ಜಂಭ ಮಾಡಿ ಕೆಡಬೇಡ! 4(1758)
ಭಗನಿಂಬು ಬಿಡಬೇಡ!
ಮಾಡಕ್ಕಾಸೆ ಪಡಬೇಡ!
ಡಿಳ್ಳನಾಗಿ ಓಡಬೇಡ!
ಕೆರ ಮೆಟ್ಟಿ ಆಡಬೇಡ!
ಡಗೆಯೆಂದೂ ಮಾಡಬೇಡ!
ಬೇಡಿ ಬಡ್ಡಿಗಿಡಬೇಡ! (ಬಿ)
-ಡ ನಿರಂಜನಾದಿತ್ಯಾಡ!!!
ಜಗತ್ತನ್ನು ಮರೆತಿರುವುದೆಂದ್ರೇನು? (ಭ) 6(3784)
-ಗವದ್ಧ್ಯಾನಾಸಕ್ತನಾಗ್ವುದೆಂಬೆ ನಾನು! (ಚಿ)
-ತ್ತವೃತ್ತಿ ನಿರೋಧಿಸುವುದೆಂಬೆ ನಾನು! (ತ)
-ನ್ನುದ್ಧಾರಕ್ಕೆಳಸುವುದೆಂಬೆನು ನಾನು!
ಮದೋನ್ಮತ್ತನಾಗದಿರ್ಪುದೆಂಬೆ ನಾನು! (ನೀ)
-ರೆಯರ ಸಂಗ ಬಿಡುವುದೆಂಬೆ ನಾನು!
ತಿತಿಕ್ಷೆ ವೈರಾಗ್ಯವಿರ್ಪುದೆಂಬೆ ನಾನು! (ಆ)
-ರು ವೈರಿಗಳ ಜೈಸುವುದೆಂಬೆ ನಾನು! (ಹಾ)
-ವು, ಹಗ್ಗ, ಭ್ರಾಂತಿ ತಪ್ಪುವುದೆಂಬೆ ನಾನು! (ತಂ)
-ದೆಂಬವನನ್ನರಿತಿರ್ಪುದೆಂಬೆ ನಾನು! (ಉ)
-ದ್ರೇಕೋದ್ವೇಗವಿಲ್ಲದಿರ್ಪುದೆಂಬೆ ನಾನು! (ತ)
-ನು, ನಿರಂಜನಾದಿತ್ಯನಲ್ಲೆಂಬೆ ನಾನು!!!
ಜಗತ್ತಿಗಾಗಿ ನೀನು ಕಾಮಾ! 5(2619)
ಗರ್ವಿಯಾಗಿ ನೀನಿಹೆ ಕಾಮಾ! (ಬಿ)
-ತ್ತಿಹೆ ವಿಷಬೀಜವ ಕಾಮಾ! (ಸಂ)
-ಗಾತಿಗಳ್ಹತ್ತು ಜನ ಕಾಮಾ! (ಯೋ)
-ಗಿಗಳ ವೈರಿ ನೀನು ಕಾಮಾ!
ನೀಚಾಚಾರ ನಿನ್ನದು ಕಾಮಾ! (ತ)
-ನುಭಾವ ನಿನ್ನಿಂದಾಯ್ತು ಕಾಮಾ!
ಕಾಲನ ಭೃತ್ಯ ನೀನು ಕಾಮಾ! (ಕಾ)
-ಮಾ! ನಿರಂಜನಾದಿತ್ಯಾರಾಮಾ!!!
ಜಗತ್ತಿಗೆ ನಾನು ಬೇಡ! (ಜ) 4(2363)
-ಗತ್ತಂತೂ ನನಗೂ ಬೇಡ! (ಕ)
-ತ್ತಿ ಮಸೆಯುವುದೂ ಬೇಡ!
ಗೆದ್ದೆನೆಂಬ ಹಮ್ಮೂ ಬೇಡ!
ನಾಳೆಯಾಸೆಯೆಂದೂ ಬೇಡ! (ಅ)
-ನುಮಾನ ಪಡ್ವುದೂ ಬೇಡ!
ಬೇಜಾರಾಗುವುದೂ ಬೇಡ! (ಮೃ)
-ಡ ನಿರಂಜನಾದಿತ್ಯಾಡ!!!
ಜಗತ್ತಿಗೆ ಶಾಂತಿ ಸಮಾಧಾನವೆಂದು? (ಅ) 6(3955)
-ಗತ್ಯವಿಲ್ಲದ ವ್ಯವಹಾರ ಬಿಟ್ಟಂದು! (ಕ)
-ತ್ತಿ ಮಸೆತನ್ಯರ ಮೇಲೆ ತಪ್ಪಿದಂದು! (ಸೋ)
-ಗೆಗಣ್ಣವರ ಬೇಟೆಯಾಟ ನಿಂತಂದು!
ಶಾಂತಿ ಸಾಗರ ಎಲ್ಲಾ ಮನಸ್ಸಾದಂದು!
ತಿಗಣೆ ಸ್ವಭಾವ ಆಪ್ತರು ಬಿಟ್ಟಂದು!
ಸದ್ಗುರು ನಾಮಸ್ಮರಣೆ ಸದಾದಂದು!
ಮಾನವ ತನ್ನನ್ನು ತಾನು ತಿಳಿದಂದು! (ಸು)
-ಧಾಮನಂತೆ ಸರಳಜೀವಿಯಾದಂದು!
ನಭೋಮಣಿಯಾದರ್ಶ ಪಾಲಿಸಿದಂದು! (ಹಾ)
-ವೆಂದು ಮಾಯೆಯಿಂದ ದೂರ ಸರಿದಂದು! (ಹಿಂ)
-ದು, ಮುಸ್ಲಿಂ ನಿರಂಜನಾದಿತ್ಯನಾದಂದು!!!
ಜಗತ್ತಿನ ಕತ್ತಲೆ ನಾಶ ಯಾವಾಗ? 4(2228)
ಗಭಸ್ತಿಯ ಬೆಳಕು ವ್ಯಾಪಿಸಿದಾಗ! (ಮು)
ತ್ತಿದ ಮುಗಿಲೆಲ್ಲಾ ಚದರಿ ಹೋದಾಗ! (ಅ)
-ನನ್ಯ ಭಕ್ತಿಯಿಂದ ಕಾಲ ಕಾದಿದ್ದಾಗ!
ಕರುಣೆ ಗುರುದೇವನಿಗೆ ಬಂದಾಗ! (ಚಿ)
-ತ್ತವನ ಪಾದದಲ್ಲಿ ಲಯಿಸಿದಾಗ! (ಬೆ)
-ಲೆ ಮಾಯೆಯಾಟಕ್ಕೇನೇನಿಲ್ಲದಾದಾಗ!
ನಾನು, ನೀನೆಂಬಹಂಕಾರಡಗಿದಾಗ!
ಶಕ್ತಿ ಶಿವನಿಗಾಗಿ ವ್ಯಯವಾದಾಗ! (ಜ)
-ಯಾಪಜಯವನಿಚ್ಛೆಯೆಂದರಿತಾಗ!
ವಾಙ್ಮನಸುಗಳು ಮೌನ ತಳೆದಾಗ! (ಸಂ)
-ಗ ನಿರಂಜನಾದಿತ್ಯಾತ್ಮನದ್ದಾದಾಗ!!!
ಜಗತ್ತಿನಾಗು ಹೋಗಿಗಾರು ನಾಯಕ? (ಜ) 6(4364)
-ಗದ್ಗುರು ಪರಮಾತ್ಮ ತಾನೇ ನಾಯಕ! (ಮ)
-ತ್ತಿತರರಿಂದಾಗುವುದೆಲ್ಲನಾಯಕ!
ನಾನು, ನೀನೆನ್ನುವವನೆಂಥಾ ನಾಯಕ?
ಗುಣಕಾರಿಯಾಗನೆಂದೂ ಆ ನಾಯಕ!
ಹೋರಾಟ, ಹಾರಾಟಗಳಿಗಾ ನಾಯಕ!
ಗಿರಿಧರ ಗೋಪಾಲ ನಿಜ ನಾಯಕ!
ಗಾರುಡಿಗಾರನಾದ್ರೇನಾಯ್ತಾ ನಾಯಕ? (ಕು)
-ರುಕುಲಕ್ಕೇ ಕಾಲತಾನಾದಾ ನಾಯಕ!
ನಾಸ್ತಿಕನನ್ನಾಸ್ತಿಕ ಗೈದಾ ನಾಯಕ!
ಯಜ್ಞದರ್ಥವನ್ನರುಹಿದಾ ನಾಯಕ! (ಬ)
-ಕ ವೈರಿ ನಿರಂಜನಾದಿತ್ಯಾ ನಾಯಕ!!!
ಜಗತ್ಪತಿಯೂ ಜಗತ್ತನ್ನೊಪ್ಪಿಸ್ಲಾರ! 6(3779)
ಗತಿ, ಮತಿ, ದಾತಾರ ಹಂಗಲ್ಲೂ ಇರ! (ಸ)
-ತ್ಪಥ ಬಿಟ್ಟು ಅವನಾವಾಗಲೂ ಸಾರ!
ತಿಕ್ಕಾಟ ತೀಟೆ ವ್ಯಾಜ್ಯಕ್ಕೆ ಆತ ಬಾರ! (ಸಾ)
-ಯೂಜ್ಯ ಅವನದತ್ಯಂತ ಸುಖಕರ!
ಜನನ, ಮರಣಕ್ಕವನು ವಿದೂರ!
ಗಗನ ಸದೃಶ ಅವನ ಆಕಾರ! (ದ)
-ತ್ತ ಗುರುವಾಗಿವನಾದರ್ಶಾವತಾರ! (ತ)
-ನ್ನೊಲಿಮೆಯಿಂದೆಲ್ಲಾ ಲೋಕಗಳುದ್ಧಾರ! (ತ)
-ಪ್ಪಿ ನಡೆವವರಿಗಿವನ ಧಿಕ್ಕಾರ! (ಈ)
-ಸ್ಲಾರದ ಸಂಸಾರಕ್ಕೆ ತಾರಕಾಕಾರ! (ವ)
-ರ ನಿರಂಜನಾದಿತ್ಯ ದತ್ತನಾಕಾರ!!!
ಜಗದಲ್ಲಿದ್ದಿಲ್ಲದಂತಿಹುದೀ ಬಾಳು! [ಅ] 4(2356)
-ಗತ್ಯವಿನ್ನಿಲ್ಲನ್ಯ ವ್ಯವಹಾರಗಳು! (ವಾ)
-ದಕ್ಕತೀತವಾಗಿವೆ ಸಮಸ್ಯೆಗಳು! (ಎ)
-ಲ್ಲಿ ಹುಡುಕಿದರೂ ಮಾಯಾಜಾಲಗಳು! (ಅ)
-ದ್ದಿ ಮುಳುಗಿಸುವುವಾ ಪ್ರವಾಹಗಳು! (ಇ)
-ಲ್ಲದಾಗಿದೆ ಪರಿಹಾರೋಪಾಯಗಳು!
ದಂಗ, ದರೋಡೆಗೆಲ್ಲಾವಕಾಶಗಳು! (ಗ)
-ತಿಗೆಟ್ಟಹವೆಲ್ಲಾ ಮತಾಚಾರಗಳು!
ಹುಸಿಗೆ ಎಲ್ಲೆಲ್ಲೂ ಜಯಕಾರಗಳು!
ದೀರ್ಘ ತಪಕ್ಕೂ ಬಾರವುತ್ತರಗಳು!
ಬಾಯ್ಬಿಟ್ಟರಾಗುವುದಪಚಾರಗಳು (ಬಾ)
-ಳು! ನಿರಂಜನಾದಿತ್ಯಗೊಪ್ಪಿಸೀ ಗೋಳು!!!
ಜಗದಾಧಾರನೊಡನಾಡಿದಳ್ರಾಧಾ! 5(3135)
ಗಗನ ಸದೃಶ ಗುರುವಿನಾ ಪಾದಾ!
ದಾಸಿಯಾಗ್ಯನುಭವಿಸಿದಳಾಮೋದ!
ಧಾರಿಣಿ ಜೀವರಾರೋಪ ಅಪರಾಧ!
ರತಿಸುಖಕ್ಕದೆಂಬುದಜ್ಞಾನದಿಂದ!
ನೊಸಲಿಗೆ ನೊಸಲಿಟ್ಟದ್ದಾತ್ಮಾನಂದ! (ಜ)
-ಡದೇಹಭಾವವಿಲ್ಲದ್ದು ನಿಜಾನಂದ!
ನಾದ, ಬಿಂದು, ಕಲಾತೀತಾ ಶುದ್ಧಾನಂದ! (ಬ)
-ಡಿಸೆಮಗೆಲ್ಲರಿಗಾ ಊಟ ಗೋವಿಂದಾ!
ದರ್ಶನವೀಗಿತ್ತುದ್ಧರಿಸೋ ಮುಕುಂದಾ! (ಗೋ)
-ಳ್ರಾತ್ರಿ, ದಿನವೆನಗೇಕೋ ನಂದಕಂದಾ? (ರಾ)
-ಧಾ ಮಾಧವ ನಿರಂಜನಾದಿತ್ಯಾನಂದ!!!
ಜಗದೀಶ ನೀನು ಗುರುದೇವಾ! 5(3195)
ಗಣಪತಿ ಮಗ ಮಹಾದೇವಾ!
ದೀನಬಂಧು ಗುರುಗುಹ ದೇವಾ!
ಶರಣು ನಿನಗಂಬಿಕಾಧವಾ!
ನೀನೆನ್ನ ತಾಯ್ತಂದೆ ದತ್ತ ದೇವಾ!
ನುಡಿ, ನಡೆ ನಿನ್ನಂತಿರ್ಲಿ ದೇವಾ!
ಗುಡಿ ನಿನ್ನದೀ ಶರೀರ ದೇವಾ! (ಇ)
-ರು ನಿತ್ಯಾನಂದದಲ್ಲಿಲ್ಲಿ ದೇವಾ!
ದೇವಾದಿ ದೇವ ಮಹಾನುಭಾವಾ! (ಈ)
-ವಾ ನಿರಂಜನಾದಿತ್ಯಾನಂದವಾ!!!
ಜಗದ್ಗುರು ಮಠವೀ ಘಟ! (ಸಂ) 4(2004)
-ಗಮೇಶ್ವರನಲ್ಲಿರ್ಪ ನೋಟ! (ಸ)
-ದ್ಗುರು ಭಕ್ತರಿಗಾಗ್ವುದೂಟ!
ರುಚಿ, ಅರುಚಿಗಲ್ಲಿ ಗೂಟ!
ಮಡದಿ, ಮಕ್ಕಳ್ಗಲ್ಲಾ ಪೀಠ!
ಠಕ್ಕು, ಠೌಳಿಗಳಿಗುಚ್ಚಾಟ!
ವೀತರಾಗಾಗೆಂಬಾ ಶ್ರೀಕಂಠ! (ಅ)
-ಘಹರಾ ಗುರು ನೀಲಕಂಠ! (ನೆಂ)
-ಟ, ನಿರಂಜನಾದಿತ್ಯ ಭಂಟ!!!
ಜಗನ್ನಾಥ ರುಕ್ಮಿಣಿಯರಾರಪ್ಪಾ? 2(741)
ಗರ್ವರಹಿತ ದಂಪತಿಗಳವರಪ್ಪಾ! (ಮ)
-ನ್ನಾಥ ಸೀತಾರಾಮ ಸೇವಕರಪ್ಪಾ!
ಥಳಥಳಿಪ ರೂಪವರದಪ್ಪಾ!
ರುಚಿಸದವರಿಗೀ ಇಹವಪ್ಪಾ! (ರು)
-ಕ್ಮಿಣಿಯರಸ ಗೀತಾಪ್ರಿಯನಪ್ಪಾ! (ಮ)
-ಣಿವರು ಸದಾ ಗುರುಪಾದಕಪ್ಪಾ!
ಯಮ, ನಿಯಮ ಪಾಲಿಸುವರಪ್ಪಾ!
ರಾತ್ರಿ, ದಿವಸ ಆತ್ಮಚಿಂತೆಯಪ್ಪಾ!
ರಘುರಾಮ ದಾಸ ಕೃಪೆಯಿದಪ್ಪಾ! [ಅ]
-ಪ್ಪಾ! ನಿರಂಜನಾದಿತ್ಯಾನುಗ್ರಹಪ್ಪಾ!!!
ಜಗನ್ನಾಥನರಿವು ಜಗತ್ತಿಗಿಲ್ಲ! (ಜ) 6(3889)
-ಗತ್ತನ್ನು ಅವನೆಂತು ಮರೆಯಬಲ್ಲ? (ತ)
-ನ್ನಾನಂದವಿದೆಲ್ಲಾ ಎಂದವನು ಬಲ್ಲ! (ಪ್ರ)
-ಥಮ ಪೂಜೆಗಾತ್ಮ ಅನರ್ಹನೇನಲ್ಲ!
ನರ ನಾರಿಯರು ಮರೆತರಿದೆಲ್ಲ! (ಪ)
-ರಿಪರಿಯಾಸೆಯಿಂದೊದ್ದಾಡುವರೆಲ್ಲ! (ಅ)
-ವು ಅಸ್ಥಿರವೆಂದವರು ಅರಿತಿಲ್ಲ!
ಜವನ ಪಾಲಾಗದವರಾರೂ ಇಲ್ಲ!
ಗರ್ವದಿಂದ ಹೊಡೆದಾಡುತ್ತಿಹರೆಲ್ಲ! (ಕ)
-ತ್ತಿ, ಬಂದೂಕುಗಳೂ ಬೇಕವರಿಗೆಲ್ಲ! (ಯೋ)
ಗಿರಾಜ ನಗುವನು ನೋಡಿದನ್ನೆಲ್ಲ! (ಪು)
-ಲ್ಲ ನಿರಂಜನಾದಿತ್ಯ ಲೀಲೆ ಇದೆಲ್ಲ!!!
ಜಗಲಿ ಹಾರಿ ಗಗನ ಹಾರು! 4(1579)
ಗಣಿತ ಕಲಿತು ಫಲ ಸಾರು! (ಬ)
-ಲಿಯಾಗಿ ಸದ್ಗುರು ಪಾದ ಸೇರು!
ಹಾಡಿ, ಪಾಡಿ, ಹರಿ ಕೃಪೆ ಕೋರು! (ಸ)
-ರಿಗಮ ಹೇಳ್ಯಾಯೂರಾಗ ತೋರು!
ಗಣ್ಯವಾಗಿ ಅಗ್ರಸ್ಥಾನವೇರು!
ಗಣವಾಗಿ ಶಿವಕೂಟ ಸೇರು!
ನದಿಯಾಗಿ ಉದಧಿಯ ಸೇರು!
ಹಾಲಿಗೆ ನೀರು ಹಾಕದೆ ಮಾರು! (ಸೇ)
-ರು ನಿರಂಜನಾದಿತ್ಯಾತ್ಮನೂರು!!!
ಜಗವನಾಳುವುದು ದೈವೀ ಶಕ್ತಿ! 2(570)
ಗತಿಯಿದಕಿರಬೇಕುಚ್ಛ ಸ್ಥಿತಿ!
ವರವಿಚಾರಕಿರಬೇಕಾಸಕ್ತಿ!
ನಾಶವಾಗುವುದೆಲ್ಲಾ ಯುಕ್ತಿ! (ಕೀ)
-ಳು ವಿಷಯದಿಂದಾಗುವುದಶಕ್ತಿ! (ಸಾ)
-ವು, ನೋವೆಲ್ಲಾ ಶರೀರ ಸಂಬಂಧೋಕ್ತಿ!
ದುರ್ಬಲಕೆ ಕಾರಣ ಮಾಯಾವೃತ್ತಿ!
ದೈವಿಕಭ್ಯಾಸದಿಂದ ಆತ್ಮ ಶಕ್ತಿ!
ವೀತರಾಗ, ಭಯ, ಕ್ರೋಧತಿಶಕ್ತಿ!
ಅಥವಾ
ವೀರ್ಯ ವೃದ್ಧಿಯಿಂದ ಬಹಳ ಶಕ್ತಿ!
ಶಕ್ತಿಯಿದರಿಂದರಿಷ್ಟ ನಿವೃತ್ತಿ! (ಭ)
-ಕ್ತಿ ನಿರಂಜನಾದಿತ್ಯನಲಿ ಶಕ್ತಿ!!!
ಜಗವೆಲ್ಲಾ ರಾಮದಾಸಪ್ಪಾ! (ಮ) 2(637)
-ಗಳಿವಳಾ ತೊಡೆ ಮೇಲಪ್ಪಾ! (ನೀ)
-ವೆನಗೇನೂ ಹೇಳಬೇಡ್ರಪ್ಪಾ! (ಎ)
-ಲ್ಲಾ ದಾಸಪ್ಪ ಹೇಳಿಹನಪ್ಪಾ!
ರಾಮದಾಸ ನಿರಂಜನಪ್ಪಾ!
ಮಹಿಮನವನೆನ್ನಪ್ಪಪ್ಪಾ!
ದಾಸರ ದಾಸಿ ಇವಳಪ್ಪಾ!
ಸದಾ ಧಾರವಳಿಗಾತಪ್ಪಾ! (ಅ)
-ಪ್ಪಾ! ರಾಮ ಶ್ರೀ ನಿರಂಜನಪ್ಪಾ!!!
ಜಡನಾಗಿ ಇದ್ದೆ, ಮೃಡನಾಗಿ ಎದ್ದೆ! (ಬ) 4(2164)
-ಡವನಾಗಿ ಇದ್ದೆ, ಒಡೆಯನಾಗ್ಯೆದ್ದೆ!
ವಾದಿಯಾಗಿ ಇದ್ದೆ, ಪ್ರವಾದಿಯಾಗ್ಯೆದ್ದೆ! (ರಾ)
-ಗಿ ನಾನಾಗಿ ಇದ್ದೆ, ವಿರಾಗಿಯಾಗ್ಯೆದ್ದೆ!
ಇಲ್ಲಿ, ಅಲ್ಲಿ ಇದ್ದೆ, ಎಲ್ಲೆಲ್ಲಾನಾಗ್ಯೆದ್ದೆ! (ನಿ)
-ದ್ದೆ ಮಾಡುತ್ತಾ ಇದ್ದೆ, ಸದ್ದಡಗ್ಯಾನೆದ್ದೆ!
ಮೃತನಂತೆ ಇದ್ದೆ, ಅಮೃತನಾಗ್ಯೆದ್ದೆ! (ಒ)
-ಡಲ್ನಾನೆಂದು ಇದ್ದೆ, ವಿಮಲಾತ್ಮಾಗ್ಯೆದ್ದೆ! (ಅ)
-ನಾಥನೆಂತ ಇದ್ದೆ, ಜಗನ್ನಾಥಾಗ್ಯೆದ್ದೆ! (ಸಂ)
-ಗಿ ನಾನಾಗಿ ಇದ್ದೆ, ನಿಸ್ಸಂಗಿಯಾಗ್ಯೆದ್ದೆ!
ಎರವಾಗಿ ಇದ್ದೆ, ನೆರವಾಗೀಗೆದ್ದ! (ಎ)
-ದ್ದೆ, ನಿರಂಜನಾದಿತ್ಯ ನಾನಾಗೀಗ್ಯೆದ್ದೆ!!!
ಜನ ಸಂಖೆ ಹೆಚ್ಚಬಾರದಂತೆ! (ಮ) 3(1167)
-ನಸೇಚ್ಛಾ ವರ್ತಿಸಬಾರದಂತೆ!
ಸಂಘ ದ್ವೇಸವಿರಬಾರದಂತೆ! (ಶಾ)
-ಖೆಗಳು ಬೆಳೆಯಬಾರದಂತೆ!
ಹೆಸರಿಗಾಶಿಸಬಾರದಂತೆ! (ಮ)
-ಚ್ಚರವೆಂದೂ ಪಡಬಾರದಂತೆ!
ಬಾಯಿ ಮಾತು ಹೆಚ್ಚ ಬಾರದಂತೆ! (ವ)
-ರ ಭಜನೆ ಬಿಡಬಾರದಂತೆ!
ದಂಭ, ದರ್ಪ ತೋರಬಾರದಂತೆ! (ಜೊ)
-ತೆ, ಶ್ರೀ ನಿರಂಜನಾದಿತ್ಯನಂತೆ!!!
ಜನ ಸಂಪರ್ಕದಿಂದ ಅಶಾಂತಿ! 5(3168)
ನಮಸ್ಕರಿಸಿ ಮಾಳ್ಪರು ವಿನಂತಿ!
ಸಂಚಿತವಿರ್ಪಾಗೆಂತು ವಿಶ್ರಾಂತಿ!
ಪರಮಾರ್ಥಿಯಾದರಿಲ್ಲ ಭ್ರಾಂತಿ! (ಮ)
-ರ್ಕಟ ಮನಕ್ಬೇಕ್ನಾನಾ ವದಂತಿ! (ಅಂ)
-ದಿಂದಿನ ಮಾತೇಕೆಂಬ ವೇದಾಂತಿ!
ದಬ್ಬಾಳಿಕೆ ಹೆಚ್ಚಿದಾಗ ಕ್ರಾಂತಿ!
ಅಮರಾತ್ಮ ನಿಷ್ಠೆಯೇ ಪ್ರಶಾಂತಿ! (ಆ)
-ಶಾಂಬುಧಿವಾಸನಿಗಿಲ್ಲ ಶಾಂತಿ! (ಗ)
-ತಿ ನಿರಂಜನಾದಿತ್ಯ ಸಂಗಾತಿ!!!
ಜನಕನಿವ ಶ್ರೀ ಕೃಷ್ಣರಾಯ! 5(2777)
ನಸುನಗುತಲಿರುವಾ ರಾಯ!
ಕರ್ತವ್ಯ ನಿಷ್ಠಾಗ್ರೇಸರಾ ರಾಯ!
ನಿತ್ಯಾನಿತ್ಯಜ್ಞಾನೀ ಕೃಷ್ಣರಾಯ!
ವರಗುರು ಸೇವಾಸಕ್ತಾ ರಾಯ!
ಶ್ರೀನಿಧಿ ಅಮರಜೇಶಾ ರಾಯ!
ಕೃಪಣತ್ವವಿಲ್ಲದವಾ ರಾಯ! (ಪೂ)
-ಷ್ಣನಾರಾಧಕಾ ಕೃಷ್ಣರಾಯ!
ರಾಗ, ದ್ವೇಷ ರಹಿತನಾ ರಾಯ! (ಪ್ರಿ)
-ಯ ನಿರಂಜನಾದಿತ್ಯಗಾ ರಾಯ!!!
ಜನನೀ ಜಗಜ್ಜನನೀ! (ಮ) 2(563)
-ನ ಮಂದಿರ ನಿವಾಸಿನೀ!
ನೀತಿ, ರೀತಿಯೋಲ್ಲಾಸಿನೀ!
ಜನ್ಮ ಪಾವನ ಕಾರಿಣೀ!
ಗತಿ, ಸ್ಥಿತಿ, ಸಂಚಾಲಿನೀ! (ಸ)
-ಜ್ಜನ ಭಾವ ಪ್ರಚೋದಿನೀ!
ನರ ಸುರ ಶಿರೋಮಣೀ!
‘ನೀ’ ನಿರಂಜನ ರೂಪಿಣೀ!!!
ಜನನೀ ಜನಕನಿಷ್ಟ ಸರ್ವೋತ್ಕೃಷ್ಟ! (ತ) 2(844)
-ನಯ ಉನ್ನತಿಗಿದು ಸರ್ವೋತ್ಕೃಷ್ಟ!
ನೀನವನಂತಿರುವುದು ಸರ್ವೋತ್ಕೃಷ್ಟ!
ಜನ್ಮದಾತನರಿತರೆ ಸರ್ವೋತ್ಕೃಷ್ಟ! (ಅ)
-ನನ್ಯ ವಿಶ್ವಾಸವಿದ್ದರೆ ಸರ್ವೋತ್ಕೃಷ್ಟ!
ಕರ್ತವ್ಯನಿಷ್ಠನಾದರೆ ಸರ್ವೋತ್ಕೃಷ್ಟ!
ನಿತ್ಯ ಸೇವಾರ್ಥಿಯಾದರೆ ಸರ್ವೋತ್ಕೃಷ್ಟ! (ದು)
-ಷ್ಟ ಸಹವಾಸ ಬಿಟ್ಟರೆ ಸರ್ವೋತ್ಕೃಷ್ಟ!
ಸದಾಜ್ಞಾನಬದ್ಧನಾದರೆ ಸರ್ವೋತ್ಕೃಷ್ಟ! (ಸ)
-ರ್ವೋತ್ತಮನವನೆಂದರೆ ಸರ್ವೋತ್ಕೃಷ್ಟ! (ತ)
-ತ್ಕೃಪಾ ಬಲವೊಂದಿದ್ದರೆ ಸರ್ವೋತ್ಕೃಷ್ಟ! (ಇ)
-ಷ್ಟ, ನಿರಂಜನಾದಿತ್ಯ ಮಾತಾಪಿತೇಷ್ಟ!!!
ಜನನೀ, ಜನಕರಾಟ ಕೂಸಿಗೆ ಕಾಟ! 6(3414)
(ಮ)-ನಸಿಜಗಾಗಿ ಆಯ್ತವರಿಬ್ಬರ ಕೂಟ!
ನೀರಮೇಲಣ ಗುಳ್ಳೆಯಂಥಾ ಒಡನಾಟ!
ಜನಿಸುವಾಗ ಮಗು ತಾಯಿಗೆ ಒದ್ದಾಟ!
(ತ)-ನಯ ಬೆಳೆದೆಂತೆಲ್ಲಾ ಅವನ ಹುಚ್ಚಾಟ!
ಕಣ್ಣೀರು ಸುರಿಸುತ್ತ ತಾಯ್ತಂದೆಯರೂಟ!
ರಾತ್ರಿ, ಹಗಲೆಲ್ಲಾ ಮೂವರಿಗೂ ಪೇಚಾಟ!
(ಆ)-ಟಕ್ಕಾಗಿದ್ದ ಕೂಟದಲ್ಲೀಗ ಹೊಡೆದಾಟ!
ಕೂಸ್ಬೆಳ್ದು ಕೂಸಿಗ್ತಂದೆಯಾದ್ರದೊಂದು ನೋಟ!
ಸಿಕ್ಕಲಾರದು ಶಾಂತಿ ಹತ್ತಿದರೀಛಟ!
(ಹೇ)-ಗೆ ಬಾಳ್ಬೇಕೆಂಬುದಕ್ಕೆ ಪ್ರತಿದಿನ ಪಾಠ!
ಕಾರ್ಯನಿರತ ಸಾಧಕನಪ್ಪ ಸಾಮ್ರಾಟ!
(ದಿ)-ಟ ನಿರಂಜನಾದಿತ್ತಾತ್ಮನೇ ಆ ಸಾಮ್ರಾಟ!!!
ಜನವೇನೆಂದರೇನು? ನನಗಿರಲಿದೇ ಹುಚ್ಚು! 1(81)
ನನಗೆ ಜನ್ಮವಿತ್ತವನೇ ನನಗತಿ ಹೆಚ್ಚು!
ವೇಷಭೂಷಣಗಳಾಸೆಯೆನಗಿಲ್ಲಾ ಹುಚ್ಚು!
ನೆಂಟ ಭಂಟನಾದೆನ್ನಯ್ಯ ನನಗತ್ಯಂತ ಹೆಚ್ಚು!
ದನ, ಧನ ಕೊಡಿಡಬೇಕೆಂದೆನಗಿಲ್ಲಾ ಹುಚ್ಚು!
ರೇಚಕ ಪೂರಕದೆನ್ನಲಾಡುವೆನ್ನಯ್ಯ ಹೆಚ್ಚು!
ನುತಿ ಸ್ತುತಿಗಳಿಂದ ಗತಿಗೇಡು! ಬೇಡಾ ಹುಚ್ಚು!
“ನ ಗುರೋರಧಿಕಂ” ಭಜನೆಯೇ ನನಗೆ ಹೆಚ್ಚು!
ನರ, ನಾರಿಯರ ಕೂಡಿ ಕುಣಿತ ಸಾಕಾ ಹುಚ್ಚು!
ಗಿರಿರಾಜಗುರು ಶಿವಾನಂದನೆನಗೆ ಹೆಚ್ಚು!
ರಮಿಸೆನಿನ್ಯಾರಲ್ಲೂ! ನನಗೇಕಿತರ ಹುಚ್ಚು!
ಲಿಪಿಗ ಗೋಚರನಾದಾದಿತ್ಯನೆನಗೆ ಹೆಚ್ಚು!
ದೇಅ, ದೇವಿಯರೆಂಬ ಭೇದವೆನಗಿಲ್ಲಾ ಹುಚ್ಚು!
ಹುಟ್ಟು ಸಾವುಗಳ ಕಟ್ಟಿಲ್ಲದೆನ್ನ ಗುರು ಹೆಚ್ಚು! (ಹು)
-ಚ್ಚು! ದತ್ತ ನಿರಂಜನಾದಿತ್ಯ ತಾನಾಗಿಹಾ ಹುಚ್ಚು!!!
ಜನಿವಾರ ಹಾಕಿಕೊಂಡ್ರಾಯ್ತೇನು? 5(2695)
ನಿತ್ಯಾನಿತ್ಯ ವಿವೇಕ ಬಂತ್ತೇನು?
ವಾದ, ಭೇದ ನಿರ್ನಾಮವಾಯ್ತೇನು?
(ಪ)ರಧನದಾಸೆ ಬಿಟ್ಟು ಹೋಯ್ತೇನು?
ಹಾದರ ಬುದ್ಧಿ ಹಾರಿ ಹೋಯ್ತೇನು?
ಕಿವಿ, ಬಾಯಿ ಮುಚ್ಚಿಕೊಂಡಾಯ್ತೇನು?
ಕೊಂಗರ ಸಂಗ ತ್ಯಜಿಸಿದ್ಯೇನು? (ಹೆಂ)
-ಡ್ರಾಸೆ, ಮಕ್ಳಾಸೆ ಕಮ್ಮಿ ಆಯ್ತೇನು? (ಸಾ)
-ಯ್ತೇನೆಂಬ ಭಯ ಲಯವಾಯ್ತೇನು? (ನೀ)
-ನು ನಿರಂಜನಾದಿತ್ಯನಾದ್ಯೇನು???
ಜನುಮ ಭೋಗಿಸಲಿಕಾಗಯ್ಯಾ! (ಅ) 1(377)
-ನುಮಾನವಿಲ್ಲೆಲ್ಲಾ ನಿನ್ನಿಂದಯ್ಯಾ!
ಮನಸು ನಿನ್ನಂತಾಗಬೇಕಯ್ಯಾ!
ಭೋಗ, ಭಾಗ್ಯವದು ನಿಜವಯ್ಯಾ!
ಗಿರಿಯನೆತ್ತಿದ್ದು ಸತ್ಯವಯ್ಯಾ!
ಸರ್ವಶಕ್ತ ನೀನಾಗಿಹೆ ಅಯ್ಯಾ! (ಆ)
-ಲಿಸಬೇಕು ನಿನ್ನ ಗೀತೆಯಯ್ಯಾ!
ಕಾಣಬೇಕು ತತ್ವಾರ್ಥವನಯ್ಯಾ!
ಗತಿ ನೀನೆಂದು ನಂಬಿಹೆನಯ್ಯಾ! (ಅ)
-ಯ್ಯಾ! ನಿರಂಜನಾದಿತ್ಯ ಭೋಗ್ಯಯ್ಯಾ!!!
ಜನ್ಮ ಜನ್ಮಕ್ಕೂ ಜೀವರಾಗಿರಲಿಕ್ಕೆಲ್ಲಾ ಕಲಾಪ! (ತ) 6(4362)
-ನ್ಮಯರಾಗಿ ನಿತ್ಯಮುಕ್ತರಾದಾಗ ಇಲ್ಲ ಕಲಾಪ!
ಜನನ, ಮರಣಕ್ಕೆ ಕಾರಣ ವಿವಿಧ ಕಲಾಪ! (ಮ)
-ನ್ಮಥನಿಗೆ ಬಹಳಾನಂದ ವಿಧ ವಿಧ ಕಲಾಪ! (ತ)
-ಕ್ಕೂಟವನ್ನಿಕ್ಕದ ಯಾವುದಿದೊಂದೂ ಕೀಳುಕಲಾಪ!
ಜೀತಮುಕ್ತರಾದಬಳಿಕೇನಿರುವುದು ಕಲಾಪ? (ಅ)
-ವರಿವರೆಂಬ ಭಿನ್ನ, ಭೇದವಿರುವಾಗ ಕಲಾಪ!
ರಾಮಭಕ್ತಾಂಜನೇಯನಿಗಿಲ್ಲ ಲೌಕಿಕ ಕಲಾಪ! (ಯೋ)
-ಗಿರಾಜ ಅರ್ಧನಾರೀಶ್ವರಸತತ ನಿಷ್ಕಲಾಪ! (ನ)
-ರರಿವನನ್ನರಿಯದೇ ಮಾಡುವರು ವೃಥಾಲಪ!
ಲಿಪಿಬ್ರಹ್ಮನದ್ದನ್ನು ಬೈಯ್ಯುವುದು ಅವರ ಕೋಪ! (ಬೆ)
-ಕ್ಕೆ ಯುಕ್ಕಿದಾಗ ಹೇಳಿಕೊಳ್ಳುವರು ತಮ್ಮ ಪ್ರತಾಪ! (ಚೆ)
-ಲ್ಲಾಪಿಲ್ಲಿಗೊಂಡ ಮನಸ್ಸು ಮಾಡುವುದಮಿತಪಾಪ!
ಕರುಣಿಸಿ ಕಾಪಾಡಬೇಕಿದನ್ನು ಕೈಲಾಸಾಧಿಪ! (ಹಾ)
-ಲಾಹಲವನ್ನೇ ಜೀರ್ಣಿಸಿಕೊಂಡವನೀಗಣಾಧಿಪ!
ಪತಿತ ಪಾವನ ನಿರಂಜನಾದಿತ್ಯಾ ಗಣಾಧಿಪ!!!
ಜನ್ಮ ದಿನ ನಾನೆಂದಿತಾ ಪೂರ್ಣಿಮಾ! [ಚಿ] 3(1201)
-ನ್ಮಯರೂಪಿ ನಾನೆಂದಿತಾ ಪೂರ್ಣಿಮಾ!
ದಿವ್ಯ ಜ್ಯೋತಿಯದೆಂದಿತಾ ಪೂರ್ಣಿಮಾ!
‘ನಮಃ ಶಿವಾಯ’ ವೆಂದಿತಾ ಪೂರ್ಣಿಮಾ!
ನಾದಸ್ವರೂಪಾನೆಂದಿತಾ ಪೂರ್ಣಿಮಾ!
ನೆಂಟನಾನೆಲ್ಲಕ್ಕೆಂದಿತಾ ಪೂರ್ಣಿಮಾ!
ದಿನಕರಾತ್ಮಾನೆಂದಿತಾ ಪೂರ್ಣಿಮಾ!
ತಾರಕನಾಮಾನೆಂದಿತಾ ಪೂರ್ಣಿಮಾ!
ಪೂರ್ಣವಾದದಿದೆಂದಿತಾ ಪೂರ್ಣಿಮಾ! (ವ)
-ರ್ಣಿಪುದೆಂತದನೆಂದಿತಾ ಪೂರ್ಣಿಮಾ!
ಮಾತೆ ನಿರಂಜನಾದಿತ್ಯಾ ಪೂರ್ಣಿಮಾ!!!
ಜನ್ಮ ನಿರಂಜನಾದಿತ್ಯನಿಗಾಗಿರ್ಲಿ! (ತ) 5(3018)
-ನ್ಮಯತೆ ಸತತ ಅವನಲ್ಲಿ ಇರ್ಲಿ!
ನಿತ್ಯಾನಿತ್ಯ ವಿಚಾರವಾಗುತ್ತಾ ಇರ್ಲಿ!
ರಂಭೆ, ಊರ್ವಶಿಯರಾಸೆ ಸತ್ತು ಹೋಗ್ಲಿ!
ಜಗಜೀವನ ಭಯ ಭಕ್ತಿಯಿಂದಾಗ್ಲಿ!
ನಾಮ ಭಜನೆ ಎಲ್ಲೆಲ್ಲೂ ಆಗುತ್ತಿರ್ಲಿ!
ದಿಗ್ದಿಗಂತದಲ್ಲೂ ಪ್ರತಿಧ್ವನಿಯಾಗ್ಲಿ! (ಪ್ರ)
-ತ್ಯಕ್ಷ ದೇವರವನೆಂಬ ಅರಿವಾಗ್ಲಿ!
ನಿತ್ಯಾನಂದವನ್ನವನು ಕರುಣಿಸಿ!
ಗಾರುಡಿಯಾಟಕ್ಕೆ ಮನ ಸೋಲದಿರ್ಲಿ!
ಗಿರಿಯಂತೆ ಮನಸ್ಸಚಲವಾಗಿರ್ಲಿ! (ಇ)
-ರ್ಲಿ ನಿರಂಜನಾದಿತ್ಯನ ದಯೆಯಿರ್ಲಿ!!!
ಜನ್ಮದಾತನ ಸೇವೆಯಾಜನ್ಮವಿರಲಿ! [ಉ] 4(2284)
-ನ್ಮತ್ತನಾಗಿ ಮನ್ಮಥಗಾಳಾಗದಿರಲಿ!
ದಾರಿ ಗುರುಪಾದದತ್ತ ಸಾಗುತ್ತಿರಲಿ!
ತಪ್ಪೊಪ್ಪುಗಳ ಹೊಣೆ ಅವನಿಗಿರಲಿ!
ನಡೆ, ನುಡಿಗಳವನೇ ಸರಿ ಮಾಡಲಿ!
ಸೇರಿಸಿ ಸಜ್ಜನರಾತ್ಮ ಶಾಂತಿ ಕೊಡಲಿ!
ವೆಚ್ಚ ಆದಾಯಗಳ ಹುಚ್ಚು ಬಿಡಿಸಲಿ!
ಯಾತ್ರೆ ಅಂತರ್ಯೂಮಿಯ ಚಿಂತನೆಗಾಗಲಿ!
ಜಡದೇಹದಭಿಮಾನ ತೊಲಗಿಸಲಿ! (ಚಿ)
-ನ್ಮಯ ತಾನೆಂಬಾತ್ಮಜ್ಞಾನದಲ್ಲಿರಿಸಲಿ!
ವಿಶ್ವಾಸವನ್ನವನೇ ಬಲಪಡಿಸಲಿ! (ನ)
-ರಜನ್ಮವೀ ರೀತಿ ಸಾರ್ಥಕಗೊಳಿಸಲಿ! (ಕ)
-ಲಿಮಲ ನಿರಂಜನಾದಿತ್ಯ ಕಳೆಯಲಿ!!!
ಜನ್ಮದಾತಾ ಗುರು ಉಮಾನಾಥ! (ತ) 2(660)
-ನ್ಮಯಾತ್ಮಾ ಶ್ರೀಗುರು ಮುಕ್ತನಾಥ!
ದಾತ, ನಾಥಾ ಗುರು ಭೂತನಾಥ!
ತಾತಾ, ಪಿತಾ ಗುರು ಪ್ರೇತನಾಥ!
ಗುಹ, ಶಿವಾ ಗುರು ಮಾಯಾನಾಥ! (ವ)
-ರುಣಾರುಣ ಗುರು ದಿನಾನಾಥ!
ಉತ್ತಮಾಂಗ ಗುರು ಚಿತ್ತನಾಥ!
ಮಾರಹರ ಗುರು ಗೌರೀನಾಥ!
ನಾಮಾನಂತ ಗುರು ದತ್ತನಾಥ! (ನಾ)
-ಥ ಶ್ರೀ ನಿರಂಜನಾದಿತ್ಯ ನಾಥ!!!
ಜಪ ತಪವೇಕೆ ಮಾಡಬೇಕು? 3(1180)
ಪರಮಾತ್ಮನಾಗಲದು ಬೇಕು!
ತಪಸ್ಸು ಸದಾ ಸಾಗಬೇಕು!
ಪತಿತಾವಸ್ಥೆ ತೊಲಗಬೇಕು!
ವೇಷ, ಭೂಷಣಾಸೆ ಹೋಗಬೇಕು!
ಕೆಡುಕು ಯೋಚನೆ ಬಿಡಬೇಕು!
ಮಾತುಗಳೆಲ್ಲಾ ನಿಲ್ಲಿಸಬೇಕು! (ಮ)
-ಡದಿ ಮಹೇಶನಿಗಾಗ ಬೇಕು!
ಬೇಸರ ಬಿಟ್ಟು ಭಜಿಸಬೇಕು!
ಕುಮಾರ ನಿರಂಜನಾದಿತ್ಯಕ್ಕು!!!
ಜಪ, ತಪವಿರುವುದು ನಿತ್ಯ ಶಾಂತಿಗಾಗಿ! 1(96)
ಪಡಲೇಕೆ ದುಃಖ ಪದಾರ್ಥಾಪಹಾರಕಾಗಿ?
ತಳಮಳವೇಕೆಂದಿಹ ಗುರುವಿದಕಾಗಿ!
ಪತಿತರಾದರು ಕದ್ದು, ಆಸೆ ಬರಲಾಗಿ!
ವಿಷಬೀಜ ಬಿತ್ತಿದರು ದುರಾಸೆಯಿಂದಾಗಿ!
ರುಜುಮಾರ್ಗ ಬಿಡದಿರಬೇಕು ಅದಕಾಗಿ!
ವುಪೇಕ್ಷೆಯೊಂದೇ ಇರಲಿ ಸದಾ ಮಾಯೆಗಾಗಿ!
ದುರ್ವಿಷಯಾಸಕ್ತಿ ಸಾಯಲಿ ನಿರ್ಮೂಲವಾಗಿ!
ನಿನಗೇನಾಯ್ತು ಸುಖ, ಅದೆಲ್ಲಾ ಇರಲಾಗಿ!
ತ್ಯಜಿಸಾ ಚಿಂತೆ! ನಾನಿರುವೆನೆಲ್ಲವೂ ಆಗಿ!
ಶಾಂತಿ ಜೀವನಕಿರಬೇಕು ನಿರ್ಮೋಹಿಯಾಗಿ!
ತಿಳಿದೆನ್ನಾದರ್ಶದಂತೆ ನೀನಿರೆನಗಾಗಿ!
ಗಾಳಿಗೋಪುರದಾಸೆ ಹೋಗುತಿದೆ ಹಾಳಾಗಿ!
ಗಿರಿ, ನಿರಂಜನಾದಿತ್ಯ ದತ್ತನಾಗೊಂದಾಗಿ!!!
ಜಪವೇಕೆ ಸದಾ ಮಾಡಬೇಕು? 4(1492)
ಪರಮಾತ್ಮನಾಗಲದು ಬೇಕು!
ವೇಶ್ಯಾವೃತ್ತಿ ಸಾಯಲದು ಬೇಕು!
ಕೆಲಸ ಸಿದ್ಧಿಸಲದು ಬೇಕು!
ಸರ್ವೇಂದ್ರಿಯ ಜಯಕ್ಕದು ಬೇಕು!
ದಾಸಾಂಜನೇಯನಾಗಲದು ಬೇಕು!
ಮಾಯಾಮೃಗ ಕೊಲ್ಲಲದು ಬೇಕು! (ಕೋ)
-ಡಗರಾತ್ಮೋದ್ಧಾರಕ್ಕದು ಬೇಕು!
ಬೇಡದಂತಿರಲಿಕ್ಕದು ಬೇಕು! (ಬೇ)
-ಕು, ನಿರಂಜನಾದಿತ್ಯಾಗಬೇಕು!!!
ಜಯ ಗಾಳಿ ಬೀಸುತಿದೆ ನಿನ್ನ ಮೇಲೆ! 4(2257)
ಯಮಾನುಗ್ರಹವಾಯ್ತೀಗ ನಿನ್ನ ಮೇಲೆ!
ಗಾಳಿಗೋಪುರ ಕಟ್ಟಬೇಡಿನ್ನುಮೇಲೆ! (ನ)
-ಳಿನ ಸಖ ನಿನಗಾಪ್ತನಾದಮೇಲೆ!
ಬೀಳಬೇಡ ವಿಷಯಸುಖಕ್ಕಿನ್ಮೇಲೆ!
ಸುಶೀಲನೀನಾಗಿರಬೇಕಿನ್ನುಮೇಲೆ!
ತಿನ್ನು ಪ್ರಸಾದವೆಂದನ್ನವ ನಿನ್ಮೇಲೆ!
ದೆವ್ವಗಳ ನಂಬಬಾರದಿನ್ನು ಮೇಲೆ!
ನಿಶ್ಚಲ ಭಕ್ತನಾಗಿರಬೇಕಿನ್ಮೇಲೆ! (ನಿ)
-ನ್ನ ನೀನರಿತು ಸುಖಿಯಾಗಿರಿನ್ಮೇಲೆ!
ಮೇಲ್ಮೇಲೆ ಗುರುಧ್ಯಾನ ಮಾಡಿನ್ನುಮೇಲೆ (ಮಾ)
-ಲೆ ನಿರಂಜನಾದಿತ್ಯಗೆ ಹಾಕಿನ್ಮೇಲೆ!!
ಜಯ ಜಗದಂಬಾ ಇಂದಿರಾ! (ಮಾ) 4(1797)
-ಯವಾಗಲನ್ಯಾಯ ಇಂದಿರಾ!
ಜಗಳ ಸಾಕಿನ್ನು ಇಂದಿರಾ!
ಗರಿಷ್ಠಳಾಗ್ಯಾಳು ಇಂದಿರಾ!
ದಂಭ, ದರ್ಪ ಬೇಡ ಇಂದಿರಾ!
ಬಾಯಿ, ಕೈಯ್ಯೊಂದಾಗ್ಲಿ ಇಂದಿರಾ!
ಇಂದಿನದ್ದಿಂದಾಗ್ಲಿ ಇಂದಿರಾ!
ದಿವ್ಯ ಜ್ಞಾನಿಯಾಗು ಇಂದಿರಾ! (ಹ)
-ರಾ ನಿರಂಜನಾದಿತ್ಯೇಂದಿರಾ!!!
ಜಯ ಜಯವೆಂದು ಹಾಡಪ್ಪಾ! 4(1523)
ಯತಿಗಣ ಪ್ರಾಸದಿಂದಪ್ಪಾ!
ಜನ್ಮ ಪಾವನವಪ್ಪುದಪ್ಪಾ!
ಯದುಪನಾನಂದವಿದಪ್ಪಾ!
ವೆಂಕಟೇಶನ ಕೊಂಡಾಡಪ್ಪಾ!
ದುರಿತ ದೂರವಾಗ್ವುದಪ್ಪಾ!
ಹಾಸು, ಹೊಕ್ಕು ಬಾಳಾಗಿದಪ್ಪಾ! (ಬ)
-ಡತನವಿದ್ದರೇನಾಯ್ತಪ್ಪಾ? (ಅ)
-ಪ್ಪಾ, ನಿರಂಜನಾದಿತ್ಯಪ್ಪಾ!!!
ಜಯ ನಿರಂಜನ ಜಯ! 1(232)
ಯದುಪ ಭಜನ ಪ್ರಿಯ!
ನಿಶ್ಚಯ ಮನಕಭಯ!
ರಂಜನೆ ಐಹಿಕಾಪ್ರಿಯ!
ಜಪವೇ ಸರ್ವದಾಭಯ!
ನಮನ ವಾಮನ ಪ್ರಿಯ!
ಜಗತ್ತು ಚಂಚಲ ಭಯ!
ಯತಿ ನಿರಂಜನ ಪ್ರಿಯ!!!
ಜಯ ಭಾರತ ಕೊಟ್ಟ ಬಾಹು ಬಲ! (ನ) 2(488)
-ಯ, ವಿನಯದಿಂದ ತುಂಬಿದ ಬಲ!
ಭಾಗ್ಯವಿದು ಭೂಮಂಡಲಕೆ ಬಲ! (ಅ)
-ರಸಿ ಬಂದನುಗ್ರಹಿಸುವ ಬಲ! (ಮ)
-ತ ಸರ್ವ ಸಮನ್ವಯಕೆಂಬ ಬಲ!
ಕೊಟ್ಟುದನಿಟ್ಟುಕೊಂಬುದೆಲ್ಲಾ ಬಲ! (ಅ)
-ಟ್ಟಹಾಸವಿಲ್ಲದಿಷ್ಟ ಭಾವ ಬಲ!
ಬಾಲಕ ಜಗಕೆ ನಾನೆಂಬ ಬಲ!
ಹುಸಿ, ಮೋಸವಿಲ್ಲದಮಲ ಬಲ!
ಬಲ ಮಹಾಬಲ ಶ್ರೀಗುರು ಬಲ! (ಬಾ)
-ಲ ನಿರಂಜನಾದಿತ್ಯ ಸರ್ವಬಲ!!!
ಜಯ ವಿಜಯ ರಾಮ ಜಯ! 2(617)
ಯಜ್ಞ, ಯಾಗ, ಭಜನೆ ಜಯ!
ವಿಮಲ ನಾಮ ಮನೋ ಜಯ!
ಜರಾಜನ್ಮನಾಶಾತ್ಮ ಜಯ!
ಯಮ, ನಿಯಮಾರೋಗ್ಯ ಜಯ!
ರಾಗಾನುರಾಗ ತ್ಯಾಗ ಜಯ!
ಮದ, ಮತ್ಸರ ದೂರ ಜಯ!
ಜಯ, ವಿಮಲ ಶ್ರೀ ವಿಜಯ! (ಜ)
-ಯ, ನಿರಂಜನಾದಿತ್ಯ ಜಯ!!!
ಜಯ ಸದ್ಗುರು ಚರಣಕ್ಕೆನ್ನಿರೋ! (ಭ) 4(2000)
-ಯಹರ ಪರಮೇಶ್ವರನ್ನೆನ್ನಿರೋ!
ಸಚ್ಚಿದಾನಂದ ರೂಪವನೆನ್ನಿರೋ! (ಮ)
-ದ್ಗುರು ಸ್ವಾಮಿ ಶ್ರೀ ಶಿವಾನಂದೆನ್ನಿರೋ! (ಕ)
-ರುಣಾಸಾಗರನವನೆಂದೆನ್ನಿರೋ!
ಚರಾಚರಾತ್ಮನವನೆಂದೆನ್ನಿರೋ! (ಧೀ)
-ರ, ಗಂಭೀರ ಸ್ವಭಾವ್ಯವನೆನ್ನಿರೋ! (ಗ)
-ಣನಾಯಕನಯ್ಯನವನೆನ್ನಿರೋ! (ಅ)
-ಕ್ಕೆ ಲೋಕಕಲ್ಯಾಣವನಿಂದೆನ್ನಿರೋ! (ತ)
-ನ್ನಿ, ಹಾರ, ತುರಾಯಿಯವಗೆನ್ನಿರೋ! (ಬಾ)
-ರೋ, ನಿರಂಜನಾದಿತ್ಯವನೆನ್ನಿರೋ!!!
ಜಯ ಸುಶೀಲ! ವಿಜಯ ಲೀಲ! 1(139)
ಯಮ ಸ್ವಧರ್ಮ! ನಿಯಮ ಕರ್ಮ!
ಸುಮ ಸುಂದರ! ಸುಮನ ಅರ!
ಶೀಲ ವಿಮಲ! ಸುಶೀಲ ಬಲ!
ಲಯ ಸಕಾಲ! ಪ್ರಳಯ ಕಾಲ!
ವಿಧಿ ಹರಣ! ದುರ್ವಿಧಿ ರಣ!
ಜಗ ಜೀವನ! ಅಜಗ ಘನ!
ಯತಿ ಸ್ವಸ್ಥಿತಿ! ಶ್ರೀಪತಿ ಸ್ಥಿತಿ!
ಲೀಲ ಅನಿಲ! ಸಲೀಲ ಜಲ!
ಲಕ್ಷ್ಯ ನಿರಂಜನಾದಿತ್ಯ ಬಾಲ!!!
ಜಯ ಸೂರ್ಯ ಚಂದ್ರರಿಂದ! (ಭ) 2(990)
-ಯವರಪಚಾರದಿಂದ!
ಸೂತ್ರವಿರಲ್ಮಣಿಗಂದ! (ಆ)
-ರ್ಯರಿದ್ದಂತಿರದರಿಂದ!
ಚಂಚಲತೆ ಮಾಯೆಯಿಂದ! (ಭ)
-ದ್ರ, ತತ್ವ ಚಿಂತನಾನಂದ! (ಆ)
-ರಿಂದೆಂದರಿಹದ ಚಂದ! (ಕಂ)
-ದ, ನಿರಂಜನಾರ್ಕನಿಂದ!!!
ಜಯ, ವಿಜಯ, ಸುಶೀಲದಿಂದ! 1(120)
ಯದುಪತಿ ಖ್ಯಾತಿ ಲೀಲೆಯಿಂದ!
ವಿಜಯಾನಾನಂದ ಸಖ್ಯದಿಂದ!
ಜರಾಸಂಧನಂದ ಮದದಿಂದ!
ಯಮಸೂನಾನಂದ ಧರ್ಮಯಿಂದ!
ಸುಧಾಮನಾನಂದ ಭಕ್ತಿಯಿಂದ!
ಶೀಲಾನಂದಾನಂದ ನಂದ ಕಂದ!
ಲಯಿಪುದಿವನ ರಾಧಾನಂದ! (ಇ)
-ದಿಂಗಿತವೇನೆಂಬೆ ಕ್ರೀಡಾನಂದ!
ದತ್ತ ನಿರಂಜನಾದಿತ್ಯಾನಂದ!!!
ಜಯವಾಗಲಿ ಗುರು ಪಾದಪದ್ಮಕ್ಕೆ! (ಭ) 2(883)
-ಯ ನಿವಾರಣಾ ಚರಣ ಕಮಲಕ್ಕೆ! (ದೇ)
-ವಾಸುರ ನರೋರಗ ವಂದ್ಯ ಪಾದಕ್ಕೆ!
ಗರುಡಗಮನ ಶ್ರೀ ಹರಿ ಪಾದಕ್ಕೆ! (ಬ)
-ಲಿಯ ಪಾತಾಳಕ್ಕೆ ತುಳಿದ ಪಾದಕ್ಕೆ!
ಗುರುಗುಹೇಶ್ವರನಮರ ಪಾದಕ್ಕೆ!
ರುಕ್ಮಿಣಿಯರಸ ಕೃಷ್ಣನ ಪಾದಕ್ಕೆ!
ಪಾರ್ವತೀರಮಣ ಶಿವನ ಪಾದಕ್ಕೆ!
ದತ್ತಾತ್ರೇಯನನಂತ ನಾಮ ಪಾದಕ್ಕೆ!
ಪತಿತ ಪಾವನ ರಾಮನ ಪಾದಕ್ಕೆ! (ಪ)
-ದ್ಮ ಪಾದಾನಂದ ಹನುಮನ ಪಾದಕ್ಕೆ! (ಅ)
-ಕ್ಕೆ, ಮಂಗಳ ನಿರಂಜನಾದಿತ್ಯಾತ್ಮಕ್ಕೆ!!!
ಜಯಾ ಶ್ರೀ ರಾಮ ಜಯ! 2(653)
ಯಾಗ, ಯೋಗಾತ್ಮ ಜಯ!
ಶ್ರೀ ಸೀತಾರಾಮ ಜಯ!
ರಾಮಾ ಶ್ರೀರಾಮ ಜಯ!
ಮಲ ನಿರ್ನಾಮ ಜಯ!
ಜಲಜಾಪ್ತಾ ರಾಮ ಜಯ! (ಜ)
-ಯ ನಿರಂಜನ ಜಯ!!!
ಜರಾಯುಜಾಂಡಜಕ್ಕೆ ಶಿವ ಪ್ರಸಾದ! (ನಿ) 4(1733)
-ರಾಯಾಸದಿಂದಾ ಶಿವರಾತ್ರಿ ಪ್ರಸಾದ! (ಆ)
-ಯುರ್ಬಲಾತ್ಮ ಬಲಾದಿಗೆಲ್ಲಾ ಪ್ರಸಾದ! (ನಿ)
-ಜಾಂಶವರಿತಾಗ ಸಾರ್ಥಕಾ ಪ್ರಸಾದ!
ಡಮರುಧರನವತಾರಾ ಪ್ರಸಾದ!
ಜಗಜ್ಜನನಿಗಾಯ್ತಾ ವರ ಪ್ರಸಾದ! (ಅ)
-ಕ್ಕೆ ಲೋಕ ಕಲ್ಯಾಣವೆಂದಿತ್ತನಾ ಪ್ರಸಾದ!
“ಶಿವಾಯ ನಮಃ ಓಂ” ಮಹಿಮಾ ಪ್ರಸಾದ!
ವರ ಗುರುದತ್ತ ಸ್ವರೂಪಾ ಪ್ರಸಾದ!
ಪ್ರವೃತ್ತಿ, ನಿವೃತ್ತಿಪ್ರದವಾ ಪ್ರಸಾದ!
ಸಾವು, ನೋವು ತಪ್ಪಿಸುವುದಾ ಪ್ರಸಾದ!
ದತ್ತ ನಿರಂಜನಾದಿತ್ಯಾತ್ಮ ಪ್ರಸಾದ!!!
ಜಲಜಮಿತ್ರನಾಪ್ತ ಆಂಜನೇಯ! 1(203)
ಲಕ್ಷ್ಯವಿವನದು ಶ್ರೀರಾಮ ಜಯ!
ಜನನ ಮರಣ ವಿದೂರ ಭಯ!
ಮಿತ್ರನೊಲಿದವಗೆಲ್ಲಾ ವಿಜಯ!
ತ್ರಯಲೋಕ ವಿಖ್ಯಾತನಾದ ಜೇಯ!
ನಾಮ ಜಪವಿವನಿಗತಿ ಪ್ರಿಯ! (ಆ)
-ಪ್ತ ಶ್ರೀರಾಮಭಕ್ತ ಸದಾ ವಿನಯ!
ಆಂಜನೇಯನಾನಂದ ಬ್ರಹ್ಮಚರ್ಯ!
ಜಗದ್ವಂದ್ಯನಿವ ನಿತ್ಯ ನಿರ್ಭಯ!
ನೇಮಾನುಷ್ಠಾನದಲಿ ಅದ್ವಿತೀಯ!
ಯಜಮಾನ ನಿರಂಜನಾದಿತ್ಯೇಯ!!!
ಜವ್ವನವಿದ್ದಾಗ ಜೋಗುಳ! [ಅ] 5(3193)
-ವ್ವ ಅಜ್ಜಿಯಾದಾಗ ಬೈಗಳ!
ನಷ್ಟ, ಕಷ್ಟದಾಗ ಜಗಳ!
ವಿಷಯ ಸುಖಕ್ಕೆ ಹೇರಳ! (ಗು)
-ದ್ದಾಟವಾದಾಗ ಕೈಗೆ ಕೋಳ!
ಗತಿಗೆಟ್ಟಾಗಾರ್ಕೇಳ್ವರ್ಗೋಳ?
ಜೋಡಿದಾರಗಾಸ್ತಿ ಬಹಳ!
ಗುತ್ಗೆಯವನೀಗ ಮಾತ್ಕೇಳ! (ತಾ)
-ಳ ನಿರಂಜನಾದಿತ್ಯಾ ಗೋಳ!!!
ಜಾಂಬವ ರಾಮಸೇವಾ ನಾಯಕ! 1(202)
ಬಳಲಿದ ಭಕ್ತಿ ವಿಧಾಯಕ!
ವನಚರ ವಾನರ ನಾಯಕ!
ರಾತ್ರಿ, ಹಗಲೆನ್ನದ ಭಾವಿಕ!
ಮತಿ, ಗತಿಗೀತ ವಿನಾಯಕ!
ಸೇತು ಬಂಧನದ ಸಂಚಾಲಕ!
ವಾಸುದೇವ ಮಾವ ಭೂಪಾಲಕ!
ನಾಮ ಜಪ ಸದಾ ಮಾನಸಿಕ!
ಯಮ ಫಾಶಕಂಜದ ಮುದುಕ!
ಕರ್ತ, ನಿರಂಜನಾದಿತ್ಯ ಮೂಕ!!!
ಜಾಗ ಬದಲಾಯಿಸಲಾ? 1(71)
ಗಮನೊಂದಿರಬೇಕೆಲಾ!
ಬದಲಿಸಿದರೇನೆಲಾ?
ದಯೆಯೆಲ್ಲಿಲ್ಲಿದ್ದರೊಂದೆಲಾ!
ಲಾಲಿಪನೆಲ್ಲೆಡೆಯಲಾ!
ಯಿರಿಸಖಂಡ ಭಾವಲಾ!
ಸಲಹುವನವನಲಾ!
ಲಾಯಕ ನಿರಂಜನಲಾ!!!
ಜಾಣ ಕೋಣನೇಕಾದಾನು? (ಹ) 5(2824)
-ಣಕ್ಕಾಶಿಪುದಿಲ್ಲವನು!
ಕೋಪಿಷ್ಠನಾಗಿಲ್ಲವನು! (ತೃ)
-ಣದಲ್ಲೂ ತಾನೆನ್ನುವನು!
ನೇತ್ರಾನಂದಿಯಲ್ಲವನು!
ಕಾರ್ಯನಿರತನವನು!
ದಾಸದಾಸನಾಗಿಹನು! (ತಾ)
-ನು ನಿರಂಜನಾದಿತ್ಯಾನು!!!
ಜಾತಿ ಉಳಿಯಲಿ, ಅನೀತಿ ಅಳಿಯಲಿ 6(4057)
ತಿಳುವಳಿಕೆ ಎಲ್ಲರಿಗೂ ಉಂಟಾಗಲಿ!
ಉತ್ತಮಾದರ್ಶಕ್ಕಲಕ್ಷ್ಯವಿಲ್ಲವಿರಲಿ! (ತು)
-ಳಿಯುವ ಮನೋಭಾವನ್ಯರನ್ನು ಸಾಯಲಿ!
ಯಶಸ್ಸು ಸಕಲರಿಗೂ ಪ್ರಾಪ್ತವಾಗಲಿ! (ಮಾ)
-ಲಿನ್ಯ ಮನಸ್ಸಿನದ್ದಿಂದೇ ಮಾಯವಾಗಲಿ!
ಅವ್ರವರ ಕರ್ತವ್ಯ ಅವ್ರವರು ಮಾಡಲಿ!
ನೀಚೋಚ್ಛ ಕದನ ಅವಸಾನವಾಗಲಿ!
ತಿಮ್ಮಪ್ಪನಾಸ್ತಿ ತಿರಿದುಂಬುವರ್ಗಾಗಲಿ!
ಅನಾಚಾರಕ್ಕದುಪಯೋಗವಾಗ್ದಿರಲಿ! (ಆ)
-ಳಿನಿಂದರ್ಸನವರೆಗೂ ಸುಖವಾಗಲಿ! (ಕಾ)
-ಯ ಮೋಹ ಧ್ಯೇಯಸಿದ್ಧಿಗಾಗಿಲ್ಲದಿರಲಿ! (ಕ)
-ಲಿಮಲ ನಿರಂಜನಾದಿತ್ಯ ಕಳೆಯಲಿ!!!
ಜಾತಿ ಬೇಕಾಗಿಲ್ಲ! ನೀತಿ ಉಳಿದಿಲ್ಲ!! 1(190)
ತಿರುಗಬೇಕಿಲ್ಲ! ಹಗುರವಾಗಿಲ್ಲ!
ಬೇನೆ ಇಷ್ಟವಿಲ್ಲ! ಬಾವು ಇಳಿದಿಲ್ಲ!!
ಕಾಮ ಸುಖವಿಲ್ಲ! ರಾಮ ಮುಖವಿಲ್ಲ!!
ಗಿಡ ಹತ್ಬೇಕಿಲ್ಲ! ಹಣ್ಣು ಉದರ್ಲಿಲ್ಲ!! (ಅ)
-ಲ್ಲದ ಮಾಡ್ಬೇಕಿಲ್ಲ! ನಲ್ಲನ ಸೊಲ್ಲಿಲ್ಲ!!
ನೀಡು ಬೇಕಾಗಿಲ್ಲ! ಬೇಡು ಬಿಡಲಿಲ್ಲ!!
ತಿಥಿ ಹಾಕ್ಬೇಕಿಲ್ಲ! ಗತಿ ತಿಳೀಲಿಲ್ಲ!!
ಉರಿ ಹಚ್ಬೇಕಿಲ್ಲ! ಶೀತ ಹೋಗಲಿಲ್ಲ!! (ಅ)
-ಳಿಯುವಾಸೆ ಇಲ್ಲ! ಬಾಳು ನೇರಾಗಿಲ್ಲ!!
ದಿಕ್ಕು ದೆಸೆ ಇಲ್ಲ! ಹಕ್ಕು ಸಾಧಿಸಿಲ್ಲ!! (ಅ)
-ಲ್ಲಲ್ಲಾ, ನಿರಂಜನಾದಿತ್ಯನೆಲ್ಲಾ ಬಲ್ಲ!!!
ಜಾತಿ, ಮತ ಯಾವುದಾದರೇನು? 5(2840)
ತಿಪ್ಪೆಗುಂಡಿಯಾಗಬೇಡ ನೀನು!
ಮದ, ಮತ್ಸರ, ಬಿಡ್ಬೇಕು ನೀನು!
ತಪದಿಂದ ಶುದ್ಧವಾಗು ನೀನು!
ಯಾರ ಮಾತೂ ಆಡಬೇಡ ನೀನು! (ಕಾ)
-ವು ಪಡೆದ ಹಕ್ಕಿಯಾಗು ನೀನು!
ದಾರಿಯುದ್ದಕ್ಕೂ ಹಾಡಿ ಹಾರ್ನೀನು!
ದರ್ಶನದಿಂದ ಧನ್ಯನಾಗ್ನೀನು! (ಬೇ)
-ರೇನನ್ನೂ ಆಶಿಸಬೇಡ ನೀನು! (ಸೂ)
-ನು ನಿರಂಜನಾದಿತ್ಯಗೆ ನೀನು!!!
ಜಾತಿ, ಮತ, ಭೇದ ನಿನಗೇಕೋ ನಾಯಕಾ? (ನಿ) 4(2124)
-ತಿ, ರೀತಿಯಲ್ಲಿ ಶುದ್ಧ ನೀನಾಗೋ ನಾಯಕಾ!
ಮದ್ಯಪಾನದಿಂದ ಮತಿಗೇಡೋ ನಾಯಕಾ!
ತಪ್ಪಿ ನಡೆದರಪ್ಪನೊಪ್ಪನೋ ನಾಯಕಾ!
ಭೇದಿಸಿ ಕತ್ತಲೆಯಿಂದಿತ್ತ ಬಾ ನಾಯಕಾ! (ಉ)
-ದಯ ರವಿಯಂತೆ ಪ್ರಕಾಶಿಸೋ ನಾಯಕಾ!
ನಿನ್ನಾತ್ಮ ಸರ್ವಾತ್ಮನೆಂದರಿಯೋ ನಾಯಕಾ! (ಅ)
-ನವರತ ಗುರು ಧ್ಯಾನ ಮಾಡೋ ನಾಯಕಾ!
ಗೇರ್ಬೀಜದಂತವನಿಗಂಟಿರೋ ನಾಯಕಾ
ಕೋಪ ಬಿಟ್ಟಿವನಿಷ್ಟದಂತಿರೋ ನಾಯಕಾ! (ಅ)
-ನಾದರಾರಿಗೂ ತೋರಬೇಡವೋ ನಾಯಕಾ!
ಯಮ ಹೆಡತಲೆಯಲ್ಲಿಹನೋ ನಾಯಕಾ!
ಕಾಯುತಿಹಾ ನಿರಂಜನಾದಿತ್ಯ ನಾಯಕಾ!!!
ಜಾತಿ, ರೀತಿ, ಭೇದದಿಂದಾಯ್ತಪ್ಪಾ! 5(2910)
ತಿಳಿದವರಿಗೆಲ್ಲಾ ಒಂದಪ್ಪಾ!
ರೀತಿ ಆದರ್ಶವಾಗಿರ್ಬೇಕಪ್ಪಾ!
ತಿನ್ನಬಾರದು ಕೆಟ್ಟಾಹಾರಪ್ಪಾ!
ಭೇದ ಸದಾಚಾರದಿಂದಂತ್ಯಪ್ಪಾ!
ದಯೆ ಸರ್ವರಲ್ಲಿರಬೇಕಪ್ಪಾ! (ದಾ)
-ದಿಂಗಿತ ಮಗು ತಿಳಿಯದಪ್ಪಾ!
ದಾರಿ ಅವಳದು ಸರಿಯಪ್ಪಾ! (ತಾ)
-ಯ್ತನಕ್ಕೆ ಶಿರಬಾಗಬೇಕಪ್ಪಾ! (ಅ)
-ಪ್ಪಾ ನಿರಂಜನಾದಿತ್ಯಾ ತಾಯಪ್ಪಾ!!!
ಜಾತಿಯೆಂಬುದಕ್ಕೊಂದು ನೀತಿ ಇದೆ! (ನೀ) 6(4126)
-ತಿ ಪಾಲಿಪ ಜಾತೀಯತೆಯೆಲ್ಲಿದೆ? (ಸ್ತ್ರೀ)
-ಯೆಂಬುದರ ಮುಂದೆಲ್ಲಾ ಮಣ್ಣಾಗಿದೆ!
ಬುದ್ಧಿ ಮಲಿನವಾದ ಮೇಲೇನಿದೆ?
ದಯೆ, ದಾಕ್ಷಿಣ್ಯಗಳಿಲ್ಲದಾಗಿದೆ! (ತ)
-ಕ್ಕೊಂಬಾಗಿನುತ್ಸಾಹ ಕೊಡ್ವಾಗೆಲ್ಲಿದೆ?
ದುರಾಗ್ರಹವೆಲ್ಲೆಲ್ಲೂ ಹೆಚ್ಚಾಗಿದೆ!
ನೀಚತನ ತಾಂಡವವಾಡುತ್ತಿದೆ!
ತಿಳಿವಳಿಕೆ ಬೇಕಿಲ್ಲದಾಗಿದೆ!
ಇಹ ಸುಖದಾಸೆ ಮಿತಿಮೀರಿದೆ! (ಎ)
-ದೆ ನಿರಜನಾದಿತ್ಯನಂತೆಲ್ಲಿದೆ???
ಜಿತೇಂದ್ರಿಯ ನಾನೀಗಹುದು! (ಜಾ) 6(3756)
-ತೇಂದ್ರಿಯ ಸ್ತಬ್ದವಾಗಿಹುದು! (ಇಂ)
-ದ್ರಿಯದ ಭವಿಷ್ಯರಿಯದು!
ಯಮ, ನಿಯಮ, ಸಾಗಿಹುದು!
ನಾಮಜಪವಾಗುತ್ತಿಹುದು!
ನೀನೂ, ನಾನೂ ಒಂದೆಂದಿಹುದು!
ಗಮನ ಗುರಿಯಲ್ಲಿಹುದು!
ಹುಸಿಯಾಸೆಯಿಲ್ಲದಿಹುದು! (ಇಂ)
-ದು ನಿರಂಜನಾದಿತ್ಯಹುದು!!!
ಜಿನನಾಗು ಜಿತೇಂದ್ರಿಯನಾಗು! (ಮ) 4(1680)
-ನ ಬಂದಂತಾಡದಿರ್ಪವನಾಗು! (ಹೀ)
-ನಾಚಾರಾಚರಿಸದವನಾಗು!
ಗುಡಿಯೊಡೆಯನ ದಾಸನಾಗು!
ಜಿಹ್ವಾ ಚಾಪಲ್ಯ ಬಿಟ್ಟವನಾಗು! (ಜಾ)
-ತೇಂದ್ರಿಯದಧಿನಾಥ ನೀನಾಗು! (ನಿ)
-ದ್ರಿಸಿ ಕಾಲ ಕೊಲ್ಲದವನಾಗು! (ಭ)
-ಯ, ಭಕ್ತಿ ಭಾವಸಂಪನ್ನನಾಗು!
ನಾಮಜಪ ಮಾಡುವವನಾಗು! (ಮ)
-ಗು ಶ್ರೀ ನಿರಂಜನಾದಿತ್ಯಗಾಗು!!!
ಜೀತೇಂದ್ರಿಯಾಂಜನೇಯಾಶ್ರಯ! (ನ) 2(941)
-ತೇಂದ್ರಿಯಾಶಯಾ ಮಾಯಾಶ್ರಯ! (ಇಂ)
-ದ್ರಿಯ ವಿಷಯಾಸಕ್ತಿಹಾಶ್ರಯ! (ಭ)
-ಯಾಂಗ ಭವ ಸಂಬಂಧದಾಶ್ರಯ!
ಜರಾ, ಜನ್ಮ ದುಃಖಕಾಯಾಶ್ರಯ! (ತಾ)
-ನೇ ಜಾನಕೀರಾಮ ನಾಮಾಶ್ರಯ!
ಯಾಗ ಭೋಗ ಕಾಮ್ಯಕರ್ಮಾಶ್ರಯ!
ಶ್ರದ್ಧಾ, ಭಕ್ತಿ ಸತ್ಸಂಗದಾಶ್ರಯ! (ಜ್ಞೇ)
-ಯ ನಿರಂಜನಾದಿತ್ಯಾಶ್ರಯ!!!
ಜೀವ ಕುಣಿದಾ ಸಂಜೀವ ಕುಣಿದಾ! (ಜೀ) 4(1640)
-ವ ಶಿವೈಕ್ಯಾನಂದಾನೆಂದು ಕುಣಿದಾ!
ಕುಲ, ಗೋತ್ರಾತೀತಾನೆಂದು ಕುಣಿದಾ! (ವಾ)
-ಣಿಯಾಣ್ಮ ಬ್ರಹ್ಮ ನಾನೆಂದು ಕುಣಿದಾ! (ಸ)
-ದಾ ಸಚ್ಚಿದಾನಂದಾನೆಂದು ಕುಣಿದಾ!
ಸಂಕಟಹರ ನಾನೆಂದು ಕುಣಿದಾ!
ಜೀವಕೋಟ್ಯಂತರ್ಯಾಮೆಂದು ಕುಣಿದಾ!
ವರ ಗುರುದತ್ತಾನೆಂದು ಕುಣಿದಾ!
ಕುರುಕುಲ ಕಾಲಾನೆಂದು ಕುಣಿದಾ! (ರಾ)
-ಣಿ ದಾಕ್ಷಾಯಿಣ್ಯಾತ್ಮಾನೆಂದು ಕುಣಿದಾ! (ಇ)
-ದಾ ನಿರಂಜನಾದಿತ್ಯ ತಾ ನುಡಿದಾ!!!
ಜೀವ ಮಾರಣ ಹೋಮ ಮಹಾ ಹೋಮ!! 4(1748)
ವರ ಗುರುದತ್ತ ದೀಕ್ಷೆಯೂ ಹೋಮ!
ಮಾಯಾಂಬರ ಹರಿವ ರುದ್ರ ಹೋಮ!
ರಮೇಶೋಮೇಶರಿಗೂ ಬೇಕೀ ಹೋಮ! (ಗ)
-ಣಪ ತಾನೇ ತಾನಾಗಿರುವಾ ಹೋಮ!
ಹೋಮಕ್ಕಾಸಕ್ತ್ಯಾಹುತಿಯಪ್ಪಾ ಹೋಮ!
ಮಹೇಶ ದಿಗಂಬರನಾದಾ ಹೋಮ!
ಮದ, ಮತ್ಸರಳಿದು ಹೋದಾ ಹೋಮ!
ಹಾನಿ, ವೃದ್ಧಿಗಳೆಣಿಸದಾ ಹೋಮ! (ಅ)
-ಹೋರಾತ್ರ್ಯಾತ್ಮಾನಂದ ಸ್ಥಿತಿಗಾ ಹೋಮ! (ಮ)
-ಮ ನಿರಂಜನಾದಿತ್ಯಗಿಷ್ಟಾ ಹೋಮ!!!
ಜೀವನ ಕರ್ಮಕನುಗುಣವಾಗಿ ಸಾವಿರದೊಂಭೈನೂರೇಳರಲಿ ಜನ್ಮವಾಯ್ತು! 1(18)
ವಸುಧೆಗಿಳಿವಾಗಲೇ ಪಿತನಳಿದು ಭಾರ ತಾಯಿಯ ಮೇಲಾಯ್ತು!
ನಷ್ಟ ಕಷ್ಟಗಳಿಂದೈದಾರು ವರ್ಷಗಳು ಕಳೆದು ವಿದ್ಯಾರಂಭವಾಯ್ತು!
ದಯಾಮಯ ಪರಮೇಶ್ವರನ ಕೃಪೆಯಿಂದ ಸಾಕಷ್ಟು ವಿದ್ಯಾಭ್ಯಾಸವಯ್ತು!
ಆಗ ಉದ್ಯೋಗ ಮಾಡಿ ಸುಖವಾಗಿರಬೇಕೆಂಬ ಹಂಬಲವಾಯ್ತು!
ರುಕ್ಮಿಣೀರಮಣ ಗೋಪಾಲನೀ ಹಂಬಲವನೀಡೇರಿಸದಂತಾಯ್ತು!
ದಯೆಯೇಕೆ ಬಾರದೆಂಬ ಚಿಂತನೆಯಿಂದ ದಿಕ್ಕು ತೋಚದಂತಾಯ್ತು!
ಶಶಿಧರನ ಅನುಗ್ರಹದಿಂದಲ್ಲದಿದು ಬಗೆಹರಿಯದೆಂಬ ನಿರ್ಧರವಾಯ್ತು!
ಕಡು ಸಾಹಸದಿ ಗುರುಶಿವನ ಬಳಿಗೈದಿ ಸನ್ಯಾಸ ಪ್ಪಾಪ್ತವಾಯ್ತು!
ದತ್ತಗುರು ಕೃಪೆಯಿಂದವನ ಸೇವೆ ನಿತ್ಯ ಜೀವನಕುಂಟಾಯ್ತು!
ಕಳೆಯಿತಿಂತೀ ಐವತ್ತೊಂಬತ್ತು ಪ್ರಾಯದಲಿ ಅನುಭವ ಬಹಳಾಯ್ತು!
ತೆರೆದಿದೆಯೊಂದು ಮಹಾದ್ವಾರವೆಂಬರಿವೀಗುದಯವಾಯ್ತು!!!
ಜೀವನ ಕ್ರಮದಿಂದ ಜೀವನರ್ಥ! 5(2567)
ವರ ಗುರು ಸೇವಾಸಕ್ತ ಕೃತಾರ್ಥ!
ನಶ್ವರಕ್ಕಾಶಿಸುವ ಜನ್ಮ ವ್ಯರ್ಥ!
ಕ್ರಯಕ್ಕೆ ಸಿಗೋದಲ್ಲ ಪರಮಾರ್ಥ!
ಮನೋಜಯ ಉತ್ತಮ ಪುರುಷಾರ್ಥ! (ಅಂ)
-ದಿಂದಿನನುಭವದಿಂದಾಗ್ವುದರ್ಥ!
ದತ್ತ ಕೃಪೆಯಿಂದಾಗ್ಬೇಕು ಸಮರ್ಥ!
ಜೀವನ ಸರಳವಾದ್ರಾಗ್ದನರ್ಥ! (ಭ)
-ವ ಬಂಧನಕ್ಕೆ ಕಾರಣ ಅಪಾರ್ಥ!
ನರನಜ್ಞಾನದಿಂದಾಗಿರ್ಪ ಸ್ವಾರ್ಥ! (ವ್ಯ)
-ರ್ಥ ನಿರಂಜನಾದಿತ್ಯಾನಂದಕ್ಕರ್ಥ!!!
ಜೀವನ ನಿರಂಜನಾದಿತ್ಯ ಜೀವನ! 2(588)
ವಚನ ನಿರಂಜನಾದಿತ್ಯ ವಚನ!
ನಮನ ನಿರಂಜನಾದಿತ್ಯ ನಮನ!
ನಿಧಾನ ನಿರಂಜನಾದಿತ್ಯ ನಿಧಾನ!
ರಂಜನ ನಿರಂಜನಾದಿತ್ಯ ರಂಜನ! (ಅ)
-ಜಘನ ನಿರಂಜನಾದಿತ್ಯ ಜಘನ!
ನಾಶನ ನಿರಂಜನಾದಿತ್ಯ ನಾಶನ!
ದಿವಾನ ನಿರಂಜನಾದಿತ್ಯ ದಿವಾನ! (ಸ)
-ತ್ಯಜ್ಞಾನ ನಿರಂಜನಾದಿತ್ಯನಾ ಜ್ಞಾನ! (ಸಂ)
-ಜೀವನ ನಿರಂಜನಾದಿತ್ಯ ಜೀವನ!
ವರ್ತನ ನಿರಂಜನಾದಿತ್ಯ ವರ್ತನ!
ನಮೋ ನಿರಂಜನಾದಿತ್ಯ ನಾರಾಯಣ!!!
ಅಥವಾ
(ಆ)-ನನ ನಿರಂಜನಾದಿತ್ಯ ನಾರಾಯಣ!!!
ಜೀವನಕೇನು ದಾರಿ ಹೇಳಪ್ಪಾ! 3(1383)
ವರಗುರು ಭಜನೆ ಮಾಡಪ್ಪಾ! (ದೀ)
-ನರನ್ನುದ್ಧಾರ ಮಾಳ್ಪ ತಾನಪ್ಪಾ! (ಲೋ)
-ಕೇಶ್ವರನವನೆಂದರಿಯಪ್ಪಾ! (ಅ)
-ನುಮಾನ ನಿನಗೇನೂ ಬೇಡಪ್ಪಾ!
ದಾರಿ ತಾನೇ ತೆರೆಯುವುದಪ್ಪಾ! (ಅ)
-ರಿಷ್ಟ ನಿವಾರಣೆಯಪ್ಪುದಪ್ಪಾ!
ಹೇಳಲೇನಾ ಮಹಿಮೆಯನಪ್ಪಾ? (ಒ)
-ಳ, ಹೊರಗೆಲ್ಲವನೇ ಕಾಣಪ್ಪಾ! (ಅ)
ಪ್ಪಾ, ನಿರಂಜನಾದಿತ್ಯ ದತ್ತಪ್ಪಾ!!!
ಜೀವನದಲ್ಲೇಕೆ ಶಾಂತಿಯಿಲ್ಲ? (ಜೀ) 3(1318)
-ವ ದೇವನಾಗಲ್ಕೆ ಯತ್ನಿಸಿಲ್ಲ (ಅ)
-ನನ್ಯ ಭಕ್ತಿ, ಭಾವ, ಬಲಿತಿಲ್ಲ! (ಮ)
-ದ ಮತ್ಸರಾದಿಗಳಳಿದಿಲ್ಲ! (ಇ)
-ಲ್ಲೇನಲ್ಲೇನೆಂಬ ಭ್ರಾಂತಿ ಹೋಗಿಲ್ಲ!
ಕೆಲಸ ನಿಷ್ಕಾಮದಿಂದಾಗಿಲ್ಲ! (ಅ)
-ಶಾಂತಿಯಿದರಿಂದೆಂಬರಿವಿಲ್ಲ!
ತಿಳಿದು ಬಾಳುವಭ್ಯಾಸವಿಲ್ಲ (ತಾ)
-ಯಿ ತಂದೆ ದೇವರೆಂದರಿತಿಲ್ಲ! (ಫು)
-ಲ್ಲ ನಿರಂಜನಾದಿತ್ಯ ತಾನೆಲ್ಲ!!!
ಜೀವನದಾಟ ಜೀವನೋಟ! (ಅ) 6(4142)
-ವರವ್ರ ಪ್ರಾರಬ್ಧದಂತಾಟ!
ನರ, ನಾರೀ ಸಂಬಂಧ ಕಾಟ!
ದಾರಿ ಸುಖಕ್ಕಿದಲ್ಲ ದಿಟ! (ಮಾ)
-ಟ, ಮಾರಣದಾಟ ಪೇಚಾಟ!
ಜೀವಿಸಲಿಕ್ಕೆ ಬೇಕೊದೂಟ!
ವಸ್ತ್ರಾಲಂಕಾರವೊಂದು ಚಟ!
ನೋವು, ಸಾವು ದೇಹಕ್ಕೆ ದಿಟ! (ನೆಂ)
-ಟ ನಿರಂಜನಾದಿತ್ಯ ಭಟ!!!
ಜೀವನದ್ದೋಡಾಟದ ಜೀವನ! (ದೇ) 6(4001)
-ವನದ್ದು ಕೂರಾಟದ ಜೀವನ!
ನರನದ್ದು ನಶ್ವರ ಜೀವನ! (ಎ)
-ದ್ದೋ, ಬಿದ್ದೋ ನರಳುವ ಜೀವನ! (ಮೃ)
-ಡಾಣೀಶ್ವರರ್ದಾನಂದ ಜೀವನ! (ಗಂ)
-ಟಲ ಗಾಳ ಜೀವನ ಜೀವನ!
ದತ್ತನದ್ದಾತ್ಮಾನಂದ ಜೀವನ!
ಜೀವನಿಗೆ ಸಂಸಾರ ಜೀವನ! (ದೇ)
-ವನಿಗದು ನಿಸ್ಸಾರ ಜೀವನ! (ಲಿ)
-ನ ನಿರಂಜನಾದಿತ್ಯ ಜೀವನ!!!
ಜೀವನಾಹಾರ ಜೀವೇಶಗೇನು ಭಾರ? (ದೇ) 4(2499)
-ವಗರ್ಪಿಪಾಹಾರ ಜೀವರಿಗಾಹಾರ!
ನಾನಾರೀತಿ ಕಟ್ಟಿ ಹಾಕುವರಾಹಾರ!
ಹಾದಿ, ಬೀದಿಯಲ್ಲಿ ಮಾರುವರಾಹಾರ! (ದ)
-ರಗಳಾದರೋ ಸ್ವೇಚ್ಛಾನುಸಾರಾಹಾರ!
ಜೀನಗೂ ಬೇಕೊಂದಲ್ಲೊಂದು ದಿನಾಹಾರ!
ವೇಷ, ಭೂಷಣಗಳಿಗಾಧಾರಾ ಹಾರ!
ಶರೀರ ಸೌಂದರ್ಯಕ್ಕ್ಬೇಕೊಳ್ಳೆಯಾಹಾರ!
ಗೇದುಂಬುವನಿಗಿದೊಂದುದ್ಯೋಗಾಹಾರ! (ಅ)
-ನುದಿನ ಬೇಕೆಲ್ಲರಿಗೆಲ್ಲೆಲ್ಲಾಹಾರ!
ಭಾವಿಕ ಭಕ್ತನಿಗೆ ಪ್ರಸಾದಾಹಾರ! (ವ)
-ರದ ನಿರಂಜನಾದಿತ್ಯಗಿಂಥಾ ಹಾರ!!!
ಜೀವನಿಗಿಹುದು ನಾನಾ ಪ್ರಕರಣ! (ಭ) 4(2169)
-ವಬಂಧದಲ್ಲಿಡುವುದಾ ಪ್ರಕರಣ!
ನಿಮಿಷ, ನಿಮಿಷಕ್ಕೂಂದೊಂದ್ಪ್ರಕರಣ! (ಭೋ)
-ಗಿಗನವರತನೇಕ ಪ್ರಕರಣ!
ಹುಚ್ಚು ಹಿಡಿಸುವುದೆಲ್ಲಾ ಪ್ರಕರಣ!
ದುಸ್ಸಂಗದಲ್ಲದ್ದುವುದಾ ಪ್ರಕರಣ!
ನಾಳೆಗಳೆಣಿಸುವುದಾ ಪ್ರಕರಣ!
ನಾಶವಾಗುವ ದೇಹಕ್ಕಾ ಪ್ರಕರಣ!
ಪ್ರವೃತ್ತಿ ಮಾರ್ಗಕ್ಕೇನೇನೋ ಪ್ರಕರಣ!
ಕತೆ, ಪುರಾಣ, ಕಟ್ಟಿತಾ ಪ್ರಕರಣ! (ವ)
-ರಗುರು ಶರಣಗಿಲ್ಲಾ ಪ್ರಕರಣ! (ಗ)
-ಣಪ ನಿರಂಜನಾದಿತ್ಯೇಕೀಕರಣ!!!
ಜೀವನಿಷ್ಟದಂತೆಂತಿರಬಲ್ಲ ದೇವ? 6(4050)
ವಶವಾಗಿರ್ಪವನಲ್ಲಾರಿಗೂ ದೇವ!
ನಿತ್ಯ, ನಿರಾಮಯ, ನಿರಂಜನ ದೇವ! (ಅ)
-ಷ್ಟ ಮದಾತೀತ ಸದ್ಗುರು ಮಹಾದೇವ!
ದಂಡ, ಕಮಂಡಲು ಧಾರಿ ದತ್ತ ದೇವ!
ತೆಂಕು, ಬಡಗಾದಿ ದಿಕ್ಕಿನಲ್ಲಾ ದೇವ!
ತಿತಿಕ್ಷೆಯಿಂದಾಗಬೇಕು ಜೀವ, ದೇವ!
ರಕ್ತಮಾಂಸದ ಗೊಂಬೆ ತಾನಲ್ಲಾ ದೇವ!
ಬಯಕೆಗಳಿದ್ದವನೆಂತಾಗ್ವ ದೇವ? (ತ)
-ಲ್ಲಣಗೊಳ್ಳದ ಶರಣನಪ್ಪ ದೇವ!
ದೇವ, ಜೀವರೈಕ್ಯ ಶಿವಾನಂದ ದೇವ! (ಅ)
-ವನೇ, ನಿರಂಜನಾದಿತ್ಯಾನಂದ ದೇವ!!!
ಜೀವನ್ಮುಕ್ತನೇ ಸರ್ವ ಶಕ್ತ! (ಭ) 4(2205)
-ವಬಂಧದಿಂದವ ನಿವೃತ್ತ! (ತಾ)
ನ್ಮುನಿಯೆನಿಸಿಹನಾ ದತ್ತ! (ಭ)
-ಕ್ತರುದ್ಧಾರಕ್ಕಾಗಿದು ಯುಕ್ತ! (ನೀ)
-ನೇ ಅವನಾಗ್ಬೇಕಾ ಪ್ರಯುಕ್ತ!
ಸತತಾಭ್ಯಾಸಿಗದು ಪ್ರಾಪ್ತ! (ಸ)
-ರ್ವಸಂಗತ್ಯಾಗ್ಯಾಗಾ ನಿಮಿತ್ತ! (ನಾ)
-ಶವಾಗುವುದಾಗಾಶಾ ಚಿತ್ತ! (ಮು)
-ಕ್ತ ನಿರಂಜನಾದಿತ್ಯಾ ಶಕ್ತ!!!
ಜೀವನ್ಮುಕ್ತಿಯಪೂರ್ವಾತ್ಮ ಸಿದ್ಧಿ! (ದೇ) 4(2103)
-ವ ತಾನಾಗಿ ಪೂಜ್ಯಾಯೋಗ ಸಿದ್ಧಿ! (ಚಿ)
-ನ್ಮುದ್ರೆಯಲ್ಲಿ ಶೋಭಿಪುದಾ ಸಿದ್ಧಿ! (ಶ)
-ಕ್ತಿಯಿದಕ್ಕೆದುರಿಲ್ಲನ್ಯ ಸಿದ್ಧಿ! (ಕಾ)
-ಯದಭಿಮಾನ ಬಿಟ್ಟರಾ ಸಿದ್ಧಿ!
ಪೂಜಾ ವಿಧಿಯ ಗುರಿಯಾ ಸಿದ್ಧಿ! (ಅ)
-ರ್ವಾಚೀನ ವಿದ್ಯೆಗಾಗದಾ ಸಿದ್ಧಿ! (ಆ)
-ತ್ಮ, ಅನಾತ್ಮ, ಜ್ಞಾನದಿಂದಾ ಸಿದ್ಧಿ! (ಜೈ)
-ಸಿದರಿಂದ್ರ್ಯಂಗಳಾಗ್ವುದೀ ಸಿದ್ಧಿ! (ಸಿ)
-ದ್ಧಿ, ನಿರಂಜನಾದಿತ್ಯಗೀ ಸಿದ್ಧಿ!!!
ಜೀವರಿಗಿಹುದು ಬಹು ಭಾಷೆ! [ದೇ] 3(1152)
ವರದಾಗಿಹುದು ಸರ್ವ ಬಾಷೆ! (ಅ)
-ರಿತವರಿಗೆಲ್ಲಾ ಪೂಜ್ಯ ಭಾಷೆ!
ಗಿರಿಜಾಪತಿಗೆ ಯಾವ ಭಾಷೆ? (ಬ)
-ಹು ಪುರಾತನ ಸಂಸ್ಕೃತ ಭಾಷೆ! (ಸ)
-ದುಪಯೋಗಾಗಬೇಕೆಲ್ಲಾ ಭಾಷೆ!
ಬಡಿದಾಟಕ್ಕಾಗ್ಯೇನಲ್ಲ ಭಾಷೆ! (ಇ)
-ಹುದಾತ್ಮನಿಗೊಂದು ಗುಪ್ತ ಭಾಷೆ!
ಭಾಷೆಯದೇ ಮೌನಾನಂದ ಭಾಷೆ! (ಭಾ)
-ಷೆ ನಿರಂಜನಾದಿತ್ಯಗೀ ಭಾಷೆ!!!
ಜೀವರಿಗೆ ಕರ್ಮ ತಪ್ಪಿದ್ದಲ್ಲ! (ಅ) 4(1971)
-ವರದಕಂಜ್ಯಳಬೇಕಾಗಿಲ್ಲ! (ಹ)
-ರಿಕೃಪೆಯದು, ಸಂಶಯವಿಲ್ಲ! (ಹ)
-ಗೆತನ ಸಾಧಿಪಾತವನಲ್ಲ!
ಕರ್ಮ ಫಲಿಸದಿರುವುದಿಲ್ಲ! (ನಿ)
-ರ್ಮಲ ಮನದಿಂದಾಗಬೇಕೆಲ್ಲ!
ತಳಮಳದಿಂದ ಸುಖವಿಲ್ಲ! (ಒ)
-ಪ್ಪಿದಮೇಲಪ್ಪ ಬಿಡುವುದಿಲ್ಲ! (ಬಿ)
-ದ್ದವರನ್ನೆಬ್ಬಿಸದಿರ್ಪುದಿಲ್ಲ! (ನ)
-ಲ್ಲ ಶ್ರೀ ನಿರಂಜನಾದಿತ್ಯ ಕೊಲ್ಲ!!!
ಜೀವಾತ್ಮನಾಗಿ ಬಾಳಿ ದುಃಖಿಯಾಗ್ಬೇಡ! (ಶಿ) 6(3983)
-ವಾತ್ಮನಾಗಿ ಬಾಳಿ ಸುಖಿಯಾಗ್ದಿರ್ಬೇಡ! (ಆ)
-ತ್ಮಸ್ವರೂಪವರಿತು ಅದಾಗ್ದಿರ್ಬೇಡ!
ನಾಮ, ರೂಪಕ್ಕಂಟಿ ಹುಟ್ಟಿ, ಸಾಯಬೇಡ!
ಗಿರಿಜಾಧವನ ಮರೆಯಲೀ ಬೇಡ!
ಬಾಯ್ಕೈ, ಕಚ್ಚೆ ಮಲಿನಗೊಳಿಸಬೇಡ! (ಗಾ)
-ಳಿ ಗೋಪುರ ಕಟ್ಟಿ ಬಿದ್ದುರುಳಬೇಡ!
ದುಃಸ್ಸಂಗದಿಂದ ದೂರವಿರದಿರ್ಬೇಡ!
ಖಿನ್ನನಾಗಿ ಯಾವುದಕ್ಕೂ ಚಿಂತಿಸ್ಬೇಡ!
ಯಾತನಾ ಸಂಸಾರಕ್ಕೆ ಕಟ್ಟು ಬೀಳ್ಬೇಡ! (ಆ)
-ಗ್ಬೇಕಿಂದೇ ಜೀವನ್ಮುಕ್ತ! ಧೈರ್ಯಗೆಡ್ಬೇಡ! (ಮೃ)
-ಡ ನಿರಂಜನಾದಿತ್ಯಾಸ್ಥಿತಿಯ ಬಿಡ!!!
ಜೀವಿಸಿರುವಾಗ ಗೈಮೆ, ಸತ್ತಾಗ ಮಹಿಮೆ! 6(4264)
ವಿಧಿಲಿಖಿತದಂತೆಲ್ಲಾ ಹಿರಿಮೆ, ಕಿರಿಮೆ!
ಸಿರಿ ಸಂಪತ್ತಿನಿಂದಳೆಯಲಾಗ್ದು ಮಹಿಮೆ! (ಮ)
-ರುಳುಗೊಳಿಪುದಾಶಾ ಪೂರ್ತಿ ಮಾಡಿ ಮಹಿಮೆ!
ವಾಮಾಚಾರದಿಂದಲೂ ತೋರುವರು ಮಹಿಮೆ!
ಗಗನಸದೃಶಾತ್ಮಗೀ ಸೃಷ್ಟಯೇ ಮಹಿಮೆ! (ಅಂ)
-ಗೈಯ ಚಮತ್ಕಾರದಿಂದ್ರಜಾಲಲ್ಲಾ ಮಹಿಮೆ!
ಮೆಟ್ಟಿ ನಿಂತಾಗಾಶೆಗಳನ್ನಾಗದೇ ಮಹಿಮೆ!
ಸಗುಣಮೂರ್ತಿಯಷ್ಟೇ ಶಾಶ್ವತದ್ರ ಮಹಿಮೆ! (ಚಿ)
-ತ್ತಾಕರ್ಷಕವೆಂಬುದದೊಂದು ಪೊಳ್ಳು ಮಹಿಮೆ!
ಗಡ್ಡ, ಮೀಸೆ ಬೆಳೆಸ್ಬೇಕೇ ತೊರ್ಲಿಕ್ಕೀ ಮಹಿಮೆ?
ಮನೋವೃತ್ತಿ ಬೋಲಿಸುವುದೇ ಮಹಾ ಮಹಿಮೆ
ಹಿರಿಯ ದತ್ತ ಗುರುವಿನದ್ದಿದೇ ಮಹಿಮೆ! (ದ)
-ಮೆ ಶಮೇಶ ನಿರಂಜನಾದಿತ್ಯಗಾ ಮಹಿಮೆ!!!
ಜುಟ್ಟು, ಜನಿವಾರ ಕಿತ್ತ್ರಿ, ಹುಟ್ಟು ಗುಣ ಬಿಟ್ಟೀತೇ? (ಕ) 6(3938)
-ಟ್ಟುಪಾಡಿಗೊಳಪಟ್ಟು ಸಾಧಿಸಿದ್ರದು ಬಿಟ್ಟೀತು!
ಜವನನ್ನೂ ಉಜ್ವಲ ತಪಸ್ಸು ಅಟ್ಟಿಬಿಟ್ಟೀತು!
ನಿಶ್ಚಲ ತತ್ವ ಸ್ಥಿರವಾದರಾವುದುಳಿದೀತು?
ವಾಮಾಚಾರದಿಂದ ಅಧಃಪತನವುಂಟಾದೀತು!
ರಕ್ಕಸಾಧಮರಿಗಾದ ಪ್ರಾಯಶ್ಚಿತ್ತವಾದೀತು!
ಕಿರುಕುಳಾಧಿಕ್ಯದಿಂದ ಬುದ್ಧಿ ಭ್ರಂಶವಾದೀತು! (ಸ)
-ತ್ತ್ರಿ ಮತ್ತೆ ಮತ್ತೆ ಹುಟ್ಟಿ ಸತ್ತುಹೋಗಬೇಕಾದೀತು!
ಹುಟ್ಟುಗುಣವೆಂದು ಕುಟ್ಟಿಕೊಂಡತ್ತರೇನಾದೀತು? (ಹು)
-ಟ್ಟು, ಸಾವಿನ ಮೂಲೋಚ್ಚಾಟನೆಯಿಂದಾನಂದಾದೀತು!
ಗುರುವಿನ ಗುಲಾಮಗಭೀಷ್ಟ ಸಿದ್ಧಿಯಾದೀತು! (ತೃ)
-ಣ ಸಮಾನ ಈರೇಳು ಲೋಕಗಳೆಂದನಿಸೀತು!
ಬಿದಿ, ಹರಿ, ಹರರೂ ತಲೆದೂಗಬೇಕಾದೀತು! (ಬಿ)
-ಟ್ಟೀ ಬಸವನಿಗಿದೆಲ್ಲಾ ಸ್ವಪ್ನ ನಿಧಿಯಾದೀತು!
ತೇಜಸ್ವೀ ನಿರಂಜನಾದಿತ್ಯಗಾರಿಂದೇನಾದೀತು???
ಜುಲಾಬಿಗೂ ತಗೊಳ್ಳಲೇ ಬೇಕಯ್ಯಾ! (ಹಾ) 1(414)
-ಲಾನ್ನವೇ ಬೇಕೆಂದರುಹುದೇನಯ್ಯಾ?
ಬಿಸಿಲೇ ಇದ್ದರಾಗುವುದೇನಯ್ಯಾ!
ಗೂಡ್ರಿಸಿ ಮೋಡವೂ ಮುತ್ತಬೇಕಯ್ಯಾ? (ಆ)
-ತನ ಲೀಲೆಗೆಲ್ಲಾ ಇರಬೇಕಯ್ಯಾ!
ಗೊಬ್ಬರ ಹಾಕಿದ್ರೆ ನೀರೂ ಬೇಕಯ್ಯಾ! (ಹ)
-ಳ್ಳವಿದ್ದಲ್ಲಿ ದಿಣ್ಣೆಯೂ ಇದೆಯಯ್ಯಾ!
ಲೇಸೂ, ಹೊಲಸೂ ಸೃಷ್ಟಿ ಕ್ರಮವಯ್ಯಾ!
ಬೇಕು ಸಾಕಾಗಿ ಬೇಡವಾಗ್ವುದಯ್ಯಾ!
ಕಮಲ ಅರಳಿ ಮುಚ್ಚುವುದಯ್ಯಾ! (ಅ)
-ಯ್ಯಾ! ನಿರಂಜನಾದಿತ್ಯಾದರ್ಶನಯ್ಯಾ!!!
ಜೈ ಗುರು ಮಹಾದೇವ! 2(495)
ಗುರುವೀರನಾ ದೇವ! (ಕ)
-ರುಣಾಕರನಾ ದೇವ!
ಮನೋಲಯನಾ ದೇವ!
ಹಾತೊರೆವೆ ‘ನಾ’ ದೇವ!
ದೇವ, ಶಿವನಾ ದೇವ! (ಅ)
-ವ ನಿರಂಜನ ದೇವ!!!
ಜೈ ಜೈ ಜೈ ಜೈ ಜೈ ವಿಜಯ! 4(1537)
ಜೈ ಜೈ ಶಂಕರ ವಿಜಯ!
ಜೈ ಜೈ ಓಂಕಾರ ವಿಜಯ!
ಜೈ ಜೈ ಕುಮಾರ ವಿಜಯ!
ಜೈ ಜೈ ಶ್ರೀಧರ ವಿಜಯ!
ವಿಮಲಾಕಾರ ವಿಜಯ!
ಜಗದಾಧಾರ ವಿಜಯ! (ಜ)
-ಯ ನಿರಂಜನಾದಿತ್ಯಾಯ!!!
ಜೊತೆಗೂಡಿ ಬಂದ್ರೆ ನಾ ನಿನಗೆ ಸಿಕ್ಕೆ! 6(3365)
(ಕ)-ತೆ, ಕಲಾಪವೇಕೆ ನನ್ನ ನೋಡಲಿಕ್ಕೆ?
ಗೂಡಿನ ಒಳಗೆ ಪ್ರವೇಶ ಒಂದಕ್ಕೆ!
(ತಿಂ)-ಡಿ, ತೀರ್ಥದ ಮಾತಲ್ಲ ಮುಖ್ಯ ಅದಕ್ಕೆ!
ಬಂದಮೇಲ್ಸಿದ್ದವಾಗ್ಬೇಕೆಲ್ಲಾ ತ್ಯಾಗಕ್ಕೆ!
(ಬಂ)-ದ್ರೆ ಹೋಗ್ಬೇಕೆಂಬವ್ರಾರೂ ಒಪ್ಪರದಕ್ಕೆ!
ನಾ ನಿನಗೆ, ನೀನೆನಗಾಗ್ಬೇಕದಕ್ಕೆ!
ನಿಶ್ದಿನವೆಲ್ಲಾ ಹೀಗಿರ್ಬೇಕಾನಂದಕ್ಕೆ!
(ಘ)-ನ ಲಕ್ಷ್ಮೀನೃಸಿಂಹ ತತ್ವಾರ್ಥವಿದಕ್ಕೆ!
(ಆ)-ಗೆ ಇದು ಸಾಧನ ಸದಾ ಸಾಯುಜ್ಯಕ್ಕೆ!
ಸಿಹಿ, ಕಹಿ, ಯರಿಯದೇಕ ರಸಕ್ಕೆ!
(ಅ)-ಕ್ಕೆ, ನಿರಂಜನಾದಿತ್ಯಾನಂದವೆಲ್ಲಕ್ಕೆ!!!
ಜೋಕೆ ತಪ್ಪಿದವನಿಂದಾಗುತಿದೆ ಠೀಕೆ! (ಏ) 5(3245)
-ಕೆ ಬೇಕೆಮಗನ್ಯ ರಾಜ್ಯಗಳ ಪತಾಕೆ?
ತನ್ನ ತಾನರಿತಿರ್ಪುದೇ ದಾರಿ ಸುಖಕೆ! (ಹಿ)
-ಪ್ಪಿಗಳನುಕರಣೆಯೇಕೆ ಭಾರತಕೆ?
ದಮೆ, ಶಮೆಯಭ್ಯಾಸ ಸಾಕಧ್ಯಾತ್ಮಿಕಕೆ!
ವರದನೊಳಗಿರ್ಪಾಗನ್ಯ ದೇವರೇಕೆ?
ನಿಂದಾ ಸ್ತುತಿಗಳಿಂದ ಧೃತಿಗೆಡ್ವುದೇಕೆ?
ದಾರಿ ಹುಡುಕಬೇಕು ಕ್ಷೀರಸಾಗರಕೆ!
ಗುರು ದತ್ತಾತ್ರೇಯನ ಕೃಪೆ ಬೇಕದಕೆ!
ತಿರುಗುವನೀ ಭೂಮಂಡಲದಲ್ಲದಕೆ!
ದೆವ್ವಗಳು ಬಾರವವನ ಹತ್ತಿರಕ್ಕೆ!
(ಕಂ)ಠೀರವನವನೆಲ್ಲಾ ಮೃಗ ಮಂಡಲಕೆ! (ಠೀ)
-ಕೆ ಮಾಡ್ದಿರು ನಿರಂಜನಾದಿತ್ಯನ! ಜೋಕೆ!!!
ಜೋಡಿ ಸರಿಯಾಗಿರಬೇಕು! (ಗಾ) 6(3453)
-ಡಿಯೋಟಕ್ಕನ್ಕೂಲವಾಗ್ಬೇಕು!
ಸದಾ ಮಾಲೀಕಗಾಗಿರಬೇಕು! (ದಾ)
-ರಿ ಬಿಟ್ಟು ನಡೆಯದಿರ್ಬೇಕು!
ಯಾರ ತೋಟಕ್ಕೂ ನುಗ್ದಿರ್ಬೇಕು!
(ರಾ)-ಗಿ, ಬತ್ತದ ಗದ್ದೆಯುಳ್ಬೇಕು!
ರಗಳೆಯೇನೂ ಮಾಡ್ದಿರಬೇಕು!
ಬೇಲಿಯೊಳಗೇ ಮೇಯಬೇಕು! (ಬೇ)
-ಕು, ನಿರಂಜನಾದಿತ್ಯಾಗ್ಬೇಕು!!!
ಜೋಳಿಗೆಯೊಡ್ಡಿದಾಗಿದ್ದರೀಗ ಭಿಕ್ಷೆ ಹಾಕು! (ಅ) 6(4207)
-ಳಿಯುವ ದೇಹವಿದೆಂದರಿತು ಭಿಕ್ಷೆ ಹಾಕು! (ಕಾ)
-ಗೆಗಳ್ಕಿಕೊಳ್ಳದಂತೆ ನೋಡಿ ಭಿಕ್ಷೆ ಹಾಕು! (ತಾ)
-ಯೊಬ್ಬಳೇ ಎಲ್ಲರಿಗೆಂದರಿತು ಭಿಕ್ಷೆ ಹಾಕು! (ಅ)
-ಡ್ಡಿ ಆತಂಕಗಳಲಕ್ಷಿಸದೇ ಭಿಕ್ಷೆ ಹಾಕು!
ದಾರಿಯಿದಾನಂದಕ್ಕೆಂದರಿತು ಭಿಕ್ಷೆ ಹಾಕು!
ಗೀರಿಶ ಸರ್ವಾತ್ಮನೆಂದರಿತು ಭಿಕ್ಷೆ ಹಾಕು! (ತ)
-ದ್ದರ್ಶನೋಪಾಯವೆಂದರಿತು ಭಿಕ್ಷೆ ಹಾಕು!
ರೀತು ಸಜ್ಜನಗಿದೆಂದರಿತು ಭಿಕ್ಷೆ ಹಾಕು!
ಗರ್ವ ಪಡದೇ ತ್ರೀಮಂತಿಕೆಗೆ ಭಿಕ್ಷೆ ಹಾಕು!
ಭಿನ್ನ ಭೇದವಳಿಯಲಿಕ್ಕಾಗಿ ಭಿಕ್ಷೆ ಹಾಕು! (ರ)
ಕ್ಷೆ, ಸ್ವಧರ್ಮವಾದುದರಿಂದೀಗ ಭಿಕ್ಷೆ ಹಾಕು!
ಹಾಸು ಹೊಕ್ಕಾಗಿ ಎಲ್ಲಕ್ಕೂ ನಿತ್ಯ ಭಿಕ್ಷೆ ಹಾಕು! (ಹಾ)
-ಕು ನಿರಂಜನಾದಿತ್ಯಗರ್ಪಿಸಿ ಭಿಕ್ಷೆ ಹಾಕು!!!
ಜ್ಞಾನ ದಾನವಾಗುತ್ತಿರಲಿ! 5(3289)
ನಶ್ವರಕ್ಕಾಶಿಸದಿರಲಿ!
ದಾರಿ ಸುಗಮವಾಗಿರಲಿ!
ನಡೆಗೊಂದು ನೀತಿಯಿರಲಿ!
ವಾರಾಂಗನೆಯಾಗದಿರಲಿ!
ಗುರುಸೇವೆ ಸಾಗುತ್ತಿರಲಿ! (ನೆ)
-ತ್ತಿಗೆ ಪಿತ್ಥ ಹತ್ತದಿರಲಿ! (ಹ)
-ರನೂರಿಗೆ ಯಾತ್ರೆ ಸಾಗಲಿ! (ಶೂ)
-ಲಿ ನಿರಂಜನಾದಿತ್ಯಾಗಲಿ!!!
ಜ್ಞಾನ ಭಿಕ್ಷೆ ನೀಡಪ್ಪಾ! 2(976)
ನಮಸ್ಕಾರಡಿಗಪ್ಪಾ! (ಅ)
-ಭಿಲಾಷೆ ಬೇರಿಲ್ಲಪ್ಪಾ! (ರ)
-ಕ್ಷೆ ನಿನ್ನದಿರಲಪ್ಪಾ!
ನೀನು ಸರ್ವಜ್ಞನಪ್ಪಾ! (ಬ)
-ಡ ಬಾಲಕ ನಾನಪ್ಪಾ! (ಅ)
-ಪ್ಪಾ, ಶ್ರೀ ನಿರಂಜನಪ್ಪಾ!!!
ಜ್ಞಾನಸಾಗರವೇ ತಾನಾದರೇನು? 6(3313)
ನರನ ವ್ಯಾಮೋಹ ಕಳೆದನೇನು?
ಸಾಧನೆ ತಾನೆಷ್ಟು ಮಾಡಿದರೇನು?
ಗರುಡಗಮನ ಭೇಟಿ ಕೊಟ್ನೇನು?
ರತಿಪತಿಗಿನ್ನೂ ಆಳಾಗಿಹನು!
ವೇಷ ಭೂಷಣಕ್ಕಾಶಿಸುತ್ತಿಹನು!
ತಾನೇ ತಾನಾಗಾನಂದಿಸದಿಹನು!
ನಾಮ, ರೂಪ, ಭ್ರಾಂತಿ ಬಿಡದಿಹನು!
ದತ್ತನಿದನೆಂತು ಸಹಿಸಿಹನು?
ರೇಗ್ಬೇಡೆಂದವ್ನನ್ನೀಗ ಬೇಡುವೆನು! (ನಾ)
-ನು ನಿರಂಜನಾದಿತ್ಯ ದತ್ತ ತಾನು!!!
ಜ್ಞಾನಾನಂದ ಜ್ಯೋತಿ ನಿರಂಜನಾದಿತ್ಯ ಪ್ರೀತಿ! 5(2571)
ನಾರಾಯಣ ಸ್ಮರಣೆ ಸದ್ಗುರುವಿಗೆ ಪ್ರೀತಿ!
ನಂಬಿಗೆಯಿಂದ ಬೆಳೆಸಿಕೊಳ್ಳಬೇಕಾ ಪ್ರೀತಿ!
ದರ್ಶನ ಪಡೆಯಲ್ಕಿರಬೇಕು ಸದಾ ಪ್ರೀತಿ! (ರಾ)
-ಜ್ಯೋನ್ನತಿಗಿರಬೇಕಿಂಥಾ ಪರಿಶುದ್ಧ ಪ್ರೀತಿ!
ತಿಳಿದಿದನು ಬಿಡಬೇಕನಾತ್ಮದ ಪ್ರೀತಿ!
ನಿಶಿ, ದಿನ ಆತ್ಮಚಿಂತನೆಯೇ ನಿಜ ಪ್ರೀತಿ!
ರಂಗನಾಥನನುಗ್ರಹದಿಂದಾಗ್ಬೇಕೀ ಪ್ರೀತಿ!
ಜರಾ, ಜನ್ಮ ದುಃಖದಿಂದ ಪಾರ್ಮಾಳ್ಪುದೀ ಪ್ರೀತಿ!
ನಾಳೆಯೆನ್ನದಿಂದೇ ಸಂಪಾದಿಸಬೇಕೇ ಪ್ರೀತಿ!
ದಿವ್ಯಜೀವನಸಂಘದ ಸಂಪತ್ತಿಂಥಾ ಪ್ರೀತಿ!
ತ್ಯಜಿಸಬೇಕು ದುರ್ಜನ ಸಹವಾಸ ಪ್ರೀತಿ! (ಸು)
-ಪ್ರೀತನಾಗುವನು ಗುರು ಇದ್ದರಿಂಥಾ ಪ್ರೀತಿ!
ತಿಳಿ, ನಿರಂಜನಾದಿತ್ಯಾನಂದವಿದೇ ಪ್ರೀತಿ!!!
ಜ್ಞಾನಾಮೃತ, ಸಾರ ಗೀತಾ! 6(3731)
ನಾನಾರೆಂದೆಂಬುದು ಗೀತಾ!
ಮೃತ್ಯುಂಜಯ ವಿದ್ಯೆ ಗೀತಾ!
ತಪ್ಪು, ತಿದ್ದುವುದು ಗೀತಾ!
ಸಾಧನೆಗೆ ದಾರಿ ಗೀತಾ!
ರಮಾನಂದಾನಂದ ಗೀತಾ!
ಗೀರ್ವಾಣಿಗಚ್ಮೆಚ್ಚು ಗೀತಾ! (ಗೀ)
-ತಾ, ನಿರಂಜನಾದಿತ್ಯ ತಾ!!!
ಜ್ಞಾನಿ ದುಃಖಿಯಲ್ಲವಯ್ಯಾ 2(752)
ನಿಜಾಭಾವ ದುಃಖವಯ್ಯಾ!
ದುಃಖ ಮನೋವೃತ್ತಿಯಯ್ಯಾ! (ಸು)
-ಖಿ, ಜ್ಞಾನ ಸ್ವರೂಪನಯ್ಯಾ! (ಗಾ)
-ಯನ ಜ್ಞಾನ ಗಾನಕಯ್ಯಾ! (ಬೆ)
-ಲ್ಲ ತಿಂದಾಗಾ ರುಚಿಯಯ್ಯಾ! (ಆ)
-ವ ಸುಖ ಪಾಂಡಿತ್ಯವಯ್ಯಾ? (ಅ)
-ಯ್ಯಾ! ನಿರಂಜನಾದಿತ್ಯಯ್ಯಾ!!!
ಜ್ಞಾನೋದಯವಾಗ್ಲಿಕ್ಕಾಗಿ ಜಪ! 4(2471)
ನೋವ್ಸಾವು ಸಹಿಸ್ಲಿಕ್ಕಾಗಿ ಜಪ!
ದರ್ಶನಾತ್ಮನದ್ದಕ್ಕಾಗಿ ಜಪ! (ಕಾ)
-ಯಮೋಹ ದಹಿಸ್ಲಿಕ್ಕಾಗಿ ಜಪ!
ವಾಸನಾಕ್ಷಯಾಗ್ಲಿಕ್ಕಾಗಿ ಜಪ! (ಹ)
-ಗ್ಲಿರುಳಾತ್ಮಾನಂದಕ್ಕಾಗಿ ಜಪ! (ತಿ)
-ಕ್ಕಾಟವಿಲ್ಲದಿರ್ಲಿಕ್ಕಾಗಿ ಜಪ!
ಗಿರಿಜೆಯಂತಾಗ್ಲಿಕ್ಕಾಗಿ ಜಪ!
ಜನ್ಮ ಸಾರ್ಥಕಾಗ್ಲಿಕ್ಕಾಗಿ ಜಪ! (ಭೂ)
-ಪ ನಿರಂಜನಾದಿತ್ಯ ನಿರ್ಲೇಪ!!!
ಜ್ಯೋತಿ ಕೊಟ್ಟಿತೌಷಧಿಯ! (ಪ್ರೀ) 3(1238)
-ತಿ ತೋರಿಸಿತಾ ವಿಜಯ!
ಕೊಟ್ಟಿತದ ಕಾರ್ತಿಕೇಯ! (ಸು)
-ಟ್ಟಿತದನಾರೋಗ್ಯ ಭಯ (ಹಿ)
-ತೌಷಧಿಯಾದಿತ್ಯೋದಯ! (ವಿ)
-ಷ ನಾಶ “ನಮಃ ಶಿವಾಯ”! (ಬೇ)
-ಧಿಯಾದಾಮೇಲೆ ನಿರ್ಭಯ! (ಆ)
-ಯ ನಿರಂಜನಾದಿತ್ಯಾಯ!!!
ಜ್ವರ ಬರಬೇಕು, ನಿರ್ಜರನಾಗಬೇಕು! (ಪ) 4(1569)
-ರಮಾತ್ಮಾನುಗ್ರಹವಿದೆಂದರಿಯಬೇಕು!
ಬಗೆಬಗೆಯಾನಂದವನದೆನಬೇಕು! (ಪ)
-ರಮಾನಂದ ಪ್ರಾಪ್ತಿಗೀ ಜ್ಞಾನವೇ ಬೇಕು!
ಬೇರಾವ ದಾರಿಯೂ ಯಿಲ್ಲೆಂದರಿಯಬೇಕು!
ಕುಲ ಶೀಲವೆನ್ನದೀ ಅಭ್ಯಾಸವಾಗ್ಬೇಕು!
ನಿಶ್ಚಲವಾದ ಭಕ್ರಿಯಿದಕಿರಬೇಕು! (ಮಾ)
-ರ್ಜನಾದಿ ದೇಹಾನಂದ ಕಮ್ಮಿಯಾಗಬೇಕು! (ವ)
-ರ ಗುರುಪಾದದಲ್ಲಿ ಲಕ್ಷ್ಯವಿರಬೇಕು!
ನಾಮ, ರೂಪಕ್ಕೆ ಮರುಳಾಗದಿರಬೇಕು!
ಗಣಪತಿ ಸದ್ಗುರುವೆಂದರಿಯಬೇಕು!
ಬೇಡ ಜೀವನಾನುಕರಣೆ ಬಿಡಬೇಕು!
ಕುಲಕೆ ನಿರಂಜನಾದಿತ್ಯ ಗುರು ಬೇಕು!!!
ಅವಧೂತ ಶ್ರೀ ಶ್ರೀ ನಿರಂಜನಾನಂದ ಸರಸ್ವತಿ