ಉಂಡಾದ್ಮೇಲೈದ್ನಿಮಿಷ ವಿರಾಮ! (ಉ)   6(3573)

-ಡಾಹಿಸಿದ್ಮೇಲ್ವಿಮಾನ ದಿಗ್ಭ್ರಮ! (ಹೋ)
-ದ್ಮೇಲೆ ಬಹಳದೂರ ವಿಕ್ರಮ! (ಓ)
-ಲೈಸಿದ್ಮೇಲೊಡ್ಡೋಲಗ ಸಂಭ್ರಮ! (ಇ)
-ದ್ನಿನ್ನ, ನನ್ನ ಯೋಗದೊಂದು ಕ್ರಮ!
ಮಿತ್ರಗಿದ್ರ ಪೂರ್ಣ ಪರಿಶ್ರಮ!
ಣ್ಮುಖಗಾನಂದ ಪರಾಕ್ರಮ!
ವಿರಕ್ತ ದತ್ತಾವಧೂತಾಶ್ರಮ!
ರಾತ್ರಿ, ಹಗಲನುಷ್ಠಾನ ಪ್ರೇಮ! (ಪ್ರೇ)
-ಮ ನಿರಂಜನಾದಿತ್ಯ ಸುನಾಮ!!!

ಉಂಡು ತಿಂದು ಭಂಡನಾಗಬೇಡ! [ಗಂ]   2(735)

-ಡುಗಲಿ ನೀನಾಗದಿರಬೇಡ!
ತಿಂಗಳು ದಿನವೆಣಿಸಬೇಡ! (ಬ)
-ದುಕು ಬಾಳಿಗಾಗಿ ಅಳಬೇಡ! [ಅ]
-ಭಂಗ ಹಾಡ್ಯನಂಗನಾಗಬೇಡ! (ಹ)
-ಡಗು ಹತ್ತಿ ಎದೆಗೆಡಬೇಡ!
ನಾಮ ಜಪ ಮಾತ್ರ ಬಿಡಬೇಡ! (ಹ)
-ಗಲಿರುಳೆಂಬ ಭೇದ ಬೇಡ!
ಬೇರೆ ಯೋಚನೆಯ ಮಾಡಬೇಡ! (ಬಿ)
-ಡ ನಿರಂಜನಾದಿತ್ಯ ಕೈ ಬಿಡ!!!

ಉಂಡು, ತಿಂದುಟ್ಟಳುವ ಬಾಳೇತಕಯ್ಯಾ?    1(266)

-ಡುವುದೊಂದು ಮಾಡುವುದಿನ್ನೊಂದೇಕಯ್ಯಾ?
ತಿಂದಜೀರ್ಣ ಮಾಡಿಕೊಳಬಾರದಯ್ಯಾ!
ದುರಿತಾಂತಕನ ಸೇವೆಗಾಗುಣ್ಣಆ! (ಅ)
-ಟ್ಟಹಾಸದ ಬಟ್ಟೆ, ಬರೆ ವ್ಯರ್ಥವಯ್ಯಾ! (ಆ)
-ಳುಗಳವಲಂಬನದ ಬಾಳ್ಗೋಳಯ್ಯಾ!
ಡೆವೆ, ವಸ್ತು ಕಳ್ಳರ ಪಾಲಿಗಯ್ಯಾ!
ಬಾಗಿ ಗುರು ಪಾದಕ್ಕೆ ಬಾಳಬೇಕಯ್ಯಾ! (ಆ)
-ಳೇ ತನಗೆ ತಾನಾಗಿ ಅನದಿಸಯ್ಯಾ!
ತ್ವ ಚಿಂತನೆ ನಿರಂತರಮಾಡಯ್ಯಾ!
ಮಲ ಮಿತ್ರನಿಂದಿದ ಕಲಿಯಯ್ಯಾ! (ಅ)
-ಯ್ಯಾ! ಆತನೇ ನಿರಂಜನಾದಿತ್ಯನಯ್ಯಾ!!!

ಉಂಡುಂಡೆಯಾದ ಸೆಂಡಿಗೆಯುಂಡೆ! (ಆ)   4(2325)

-ಡುಂಬೊಲದಲ್ಲಿ ಜೀರ್ಣಿಸಿಕೊಂಡೆ! (ಕ)
-ಡೆಗೊಂದೆಡೆ ವಿಶ್ರಮಿಸಿಕೊಂಡೆ!
ಯಾಕಿನ್ನಾಟವೆಂದು ನಾನಂದ್ಕೊಂಡೆ!
ತ್ತನೇ ಗತಿ ನನಗಂದ್ಕೊಂಡೆ! (ಆ)
-ಸೆಂಬುದಿರಬಾರದೆಂದುಕೊಂಡೆ! (ಅ)
-ಡಿಗೆರಗಿ ವರ ಬೇಡಿಕೊಂಡೆ! (ಕಂ)
-ಗೆಡದೆ ಸಾಧನೆ ಮಾಡಿಕೊಂಡೆ! (ತಾ)
-ಯುಂಬೆಡೆಗೋಡಿ ನಾ ಕೂದಿಕೊಂಡೆ! (ಕಂ)
-ಡೆ ನಿರಂಜನಾದಿತ್ಯನಂದ್ಕೊಂಡೆ!!!

ಉಂಡೆ, ಚಕ್ಕುಲಿಗಳುಂಡೆಯೇನು? (ಉಂ)   4(1633)

-ಡೆನವುಗಳೀಗದರಿಂದೇನು? (ವಂ)
-ಚನೆಯದಾರೋಗ್ಯಕ್ಕಲ್ಲವೇನು? (ಇ)
ಕ್ಕುವಾಗೆಚ್ಚರವಿರಬೇಡ್ವೇನು? (ಕ)
-ಲಿತವ ನಿನ್ನಂತೆ ಅವನೇನು? (ಸಂ)
-ಗಡಿಗ ನೀನಾಗಿರಲಿಲ್ಲೇನು? (ಗೋ)
-ಳುಂಬಾಗ ಬೇಡವೆಂದಿದ್ದೆ ನಾನು! (ಬಿ)
-ಡೆ ನಾನದರಾಸೆ ಹೋಗು ನೀನು!
ಯೇನೆಂಬೆ ನಿನ್ನವಿವೇಕಕ್ಕಾನು? (ನೀ)
-ನು ನಿರಂಜನಾದಿತ್ಯಾಗ್ಬಾರ್ದೇನು???

ಉಂಬಲಾರದಾಗಾಹಾರಂಬಲಿ!   4(1676)

ಡವರ ಪ್ರಾಣಾಧಾರಂಬಲಿ!
ಲಾಭದಾಯಕ ರೋಗಿಗಂಬಲಿ!
ಕ್ತದೋಟಕ್ಕನುಕುಲಂಬಲಿ!
ದಾನವಾಗಲನುದಿನಂಬಲಿ!
ಗಾಯ ಮಾಯಲಿಕ್ಕೆ ಬೇಕಂಬಲಿ!
ಹಾಯಾಗಿರುವುದೂಟಕ್ಕಂಬಲಿ!
ರಂಗಗಾನಂದ ಮೊಸರಂಲಲಿ!
ಲವೆಲ್ಲರಿಗೀವುದಂಬಲಿ! (ಮಾ)
-ಲಿಕ ನಿರಂಜನಾದಿತ್ಯಾಂಬಲಿ!!!

ಉಗುಳದ ಆಹಾರ ಬಾಯಿಗಿರಲಿ!   1(201)

ಗುರುವಿನನುಗ್ರಹ ಬಾಳಿಗಿರಲಿ! (ಸೀ)
-ಳದಂಥಾ ಮರಗಳು ಉಳಿದಿರಲಿ!
ಯಾಪೂರ್ಣವಾದ ಮನಸಿರಲಿ!
ಳಲಾಗುವ ಪ್ರಜೆಗಳು ಇರಲಿ!
ಹಾದರವರಿಯದ ಸತಿ ಇರಲಿ!
ತ್ನಹಾರ ಸತ್ಯಭಾಮೆಗೇ ಇರಲಿ!
ಬಾನಿನಲಾದಿತ್ಯನೇ ವಿರಾಜಿಸಲಿ!
ಯಿಷ್ಟ ಅವನೊಬ್ಬನಲ್ಲೇ ಆಗಿರಲಿ!
ಗಿರಿಧರನಾಪದ್ಬಂಧುವಾಗಿರಲಿ!
ಘುನಾಥನಾಥ ನಾಥನಾಗಿರಲಿ (ಅ)
-ಲಿಪ್ತ ನಿರಂಜನಾದಿತ್ಯನಾಗಿರಲಿ!!!

ಉಗ್ರಾಣದಲ್ಲಿದೆ ಹೆಗ್ಗಣದ ಹೆಣ!   5(2508)

ಗ್ರಾಮಸ್ಥರೊಂದಾಗ್ಯೆತ್ತಿಹಾಕ್ಬೇಕಾ ಹೆಣ! (ಕ್ಷ)
-ಣಕ್ಷಣಕ್ಕೂ ಕೊಳೆಯುತ್ತಿಹುದಾ ಹೆಣ!
ಫೇದಾರಗೆ ಹೆದ್ರಿ ಓಡದಾ ಹೆಣ! (ಅ)
-ಲ್ಲಿ, ಇಲ್ಲಿ ತಡಕಿದ್ರೆ ಸಿಕ್ಕದಾ ಹೆಣ! (ಎ)
-ದೆಗೆಡ್ದರಸ್ಬೇಕುಗ್ರಾಣದಲ್ಲಾ ಹೆಣ!
ಹೆಚ್ಚು ವಿಳಂಬವಾದ್ರನಾರೋಗ್ಯಾ ಹೆಣ! (ಜ)
ಗ್ಗದಾವ ಯಂತ್ರ, ಮಂತ್ರ, ತಂತ್ರಕ್ಕಾ ಹೆಣ! (ಜಾ)
-ಣತನದಿಂದ ಹೊರಗೆ ತಂದ್ರೆ ಗುಣ!
((ತಂ)) ದಮೇಲೊಳಗೆಲ್ಲಾ ತೊಳೆದ್ರೆಲ್ಲಾ ಗುಣ!
ಹೆರವರಿಗೂ, ತನಗೂ ಆಗ ಗುಣ! (ಹೆ)
-ಣ, ನಿರಂಜನಾದಿತ್ಯಗೆ ರೋಗ ಗಣ!!!

ಉಚ್ಚೆ ಕುಡಿದ್ರೂ ತನ್ನಿಚ್ಛೆಯಲ್ಲಿರ್ಬೇಕು! [ಕೆ]   5(3178)

-ಚ್ಚೆದೆಗಾರಬಲರ ಕಾಡದಿರ್ಬೇಕು!
ಕುಲೀನೆ ವೇಶ್ಯಾ ಸ್ನೇಹ ಮಾಡದಿರ್ಬೇಕು! (ನೀ)
-ಡಿದ್ರೂ ಬೀಡಿ, ಸಿಗ್ರೇಟು ಸೇದದಿರ್ಬೇಕು! (ತ)
-ದ್ರೂಪ ಸಿದ್ಧಿಗಿದನ್ನೆಲ್ಲಾ ಪಾಲಿಸ್ಬೇಕು!
ತ್ವ ಚಿಂತನೆ ಸದಾ ಮಾಡುತ್ತಿರ್ಬೇಕು! (ತಿ)
-ನ್ನಿಸಲ್ತಂದ್ರೂ ಮಾಂಸಾಹಾರ ವರ್ಜಿಸ್ಬೇಕು! (ಇ)
-ಚ್ಛೆಗಳೈಹಿಕಕ್ಕೆ ಕಡಿಮೆಯಾಗ್ಬೇಕು! (ಪ್ರಾ)
-ಯಕ್ಕೆ ತಕ್ಕ ವ್ಯಾಯಾಮ ನಿತ್ಯ ಮಾಡ್ಬೇಕು!
(ಎ)ಲ್ಲಿ, ಹೇಗೆ ನಡ್ಕೊಳ್ಬೇಕೆಂದರಿತಿರ್ಬೇಕು! (ಬ)
-ರ್ಬೇಕ್ಸನ್ನಿಧಿಯಲ್ಲಿಷ್ಟ ಜಪ ಮಾಡ್ಬೇಕು!
ಕುಲ ನಿರಂಜನಾದಿತ್ಯನದ್ದಾಗ್ಬೇಕು!!!

ಉಣಿಸಿ, ಕುಣಿಸಿ, ದಣಿಸಿತು ಹೆಣ್ಣು! (ಮ)   6(3766)

-ಣಿಸಿ ಗೋಣೂ ಮುರಿಯಿತಾ ಮಾಯೆ ಹೆಣ್ಣು!
ಸಿರಿ ಸಂಪತ್ತಿತ್ತು ಮೆರೆಸಿತಾ ಹೆಣ್ಣು!
ಕುತಂತ್ರದಿಂದ ಬಂಧಿಸಿತು ಆ ಹೆಣ್ಣು! (ಗ)
-ಣಿಕೆಯಾಗಿ ಬಹು ಭೋಗಿಯಾಯ್ತಾ ಹೆಣ್ಣು!
ಸಿಪ್ಪೆಯುಳಿದಾಗಪ್ಪಳಿಸಿತಾ ಹೆಣ್ಣು!
ಶರಥನ ಪ್ರಾಣ ಹೀರಿತಾ ಹೆಣ್ಣು! (ರಾ)
-ಣಿಯಾಗಿ ರಾಜ್ಯಭಾರ ಮಾಡಿತಾ ಹೆಣ್ಣು!
ಸಿಕ್ಕಿಬಿದ್ದಾಗ ಕಕ್ಕಾಬಿಕ್ಕ್ಯಾಯ್ತಾ ಹೆಣ್ಣು!
ತುದಿ ಮೊದಲಿಲ್ಲದ ಆಟದ್ದೀ ಹೆಣ್ಣು!
ಹೆತ್ತು ಜಗತ್ತಿಗೇ ತಾಯಿಯಾಯ್ತೀ ಹೆಣ್ಣು! (ಕ)
-ಣ್ಣುರ್ವಿಗೆ ನಿರಂಜನಾದಿತ್ಯಾಗೀ ಹೆಣ್ಣು!!!

ಉಣಿಸುವಳು, ತಣಿಸುವಳಾ ಗಂಗೆ! (ಎ)   2(980)

-ಣಿಸಳುಚ್ಛ, ನೀಚ ಗುಣಗಳಾ ಗಂಗೆ!
ಸುಪುತ್ರ, ಪುತ್ರಿಯರಿತ್ತವಳಾ ಗಂಗೆ!
ರ ಯೋಗೀಶ್ವರನಿಗಾಪ್ತಳಾ ಗಂಗೆ! (ಪಾ)
-ಳು ಭೂಮಿಯ ಪಾವನ ಗೈವಳಾ ಗಂಗೆ!
ಳಮಳಗಳಿಲ್ಲದವಳಾ ಗಂಗೆ! (ಪ್ರಾ)
-ಣಿ ಕೋಟಿಯ ಪ್ರಾಣಕ್ಕಾಧಾರಳಾ ಗಂಗೆ!
ಸುರ, ನರೋರಗರಿಷ್ಟಾರ್ಥಳಾ ಗಂಗೆ!
ರ ಭಗೀರಥಗಿತ್ತವಳಾ ಗಂಗೆ! (ಆ)
-ಳಾದವಗಡಿಯಾಳಾದವಳಾ ಗಂಗೆ!
ಗಂಗಾಧರ ಶಿರ ಶೋಭಾಂಗಳಾ ಗಂಗೆ! (ಬ)
-ಗೆ, ನಿರಂಜನಾದಿತ್ಯನೆಂಬಳಾ ಗಂಗೆ!!!

ಉತ್ತಮ ಕಾಲ ... ಅಂತ್ಯ ಕಾಲ!   1(10)

ಉತ್ತಮ ಲಕ್ಷ್ಯ ... ನಿರ್ಲಕ್ಷ

!
ಉತ್ತಮ ಚಕ್ರ ... ಕಾಲ ಚಕ್ರ!
ಉತ್ತಮ ಕ್ರಮ ... ತ್ರಿವಿಕ್ರಮ!

ಉತ್ತಮಾ ಪುರುಷೋತ್ತಮ! (ಅ)   2(560)

-ತ್ತ ಇತ್ತಾ ಪುರುಷೋತ್ತಮ!
ಮಾಧವಾ ಪುರುಷೋತ್ತಮ!
ಪುರಾಣ ಪುರುಷೋತ್ತಮ! (ಗು)
-ರುರಾಮಾ ಪುರುಷೋತ್ತಮ! (ವೇ)
-ಷೋತ್ತಮಾ ಪುರುಷೋತ್ತಮ! (ಉ)
-ತ್ತಮಾಂಗಾ ಪುರುಷೋತ್ತಮ! (ಮ)
-ಮ ನಿರಂಜನಾ ಉತ್ತಮ!!!

ಉತ್ತಮೋತ್ತಮ,ಅಧಮಾಧಮ ನೀನೇ! (ಹ)   4(1559)

-ತ್ತವತಾರವೆತ್ತಿದತ್ಯುತ್ತಮ ನೀನೇ!
ಮೋಸ, ಕೃತ್ರಿಮದಧಮಾಧಮ ನೀನೇ! (ಚಿ)
-ತ್ತ ಶುದ್ಧಿಯ ಪುರುಷೋತ್ತಮನೂ ನೀನೇ!
ದ, ಮತ್ಸರದ ಮಾನವನೂ ನೀನೇ!
ರಸನಾಗಿ ಮೆರೆವಾತನೂ ನೀನೇ
ನಹೀನನಾದ ದರಿದ್ರನೂ ನೀನೇ!
ಮಾರಹರ ಪರಮೇಶ್ವರನೂ ನೀನೇ! (ಅಂ)
-ಧಕಾರಾವೃತ ನರಕುರಿಯೂ ನೀನೇ!
ಮಕಾರ ರಹಿತ ವಿರಕ್ತನೂ ನೀನೇ!
ನೀತಿಬಾಹಿರಾಚಾರಸಕ್ತನೂ ನೀನೇ! (ನೀ)
-ನೇ ನಿರಂಜನಾದಿತ್ಯ ಸರ್ವಾತ್ಮ ನೀನೇ!!!

ಉತ್ತರಾಧಿಕಾರ್ಯುತ್ತರನಾಗ್ಬಾರದು! (ಮ)   4(2094)

-ತ್ತನಾದವ ಸಿಂಹಾಸನವೇರ್ಬಾರದು!
ರಾಣೀವಾಸದಲ್ಲಿ ಸದಾ ಇರ್ಬಾರದು!
ಧಿಕ್ಕಾರಾರನ್ನೂ ಮಾಡ್ವವನಾಗ್ಬಾರದು!
ಕಾಲು ಕೆದ್ರಿ ಜಗಳಕ್ಕೆ ಹೋಗ್ಬಾರದು! (ವೈ)
-ರುಗ್ರನಾಗಿಹನೆಂದು ಅಂಜಿರ್ಬಾರದು! (ಕ)
-ತ್ತರಿಸದೇ ಅವನನ್ನು ಬಿಡ್ಬಾರದು! (ಶ)
-ರಣಾಗತರನ್ನೆಂದೂ ನೋಯಿಸ್ಬಾರದು!
ನಾಮ ಭಜನೆಯನ್ನುಪೇಕ್ಷಿಸ್ಬಾರದು! (ಹೋ)
-ಗ್ಬಾರದ ಜಾಗಕ್ಕೇನಾದ್ರೂ ಹೋಗ್ಬಾರದು! (ವ)
-ರ ಗುರು ದ್ರೋಹಿಯನ್ನೆಂದೂ ನೊಡ್ಬಾರದು! (ತಿಂ)
-ದು, ನಿರಂಜನಾದಿತ್ಯಗೆ ಕೊಡ್ಬರದು!!!

ಉತ್ಸವಾ ಸಚ್ಚಿದಾನಂದಾತ್ಮೋತ್ಸವ! (ಸ)   2(561)

-ತ್ಸಹವಾಸ ಸತತಾನಂದೋತ್ಸವ! (ಭಾ)
-ವಾನಂದಾ ಶ್ರೀರಾಮ ಭಜನೋತ್ಸವ!
ಹಜಾನಂದಾರಾಮ ಜನ್ಮೋತ್ಸವ! (ಸ)
-ಚ್ಚಿದಾತ್ಮಾನಂದ ಸ್ಥಿತಿ ನಿತ್ಯೋತ್ಸವ! (ಸ)
-ದಾನಂದಾ ನಾಮ ಸಂಕೀರ್ತನೋತ್ಸವ! (ಆ)
-ನಂದತ್ಯಾನಂದಾ ಪಾದ ಪೂಜೋತ್ಸವ!
-ದಾತ, ನಾಥಾಂಜನೇಯ ಭಾವೋತ್ಸವ! (ಆ)
-ತ್ಮೋತ್ಸವಾರಾಮ ಸರ್ನೋತ್ತಮೋತ್ಸವ! (ಉ)
-ತ್ಸವಾರಾಮ ಪಟ್ಟಾಭಿಷೇಕೋತ್ಸವ!
ರ ನಿರಂಜನಾದಿತ್ಯನುತ್ಸವ!!!

ಉತ್ಸಾಹ ಭಂಗ, ಭಯ ತರಂಗ! (ತ)   3(1177)

-ತ್ಸಾಧನೆಗಭಯಾಂಗಾ ಶ್ರೀರಂಗ!
ದ್ದು ಮೀರಬಾರದಾ ತರಂಗ!
ಭಂಗಿಸಬೇಕದನಾ ಶ್ರೀರಂಗ!
ತಿಗೆಡಿಸುವುದಾ ತರಂಗ!
ಕ್ತಗೆ ಗತಿಯಾಗಾ ಶ್ರೀರಂಗ!
ಮ ಸ್ವರೂಪ ಮಾಯಾ ತರಂಗ!
ತ್ವಾರ್ಥಾತ್ಮ ಪ್ರಮೇಯಾ ಶ್ರೀರಂಗ!
ರಂಗ, ವಿಷಯ ರಂಗಾ ತರಂಗ! (ರಂ)
-ಗ, ನಿರಂಜನಾದಿತ್ಯಾ ಶ್ರೀರಂಗ!!!

ಉತ್ಸಾಹ ರಹಿತ ಸೇವೆ ವ್ಯರ್ಥ! (ತಾ)   6(4148)

-ತ್ಸಾರ ಮನೋಭಾವವಿದೆಂದರ್ಥ!
ರಿ, ಹರರಿಗೂ ಇದೆ ಸ್ವಾರ್ಥ!
ಹಿತ, ಸಹಿತನಾಗ್ಲೆಂದರ್ಥ!
ಹಿತೈಷಿಗೆ ಬೇಕಿಲ್ಲನ್ಯರರ್ಥ!
ಪಸ್ಸಿನ ಫಲವುಂಡ ಪಾರ್ಥ!
ಸೇವಕನಿಂತಾದರೆ ಕೃತಾರ್ಥ!
ವೆಸನ ನಾಶಕ್ಕೆ ಪರಮಾರ್ಥ!
ವ್ಯಭಿಚಾರದಿಂದಾಗ್ವುದನರ್ಥ!!!

ಉತ್ಸಾಹಕ್ಕೆ ಪ್ರೋತ್ಸಾಹವಿರಬೇಕು! (ಪ್ರೋ)   5(3053)

-ತ್ಸಾಹಕ್ಕೆ ಉತ್ಸಾಹವೂ ಇರಬೇಕು!
ಗಲಿರುಳ್ದುಡಿವಾಗಿಂತಿರ್ಬೇಕು! (ಧ)
-ಕ್ಕೆ ಧರ್ಮಕ್ಕುಂಟು ಮಾಡದಿರಬೇಕು!
ಪ್ರೋತ್ಸಾಹೋತ್ಸಾಹ ಅನ್ಯೋನ್ಯವಿರ್ಬೇಕು! (ತಾ)
-ತ್ಸಾರವೀರ್ವರಲ್ಲೂ ಇಲ್ಲದಿರ್ಬೇಕು! (ಇ)
-ಹ, ಪರ ಸಾಧನೆ ಹೀಗೆ ಸಾಗ್ಬೇಕು!
ವಿಶ್ವಾಸ ಗೀತೆ ಉಳಿಸಿಕೊಡ್ಬೇಕು! (ಪ)
-ರ ಮತದ ಹುಚ್ಚು ಬಿಡಿಸಬೇಕು!
ಬೇಡಿಕೆಯಿದು ಪೂರ್ತಿಯಾಗಬೇಕು! (ಸಾ)
-ಕು ನಿರಂಜನಾದಿತ್ಯಗಿನ್ನೇನ್ಬೇಕು???

ಉತ್ಸಾಹವಿದ್ದರೆಲ್ಲಾ ಕೇಶವ! (ಉ)   6(4216)

-ತ್ಸಾಹವಿಲ್ಲದಿದ್ದರೆಲ್ಲಾ ಶಿವ!
ರ್ಷಕ್ಕಾಗಿಡು ಸ್ವಚ್ಛ ಮನವ!
ವಿಷಯ ಮುಕ್ತ ಮಾನವ ಶಿವ! (ವ)
-ದ್ದದಕ್ಕೆ ರಾಮ ಜಪ ನೀಡುವ! (ಧ)
-ರೆಯ ವ್ಯವಹಾರ ತ್ಯಜಿಸುವ! (ಎ)
-ಲ್ಲಾ ರಾಮಮಯವೆಂದರಿಯುವ!
ಕೇಡು ಯಾರಿಗೂ ಮಾಡದಿರುವ!
ರಣನಾದಾತ ಹೀಗಿರುವ! (ಅ)
-ವ ನಿರಂಜನಾದಿತ್ಯನಾಗುವ!!!

ಉತ್ಸಾಹವಿಲ್ಲ ಕರ್ಮಕ್ಕೆ ಪ್ರೋತ್ಸಾಹವಿಲ್ಲ! (ತಾ)   3(1139)

-ತ್ಸಾರ ಮಾಡಿದರಾವುದೂ ಸಾಗುವುದಿಲ್ಲ!
ರಿ ಕೃಪೆಯಿಂದಲೇ ನಡೆಯಬೇಕೆಲ್ಲ!
ವಿಧಿಯೆಂದಳುತ್ತ ಹಾಳಾಯ್ತು ಕಾಲವೆಲ್ಲ! (ಬ)
-ಲ್ಲವರ ಮಾತನುಭವಕ್ಕೆ ಬರುತ್ತಿಲ್ಲ!
ರ್ಮ ಹೀಗಾಗಿ ಕೆಡುತ್ತಿರುವುದೆಲ್ಲೆಲ್ಲ! (ಮ)
-ರ್ಮವರಿತವರ ದರ್ಶನವಾಗುತ್ತಿಲ್ಲ! (ಧ)
-ಕ್ಕೆಯಿದರಿಂದಾರ್ಯ ಸಂಸ್ಕೃತಿಗಳಿಗೆಲ್ಲಾ!
ಪ್ರೋತ್ಸಾಹೋತ್ಸಾ ಹಕ್ಕಗತ್ಯೆಂದರೆ ತಪ್ಪಿಲ್ಲ! (ಉ)
-ತ್ಸಾಹ ಹೀನರೆಂದು ಜರೆದು ಫಲವಿಲ್ಲ! (ಅ)
-ಹರ್ನಿಶಿಯಿದೇ ಚಿಂತೆ ಸಾಧಕರಿಗೆಲ್ಲ!
ವಿಶ್ವನಾಥ ತಾನೇ ಬಗೆ ಹರಿಸಲೆಲ್ಲ! (ಬ)
-ಲ್ಲ ನಿರಂಜನಾದಿತ್ಯನಲ್ಲೀ ಹವಾಲೆಲ್ಲ!!!

ಉತ್ಸಾಹವಿಲ್ಲದುತ್ಸವವಾಗದು! (ಪ್ರೋ)   4(1638)

-ತ್ಸಾಹವೀಯದೆ ಉತ್ಸಾಹ ತೋರದು!
ರಿ ಭಕ್ತನಲಕ್ಷಿಸಬಾರದು!
ವಿಧಿಯೆಂದವನ ತಳ್ಳಕೂಡದು! (ಬ)
-ಲ್ಲ ಸುಜ್ಞಾನಿಗೆ ಕಾಠಿಣ್ಯ ಸಲ್ಲದು!
ದುಡಿಸ್ಯುಪವಾಸವಿಡಲಾಗದು! (ಸ)
-ತ್ಸಹವಾಸ ವ್ಯರ್ಥವಾಗಬಾರದು! (ಭ)
-ವಪಾಶವೇಕಿನ್ನೂ ಬಂಧಿಸಿಹುದು?
ವಾದಿಸದ ಸಾಧನೆ ಬೇಕಿಹುದು!
ತಿ, ಸ್ಥಿತಿ ಸ್ಥಿರವಾಗಾಗುವುದು! (ಜಾ)
-ದು, ನಿರಂಜನಾದಿತ್ಯಗಾಗದು!!!

ಉತ್ಸಾಹವೆಷ್ಟಿದ್ದರೇನೋ ಮಿತ್ರಾ? (ಪ್ರೋ)   4(1969)

-ತ್ಸಾಹ ನೀಡಬೇಡವೇನೋ ಮಿತ್ರಾ?
ರ್ಷವಾಗಿರುವುದೆಂತೋ ಮಿತ್ರಾ? (ಸ)
-ವೆಯುತಿದೆ ದೇಹ ನೋಡೋ ಮಿತ್ರಾ! (ದೃ)
-ಷ್ಟಿಯಿನ್ನೂ ಬಿದ್ದಿಲ್ಲವೇಕೋ ಮಿತ್ರಾ? (ಇ)
-ದ್ದ ಮಾತಾಡಿಹೆನು, ಕೇಳೋ ಮಿತ್ರಾ! (ಆ)
-ರೇನ ಗೈವರೀ ವಿಧಿಗೆ? ಮಿತ್ರಾ!
ನೋವೆಲ್ಲಾ ತೊಡೆದು ಹಾಕೋ ಮಿತ್ರಾ!
ಮಿತ್ರಧರ್ಮದಲ್ಲವೇನೋ ಮಿತ್ರಾ?
ತ್ರಾಹಿ, ನಿರಂಜನಾದಿತ್ಯ ಮಿತ್ರಾ!!!

ಉದಯವಾಯ್ತರ್ವತ್ತಾರೆನ್ನುವರು!   5(2536)

ರ್ಶನವಿದು ಭಾಗ್ಯವೆನ್ನುವರು! (ಭ)
-ಯ, ಭಕ್ತಿಯಿಂದ ಕಾಪಾಡೆನ್ನುವರು! (ಭ)
-ವಾಬ್ಧಿಯಿಂದುದ್ಧಾರ ಮಾಡೆನ್ನುವರು! (ಹೋ)
-ಯ್ತಜ್ಞಾನ ನಿನ್ನಾಜ್ಞೆಯಿಂದೆನ್ನುವರು! (ಸ)
-ರ್ವ ಕಾರಣಕರ್ತ ನೀನೆನ್ನುವರು!
(ಕಿ)ತ್ತಾಟ, ಸುತ್ತಾಟ ಸಾಕಿನ್ನೆನ್ನುವರು! (ಕ)
-ರೆಸಿಕೋ ನಿನ್ನ ಪಾದಕ್ಕೆನ್ನುವರು! (ತಿ)
-ನ್ನುವೆವ್ನಾವ್ನಿನ್ನ ಪ್ರಸಾದೆನ್ನುವರು! (ಗು)
-ರು ನಿರಂಜನಾದಿತ್ಯನೆನ್ನುವರು!!!

ಉದ್ಯೋಗಿ ನೀನಾಗಿರಬೇಕಮ್ಯಾ! (ಪಾ)   4(1406)

-ದ್ಯೋಪಚಾರ ಪೂಜೋದ್ಯೋಗವಮ್ಮಾ! (ತ್ಯಾ)
-ಗಿಯಾಗಿರಬೇಕುದ್ಯೋಗಕ್ಕಮ್ಮಾ!
ನಿಚೋಚ್ಛವೆಣಿಸಬಾರದಮ್ಮಾ!
ನಾಮಸ್ಮರಣೆ ಮಾಡಬೇಕಮ್ಮಾ!
ಗಿರಿಜೆಗಾರಾಮ ಮಂತ್ರವಮ್ಮಾ! (ಪ)
-ರಮ ಪಾವನೆಯದರಿಂದಮ್ಮಾ!
ಬೇಡನ್ಯಕಸುಬು ನಿನಗಮ್ಮಾ!
ಕನಕಾಭರಣದೇ ಕಾಣಮ್ಮಾ! (ಅ)
-ಮ್ಮಾ, ನಿರಂಜನಾದಿತ್ಯೋದ್ಯೋಗ್ಯಮ್ಮಾ!!!

ಉದ್ಯೋಗಿಯಾಗ್ಬೇಕು ನೀನಿಲ್ಲೇ! (ಸ)   4(2296)

-ದ್ಯೋಜಾತ ಕೊಡಬೇಕದಿಲ್ಲೇ! (ಮು)
-ಗಿಸಬೇಕು ಜನ್ಮವನ್ನಿಲ್ಲೇ! (ನ್ಯಾ)
-ಯಾನ್ಯಾಯವರಿಯಬೇಕಿಲ್ಲೇ! (ಆ)
-ಗ್ಬೇಕು ದಿಗ್ವಿಜಯವಿದ್ದಲ್ಲೇ!
ಕುರುಕುಲಾಂತ್ಯವಾಗ್ಬೇಕಿಲ್ಲೇ!
ನೀ, ನಾನೆಂಬುದಳಿಯಲಿಲ್ಲೇ!
ನಿತ್ಯಾನಂದವೊದಗಲಿಲ್ಲೇ! (ಇ)
-ಲ್ಲೇ ನಿರಂಜನಾದಿತ್ಯನಲ್ಲೇ!!!

ಉದ್ರೇಕ ಶಾಂತಿಯಿಂದ ತದ್ರೂಪ ಸಿದ್ಧಿ! (ಭ)   6(3556)

-ದ್ರೇಶ್ವರನೇ ಅದು ತಾನೆಂಬ ಪ್ರಸಿದ್ಧಿ!
ರ್ಮ, ಧರ್ಮ ಬದ್ಧವಾದ್ರೆ ಮನಶ್ಯುದ್ಧಿ!
ಶಾಂಭವಿಯಾದರ್ಶದಿಂದ ಭಕ್ತಿ ವೃದ್ಧಿ! (ತಿ)
-ತಿಕ್ಷಾಪತಿ ಸೇವೆಯಿಂದದ್ವೈತ ಸಿದ್ಧಿ! (ತಾ

)
-ಯಿಂದಧಿಕ ದೈವವಿಲ್ಲೆಂದು ಪ್ರಸಿದ್ಧಿ!
ರ್ಪ, ದಂಭದಿಂದ ಕೆಡುವುದು ಬುದ್ಧಿ!
ತ್ವ ಜೀವನಕ್ಕಿದೆರಡೂ ಉಪಾಧಿ! (ಚಿ)
-ದ್ರೂಪವೆಂಬುದೊಂದೇ ನಿತ್ಯ, ಸತ್ಯ, ನಿಧಿ!
ರಮಾರ್ಥ ಸಿದ್ಧನಿಗಿಲ್ಲ ದುರ್ವಿಧಿ!
ಸಿದ್ಧಿ, ರಿದ್ಧಿಗಿಂತಧಿಕ ಯೋಗಸಿದ್ಧಿ! (ಸಿ)
-ದ್ಧಿ, ನಿರಂಜನಾದಿತ್ಯಗಧ್ಯಾತ್ಮ ಸಿದ್ಧಿ!!!

ಉದ್ವೇಗ ಮಾಯೆಗಂದನುದ್ವೇಗೀಶ್ವರಗಂದ! (ಉ)   1(100)

-ದ್ವೇಗಕಿರುವುದು ಮರ್ಯಾದೆ ಜಗದಿಂದ!
ತಿಯಿದನುದ್ವೇಗದಿಂದ ವಂದ್ಯ ಗೋವಿಂದ!
ಮಾಯೆ ಮಾಡುವುದು ಅನಿತ್ಯದಾ ಮೋಹಾನಂದ!
ಯೆಲ್ಲಾ ಸುಳ್ಳು, ಪೊಳ್ಳೆಂದಿರಲದೇ ಆತ್ಮಾನಂದ!
ಗಂಗೆ ಧರಣಿಗಿಳಿದಳು ಉದ್ವೇಗದಿಂದ! (ಅ)
-ದ ಧರಿಸಿಹನು, ಶಿವ ಅನುದ್ವೇಗದಿಂದ! (ಅ)
-ನುದ್ವೇಗ ನೀಡುವುದು ಸತ್ಯ ಸಹಜಾನಂದ!
ದ್ವೇಷಾಸೂಯೆಗೆಡೆಯಾಗುವುದುದ್ವೇಗದಿಂದ!
ಗೀತೆಯುಸುರಿದೀ ನುಡಿ ನಿಜವದರಿಂದ! (ಅ)
-ಶ್ವಮೇಧಾದಿಗಳಾನಂದವೆಲ್ಲುದ್ವೇಗದಿಂದ!
ಮಿಸಬೇಕದರಿಂದನುದ್ವೇಗಾತ್ಮಾನಂದ!
ಗಂಗಾಧರ ಕಾಪಾಲಿಯಾದುದುದ್ವೇಗದಿಂದ! (ಅ)
-ದರಿಂದ ನಿರಂಜನಾದಿತ್ಯನುದ್ವೇಗಾನಂದ!!!

ಉಪಕಾರ ಸ್ಮರಣೆ ಮಾಡು! (ಅ)   5(2935)

-ಪಕಾರ ಬುದ್ಧಿಯನ್ನು ಸುಡು!
ಕಾಲಚಕ್ರದ ಗತಿ ನೋಡು!
ಕ್ತಪಾತ ನಾಡಿಗೆ ಕೇಡು!
ಸ್ಮರಿಸಿ ದತ್ತನ ಕೊಂಡಾಡು! (ಪ)
-ರರ ವಿತ್ತಾಪಹಾರ ಬಿಡು! (ಜಾ)
-ಣೆ ನೀನಾಗಿ ಬಿಟ್ಟಿಡು ಸೇಡು!
ಮಾಯಾ ಮೋಹ ಬಿಟ್ಟೊಡನಾಡು! (ಬೀ)
-ಡು ನಿರಂಜನಾದಿತ್ಯ ನಾಡು!!!

ಉಪಕಾರ ಸ್ಮರಣೆಯಿಲ್ಲದ ಕಾಲ!   3(1256)

ರಮಾರ್ಥ ಚಿಂತನೆಗುಪೇಕ್ಷಾ ಕಾಲ!
ಕಾಮಾತಿರೇಕದಿಂದೊದ್ದಾಡುವ ಕಾಲ! (ಪ)
-ರ ಪೀಡೆಯೇ ಧರ್ಮವಾಗಿರುವ ಕಾಲ! (ವಿ)
-ಸ್ಮಯ, ವಿಚಿತ್ರ ಪ್ರದರ್ಶನದ ಕಾಲ!
ವಿ, ಚಂದ್ರರನ್ನು ಕೆಣಕುವ ಕಾಲ! (ಕಾ)
-ಯಿದೆ, ಕಾನೂನು ಹದಗೆಟ್ಟಿಹ ಕಾಲ! (ಬ)
-ಲ್ಲವರಿಗೆಲ್ಲಾ ಕಲ್ಲೆಸೆಯುವ ಕಾಲ!
ಯಾ, ದಾಕ್ಷಿಣ್ಯಕ್ಕೆಡೆಯಿಲ್ಲದ ಕಾಲ!
ಕಾದಾಟದಿಂದ ಕಂಗೆಟ್ಟಿರುವ ಕಾಲ! (ಕಾ)
-ಲ, ನಿರಂಜನಾದಿತ್ಯನಿಗೊಂದು ಲೀಲ!!!

ಉಪಕಾರ ಸ್ಮರಿಸುವವರ್ವಿರಳ!   6(3684)

ರಮಾತ್ಮ ಕೊಡುತ್ತಿಹನು ಬಹಳ!
ಕಾರ್ಯವಾದ್ಮೇಲ್ಮರೆಯದವರ್ವಿರಳ!
ಕ್ತಗತವಾದಾ ಗುಣ ನರ ಕೀಳ!
ಸ್ಮರಿಸುವನು ಆದಾಗ ಕಿರುಕುಳ!
ರಿಪುಗಳ ಸಂಹರಿಸೆಂದಿಡ್ವ ಗೋಳ!
ಸುಖ ಬಂದಾಗ ದೇವರ ಹೆಸ್ರು ಹೇಳ!
ರ ಗುರುಸೇವೆ ಮಾಡೆಂದರೆ ಕೇಳ! (ಭ)
-ವ ಸಾಗರದಿಂದ ಹೀಗಾಗಿ ಮೇಲೇಳ! (ಗ)
-ರ್ವಿಯಾಗಲ್ಲಿಲ್ಲಿ ತಿರುಗುವಾ ಮರುಳ!
ಕ್ಕಸನ ಕೈಯಿಂದ ಪಾರಾದ ಬಾಳ! (ಬಾ)
-ಳ ಪ್ರಹ್ಲಾದ ನಿರಂಜನಾದಿತ್ಯ ಬಾಳ!!!

ಉಪಚಾರ ಮಾನ್ಯವಮ್ಮಾ!   3(1133)

ಡಬೇಡ ದುಃಖವಮ್ಮಾ!
ಚಾಮುಂಡಾಂಬೆ ವಿಮಲಮ್ಮಾ!
ಗಳೆ ಯೋಗಿಯೊಲ್ಲಮ್ಮಾ!
ಮಾರ್ಗದರ್ಶಿ ನೀನಾಗಮ್ಮಾ! (ಅ)
-ನ್ಯರಿಂದಾಗದೀ ಕಾರ್ಯಮ್ಮಾ!
ರಗುರು ಶಿವನಮ್ಮಾ! (ಅ)
-ಮ್ಮಾ, ನಿರಂಜನಾದಿತ್ಯಮ್ಮಾ!!!

ಉಪನಯನವಾಗಬೇಕು! ಜ್ಞಾನ ಬರಬೇಕು!   1(108)

ರದಾಸ್ಯ ಹೋಗಬೇಕು! ಸ್ವತಂತ್ರ ಇರಬೇಕು!
ರಳಾಟ ತಪ್ಪಬೇಕು! ಆರೋಗ್ಯವಾಗಬೇಕು!
ಮ ನಿಯಮವಿರಬೇಕು! ತಪ ಸಾಗಬೇಕು!
ಗುಮೊಗವಿರಬೇಕು! ಸದಾ ಜಪಿಸಬೇಕು!
ವಾಸವಾಗಿರಬೇಕು! ಬಾಳು ಬೆಳಕಾಗಬೇಕು!
ತಿ ಸ್ಥಿರವಿರಬೇಕು! ಗುರುಕರುಣೆ ಬೇಕು!
ಬೇಡದಿರಬೇಕು! ಬಂದುದಕಾನಂದಿಸಬೇಕು!
ಕುಪಿತನಾಗದಿರಬೇಕು! ಶಾಂತಿ ಕಾಣಬೇಕು!
ಜ್ಞಾನ ಮೂಡುತಿರಬೇಕು! ಮಾಯೆಯಡಗಬೇಕು!
ಯ, ವಿನಯ ಬೇಕು! ನಡೆ ಶುದ್ಧವಾಗಬೇಕು!
ಯಲಾಸೆ ಬಿಡಬೇಕು! ಬ್ರಹ್ಮ ತಾನಾಗಬೇಕು!
ಜ ಧರಿಸಬೇಕು! ಬುದ್ಧಿ ವೃದ್ಧಿಯಾಗಬೇಕು!
ಬೇಕುಲ, ನಿರಂಜನಾದಿತ್ಯನದೆಂದು ಇರಬೇಕು!!!

ಉಪವಾಸ ಮಾಡದೆ ಗತ್ಯಂತರವಿಲ್ಲ! (ನೆ)   4(2411)

-ಪಮಾತ್ರಕ್ಕೇನಾದ್ರೂ ತಿಂದ್ರೂ ಪರವಾ ಇಲ್ಲ!
ವಾಸನೆ ಹೊಟ್ಟೆಯದು ಹೋಗಲೇಬೇಕೆಲ್ಲ!
ಡಿಲ್ಪಿಟ್ರೆ ಮನಸ್ಸ ಉಳಿಗಾಲವಿಲ್ಲ!
ಮಾಯಾಜಾಲ ಕತ್ತರಿಸ್ಬೇಕ್ವಿವೇಕಿಗ್ಳೆಲ್ಲ! (ಒ)
-ಡನಾಡ್ಬೇಕು ಸಾಧು, ಸತ್ಪುರುಷರಲ್ಲೆಲ್ಲ!
ದೆವ್ವಗಳಲ್ಲಿ ನಂಬಿಗೆ ಬಿಡಬೇಕೆಲ್ಲ! (ತ್ಯಾ)
-ಗಬುದ್ದಿಯಿಂದ ನೆಮ್ಮದಿ! ಸಂಶಯವಿಲ್ಲ! (ಅ)
-ತ್ಯಂತೋಪಕಾರಿ ಯೋಗಾಭ್ಯಾಸ, ಮಾಡಿರೆಲ್ಲ!
ತ್ವ ಚಿಂತನೆಗೆ ದಾರಿಯಾಗ್ವುದಿದೆಲ್ಲ! (ವ)
-ರಗುರುಸೇವೆ ತಪ್ಪದೇ ಮಾಡಬೇಕೆಲ್ಲ!
ವಿಘ್ನಗಳನ್ನವನೇ ತಪ್ಪಿಸುವನೆಲ್ಲ! (ಸೊ)
-ಲ್ಲ ನಿರಂಜನಾದಿತ್ಯನದ್ದು ಕೇಳಿರೆಲ್ಲ!!!

ಉಪವಾಸ ಮಾಡ್ಲೇಬೇಕ್ನಾನಿಂದು!   4(2475)

ಡಲಾರೆ ಕಷ್ಟವಿನ್ನು ಮುಂದು! (ಹ)
-ವಾಮಾನ ಸರಿಯಾಗಿಲ್ಲವಿಂದು! (ಅ)
-ಸಮಾಧಾನ ಚಿತ್ತವಿದೆ ಇಂದು!
ಮಾಡಲಾರೆನಾವ ಕೆಲ್ಸವಿಂದು! (ಬಿ)
-ಡ್ಲೇಬಾರದಾರನ್ನೂ ಒಳಗಿಂದು!
ಬೇಸರ ಪಡ್ಬಾರ್ದಾರಿದಕ್ಕಿಂದು! (ಬೇ)
-ಕ್ನಾನಾದ್ರೆ ಕರೆದಾಗ್ಬನ್ನಿ ಮುಂದು!
ನಿಂದೆಗಲಕ್ಷ್ಯ ನನಗೆಂದೆಂದು! (ಇ)
-ದು ನಿರಂಜನಾದಿತ್ಯೇಚ್ಛೆಯಿಂದು!!!

ಉಪಾಯವನ್ನಪಾಯ ಬಿಟ್ಟಿರದಯ್ಯಾ!   4(1882)

ಪಾರಮಾರ್ಥಿಕದಲ್ಲುಪಾಯವಿಲ್ಲಯ್ಯಾ!
ಮ, ನಿಯಮದಿಂದದು ಶುದ್ಧವಯ್ಯಾ!
ರ ಗುರುಭಕ್ತಿ ಕಾವಲವದಕಯ್ಯಾ! (ಉ)
-ನ್ನತಾತ್ಮ ಸಾಕ್ಷಾತ್ಕಾರವೇ ಗುರಿಯಯ್ಯಾ! (ಅ)
-ಪಾಯೈಹಿಕೋಪಾಯಕ್ಕೆ ನಿಶ್ಚಯವಯ್ಯಾ!(ಕಾ)
-ಯಸುಖಕ್ಕಾಗಿ ವಿವಿಧೋಪಾಯವಯ್ಯಾ!
ಬಿದ್ದೆದ್ದೊದ್ದಾಡುವ ಪರಿಣಾಮವಯ್ಯಾ! (ಕೆ)
-ಟ್ಟಿಹ ಜೀವ ಅನಿತ್ಯ ಸ್ವಾರ್ಥದಿಂದಯ್ಯಾ! (ಪ)
-ರಮಾನಂದ ಪ್ರಾಪ್ತಿ ಪರಮಾರ್ಥಕಯ್ಯಾ!
ಮೆ, ಶಮೆಗಳಂಗರಕ್ಷಕರಯ್ಯಾ! (ಅ)
-ಯ್ಯಾ, ನಿರಂಜನಾದಿತ್ಯಗಿಲ್ಲಪಾಯಯ್ಯ!!!

ಉಪ್ಪಿಟ್ಟಿಡ್ಲಿ ದೋಸೆ ಬೇಕೇನಪ್ಪಾ? (ಒ)   3(1063)

-ಪ್ಪಿಗೆಯಾದದ್ದು ತಿನ್ನ ಬೇಕಪ್ಪಾ! (ರೊ)
-ಟ್ಟಿ ಬೇಕಾದರದನ್ನೇ ತಿನ್ನಪ್ಪಾ! (ಕೊ)
-ಡ್ಲಿ, ಬಿಡ್ಲಿ, ನಿನ್ನಿಷ್ಟ ತಿಳಿಸಪ್ಪಾ!
ದೋಷ ನಿನಗಾಗಬಾರದಪ್ಪಾ! (ಆ)
-ಸೆ ನಿನಗೇನಿಲ್ಲೆಂದು ಗೊತ್ತಪ್ಪಾ!
ಬೇಕೇನಾದರೊಂದೀ ದೇಹಕ್ಕಪ್ಪಾ!
ಕೇಳದಿದ್ದರೂ ತಾಯ್ಬಿಡಳಪ್ಪಾ!
ಮಸ್ಕಾರ ಅಪ್ಪನಡಿಗಪ್ಪಾ! (ಅ)
-ಪ್ಪಾ, ನಿರಂಜನಾದಿತ್ಯ ನಮ್ಮಪ್ಪಾ!!!

ಉಪ್ಪು ಹಾಕಿಲ್ಲ, ಸಪ್ಪೆ ಬೇಕಿಲ್ಲಾ! (ತ)   4(1526)

-ಪ್ಪು ತಬ್ಬಲಿ ಮಕ್ಕಳ ಮೇಲೆಲ್ಲಾ!
ಹಾಸು, ಹೊಕ್ಕಾಗಿರ್ಪಾತ್ಮನೆಲ್ಲೆಲ್ಲಾ!
ಕಿರುಕುಳ ಅನ್ಯೋನ್ಯ ತಪ್ಪಿಲ್ಲಾ! (ಬ)
-ಲ್ಲವರಿಗೇನೂ ಕಡಿಮೆಯಿಲ್ಲಾ!
ತ್ಯ, ಧರ್ಮಾಚರಣೆಯಲ್ಲಿಲ್ಲಾ! (ಕ)
-ಪ್ಪೆ, ಹಾವುಗಳ ಬಾಳೇ ಎಲ್ಲೆಲ್ಲಾ!
ಬೇರಾರೂ ಕಾರಣರಿದಕಲ್ಲಾ!
ಕಿವಿ, ಬಾಯ್ಕಣ್ಣಿತ್ತು ಕೊಂದಾ!! “ಅಲ್ಲಾ”! (ಎ)
-ಲ್ಲಾ, ನಿರಂಜನಾದಿತ್ಯಾನಂದಲ್ಲಾ!!!

ಉಬ್ಬೆಗೆ ಹಾಕಿದ ಮೇಲೆ ಗಬ್ಬಿನ ಮಾತೇಕೆ? (ಅ)   4(2031)

-ಬ್ಬೆಯ ಬಳಿಯಿರುವಾಗ ತಬ್ಬಲ್ಯೆನಲೇಕೆ?
ಗೆಳೆಯ ಸದ್ಗುರುವಾಗಿರುವಾಗ್ಭಯವೇಕೆ?
ಹಾರ ಹಾಕಿ ವರಿಸಿದ ಮೇಲ್ಸಂದೇಹವೇಕೆ?
ಕಿವುಡಾದ ಮೇಲೆ ಕೇಳುವ ಚಪಲವೇಕೆ?
ನ ಕರೆವಾಗ ಹಾಲಿಲ್ಲವೆನುವುದೇಕೆ?
ಮೇಳ ತಾಳ, ಗಂಟಲಿದ್ದೂ ಹಾಡಬಾರದೇಕೆ? (ಒ)
-ಲೆಯುರಿಯಿರುವಾಗಡಿಗೆ ಮಾಡ್ಬಾರದೇಕೆ?
ಗನಮಣಿಯಿರುವಾಗೊದ್ದೆಯುಡ್ವುದೇಕೆ? (ಡ)
-ಬ್ಬಿಯಲ್ಲೂಟಾರೋಗ್ಯವಿರ್ಪಾಗುಪವೇಕೆ?
ದಿ ನೀರಿರುವಾಗ ಸ್ನಾನಬಿಡುವುದೇಕೆ?
ಮಾರ್ಗದರ್ಶಿಯಿರುವಾಗ ಅನುಮಾನವೇಕೆ?
ತೇಲ್ಬುರ್ಡೆಯಿರ್ಪಾಗ ಮುಳುಗುವ ಭಯವೇಕೆ? (ಏ)
-ಕೆ ನಿರಂಜನಾದಿತ್ಯನಂತಿಬಾರದೇಕೆ???

ಉಮಾ ಮಹೇಶ್ವರೀ ರಾಜೇಶ್ವರಿ!   3(1305)

ಮಾರಿ ಗರ್ವದಿಂದೀ ಮಹೇಶ್ವರಿ!
ಹೇಶನರಸೀ ರಾಜೇಶ್ವರಿ!
ಹೇರಂಬ ಜನನೀ ಮಹೇಶ್ವರಿ! (ನ)
-ಶ್ವರಾಶಾ ವಿಜಯೀ ರಾಜೇಶ್ವರಿ! (ನಾ)
-ರೀ ಶಿರೋಮಣಿ ಈ ಮಹೇಶ್ವರಿ! (ಕ)
-ರಾಳ ಭದ್ರಕಾಳೀ ರಾಜೇಶ್ವರಿ! (ಅ)
-ಜೇಯ ಮಾಯಾಶಕ್ತೀ ಮಹೇಶ್ವರಿ! (ವಿ)
-ಶ್ವದಾದ್ಯಂತ ರೂಪೀ ರಾಜೇಶ್ವರಿ! (ಹ)
-ರಿನಿರಂಜನಾದಿತ್ಯಾತ್ಮೇಶ್ವರಿ!!!

ಉರಿಯ ಕಾರಣವನ್ನಾರಿಸು!   6(4047)

ರಿಪುಗಳನ್ನು ದೂರ ಓಡಿಸು!
ಶಸ್ಸಿಗಿರ್ಬೇಕ್ಜಿತ ಮನಸ್ಸು!
ಕಾಲಾಕಾಲ ಆಮೇಲೆ ಎಣಿಸು!
ಣಧೀರನೆನಿಸಿ ಜಯಿಸು! (ತೃ)
-ಣ ಸಮಾನ ಹಣವೆಂದೆಣಿಸು!
ರ ಗುರುಪಾದಕ್ಕೆ ನಮಿಸು! (ಮ)
-ನ್ನಾಥ, ಶ್ರೀಕಾಂತ ನೀನೆಂದೊಪ್ಪಿಸು! (ಹ)
-ರಿ, ಹರ, ಬ್ರಹ್ಮನೆಂದವ್ನರ್ಚಿಸು! (ಅ)
-ಸು, ನಿರಂಜನಾದಿತ್ಯಗರ್ಪಿಸು!!!

ಉರಿಯಿತು ಶರೀರ, ಸುರಿಯಿತು ಬೆವರು!   6(3996)

ರಿಸಿಗಳ್ಯಾರಿಂತು ತಪಸ್ಸು ಮಾಡಿಹರು? (ಆ)
-ಯಿತದಕ್ಕೇನೇನೆಂದರುಹ ಬೇಕೀಗವರು!
ತುಟಿ ಎರಡು ಮಾಡದೇಕಿರುವರವರು?
ರಣಾಗತಿಯನ್ನೊದ್ದಿರುವರೀಗವರು!
ರೀತಿ, ನೀತಿ, ಕಲಿಸದೇ ಬಾಯಿ ಮುಚ್ಚಿಹರು! (ಪ)
-ರಮಾರ್ಥದ ಹಿರಿಮೆ ತೋರದಿರುತಿಹರು!
ಸುಖ, ದುಃಖಕ್ಕಾಗದವರೆಂಥಾ ಹಿರಿಯರು? (ಯಾ)
-ರಿದಕ್ಕೆಲ್ಲಾ ಪರಿಹಾರ ತೋರಿಸುವವರು? (ತಾ)
-ಯಿ, ತಂದೆ ನಮ್ಮೆಲ್ಲರಿಗಾಗಿರುವಾ ದೇವರು!
ತುರೀಯಾತೀತನವನೆಂಬರು ಬಲ್ಲವರು!
ಬೆಟ್ಟದ ಶಿಖರವೇರಿರುತ್ತಿಹನೆಂಬರು!
ರ ಗುರು ದತ್ತಾತ್ರೇಯನವನೆನುವರು!
ರುಜು ಮಾರ್ಗಿ ನಿರಂಜನಾದಿತ್ಯಾತೆನ್ನುವರು!!!

ಉಷಾ! ಅನಿರುದ್ಧ ತಾನೊಬ್ಬ ಪುರುಷ! (ದೋ)   5(3164)

-ಷಾರೋಪಣೆ ಮಾಡುವುದಲ್ಲ ಪೌರುಷ!
ಪ್ಪನಮೇಲೆ ಬಂತು ನಿನಗೆ ರೋಷ! (ಅ)
-ನಿರುದ್ಧನೊಡನಾಟ ನಿನಗೆ ತೋಷ! (ಗು)
-ರು ಗೋಪಾಲ ನಿಮಗಿತ್ತ ಪಾರಿತೋಷ! (ಶು)
-ದ್ಧವಾದುದಾಗ ಬಾಣನಸು ಸಂತೋಷ!
ತಾಮಸ ಬುದ್ಧಿಯಲ್ಲಿ ತುಂಬಿತ್ತು ದ್ವೇಷ! (ತಾ)
-ನೊಪ್ಪದಿದ್ದನು ಬಾಣ ವೈಷ್ಣವ ವೇಷ! (ಕೊ)
-ಬ್ಬ ಮುರಿದು ಕೃಷ್ಣ ಕಳೆದನು ದೋಷ!
ಪುರಾಣದರ್ಥ ತಿಳಿದ್ಬಾಳ್ಬೇಕ್ಮಾನುಷ! (ಪ)
-ರುಷ ಸ್ಪರ್ಶದಿಂದ ಪಾಷಾಣ ನಿರ್ದೋಷ! (ದೋ)
-ಷದೂರ ನಿರಂಜನಾದಿತ್ಯಾ ಪರುಷ!!!

ಉಸಿರಲ್ಲ, ಮನಸಲ್ಲ, ನಾನೆಲ್ಲೆಲ್ಲಾ!   4(1416)

ಸಿಹಿಯಲ್ಲ, ಕಹಿಯಲ್ಲ, ನಾನೆಲ್ಲೆಲ್ಲಾ!
ಸವಲ್ಲ, ಕಸವಲ್ಲ, ನಾನೆಲ್ಲೆಲ್ಲಾ! [ಪ]
-ಲ್ಲವವಲ್ಲ, ಫಲವಲ್ಲ, ನಾನೆಲ್ಲೆಲ್ಲಾ!
ರವಲ್ಲ, ಗಿಡವಲ್ಲ, ನಾನೆಲ್ಲೆಲ್ಲಾ!
ರನಲ್ಲ, ನಾರಿಯಲ್ಲ, ನಾನೆಲ್ಲೆಲ್ಲಾ!
ಟೆಯಲ್ಲ, ದಿಟವಲ್ಲ, ನಾನೆಲ್ಲೆಲ್ಲಾ! [ಕ]
-ಲ್ಲದುವಲ್ಲ, ಹುಲ್ಲದಲ್ಲ, ನಾನೆಲ್ಲೆಲ್ಲಾ!
-ನೆಲವಲ್ಲ, ಜಲವಲ್ಲ ನಾನೆಲ್ಲೆಲ್ಲಾ! [ನ]
-ಲ್ಲೆಯಾನಲ್ಲ, ನಲ್ಲಾನಲ್ಲ, , ನಾನೆಲ್ಲೆಲ್ಲಾ! [ಅ]
-ಲ್ಲಾ ನಿರಂಜನಾದಿತ್ಯಾನಂದನೆಲ್ಲೆಲ್ಲಾ!!!

ಉಸಿರಾಟವಿರುವವರೆಗೆಲ್ಲಾ!   6(3575)

ಸಿಹಿ, ಕಹಿ, ಹುಳಿ, ಖಾರಗಳೆಲ್ಲಾ!
ರಾತ್ರಿ, ಹಗಲು, ಉದಯಾಸ್ತವೆಲ್ಲಾ! (ಕೂ)
-ಟ, ನೋಟ, ಆಟ, ಪಾಠಾದಿಗಳೆಲ್ಲಾ!
ವಿಕಲ್ಪ, ಸಂಕಲ್ಪಾರೋಪಗಳೆಲ್ಲಾ!
ರುಚಿ, ಶುಚಿ, ಹಸಿವೆ, ದಾಹವೆಲ್ಲಾ!
ಸನ, ಅಶನಗಳಿಚ್ಛೆಯೆಲ್ಲಾ!
ರ್ಣಾಶ್ರಮ ಧರ್ಮದಾರ್ಭಟವೆಲ್ಲಾ! (ಹ)
-ರೆಯ, ವೃದ್ಧಾಪ್ಯಾದ್ಯವಸ್ಥೆಗಳೆಲ್ಲಾ!
ಗೆಳೆಯ, ಗೆಳತಿಯರ್ಮೋಹವೆಲ್ಲಾ! (ಬ)
-ಲ್ಲಾ, ನಿರಂಜನಾದಿತ್ಯಾನಂದವೆಲ್ಲಾ!!!

ಉಸಿರೆಳೆಯುತಿದೆ ನೋಡು!   6(3488)

ಸಿರಿ ಸಹಿತೀ ಬೀಡ ಬಿಡು! (ಮ)
-ರೆಯದೀಗಾದ್ರು ಜಪಮಾಡು! (ವೇ)
-ಳೆ ಕಾದು ಅಪ್ಪನನ್ನು ಕೂಡು!
ಯುಗವಾವುದಾದ್ರೇನು? ಓಡು!
ತಿರುಗಿ ನೋಡ್ಬೇಡ ಈ ನಾಡು! (ಹಿಂ)
-ದೆ, ಮುಂದಿನ ಮಾತನ್ನು ಸುಡು!
ನೋಟ, ಕೂಟಾನಂದ ಸಾಕ್ಮಾಡು! (ಪಾ)
-ಡು, ನಿರಂಜನಾದಿತ್ಯ ಹಾಡು!!!

ಶ್ರೀ ಶ್ರೀ ನಿರಂಜನಾನಂದ ಸರಸ್ವತಿ
ಅವಧೂತ ಶ್ರೀ ಶ್ರೀ ನಿರಂಜನಾನಂದ ಸರಸ್ವತಿ