರ ಹೋಗಯ್ಯಾ (ಯೋ)   4(2063)

-ಗೇಂದ್ರೇಂದ್ರ ಬಾರಯ್ಯಾ, ಭೋಗೇಂದ್ರ ಹೋಗಯ್ಯಾ! (ಭ)
-ದ್ರಪೀಠವನೇರು ಶ್ರೀರಾಮಚಂದ್ರಯ್ಯಾ!
ಬಾರಿಬಾರಿಗೂ ನಾಮಜಪ ಮಾಡ್ಸಯ್ಯಾ!
ಮಿಸದಿರಲಿ ಮನ ಮಾಯೆಗಯ್ಯಾ! (ಅ)
-ಯ್ಯಾತ್ಮಾರಾಮನೆಂಬ ಸುಜ್ಞಾನ ನೀಡಯ್ಯಾ!
ರಾಮಭಕ್ತಾಂಜನೇಯನಂತೆ ಮಾಡಯ್ಯಾ! (ನಾ)
-ಗೇಂದ್ರ ಸುಬ್ರಹ್ಮಣ್ಯನಂತಾಗಬೇಕಯ್ಯಾ! (ಕ್ಷು)
-ದ್ರ ಕಾಮಾದಿಗಳು ನಾಶವಾಗಲಯ್ಯಾ! (ಅ)
-ಹೋರಾತ್ರ್ಯಾತ್ಮಾನುಸಂಧಾನವಿರಲಯ್ಯಾ! (ರೋ)
-ಗಗಳೆಲ್ಲಾ ಉರಿದು ಹೋಗಲೀಗಯ್ಯಾ! (ಅ)
-ಯ್ಯಾ ನಿರಂಜನಾದಿತ್ಯ ತಾನೆಲ್ಲವಯ್ಯಾ!!!

ತ್ಯಾವವಿರುವಾಗ ಮರಳ ಒರೆಸಬೇಡ!   1(72)

ಡವೆ ವಸ್ತುಗಳಿರೆ ಗುಡಿಸಲು ಬೇಡ!
ವಿಷಯದಾಸೆಯಿರೆ ಸನ್ಯಾಸಿಯಾಗಬೇಡ!
ರುಚಿ ಬೇಕಾಗಿರುವಾಗ ಭಿಕ್ಷುವೆನಬೇಡ!
ವಾಯು ಬೀಸುವಾಗ ಛತ್ರಿ ಬಿಡಿಸಬೇಡ!
ಂಟಲಡಗಿರುವಾಗ ಹಾಡಹೋಗಬೇಡ!
ಲಿನ ವಸನದಿಂದ ಸಭೆ ಸೇರಬೇಡ!
ಗಳೆ ಮಾತುಗಳೆಡೆ ಕಿವಿಗೊಡಬೇಡ! (ಅ)
-ಳತೆಗಳವಡದಂಬರವಳೆಯಬೇಡ!
ಳಗಿಹ ಗುರುವ ಮರೆತೊಂಡಾಡಬೇಡ!
ರೆಸಿಗೆಯಾಡುವಾಗ ಎಣ್ಣೆ ಸವರಬೇಡ!
ತ್ಸಂಘದಲಿರುವಾಗತ್ತಿತ್ತ ನೋಡಬೇಡ!
ಬೇಸರದಿಂದ ವಾಸುದೇವ ಸ್ಮರಣೆ ಬೇಡ!
(ಅ) -ಡವಿಯಲಬ್ಬರದೂಟ ನಿರಂಜನ ಮಾಡ!!!

ತ್ರಿಮೂರ್ತಿಗಳ್ದತ್ತನಾದಾಗ ಸತಿಯರನಾಥರು!   6(4128)

ಮೂವರು ಸತಿಯರೂ ಭೇದಗಳನ್ನು ಮರೆತರು! (ಮೂ)
-ರ್ತಿ ದತ್ತಾತ್ರೇಯನದ್ದನ್ನು ನೋಡಿ ತಲ್ಲೀನರಾದರು!
ರ್ವವಿಲ್ಲದ ಮೂಲ ಪ್ರಕೃತಿ ರೂಪಿಗಳಾದರು! (ಪೇ)
-ಳ್ದರೀ ನಿಜಾಂಶವನ್ನಾಮೇಲ್ದೇವ ಋಷಿ ನಾರದರು! (ದ)
-ತ್ತ ದರ್ಶನದಿಂದತ್ರಿ ದಂಪತಿಗಳ್ಧನ್ಯರಾದರು!
ನಾರದರಿದಕ್ಕೆಲ್ಲಾ ಸೂತ್ರಧಾರಿಯೆನಿಸಿದರು!
ದಾರಿ ಸಾಧಕರಿಗೆ ಸುಗಮವಾಗಿರಿಸಿದರು!
ಗನ ಸದೃಶ ಪರಮಾತ್ಮನ ಕೊಂಡಾಡಿದರು!
ತೀ ಧರ್ಮದ ಮಹಿಮೆಯನ್ನೆಲ್ಲೆಲ್ಲೂ ಸಾರಿದರು!
ತಿಳಿವಳಿಕೆ ಸತೀ ತ್ರಯರಿಗುಂಟು ಮಾಡಿದರು! (ಜ)
-ಯ ಸ್ವಧರ್ಮಕರ್ಮಕ್ಕೆಂಬ ನಿದರ್ಶನ ತೋರಿದರು! (ಪ)
-ರನಿಂದೆ ಅಸೂಯೆಯನ್ನೀ ಮೂಲಕ ಖಂಡಿಸಿದರು!
ನಾನಾ ಪಂಗಡಗಳೊಂದಾಗುವಂತೆ ನೆರವಾದರು! (ಇಂ)
-ಥವರೆಂದೂ ಅಜರಾಮರರು! ಸ್ತುತಿಪಾತ್ರರು! (ಗು)
-ರು ನಿರಂಜನಾದಿತ್ಯಾನಂದ ದತ್ತಾತ್ರೇಯರೂಪರು!!!

ತ್ರಿಲೋಕದಾಶಾರಹಿತ ಅವದೂತ!   1(118)

ಲೋಭವಿನಿತಿಲ್ಲದಾತ ಅವದೂತ!
ರ್ಮಬಂಧವಿಲ್ಲದಾತ ಅವದೂತ!
ದಾಸ್ಯಭಾವ ಹರಿದಾತ ಅವದೂತ!
ಶಾಖ, ಶೀತ, ಮರೆತಾತ ಅವದೂತ!
ನ್ನ, ಹೊನ್ನು, ಮಣ್ಣೆಂಬಾತ ಅವದೂತ!
ಹಿತಾಹಿತ ದತ್ತೆಂಬಾತ ಅವದೂತ!
ನ್ನದೆಂಬುದಿಲ್ಲದಾತ ಅವದೂತ!
ಳಿದುದಕಳದಾತ ಅವದೂತ!
ರ್ತಮಾನಕ್ಕಿರುವವಾತ ಅವದೂತ!
ದೂಮ ಭವಿಷ್ಯವೆಂಬಾತ ಅವದೂತ!
ರಣಿ ನಿರಂಜನಾದಿತ್ಯಾವದೂತ!!!

ಶ್ರೀ ಶ್ರೀ ನಿರಂಜನಾನಂದ ಸರಸ್ವತಿ
ಅವಧೂತ ಶ್ರೀ ಶ್ರೀ ನಿರಂಜನಾನಂದ ಸರಸ್ವತಿ