ಇಂದವನಿಗೊಂದು ಪುಷ್ಪ ಗುಚ್ಛ! (ಅ)   4(1533)

-ದವನ ಪಾದದಲತಿ ಉಚ್ಛ! (ಭ)
-ವದ ಬಂಧನ ಬೇಡೆಂಬುದಾ ಗುಚ್ಛ!
ನಿತ್ಯಾನಂದವೆಂಬುದತಿ ಉಚ್ಛ!
ಗೊಂಬೆಯಾಟ ಸಾಕೆಂಬುದಾ ಗುಚ್ಛ!
ದುರ್ವಿಷಯ ವಿಜಯ ಅತ್ಯುಚ್ಛ!
ಪುಣ್ಯ, ಪಾಪ ಭ್ರಾಂತ್ಯೆಂಬುದಾ ಗುಚ್ಛ! (ಪು)
-ಷ್ಪವೃಷ್ಟಿಯ ಮಧ್ಯಾ ಗುಚ್ಛ ಉಚ್ಛ!
ಗುಣಾತೀತವಾಗಿಹುದಾ ಗುಚ್ಛ! (ಗು)
-ಚ್ಛ ನಿರಂಜನಾದಿತ್ಯತಿ ಉಚ್ಛ!!

ಇಂದಿನ ದಿನ ಸುದಿನ, ಶಾಂತಿ! (ಹಿಂ)   4(2282)

-ದಿನ, ಮುಂದಿನದೆಂಬುದು ಭ್ರಾಂತಿ!
ಲ್ಲನೊಡನಿರ್ಪುದೇ ವಿಶ್ರಾಂತಿ!
ದಿವ್ಯ ಜೀವನಾನಂದ ಸಂಪ್ರಾಪ್ತಿ! (ಅ)
-ನನ್ಯ ಭಕ್ತಗಂದೊಂದೇ ಸಂಗಾತಿ!
ಸುಗುಣಾವಳಿಯಿಂದೂರ್ಧ್ವ ಗತಿ! (ಅ)
-ದಿಲ್ಲದಿದ್ದರಾಗ್ವುದಧೋ ಗತಿ! (ದಿ)
-ನಪನದ್ದಾದರ್ಶ ಆತ್ಮ ಸ್ಥಿತಿ!
ಶಾಂಭವಿಯಂತಿರಬೇಕು ಸತಿ! (ಪ)
-ತಿ ನಿರಂಜನಾದಿತ್ಯಾಧಿಪತಿ!!!

ಇಂದಿನ ದಿನ ಸುದಿನವಯ್ಯಾ! (ಮುಂ)   3(1371)

-ದಿನದೆಂತಿರುವುದೋ ಕಾಣೆನಯ್ಯಾ!
ಶ್ವರವ ನಂಬಿರಬೇಡಯ್ಯಾ! (ಹಿಂ)
-ದಿನ ಯೋಚನೆ ಬಿಟ್ಟುಬಿಡಯ್ಯಾ!
ಮಿಸು ಗುರುಪಾದಕ್ಕೀಗಯ್ಯಾ!
ಸುರಧೇನು ಸಮಾನವದಯ್ಯಾ!
ದಿನ ರಾತ್ರ್ಯದನು ನೆನೆಯಯ್ಯಾ!
ರಳಾಟ ಬಿಟ್ಟೋಡುವುದಯ್ಯಾ! (ಶಿ)
-ವ ಸಾಯುಜ್ಯ ಲಭಿಸುವುದಯ್ಯಾ! (ಅ)
-ಯ್ಯಾ, ನಿರಂಜನಾದಿತ್ಯ ಸಾಂಬಯ್ಯಾ!!!

ಇಂದಿರಾ! ನೀನಿರುವ ಮನೆ ಸುಂದರ!   1(243)

ದಿನ, ರಾತ್ರಿ ಅಲ್ಲಿ ಗಾನ ಮನೋಹರ!
ರಾರಾಜಿಪನಲ್ಲಿ ಶ್ರೀಹರಿ ಶೃಂಗಾರ!
ನೀನೇಕೆ ಶೋಕಿಪುದಾತ ಗುಡಿಗಾರ!
ನಿನ್ನಾಗುಹೋಗಿಗವನೇ ಸದಾಧಾರ!
ರುಚಿ ವಾಸನೆಯಿಂದ ನೀನಿಹೆ ದೂರ!
ಸನಾಶನಗಳವನಲ್ಲಪಾರ!
ರಣ ನಿನ್ನವಗಿಲ್ಲಾತನಮರ!
ನೆರೆ ನಂಬಿರುತಿರಾತನನುಸಾರ! (ವ)
-ಸುಂಧರೆಗರಸನವ ಸವಾಧಾರ! (ಅ)
-ದನರಿತಾನಂದಿಸವನ ಆಕಾರ!
ಮಣ “ನಿರಂಜನಾದಿತ್ಯ ಓಂಕಾರ”!!!

ಇಂದಿರಾನಂದಾ ಪೂರ್ಣಾನಂದ!   4(1967)

ದಿವ್ಯ ಜ್ಞಾನಾನಂದಾತ್ಮಾನಂದ!
ರಾಮನಾಮಾ ಭಜನಾನಂದ!
ನಂದ ಕಂದಾ ಮುಕುಂದಾನಂದ!
ದಾತ, ನಾಥಾ ವಿರಕ್ತಾನಂದ!
ಪೂಷ್ಣರೂಪಾ ವೈಷ್ಣವಾನಂದ! (ವ)
-ರ್ಣಾಶ್ರಮೋದ್ಧಾರಾ ಕೃಷ್ಣಾನಂದ! (ಕಂ)
-ದ ನಿರಂಜನಾದಿತ್ಯಾನಂದ!!!

ಇಂದು ಕುಣಿತಾ, ನಾಳೆ ಹೆಣ ತಾ!   6(4113)

ದುರ್ಬುದ್ಧಿಯನ್ನು ಇನ್ನೂ ಬಿಡ ತಾ!
ಕುರಿಯಾದರೆ ನರ ವ್ಯರ್ಥ ತಾ! (ಋ)
-ಣಿ ಜಗನ್ಮಾತೆಗಾಗಬೇಕು ತಾ!
ತಾನೇ ಅವಳಾಗಬೇಕೀಗ ತಾ!
ನಾಳೆಗೆಂದರದು ಕಠಣತಾ! (ಕೊ)
-ಳೆಯ ತೊಳೆಯಬೇಕೀಗಿಂದ ತಾ!
ಹೆಣ್ಣಾಗೀಶ್ವರನಾಳ್ಬೇಕ್ರಾಜ್ಯ ತಾ! (ಗ)
-ಣರಾಜ್ಯದುದ್ಧಾರ ಮಾಡ್ಬೇಕು ತಾ! (ಮಾ)
-ತಾ, ಶ್ರೀ ನಿರಂಜನಾದಿತ್ಯ ಪಿತಾ!!!

ಇಂದು ನಾನಳುವೆ, ನಾಳೆ ನೀನಳುವೆ!   6(3625)

ದುರಹಂಕಾರ ಪಡಬೇಡ ಮಗುವೆ!
ನಾಮ, ರೂಪ, ಮಾತ್ರ ಬೇರ್ಬೇರೆ ಶಿಶುವೆ!
ಮ್ಮ ಮನಸ್ಸನ್ನು ನಾವ್ಜೈಸ್ಬೇಕ್ಮಗುವೆ! (ಅ)
-ಳುವುದು, ನಗ್ವುದು ಅದ್ರಾಟ ಶಿಶುವೆ!
ವೆಸನ, ಸಂತೋಷ ಅದಿದ್ರೆ ಮಗುವೆ!
ನಾನೋಪಾಯ ಇದ ಜೈಸಲು ಶಿಶುವೆ! (ಇ)
-ಳೆಯ ಸುಖಕ್ಕಾಶಿಸದಿರ್ಬೇಕ್ಮಗುವೆ!
ನೀನಾರೆಂಬುದನ್ನರಿಯಬೇಕ್ಯಿಶುವೆ!
ಶ್ವರದದೇಹ ನೀನಲ್ಲ ಮಗುವೆ! (ಕೀ)
-ಳು ವ್ಯಾಮೋಹಕ್ಕೊಳಗಾಗ್ಬಾರ್ದು ಶಿಶುವೆ! (ಸೇ)
-ವೆ ನಿರಂಜನಾದಿತ್ಯನದ್ಮಾಡ್ಮಗುವೆ!!!

ಇಂದು ಭಾನುವಾರ ಪೂರ್ಣೇಂದು!   2(689)

ದುಡಿವರಿಗಾರಾಮವಿಂದು!
ಭಾವ ಕೀರ್ತನಾನಂದವಿಂದು!
ನುಡಿ ನಡೇಕಾಗಲೆಂದೆಂದು!
ವಾಸುದೇವಗಾನಂದವಿಂದು! (ವ)
-ರ ಗರುಡೋತ್ಸವೆಲ್ಲೆಲ್ಲಿಂದು!
ಪೂಜಾನಂದ ವ್ಯಾಸನಿಗಿಂದು! (ಪೂ)
-ರ್ಣೇಂದು ಬಹಳಾನಂದವಿಂದು! (ಇಂ)
-ದು, ಶ್ರೀ ನಿರಂಜನಾದಿತ್ಯೇಂದು!!!

ಇಂದು ಹಸುರೆಲೆ, ಮುಂದು ತರಗೆಲೆ!   4(1524)

ದುಗುಡವಿದಕೇಕೆ ಮಂಕು ಮರುಳೇ!
ರೆಯದಿರವು ಸ್ಥಿರವಲ್ಲ ಬಾಲೆ!
ಸುಖ, ದುಃಖ, ಬೆಳಕು, ಕತ್ತಲೆ ಲೀಲೆ! (ಮ)
-ರೆಯಬಾರದಿದನು ವಿಷಯ ಲೋಲೆ! (ಕೊ)
-ಲೆ ಸುಲಿಗೆಗಳಿಗಲ್ಲ ಪಾಠಶಾಲೆ!
ಮುಂಜಾನೆ ಬೇಗೆದ್ದು ಓದು ಸ್ತೋತ್ರ ಮಾಲೆ!
ದುರ್ಬುದ್ಣಿ ನಾಶಕ್ಕಿದು ಸರ್ವಾನುಕೂಲೆ!
ತ್ವ ಚಿಂತನೆ ತಪ್ಪದೆ ಮಾಡಾಮೇಲೆ (ವ)
-ರ ಗುರುಕೃಪೆಯಿಂದಾಗುವೆ ಸುಶೀಲೆ! (ಬ)
-ಗೆಬಗೆಯಲರ್ಗಳಿಂದ ವನಮಾಲೆ! (ಮಾ)
-ಲೆ, ನಿರಂಜನಾದಿತ್ಯನಡಿಗಾ ಬಾಲೆ!!!

ಇಂದೇನು ಬರೆಯಬೇಕಪ್ಪಾ?   3(1244)

ದೇಶ, ಕಾಲ ಚೆನ್ನಾಗಿಲ್ಲಪ್ಪಾ! (ಅ)
-ನುದಿನನ್ಯಾಯ ಹೆಚ್ಚಿತಪ್ಪಾ!
ಡವರುಳಿವಂತಿಲ್ಲಪ್ಪಾ! (ದೊ)
-ರೆಯದೊಂದೂಟವರಿಗಪ್ಪಾ! (ಭ)
-ಯ, ಭಕ್ತಿಗೆಲ್ಲಾ ಹಿಂಸೆಯಪ್ಪಾ!
ಬೇಕೀಗ ನಿನ್ನ ಸಹಾಯಪ್ಪಾ!
ರುಣೆ ತೋರಿ ಕಾಪಾಡಪ್ಪಾ! (ಅ)
-ಪ್ಪಾ, ಶ್ರೀ ನಿರಂಜನಾದಿತ್ಯಪ್ಪಾ!!!

ಇಂದೇನು ವಿಶೇಷ ಮಹಾಸ್ವಾಮಿ? (ಹಿಂ)   4(2091)

-ದೇನಿತ್ತೋ ಅದೊಂದೇ ಇಂದೂ ಪ್ರೇಮಿ! (ಅ)
-ನುಭವವದೆನಗೆಂದು ಸ್ವಾಮಿ?
ವಿಮುಖನಾಗ್ಬೇಕ್ವಿಷಯಕ್ಪ್ರೇಮೀ! (ನಾ)
-ಶೇಕಾಗಿಲ್ಲಾ ವಿಷಯಾಸೆ ಸ್ವಾಮಿ?
ಡ್ಭುಜೇಶನನ್ನೊಲಿಸು ಪ್ರೇಮಿ!
ನವೆಲ್ಲೆಲ್ಲೋಡಾಡ್ತಿದೆ ಸ್ವಾಮಿ! (ದೇ)
-ಹಾನಂದಕ್ಕುಪೇಕ್ಷೆ ಮಾಡು ಪ್ರೇಮಿ!
ಸ್ವಾಮಿಯನುಗ್ರಹವಾಗ್ಲಿ ಸ್ವಾಮಿ! (ಸ್ವಾ)
-ಮೀ, ನಿರಂಜನಾದಿತ್ಯಾತ್ಮ ಪ್ರೇಮಿ!!!

ಇಂದೇನು ಸಂದೇಶ ಗುರುದೇವಾ?   4(1862)

ದೇಶಕ್ಕೆ ಸೌಖ್ಯ ಕೊಡಲಾ ದೇವಾ! (ತ)
-ನು, ಮನ ಸ್ವಚ್ಛವಿಡಲಾ ದೇವಾ!
ಸಂಗ್ರಾಮ ಬುದ್ಧಿ ಸುಡಲಾ ದೇವಾ!
ದೇಹ ಮೋಹ ಬಿಡಿಸಲಾ ದೇವಾ! (ಈ)
-ಶ ಸೇವೆಯಲ್ಲಿರಿಸಲಾ ದೇವಾ!
ಗುರುಭಕ್ತಿ ಹೆಚ್ಚಿಸಲಾ ದೇವಾ! (ಕ)
-ರುಣೆಯಿಂದ ಹರಸಲಾ ದೇವಾ! (ಮುಂ)
-ದೇನೆಂಬುದ ಮರೆಸಲಾ ದೇವಾ! (ದೇ)
-ವಾ ನಿರಂಜನಾದಿತ್ಯ ಮಾಧವಾ!!!

ಇಂದೊದಗಿದುದರಲ್ಲಿಂದಾನಂದವಿರಲಿ! (ಮುಂ)   6(4109)

-ದೊದಗುವುದಕ್ಕೀಗೇಕೆ ಯೋಚಿಸುತ್ತಿರಲಿ?
ತ್ತನ ಚಿತ್ತದಲ್ಲಿ ಇದ್ದಂತೆಲ್ಲಾ ಆಗಲಿ!
ಗಿರಿಧಾರಿಯ ಸಮಯೋಚಿತ ಬುದ್ಧಿರಲಿ!
ದುಶ್ಯಾಸನನ ಕಾಮಾಂಧತೆಯಿಲ್ಲದಿರಲಿ! (ನಂ)
-ದಕಂದನ ನೆನಪು ಸದಾ ಇರುತ್ತಿರಲಿ!
ಕ್ಷಣೆಯ ಭಾರ ಅವನಿಗೇ ಸೇರಿರಲಿ! (ಇ)
-ಲ್ಲಿಂದಲ್ಲಿಗಲ್ಲಿಂದಿಲ್ಲಿಗಲೆದಾಟ ತಪ್ಪಲಿ!
ದಾರಿ ನಡೆದದ್ದೂರಿನ ಕಡೆಗಾಗಿರಲಿ! (ಆ)
-ನಂದೋತ್ಸವ ಊರು ಸೇರಿದ ನಂತರಾಗಲಿ!
ಣಿದಾಯಾಸವೆಲ್ಲಾ ಆಗ ಇಲ್ಲದಾಗಲಿ!
ವಿಕಲ್ಪವೀಗ ಮನಸ್ಸಿಗೆ ಬಾರದಿರಲಿ!
ಕ್ತ ಗುರಿಸಿದ್ಧಿಗೋಸ್ಕರ ಬತ್ತಿಹೋಗಲಿ! (ಅ)
-ಲಿಪ್ತತೆ ನಿರಂಜನಾದಿತ್ಯನಂತೆ ಬರಲಿ!!!

ಇಂದೋ ನಾಳೆಯೋ ಸಾವೀ ದೇಹಕ್ಕೆ!   5(2599)

ದೋಷಾರೋಪಣೆ ಮಾಳ್ಪುದೇತಕ್ಕೆ!
ನಾನಾರೆಂದರಿತಿಲ್ಲವೇತಕ್ಕೆ? (ಕೊ)
-ಳೆಯೆಲ್ಲಾ ತೊಳೆಯಬೇಕಿದಕ್ಕೆ!
ಯೋಗದಿಂದ ಮುಕ್ತಿ ಈ ಜೀವಕ್ಕೆ!
ಸಾಧನೆ ಹೆಚ್ಚೇಕ್ದಿನದಿನಕ್ಕೆ!
ವೀತರಾಗ ತಾನಾಗುವುದಕ್ಕೆ!
ದೇವ ಮಾನವನಾಗುವುದಕ್ಕೆ!
ರಿ ಸ್ಮರಣೆ ದಾರಿಯದಕ್ಕೆ! (ಅ)
-ಕ್ಕೆ ನಿರಂಜನಾದಿತ್ಯಾನಂದಕ್ಕೆ!!!

ಇಂದ್ರಿಯ ಚಪಲದಿಂದಾಗದು ಜನ್ಮ ಸಫಲ! (ಮಾ)   6(4238)

-ದ್ರಿಯ ದೇಹಾವಸಾನಕ್ಕೆ ಕಾರಣ ಈ ಚಪಲ!
ದುವಂಶ ನಾಶಕ್ಕೆ ಹೇತುವಾಯಿತೀ ಚಪಲ! (ಸಂ)
-ಚರಿಸಿದ ಶಿವ ಭ್ರಮಿಸಿ, ಧರಿಸಿ ಕಪಲ!
ರ್ವತರಾಜಕುಮಾರಿ ಸುಟ್ಟುಕೊಂಡಳೊಡಲ!
ಕ್ಷಣನಣ್ಣನಂಬಿಗೆ ಬಲಿ ವಾಲಿಯ ಬಲ! (ಅಂ)
-ದಿಂದೆಲ್ಲಾ ಅನುಭವಿಸುತ್ತಿಹರು ಕರ್ಮ ಫಲ!
ದಾರಿ ತಪ್ಪಿ ನಡೆವವರದ್ದೆಲ್ಲಾ ಕೋಲಾಹಲ!
ತಿಗೆಟ್ಟು, ಮತಿಗೆಟ್ಟು ಸೇರುವರು ಪಾತಾಳ!
ದುಡಿಮೆಗಳೆಲ್ಲಾ ಆಗುತ್ತಿವೆ ಸದಾ ವಿಫಲ!
ಯಿಸದಿದ್ದರಿಂದ್ರಿಯ ಇರದು ಭುಜ ಬಲ! (ಮ)
-ನ್ಮಥ ಮಾಡಿದ ತಪ್ಪಿಗಾಯ್ತು ಪ್ರಾಯಶ್ಚಿತ್ತ ಫಲ!
ದಾ ತೊಳೆಯುತ್ತಿರಬೇಕು ಮನಸ್ಸಿನ ಮಲ!
ಲಿಸುವುದಾಗ ಸಚ್ಚಿದಾನಂದಾತ್ಮ ಪ್ರಬಲ! (ಬ)
-ಲ ನಿರಂಜನಾದಿತ್ಯಾನಂದ ದತನಿಗಚಲ!!!

ಇಂದ್ರಿಯ ಸುಖಾಸಕ್ತಿಯಿಂದವ್ಯವಸ್ಥೆ! (ಬ)   6(3673)

-ದ್ರಿ ಯಾತ್ರೆ ಮಾಡಿದ್ರೂ ಹೋಗ್ದು ದುರವಸ್ಥೆ!
ಮ, ನಿಯಮದಭ್ಯಾಸ ಸುವ್ಯವಸ್ಥೆ!
ಸುಸೂತ್ರ ಜೀವನಕ್ಕಿದೊಳ್ಳೇ ಅವಸ್ಥೆ!
ಖಾರ, ಹುಳಿ, ಜಾಸ್ತಿ ತಿಂದರೆ ಅಸ್ವಸ್ಥೆ!
ತ್ವಾಹಾರ ಸೇವನೆಯಿಂದ ಸುಸ್ವಸ್ಥೆ! (ಮು)
-ಕ್ತಿ ಸಿದ್ಧಿಗಿದು ಸರಿಯಾದ ವ್ಯವಸ್ಥೆ! (ಬಾ

)
-ಯಿಂದಾಡಿದ ಮಾತ್ರಕ್ಕಾಗ್ದು ಸುವ್ಯವಸ್ಥೆ!
ಮೆ, ಶಮೆಯಿಂದಾಗುವುದಾತ್ಮಾವಸ್ಥೆ!
ಒನೆ ಲಿನೆ ಮಿ

ಸಿ
ರ ಗುರುಕೃಪೆಯಿಂದ ನಿಜಾವಸ್ಥೆ! (ಸಂ)
-ಸ್ಥೆ, ನಿರಂಜನಾದಿತ್ಯಗೆ ವಿಶ್ವಸಂಸ್ಥೆ!!!

ಇಂದ್ರಿಯಕ್ಕಾಳಾಗ್ಯಾಯ್ತು ಸರ್ವನಾಶ! (ಪಾ)   5(2589)

-ದ್ರಿಗಳ ಮನೆಯಾಯ್ತು ಹಿಂದೂದೇಶ! (ಕಾ)
-ಯ ಮೋಹದಿಂದಾಯ್ತು ಸ್ವರೂಪನಾಶ! (ತಿ)
-ಕ್ಕಾಟಕ್ಕಾಯ್ತು ಕಾರಣ ನಾನಾ ಆಶ! (ಗೋ)
-ಳಾಟ ತಪ್ಪಿಸಬಾರದೇಕಾ ಈಶ? (ಯೋ)
-ಗ್ಯಾಯೋಗ್ಯ ವಿಚಾರವೇ ಧರ್ಮೋದ್ದೇಶ! (ಆ)
-ಯ್ತು ಅಜ್ಞಾನದಿಂದ ಸಂಸಾರ ಪಾಶ!
ರ್ವ ಕಲ್ಯಾಣಕ್ಕಾಗಿರ್ಲಿ ಸರ್ವೇಶ! (ಗ)
-ರ್ವ ಬೇಡೆಂಬುದಾ ಸದ್ಗುರೂಪದೇಶ!
ನಾಮಸ್ಮರಣೆ ಮಾಡೆಂಬನಾ ಶ್ರೀಶ! (ಶ್ರೀ)
-ಶ, ನಿರಂಜನಾದಿತ್ಯ ಸ್ವಪ್ರಕಾಶ!!!

ಇಂದ್ರಿಯಗಳ ದುರೂಪಯೋಗಿಸ್ಬೇಡ! (ಚಂ)   5(3097)

-ದ್ರಿಕಾಮೋದದಲ್ಲಿ ಮೈ ಮರೆತಿರ್ಬೇಡ!
ದುಪತಿಯ ಬಾಳ್ಗಪಾರ್ಥ ಮಾಡ್ಬೇಡ!
ದ್ದೆ, ಹೊಲಗಳಿಗಾಗಿ ಗುದ್ದಾಡ್ಬೇಡ! (ಕ)
-ಳಕಳಿಯ ಪ್ರಾರ್ಥನೆ ಮಾತ್ರ ಬಿಡ್ಬೇಡ!
ದುಸ್ಸಹವಾಸದಲ್ಲೆಂದಿಗೂ ಇರ್ಬೇಡ!
ರೂಢಿಯೆಂದು ಕಣ್ಮುಚ್ಚಿ ಏನೂ ಮಾಡ್ಬೇಡ!
ತಿತಪಾವನನ ಧ್ಯಾನ ಬಿಡ್ಬೇಡ!
ಯೋಗಸಾಧನೆಗನಾದರ ತೋರ್ಬೇಡ!
ಗಿರೀಶನಂತೆ ಯೋಗಿಯಾಗದಿರ್ಬೇಡ! (ಬೈ)
-ಸ್ಬೇಡನ್ಯರನ್ನೆಂದಿಗೂ ನಿಂದಿಸ್ಬೇಡ! (ಜ)
-ಡದೇಹ ನಿರಂಜನಾದಿತ್ಯನೆನ್ಬೇಡ!!!

ಇಂದ್ರಿಯಗಳದ್ದು ಸಹಕಾರ ಸಂಘ! (ನಿ)   6(3789)

-ದ್ರಿಸುವಾಗಲೂ ಸಹಕಾರ ಆ ಸಂಘ!
ಶಸ್ಸು ಸಹಕಾರವಿಲ್ದಿದ್ರೆ ಭಂಗ!
ಣಗಳಿವರ ನಾಯಕಂತರಂಗ! (ಬಾ)
-ಳಬೇಕಾದ್ರಿವಕ್ಕೆ ಬೇಕದರ ಸಂಗ! (ಗೆ)
-ದ್ದು ಇವುಗಳನ್ನು ಅದಾಗ್ವುದು ರಂಗ!
ರ್ವ ನಾಮ, ಸರ್ವ ರೂಪ ಶ್ರೀ ಸಾರಂಗ!
ರಿ ಇವನಿಗೆ ಹಾಸಿಗೆ ಭುಜಂಗ!
ಕಾಲನಿವನಿಂದ ನಿರ್ನಾಮ ಅನಂಗ!
ಘುವೀರನಿಂದ ಶಿವ ರಾಮಲಿಂಗ!
ಸಂಸಾರಾಬ್ಧಿ ತಾರಕ ಆ ಪಾಂಡುರಂಗ! (ಸಂ)
-ಘ, ನಿರಂಜನಾದಿತ್ಯನದ್ದು ನಿಸ್ಸಂಘ!!!

ಇಂದ್ರಿಯಗಳ್ಮುದಿಯಾದವ್ಮನದ ಸಂಗದಲ್ಲಿ! (ಉ)   6(4079)

-ದ್ರಿಕ್ತವಾಗಿದ್ದವಾಸಂಗದಲ್ಲೊಂದು ಕಾಲದಲ್ಲಿ!
ತ್ನವಿಲ್ಲದಾಗಿರುವವೀಗ ವೃದ್ಧಾಪ್ಯದಲ್ಲಿ! (ಈ)
-ಗಲೂ ಅವುಗಳು ಮನಸ್ಸಿನ ಅಧೀನದಲ್ಲಿ! (ಬಾ)
-ಳ್ಮುಗಿದ್ರೆ ಸಾಕಾಗಿದೆ ಅದಕ್ಕೀಗ ಭೂಮಿಯಲ್ಲಿ!
ದಿನಕ್ಕೊಂದು ರೋಗ ಅವಕ್ಕೀಗ ಈ ದೇಹದಲ್ಲಿ!
ಯಾವ ದೇವರಿಗೂ ಕರುಣೆಯಿಲ್ಲವುಗಳಲ್ಲಿ!
ಯೆಗಾಗಿ ದುಡಿದದ್ದೆಲ್ಲಾ ವ್ಯರ್ಥವಾಯಿತಿಲ್ಲಿ! (ನೋ)
-ವ್ಮನಸ್ಸಿಗೂ ಆಗುತಿದೆ ಈಗವುಗಳಿಂದಿಲ್ಲಿ!
ಶ್ವರದವುಗಳಿಗೆ ದರ್ಶನದಾಸೆ ಇಲ್ಲಿ!
ತ್ತ ದಯೆದೋರಿದರೆ ಸಾಯ್ವನಾನಂದದಲ್ಲಿ!
ಸಂಗ ಕೊನೆಗಾಲದಲ್ಲಾದ್ರೂ ಇರಲವನಲ್ಲಿ!
ತಿ, ಮತಿದಾತ ತಾನೆನಿಸಿಕೊಂಡವನಲ್ಲಿ!
ಶೇಂದ್ರಿಯಗಳೆಂದವರ ಕರೆದವನಲ್ಲಿ! (ಇ)
-ಲ್ಲಿ ನಿರಂಜನಾದಿತ್ಯಾನಂದ ರೂಪೀ ದತ್ತನಲ್ಲಿ!!!

ಇಂದ್ರಿಯಾತೀತಾನಂದ ನಿರಂಜನಾದಿತ್ಯಾನಂದ! (ಉ)   6(4071)

-ದ್ರಿಕ್ತ ಮನೋಭಾವವಿಲ್ಲದ ಇದೇ ನಿತ್ಯಾನಂದ!
ಯಾಗ, ಭೋಗದಿಂದಾಗುವುದೆಲ್ಲಾ ಅನಿತ್ಯಾನಂದ!
ತೀರ್ಥ, ಕ್ಷೇತ್ರ ಯಾತ್ರೆಯಿಂದುತ್ತಮ ಸಂಸ್ಕಾರಾನಂದ!
ತಾಮಸ ವೃತ್ತಿ ನಾಶಕ್ಕಿದೊಂದು ಸಾಧನಾನಂದ!
ನಂಜುಂಡೇಶ್ವರನ ಸ್ಥಿತಿ ಇಂದ್ರಿಯಾತೀತಾನಂದ!
ತ್ತಾತ್ರೇಯ ಪರಿಪೂರ್ಣ ಪರಬ್ರಹ್ಮಾತ್ಮಾನಂದ!
ನಿಶಿ, ದಿನನುದಿನವಿರ್ಪುದಿದಮರಾನಂದ!
ರಂಭೆ, ಊರ್ವಶಿಯರಿಂದಾಗ್ವುದು ಮರಣಾನಂದ!
ರಾ, ಜನ್ಮಾತೀತವಾಗಿಹುದು ಸಚ್ಚಿದಾನಂದ!
ನಾದ, ಬಿಂದು, ಕಲಾತೀತವಿದು ಪ್ರಣವಾನಂದ!
ದಿಗ್ದಿಗಂತ ವ್ಯಾಪಕವಿದು ಸರ್ವೇಶ್ವರಾನಂದ!
ತ್ಯಾಗಿ, ಯೋಗಿ, ವಿರಾಗಿ ನಿರಂಜನಾದಿತ್ಯಾನಂದ!
ನಂದಕಂದ, ಗೋವಿಂದ, ಮುಕುಂದ, ಸಹಜಾನಂದ!
ಶಾವತಾರ ಸಾಕ್ಷಿ ನಿರಂಜನಾದಿತ್ಯಾನಂದ!!!

ಇಂದ್ರಿಯಾನಂದದಿಂದಾದ ದೇಹವಿದು! (ಬ)   6(3908)

-ದ್ರಿಕಾಶ್ರಮಕ್ಕೆ ಹೋದ್ರೂ ಚೇಷ್ಟೆ ಬಿಡದು!
ಯಾದವೇಂದ್ರನನ್ನು ಸಹ ಕಾಡಿತ್ತದು!
ನಂದಿವಾಹನನ್ನೂ ಪೀಡಿಸಿತ್ತದು!
ತ್ತಾವತಾರಕ್ಕೆ ಹೇತುವಾಯಿತದು! (ಅಂ)
-ದಿಂದೆಲ್ಲಾ ಐಹಿತಕ್ಕೆ ದುಡಿಯಿತದು!
ದಾರಿ ಸಾಗದೆ ಸುಸ್ತಾಗಿ ಸತ್ತಿತದು!
ರಿದ್ರ, ಶ್ರೀಮಂತ, ಎಂದೊದ್ದಾಡಿತದು!
ದೇಶ, ವಿದೇಶ, ಸುತ್ತಾಡಿ ಬಂದಿತು!
ರ್ಷವಿಲ್ಲದೆ ಬೆಂಡಾಗಿ ಹೋಯಿತದು!
ವಿರಕ್ತಿಯಿಂದ ಮುಕ್ತಿ ಅದಕ್ಕಹುದು! (ಇ)
-ದು ನಿರಂಜನಾದಿತ್ಯ ಸಾಧಿಸಿದುದು!!!

ಇಕ್ಕಿದ್ದುಂಡಾರೋಗ್ಯವಾಗಿದ್ದುಕೋ! (ಅ)   3(1325)

-ಕ್ಕಿ, ಗೋಧಿಗೆಲ್ಲಾ ಹೊಂದಿಸಿದ್ದುಕೋ! (ಕ)
-ದ್ದುಂಬಭ್ಯಾಸವಿಲ್ಲದಂತಿದ್ದುಕೋ! (ಬೇ)
-ಡಾದಾಗ ಉಪವಾಸವಿದ್ದುಕೋ! (ಆ)
-ರೋಪವಾರಲ್ಲೂ ಮಾಡದಿದ್ದುಕೋ! (ಯೋ)
-ಗ್ಯ ಪರಮಾರ್ಥಿ ನೀನಾಗಿದ್ದುಕೋ! (ಯಾ)
-ವಾಗಲೂ ಸತ್ಸಂಗಿಯಾಗಿದ್ದುಕೋ! (ಯೋ)
-ಗಿಯಾಗ್ಯಾತ್ಮಾನಂದದಲ್ಲಿದ್ದುಕೋ! (ಮ)
-ದ್ದು, ಮಾಟದಾಟ ಹೂಡದಿದ್ದುಕೋ! (ಅ)
-ಕೋ, ನಿರಂಜನಾದಿತ್ಯಾಗಿದ್ದುಕೋ!!!

ಇಚ್ಚಾಭೇದಿಯಾಗಿ ಸ್ವಚ್ಛವಾಯ್ತು! [ಉ]   4(2329)

-ಚ್ಛಾಟನೆ ಪಿಶಾಚಿಗಳಿಗಾಯ್ತು!
ಭೇದ ಭಾವನೆಯಳಿದಂತಾಯ್ತು!
ದಿವಾಕರನ ದರ್ಶನವಾಯ್ತು!
ಯಾಜ್ಞವಲ್ಕ್ಯ ತಾನೆಂಬರಿವಾಯ್ತು!
ಗಿರಿಧರನ ಗೀತಾರ್ಥವಾಯ್ತು!
ಸ್ವಧರ್ಮ ಪ್ರೇಮಾಭಿವೃದ್ಧಿಯಾಯ್ತು! (ಉ)
-ಚ್ಛಸ್ಥಿತಿಯತ್ತ ನಡೆದದ್ದಾಯ್ತು!
ವಾಸುದೇವನೊಳಗೈಕ್ಯವಾಯ್ತು! (ಆ)
-ಯ್ತು ನಿರಂಜನಾದಿತ್ಯ ತಾನಾಯ್ತು!!!

ಇಚ್ಛೆ ದೇವರದಲ್ಲದಿನ್ಯಾವನದು? (ಸ್ವೇ)   5(2831)

-ಚ್ಛೆ ನನ್ನವನಿಚ್ಛೆಯಲ್ಲದಿನ್ಯಾರದು?
ದೇವ, ಜೀವರೊಂದೆಂಬ ಮಾತದಾರದು?
ರ ಗುರುದತ್ತನಿದನ್ನಾಡಿದುದು!
ಕ್ತ ಮಾಂಸದ ಗೊಂಬೆ ತಾನಲ್ಲೆಂದುದು!
ಮೆ, ಶಮೆಯಿಂದದಳವಡುವುದು! (ತ)
-ಲ್ಲಣವಿದರಿಂದಳಿದು ಹೋಗುವುದು!
ದಿವ್ಯಜೀವನದಿಂದುದ್ಧಾರಾಗುವುದು! (ಸ)
-ನ್ಯಾಸವಿದರಿಂದ ಸಾರ್ಥಕಾಗುವುದು!
ರದರಾಜನ ದರ್ಶನಾಗುವುದು!
ಗ ನಾಣ್ಯದಾಶೆ ನಾಶವಾಗುವುದು! (ಇ)
-ದು ನಿರಂಜನಾದಿತ್ಯನುಸುರಿದುದು!!!

ಇಚ್ಛೆಯ ಉದ್ರೇಕವೇ ಅಶಾಂತಿ!   6(3445)

(ತು)-ಚ್ಛೆನಿಪ ವಿಷಯತ್ಯಾಗ ಶಾಂತಿ!
ಜ್ಞ, ಯಾಗಾದಿಗಳೆಲ್ಲಾ ಭ್ರಾಂತಿ!
ನ್ನತಿಗಾಗಿರಬೇಕು ಕ್ರಾಂತಿ!
(ಇ)-ದ್ರೇನು ಪುರುಷಾರ್ಥ ಅಪಖ್ಯಾತಿ!
(ತ್ರಿ)-ಕರಣ ಶುದ್ಧನಿಗಾವ ಜಾತಿ?
ವೇದಾಂತ ಜೀವನವೇ ಸುನೀತಿ!
ಜ್ಞಾನದಿಂದಾಗಿಹುದು ಭೀತಿ!
ಶಾಂಭವಿ ತಾನಾಗ್ವುದೊಳ್ಳೇ ರೀತಿ!
(ಗ)-ತಿ ಶ್ರೀ ನಿರಂಜನಾದಿತ್ಯ ಪತಿ!!!

ಇಟ್ಟ ಶ್ರೀರಂಗಪಟ್ಟಣದಲ್ಯಾಕಿಟ್ಟ? (ಅ)   3(1089)

-ಟ್ಟ ಹಾಸವಿಲ್ಲದಿಷ್ಟಜೀವನಕ್ಕಿಟ್ಟ!
ಶ್ರೀ ಶಿವಾನಂದನಿಷ್ಟವೆಂಬುದಕ್ಕಿಟ್ಟ!
ರಂಗನಾಥನ ಸಾಯುಜ್ಯ ಸುಖಕ್ಕಿಟ್ಟ! (ಯೋ)
-ಗರಾಜನಪೇಕ್ಷೆ ಸಲ್ಲಿಸಲಿಕ್ಕಿಟ್ಟ!
ತಿಸೇವಾಫಲವುಣ್ಣಿಸಲಿಕ್ಕಿಟ್ಟ! (ಕೊ)
-ಟ್ಟ ವಚನ ಪರಿಪಾಲಿಸಲಿಕ್ಕಿಟ್ಟ! (ತಾ)
-ಣ ನಿರಂಜನಾದಿತ್ಯ ನಿಲಯಕ್ಕಿಟ್ಟ!
ತ್ತ ವಚನ ಬರೆಯುವುದಕ್ಕಿಟ್ಟ! (ಕ)
ಲ್ಯಾಣಿಯ ಸೇವೆ ಸ್ವೀಕರಿಪುದಕ್ಕಿಟ್ಟ! (ಯಾ)
-ಕಿಟ್ಟಾಕಿಟ್ಟ ತಾನೂಟ ಬಿಟ್ಟು ಇಕ್ಕಿಟ್ಟ? (ಅ)
-ಟ್ಟಡಿಗೆಯ ನಿರಂಜನಾದಿತ್ಯಕ್ಕಿಟ್ಟ!!!

ಇಟ್ಟ ಹಾಗಿರಗೊಡಿಸಲಿಲ್ಲ! (ಕೊ)   4(1825)

-ಟ್ಟದ್ದನ್ನುಣ್ಣುವಭ್ಯಾಸವಾಗಿಲ್ಲ!
ಹಾಳು ಹರಟೆ ಕೇಳದಾಗಿಲ್ಲ! (ರೇ)
-ಗಿ ಕೂಗಾಡುವುದನ್ನು ಬಿಟ್ಟಿಲ್ಲ! (ಪ)
-ರಧನದಾಸೆಯಿನ್ನೂ ಹೋಗಿಲ್ಲ!
ಗೊಡ್ಡಾಕಳ ಜೀವನಳಿದಿಲ್ಲ! (ಮ)
-ಡಿ ಬಟ್ಟೆಗಿಷ್ಟ ಪಡುತ್ತಲಿಲ್ಲ!
ತ್ಸಂಗ ನಿಷ್ಠೆಯಿಂದಾಗುತ್ತಿಲ್ಲ! (ಮಾ)
-ಲಿಕನಲ್ಲನನ್ಯ ಭಕ್ತಿಯಿಲ್ಲ! (ನ)
-ಲ್ಲ, ನಿರಂಜನಾದಿತ್ಯನಾಗಿಲ್ಲ!!!

ಇಟ್ಟಂತಿದ್ದರೆ ಕಟ್ಟಿಲ್ಲ ಸಿಟ್ಟಿಲ್ಲ! (ಅ)   1(132)

-ಟ್ಟಂಥೂಟುಂಡರಾಕೆಆ

ಪಕೆಡೆಯಿಲ್ಲ!
ತಿರುಗುವ ಚಕ್ರ ನೂಕಬೇಕಿಲ್ಲ! (ಅ)
-ದ್ಧಲಾಗದ ಜಲಕಾತಂಕವಿಲ್ಲ! (ಅ)
-ರೆದ ಮಸಾಲೆ ಹುರಿಯಬೇಕಿಲ್ಲ!
ಟ್ಟಿದ್ದಾಕಳಿಗೆ ಗೂಟ ಬೇಕಿಲ್ಲ! (ಅ)
-ಟ್ಟಿಟ್ಟಡಿಗೆಗೆ ಯೋಚನೆ ಬೇಕಿಲ್ಲ! (ಅ)
-ಲ್ಲಹನ ಇಲ್ಲಿ ಹುಡುಕಬೇಕಿಲ್ಲ!
ಸಿಹಿಯುಂಬಾಗ ಕಹಿ ನೆನಪಿಲ್ಲ! (ಅ)
ಟ್ಟಿದ್ದ ಉರಗನ ಭಯ ಮತ್ತಿಲ್ಲ! (ಅ, ಒ)
-ಲ್ಲದ್ದು ನಿರಂಜನಾದಿತ್ಯನಿಗಿಲ್ಲ!!!

ಇಡ್ಬೇಕಾದಂತಿಟ್ಕೊಡ್ಬೇಕಾದದ್ಕೊಟ್ಟಿದ್ದಾನೆ! (ಆ)   6(3677)

-ಡ್ಬೇಡ ಪ್ರತಿ ಮಾತೆಂದು ಆಜ್ಞಾಪಿಸಿದ್ದಾನೆ!
ಕಾರ್ಯ ಮಾಡಿಸಿದಂತೆ ಮಾಡು ಎಂದಿದ್ದಾನೆ!
ದಂಡ, ಕಮಂಡಲು ಕೈಲಿರಲೆಂದಿದ್ದಾನೆ!
ತಿತಿಕ್ಷೆ ಬಲವಾಗಿರಬೇಕೆಂದಿದ್ದಾನೆ! (ಉ)
-ಟ್ಕೊಳ್ಳೋದಿಲ್ಲದಿದ್ರೂ ಆಗ್ಬಹುದೆಂದಿದ್ದಾನೆ! (ಬಿ)
-ಡ್ಬೇಡ ಲಂಗೋಟಿಯನ್ನೆಂದಿಗೂ ಎಂದಿದ್ದಾನೆ!
ಕಾಲಾಕಾಲೆನ್ನದೇ ಜಪ ಮಾಡೆಂದಿದ್ದಾನೆ!
ತ್ತಾತ್ರೇಯನೇ ನಿನ್ನ ಗುರು ಎಂದಿದ್ದಾನೆ! (ತಂ)
-ದ್ಕೊಳ್ಬೇಕವನ ಗುಣ ನಿನ್ನಲ್ಲೆಂದಿದ್ದಾನೆ! (ಹು)
-ಟ್ಟಿ, ಸಾಯುವ ಬಾಳು ಇನ್ನು ಸಾಕೆಂದಿಆನೆ! (ಒ)
-ದ್ದಾಟವಿದ್ರಿಂದೆಂದುಪದೇಶ ಮಾಡಿದ್ದಾನೆ! (ತಾ)
-ನೆ

ನಿರಂಜನಾದಿತ್ಯನಾಗೀಗುದ್ಸಿದ್ದಾನೆ!!!

ಇಣಿಕಿ ನೋಡುವುದೇಕಮ್ಮಾ? (ಗ)   2(845)

-ಣಿಕೆಯ ಸ್ವಭಾವವದಮ್ಮಾ!
ಕಿರುಕುಳವಿದರಿಂದಮ್ಮಾ!
ನೋಡು ದೈವೀ ಭಾವದಿಂದಮ್ಮಾ! (ಮಾ)
-ಡು ಯೋಗಸಾಧನೆ ನೀನಮ್ಮಾ! [ಹಾ]
-ವು ಹಗ್ಗದಲ್ಲಿ ಭ್ರಾಂತಿಯಮ್ಮಾ!
ದೇವರ ನಾಮದ ಹಾಡಮ್ಮಾ! (ಶೋ)
-ಕವೆಲ್ಲಾ ನಿರ್ಮೂಲಾಗ್ವುದಮ್ಮಾ! (ಅ)
-ಮ್ಮಾ! ನಿರಂಜನಾದಿತ್ಯಾಗಮ್ಮಾ!!!

ಇಣಿಕಿಣಿಕಿ ಕುಣಿಕೆಯೊಳಗಾಗ್ಬೇಡ! (ಕ)   5(2767)

-ಣಿ ಕೇಳಿ ಕಣ್ಣೀರು ಸುರಿಸಿ ಅಳಬೇಡ!
ಕಿವಿ ಆ ಮಾತಿಗೀಮಾತಿಗೆ ಕೊಡಬೇಡ! (ಮ)
-ಣಿದು ಗುರುಪಾದಕ್ಕೆ ನಮಿಸದಿರ್ಬೇಡ!
ಕಿಚ್ಚಿಗಿಂತಧಿಕ ಹೊಟ್ಟೆಕಿಚ್ಚು! ಪಡ್ಬೇಡ!
ಕುಚೋದ್ಯದಿಂದ ಯಾರನ್ನೂ ನೋಯಿಸಬೇಡ! (ಅ)
-ಣಿಮಾದ್ಯಷ್ಟ ಸಿದ್ಧಿಗಳಿಗಾಶಿಸಬೇಡ!
ಕೆಲಸದಲ್ಲಿ ಅಶ್ರದ್ಧೆ ತೋರಿಸಬೇಡ! (ಬಾ)
-ಯೊಳಾಡಿ ಮಾಡದವನುಪದೇಶ ಬೇಡ! (ನ)
-ಳ; ಹರಿಶ್ಚಂದ್ರಾದಿಗಳಂತಿರದಿರ್ಬೇಡ!
ಗಾಡಿ, ಕುದ್ರೆಗಳನ್ಯೋನ್ನತೆ ತಪ್ಪಿಸ್ಬೇಡ! (ಬಾ)
-ಗ್ಬೇಕಿವ್ಚಾಲಕನಿಚ್ಛೆಗೆ! ಮರೆಯಬೇಡ! (ಮೃ)
-ಡ ನಿರಂಜನಾದಿತ್ಯನಾಜ್ಞೆ ಮೀರಬೇಡ!!!

ಇತ್ತೆನ್ದದ್ದಿಂದಿಲ್ಲದಿತ್ತು! (ಮ)   6(3455)

-ತ್ತೆ ಇಲ್ಲೆಂದದ್ರಲ್ಲದಿತ್ತು! (ನ)
-ನ್ದ ಕಂದ ನಾಟದಾಗಿತ್ತು! (ಎ)
-ದ್ದಿಂದಿನ ವೇಳೆ ಹಾಗಿತ್ತು!
ದಿನಚರಿ ಸಾಗುತ್ತಿತ್ತು! (ಮ)
-ಲ್ಲ ಮರ್ದನಗೆಲ್ಲಾ ಗೊತ್ತು!
ದಿವ್ಯೋಪದೇಶದಾಗಿತ್ತು! (ಗೊ)
-ತ್ತು ನಿರಂಜನಾದಿತ್ಯಾಯ್ತು!!!

ಇದಾವ ಬಂಧ ಹೇಳಪ್ಪಾ?   4(1522)

ದಾಶರಥಿಯ ಚಿತ್ತಪ್ಪಾ!
ರಾತ್ಮ ಬೋಧೆಯಿದಪ್ಪಾ!
ಬಂಧನ ಹರಿವುದಪ್ಪಾ!
ರ್ಮ ಕರ್ಮಾದರ್ಶಾವಪ್ಪಾ!
ಹೇಳಲಿನ್ನೇನು ನಾನಪ್ಪಾ? (ಒ)
-ಳ, ಹೊರಗೆಲ್ಲವನಪ್ಪಾ! (ಅ)
-ಪ್ಪಾ, ನಿರಂಜನಾದಿತ್ಯಪ್ಪಾ!!!

ಇದಿರು ನೋಡುವುದಾರನ್ನು?   3(1159)

ದಿವ್ಯನಾಮ ಪ್ರೇಮಾತ್ಮನನ್ನು!
ರುಕ್ಮಿಣೀಶ ಶ್ರೀಕೃಷ್ಣನನ್ನು!
ನೋಡಿ, ಕೂಡಬೇಕವನನ್ನು! (ಪಾ)
-ಡುತ್ತೊಂದಾಗಬೇಕು ನಾನಿನ್ನು! (ಸಾ)
-ವು, ನೋವಿಲ್ಲದಾನಂದನನ್ನು!
ದಾರಿ ತೋರಿದಾ ಗುರುವನ್ನು!
ಕ್ಷಿಪಾ ಶ್ರೀರಂಗಾತ್ಮನನ್ನು! (ಚೆ)
-ನ್ನು ನಿರಂಜನಾದಿತ್ಯನನ್ನು!!!

ಇದೆ ಒಂದಾಣೆ, ಬೇಕೊಂದಾನೆ (ಎ)   1(413)

-ದೆಯಳತೆಯಂತಂಗಿ ತಾನೆ?
ಒಂದಕ್ಕೊಂದನ್ವಯ ಬೇಕ್ತಾನೆ?
ದಾರಿಗೆ ತಕ್ಕ ಗಾಡಿ ತಾನೇ? (ಎ)
-ಣೆಸರಿಯಿರೆ ಸುಖ ತಾನೇ?
ಬೇನೆಗೆ ತಕ್ಕ ಔಷಧಿ ತಾನೇ?
ಕೊಂಬಿಗಪ್ಪ ಕೊಳವೆ ತಾನೇ?
ದಾತ, ನಾಥ, ದತ್ತನೇ ತಾನೇ? (ಎ)
-ನೆ, ನಿರಂಜನಾದಿತ್ಯ ನಾನೇ!!!

ಇದೇಕಿಂದೀ ಪಂಚೆ ನೀ ಹೊದ್ದೆ?   4(1643)

ದೇಹಕ್ಕಾಗಾಗ ಬೇಕೀ ಹುದ್ದೆ!
ಕಿಂಡಿಯಿಂದಂದೆಯೆಂದು ಹೊದ್ದೆ!
ದೀರ್ಘಕಾಲ ಬೇಕಿಲ್ಲಾ ಹುದ್ದೆ!
ಪಂಚೇಂದ್ರ್ಯ ಶಾಖಕ್ಕೀಗ ಹೊದ್ದೆ!
ಚೆನ್ನಾಗಿದೆ ನಿನ್ನಾಜ್ಞಾ ಹುದ್ದೆ!
ನೀಡಿದಾತ ನೀನೆಂದು ಹೊದ್ದೆ!
ಹೊಸದಲ್ಲ ನನಗೀ ಹುದ್ದೆ! (ಹು)
-ದ್ದೆ, ನಿರಂಜನಾದಿತ್ಯಾನೊದ್ದೆ!!!

ಇದೇಕೇ ನಿನಗೀ ಹುಚ್ಚೀಗ? (ಪ)   4(1794)

-ದೇಪದೇ ತಿನ್ನುವೇಚ್ಛೇಕೀಗ?
ಕೇಟ್ಟಭ್ಯಾಸವಿದ ಬಿಡೀಗ!
ನಿಶ್ಚಲ ತತ್ವದಲ್ಲಿರೀಗ!
ಶ್ವರದಾನಂದ ಸಾಕೀಗ! (ಯೋ)
-ಗೀಶ್ವರ ಶಿವನಾಗಿರೀಗ!
ಹುದುಗಿಸಾಶೆಗಳನೀಗ! (ನೆ)
-ಚ್ಚೀ ಗುರುಪಾದಪದ್ಮವೀಗ! (ಸೊ)
-ಗ ನಿರಂಜನಾದಿತ್ಯನೀಗ!!!

ಇದ್ದಾಗ ಇತ್ತಿಲ್ಲ, ಸತ್ತಾಗ ಸದ್ದಿಲ್ಲ! [ಒ]   5(3252)

-ದ್ದಾಡುವುದೇ ಆಯ್ತು ಜೀವಮಾನವೆಲ್ಲಾ!
ಜೇಂದ್ರನಂತಳುವುದಕ್ಕೆ ಗೊತ್ತಿಲ್ಲ!
ಹಸುಖದಾಸೆ ಸತ್ರೂ ಸಾಯೋದಿಲ್ಲ! (ಬು)
-ತ್ತಿ ಕಟ್ಲಿಕ್ಕೆ ನಿತ್ಯ ಉಪವಾಸಾಯ್ತಲ್ಲಾ! (ತ)
-ಲ್ಲಣ ಬೇಡೆಂದವ ಕರುಣಿಸಿಲ್ವಲ್ಲಾ!
ರ್ವವೂ ಪ್ರಸಾದವೆನ್ಲೇಬೇಕಾಯ್ತಲ್ಲಾ! (ದ)
-ತ್ತಾತ್ರೇಯನ ಲೀಲೆ ತಿಳಿದವರಿಲ್ಲ!
ರುಡನಂತೆ ಹೊರ್ಲಿಕ್ಕವ ಸಿಕ್ಕಿಲ್ಲ!
ತತ ಪ್ರಾರ್ಥಿಸದೆ ನಿರ್ವಾಹವಿಲ್ಲ! (ಮ)
-ದ್ದಿಕ್ಕಿ ಸಾಯುವ ಸಾಹಸ ಬೇಕಿಲ್ಲ! (ಒ)
-ಲ್ಲ, ನಿರಂಜನಾದಿತ್ಯಡ್ಡದಾರಿಹಿಡಿಯೋಲ್ಲ!!!

ಇದ್ದಾಗೀಯದವನಿದ್ದೇನು ಫಲ? (ಮ)   4(1975)

-ದ್ದಾನೆಯಂತಡ್ಡಾಡಿದರಾವ ಫಲ? (ಯೋ)
-ಗೀಶ್ವರ ತಾನಾಗದಿದ್ದೇನು ಫಲ?
ಮಾಭ್ಯಾಸದಿಂದೀ ಜನ್ಮ ಸಫಲ! (ಯಾ)
-ದವೇಂದ್ರನ ಕೃಪೆಯಿಂದಾ ಸುಫಲ! (ಅ)
-ವನೊಲಿಯದಿದ್ದರೆಲ್ಲಾ ನಿಷ್ಫಲ!
ನಿತ್ಯ ನಿಜಾನಂದವೇ ಆ ಸತ್ಫಲ! (ಸ)
-ದ್ದೇನಿಲ್ಲದೋದ್ಧಾಮ ಸ್ಥಿತಿ ಆ ಫಲ! (ಅ)
-ನುಭವಿಗೆ ಪರಮಾನಂದಾ ಫಲ!
ಲಾಪೇಕ್ಷಾತೀತ ಭಾವಕ್ಕಾ ಫಲ! (ಬ)
-ಲ ನಿರಂಜನಾದಿತ್ಯಾನಂದಾ ಫಲ!!!

ಇದ್ದು ಸತ್ತಂತಿರಲಿಕ್ಕಾಗೀಗ ಬಂದೆ! (ಸ)   4(1448)

-ದ್ದು ಮಾಡಿ ಹಿಂದೆಲ್ಲಾ ಬಹಳ ನಾನೊಂದೆ!
ರ್ವ ಸಾಕ್ಷಿಯಾಗಿರಲಿಕ್ಕೀಗ ಬಂದೆ! (ಹೆ)
-ತ್ತಂಮ ಮುಂತಾದವರ್ಗಾಗ್ಯಾಗ ನಾ ನೊಂದೆ!
ತಿರಿತಿರಿಗಿ ಅಲೆದಾಡೀಗ ಬಂದೆ! (ತ)
-ರತರದ ಕಷ್ಟದಿಂದಾಗ ನಾ ನೊಂದೆ! (ಆ)
-ಲಿಪ್ತನಾಗಿ ಇರಬೇಕೆಂದೀಗ ಬಂದೆ!(ಬೆ)
-ಕ್ಕಾಗಿ ಬೆಕ್ಕೆಗೀಡಾಗಿ ಆಗ ನಾ ನೊಂದೆ! (ಯೋ)
-ಗೀಶ್ವರನಾಗಿ ತ್ಯಾಗಿಯಾಗೀಗ ಬಂದೆ! (ನಾ)
-ಗರೀಕರೊಡಗೂಡಿ ಆಗ ನಾ ನೊಂದೆ!
ಬಂಧು, ಬಾಂಧವ ಕೃಷ್ಣನೆಂದೀಗ ಬಂದೆ! (ಬಂ)
-ದೆ, ನಿರಂಜನಾದಿತ್ಯನಾಗಿಲ್ಲಿ ನಿಂದೆ!!!

ಇದ್ದು, ಪ್ರಯೋಜನವಿಲ್ಲ, ಮುದ್ದು ಮಾಳ್ಪವರಿಲ್ಲ! (ಬಿ)   6(4005)

ದ್ದು, ಒದ್ದಾಡದೇ, ಸದ್ದಿಲ್ಲದೇ, ಸಾಯಬೇಕೀ ಮಲ್ಲ!
ಪ್ರತಾಪವಿವನದನ್ನು ಬಣ್ಣಿಸುವವರಿಲ್ಲ!
ಯೋಗಿರಾಜ ಶಿವನಿಗೆ ಅದೆಲ್ಲಾ ಬೇಕಾಗಿಲ್ಲ!
ಗತ್ತಿಗವನನ್ನು ತಿಳಿವ ಯೋಗ್ಯತೆಯಿಲ್ಲ!
ರಳುತಿಹರಿದರಿಂದ ಜನಕೋಟಿಯೆಲ್ಲಾ!
ವಿಚಿತ್ರವೀ ಪ್ರಪಂಚದ ಕಾರ್ಯಕ್ರಮಗಳೆಲ್ಲಾ! (ತ)
-ಲ್ಲಣಗೊಂಡಮಾತ್ರಕ್ಕೆ ಪರಿಹಾರವಾಗ್ವುದಿಲ್ಲ!
ಮುಕುತಿ ತತ್ವಾರ್ಥವರಿತು ಸಾಧಿಸಬೇಕೆಲ್ಲಾ! (ಉ)
-ದ್ದು, ಕಡ್ಲೇಬೆಳೆಯಾಂಬೋಡೆ ತಿಂದಂತೆ ಇದೇನಲ್ಲ!
ಮಾಡಿದ್ರೆ ಸದಾ ತತ್ವಾರ್ಥ ಚಿಂತನೆ ಕಷ್ಟವಿಲ್ಲ! (ಬ)
-ಳ್ಪ ಹಿಡಿಯದಿದ್ರೆ ಬರೆಯಲಿಕ್ಕಾಗುವುದಿಲ್ಲ! (ಅ)
-ವರವರ ಶ್ರದ್ಧೆಯಂತೆ ಪರಿಣಾಮಗಳೆಲ್ಲಾ! (ಹ)
-ರಿ, ಹರ, ಬ್ರಹ್ಮಾದಿಗಳಲ್ಲೇಕತ್ವ ಕಾಣಿರೆಲ್ಲಾ! (ಪು)
-ಲ್ಲ ನಿರಂಜನಾದಿತ್ಯ ನಿಷ್ಟದಂತಿರುವುದೆಲ್ಲಾ!!!

ಇದ್ದುದೇನು ಬಿದ್ದು ಹೋದುದೇನು? [ಇ]   2(840)

-ದ್ದು ಹೋದದ್ದು ಒಡಲಲ್ಲವೇನು?
ದೇಶ ವಿದೇಶ ಸುತ್ತಾಡಿದ್ದೇನು? (ನಾ)
-ನು ಆ ಜಡ ದೇಹಾಗಿಹೆನೇನು?
ಬಿಡಾರ, ಗುಡಾರ ಹಾಕಿದ್ದೇನು? (ಹ)
-ದ್ದು, ಕಾಗೆಯುಂಡ ಕಾಯ ನಾನೇನು?
ಹೋಮ, ನೇಮ, ಕರ್ಮ ಮಾಡಿದ್ದೇನು?
ದುರ್ಬಲದಾ ಶರೀರ ನಾನೇನು? (ತ)
-ದೇಕ ಧ್ಯಾನಮಗ್ನನಾದುದೇನು? [ತ]
-ನು, ಮನಾನಲ್ಲ ನಿರಂಜನಾನು!!!

ಇನ್ನು ನೂರು ವರ್ಷ ಬದುಕಬೇಕಂತೆ! (ತ)   6(4226)

-ನ್ನೂರು ಆ ತನಕ ಸೇರಬಾರದಂತೆ! (ಏ)
-ನೂ, ನಾನು ಅಧೈರ್ಯಪಡಬಾರದಂತೆ! (ಗು)
-ರುವೆಂದು ನನಗೆ ನಮಸ್ಕಾರವಂತೆ!
ರ ವಿರಕ್ತನೊಬ್ಬ ನಾಸೆಯಿಂದಂತೆ! (ಹ)
-ರ್ಷದಿಂದಾತನೆಲ್ಲೆಲ್ಲೂ ಓಡಾಡ್ವನಂತೆ!
ಹು ಸೋಜಿಗವಿದೊಂದು ಮಾತುಕತೆ!
ದುರಾಗ್ರಹವಿಲ್ಲದೆನಗೇಕೆ ಚಿಂತೆ?
ರ್ತನಾಜ್ಞೆಗಾಗದೆನ್ನಿಂದ ಕೊರತೆ!
ಬೇಕೆನಗವನ ಪೂಣ

ಆದರ್ಶತೆ!
ಕಂದರ್ಪನಿಗೊಟ್ಟಬೇಕು ದುಷ್ಟ ಚಿತೆ! (ಚಿಂ)
-ತೆ, ನಿರಂಜನನಾದಿತ್ಯನಿಗಿಲ್ಲವಂತೆ!!!

ಇನ್ನು ಭ್ರಮೆ ನಿನಗ್ಲಿಂದು ನಾ ಬಲ್ಲೆ! (ನ)   6(4100)

-ನ್ನುಪಕಾರವನ್ನೆಂದೂ ಮರೆಯಲೊಲ್ಲೆ!
ಭ್ರಷ್ಟಾಚಾರಕ್ಕೆ ಮನಸ್ಸು ಮಾಡಲೊಲ್ಲೆ!
ಮೆದೆ ಹಾಕದೇ ಹುಲ್ಲನ್ನು ಇಡಲೊಲ್ಲೆ!
ನಿನ್ನ ಕರ್ತವ್ಯವನ್ನು ನೀನೀಗ ಬಲ್ಲೆ!
ನ್ನ ಸೇವೆಯನ್ನೆಂದಿಗೂ ಬಿಡಲೊಲ್ಲೆ!
ಗಿರಿಧರ ಗೋಪಾಲ ನಾನೆಂದು ಬಲ್ಲೆ! (ಇ)
-ಲ್ಲೆಂದೆಂದಿಗೂ ಸಂಶಯವೆಂದಿರಬಲ್ಲೆ!
ದುಸ್ಸಹವಾಸವಿನ್ನೆಂದೂ ಮಾಡಲೊಲ್ಲೆ!
ನಾಮಸ್ಮರಣಾ ಬಲ ಚೆನ್ನಾಗಿ ಬಲ್ಲೆ!
ಯಲಾಡಂಬರಕ್ಕಿಷ್ಟ ಪಡಲೊಲ್ಲೆ! (ಬ)
-ಲ್ಲೆ, ನಿರಂಜನಾದಿತ್ಯ ನೀನೆಂದು ಬಲ್ಲೆ!!!

ಇನ್ನೂ ನೂರು ವರ್ಷ ಬದುಕಬೇಕಪ್ಪಾ! (ನಿ)   4(1560)

-ನ್ನೂಳಿಗಕ್ಕಾಗಿನ್ನೂರಾದರೂ ಆಗ್ಲಪ್ಪಾ!
ನೂರೆಂಟು ನಮಸ್ಕಾರ ನಿನ್ನಡಿಗಪ್ಪಾ! (ಗು)
-ರುದೇವನಾನಂದವೇ ನನ್ನಾಂದವಪ್ಪಾ!
ರಯೋಧ್ಯಾಧಿಪ ಶ್ರೀರಾಮ ನೀನಪ್ಪಾ! (ಹ)
-ರ್ಷ ಜೀವನ ನಿನ್ನನುಗ್ರಹದಿಂದಪ್ಪಾ!
ಲವಾಗಿರಬಹುದು ಪ್ರಾರಬ್ಧ ಕರ್ಮಪ್ಪಾ!
ದುರ್ಬಲನಿಗೆ ಬಲದಾನ ಮಾಡಪ್ಪಾ!
ರ್ಮಬಂಧನ ಛೇದನಾ ರಾಘವಪ್ಪಾ!
ಬೇಕೆನಗೆ ನಿನ್ನ ದರ್ಶನವೀಗಪ್ಪಾ!
ರ ಮುಗಿದು ಪ್ರಾರ್ಥಿಪೆ ನಿನ್ನನಪ್ಪಾ! (ಅ)
-ಪ್ಪಾ, ನಿರಂಜನಾದಿತ್ಯಾನಂದಾರಾಮಪ್ಪಾ!!!

ಇನ್ನೂ ಬಿಟ್ಟಿಲ್ಲವೇನಯ್ಯಾ ಹುಚ್ಚು?   6(3440)

(ನಿ)-ನ್ನೂಳಿಗದಲ್ಲೆನ್ನಹಚ್ಚಿ ಮೆಚ್ಚು!
ಬಿಟ್ಟುಕೊಟ್ರೆ ನಿನದೇನು ಹೆಚ್ಚು?
(ಹು)-ಟ್ಟಿಸಿದ ಭಂಡ್ವಾಳವೀಗ ಬಿಚ್ಚು!
(ಕೊ)-ಲ್ಲಬೇಡ ಕೊಟ್ಟು ಕಹಿ ಕಲ್ಗಚ್ಚು!
ವೇಷ, ಭೂಷಣದಾಸೆಯ ಕೊಚ್ಚು!
ನ್ನ ಬಾಳ ದೋಣಿಯ ನೀನೊಚ್ಚು!
(ಕೈ)-ಯ್ಯಾರೆ ಅದರ ತೂತೆಲ್ಲಾ ಮುಚ್ಚು!
ಹುಟ್ಟು ಹಾಕ್ಸಿ ಮಾಡ್ಬೇಡೆನ್ನ ಪೆಚ್ಚು!
(ಮೆ)-ಚ್ಚು ನಿರಂಜನಾದಿತ್ಯಾತ್ಮನಚ್ಚು!!!

ಇನ್ನೆಷ್ಟು ದಿನ ಈ ನರಕಯಾತನೆ? (ಇ)   4(2026)

-ನ್ನೆನಿತು ಮಾಡಬೇಕವನ ಪಾರ್ಥನೆ! (ಎ)
-ಷ್ಟುತ್ಸಾಹದಿಂದ ಮಾಡಿದೆನು ಭಜನೆ?
ದಿವ್ಯಾನುಭವವಾಗ್ಬೇಕೆಂದೇ ಭಾವನೆ! (ಅ)
-ನವರತಾಗ್ತಿದೆ ಪ್ರಸಾದ ಸೇವನೆ!
ಶ್ವರಾರ್ಪಣದಿಂದಾಗ್ತಿದೆ ಸಾಧನೆ!(ಧ)
-ನ, ಧಾನ್ಯಕ್ಕಾಗಿ ಮಾಡುತ್ತಿಲ್ಲಾ ಯೋಚನೆ! (ವ)
-ರಗುರು ಪರಮಾತ್ಮನದ್ದೇ ಚಿಂತನೆ!
ಲಿ ಕಲ್ಮಷವನಿಂದ ವಿಮೋಚನೆ! (ದ)
-ಯಾಮಯನವಯಿಂದ ಧರ್ಮ ಸ್ಥಾಪನೆ!
ತ್ವಮಸಿ ತತ್ವಾರ್ಥದ ಪ್ರವರ್ತನೆ! (ನೆ)
-ನೆ ನಿರಂಜನಾದಿತ್ಯ ಸ್ವರೂಪವನೆ!!!

ಇನ್ನೆಷ್ಟು ದಿನವಪ್ಪಾ ಹೀಗೆ? (ಅ)   4(2052)

-ನ್ನೆ ನಾನೀಗದನು ನಿನಗೇ! (ಎ)
-ಷ್ಟು ಕೂಗಿದ್ರೂ ಕೇಳದವಗೇ!
ದಿವ್ಯ ಮಂತ್ರ ಗತಿ ನಿನಗೇ! (ಮ)
-ನಕೆ ಶಾಂತಿ ನೀಡೆನ್ನವಗೇ!
ರ ಸೇವಾ ಭಾಗ್ಯ ನಿನಗೇ! (ಇ)
-ಪ್ಪಾಗ ಹೇಳ್ವುದಿನ್ನೇನವಗೇ?
ಹೀನಾವಸ್ಥೆಯಿಲ್ಲ ನಿನಗೇ! (ಹೀ)
-ಗೆ

ನಿರಂಜನಾದಿತ್ಯನಾಗೇ!!!

ಇನ್ನೆಷ್ಟು ಸಹಿಸಬೇಕಯ್ಯಾ? (ನಿ)   5(2648)

-ನ್ನೆ ಇವತ್ತಿನ ಮಾತೇನಯ್ಯಾ? (ಬೂ)
-ಷ್ಟು ಹಿಡಿಯಿತು ಪಾತ್ರೆಗಯ್ಯಾ!
ತ್ವ ಪರೀಕ್ಷೆ ಸಾಕಿನ್ನಯ್ಯಾ!
ಹಿತೈಷಿಯೆಂಬುದ ತೋರಯ್ಯಾ!
ದಾ ಧ್ಯಾನ ನಿನ್ನದೆನ್ಗಯ್ಯಾ!
ಬೇಡುವೆನು ದರ್ಶನಕಯ್ಯಾ!
ಪಿಮುಷ್ಟಿಯಿದೆನ್ನದಯ್ಯಾ! (ಆ)
-ಯ್ಯಾ ನಿರಂಜನಾದಿತ್ಯಾನಯ್ಯಾ!!!

ಇನ್ನೇನು ಬೇಕೆನಗೆ? (ಎ)   1(254)

-ನ್ನೇಳಿಗೆ ಸಾಕೆನಗೆ!
ನುಡಿವುದಿಲ್ಲೆನಗೆ!
ಬೇರಿಲ್ಲ ಚಿಂತೆನಗೆ!
ಕೆಲಸ ಹೋಯ್ತೆನಗೆ!
ಮಿಪೆ ನಿನ್ನಡಿಗೆ!
ಗೆಳೆಯ ನಾನಿನಗೆ!!!

ಇನ್ಯಾವ ದೇವರನು ನಾ ಕಾಣೆ!   5(2611)

ನ್ಯಾಯ ದೊರಕಿಪನ್ಯರ ಕಾಣೆ!
ರ ಗುರು ನೀನೆಲ್ಲಕ್ಕೂ ಹೊಣೆ!
ದೇವ ನಿನಗೆನ್ನ ದೇಹ ವೀಣೆ!
ರ ಸ್ವರಾವಳಿಗಳ ಠಾಣೆ!
ಮಿಸದಿದ್ದರದ್ರಲ್ಲಿ ಮಾಣೆ!
ನುಡಿಸಿದಂತೆ ಕೂಗ್ವ ಭವಣೆ!
ನಾದಾನಂದ ನೀನೇ ತಕ್ಕ ತೊಣೆ!
ಕಾಲಕ್ಷೇಪಕ್ಕಾಗ್ಬೇಕು ಪೋಷಣೆ! (ಗೆ)
-ಣೆಯ ನಿರಂಜನಾದಿತ್ಯ ಎಣೆ!!!

ಇಪ್ಪತ್ತರಾನಂದ ಇಪ್ಪತ್ತೈದಕ್ಕಿಲ್ಲ! (ಕ)   6(3998)

-ಪ್ಪ ಕಾಣಿಕೆಗಾಗಿ ದೇವರಲ್ಲವಲ್ಲಾ! (ಕ)
-ತ್ತಲಿನಲ್ಲಾವುದೂ ಕಾಣಿಸುವುದಿಲ್ಲ!
ರಾಗ ದ್ವೇಷಕ್ಕೆಡೆಯಿರಬಾರದಲ್ಲಾ !
ನಂಬಿಕೆಗಸಾಧ್ಯವಾದುದಾವುದಿಲ್ಲ!
ರ್ಶನವಾವುದೋ ಸ್ಥಿತಿಯಲ್ಲಾಯ್ತಲ್ಲಾ!
ಪ್ಪತ್ತೈದರ ಮಹತ್ವವದೇನಲ್ಲ! (ಇ)
-ಪ್ಪತ್ತರಭ್ಯಾಸದ ಪ್ರಭಾವ ಅದೆಲ್ಲಾ! (ಚಿ)
-ತ್ತೈಕಾಗ್ರತೆಯೇ ಕಾರಣ ಅದಕ್ಕೆಲ್ಲಾ!
ಣ್ಸಿದ್ರೂ ಧಣಿಯ ಮರೆಯ್ಬಾರದಲ್ಲಾ! (ಹ)
-ಕ್ಕಿದ್ರೂ ಸೊಕ್ಕಿ ನೆಡೆದ್ರೆ ಫಲವೇನಿಲ್ಲ! (ಪು)
-ಲ್ಲ ನಿರಂಜನಾದಿತ್ಯನನ್ನಾವ ಬಲ್ಲ!!!

ಇಪ್ಪತ್ತೈದ್ಸಾವಿರದೈನೂರರ್ವತ್ತೆಂಟು ದಿನ ಕಂಡೆ! (ಅ)   6(3719)

-ಪ್ಪ ಪರಮೇಶ್ವರನೆಂಬುದನ್ನು ನಾನರಿತುಕೊಂಡೆ! (ಚಿ)
-ತ್ತೈಕಾಗ್ರತೆಯಿಂದವನ ದರ್ಶನವೆಂದರಿತ್ಕೊಂಡೆ! (ತ)
-ದ್ಸಾಧನೆಗಾಸನಾದಿ ಯೋಗಾಭ್ಯಾಸ ಕಲಿತುಕೊಂಡೆ!
ವಿಷಯಾಸಕ್ತಿ ಮನಸ್ಸಿಗಿದೆಯೆಂದರಿತುಕೊಂಡೆ!
ಮಣೀಯ ನೋಟಗಳಿಂದ ದೂರದಲ್ಲಿದ್ದುಕೊಂಡೆ!
ದೈತ್ಯ ಕಾಮನ ಉಪಟಳವನ್ನು ಸಹಿಸಿಕೊಂಡೆ!
ನೂರೆಂಟು ಗಾಯತ್ರೀ ಜಪ ಎರಡ್ಬೇಳೆ ಮಾಡಿಕೊಂಡೆ!
ಘುಪತಿ ರಾಘವ ಭಜನೆಯನ್ನೂ ಮಾಡಿಕೊಂಡೆ! (ಪ)
-ರ್ವತಗಳ ಮೇಲೂ ಘೋರ ತಪಸ್ಸಾಚರಿಸಿಕೊಂಡೆ! (ಎ)
-ತ್ತೆಂದ್ರತ್ತ ಸುತ್ತಾಟೋಪವಾಸಕ್ಕೂ ಶುರು ಮಾಡಿಕೊಂಡೆ! (ಕೋ)
-ಟು, ಬೂಟು, ಕಿತ್ತೆಸೆದು ಲಂಗೋಟಿಯಲ್ಲೇ ಇದ್ದುಕೊಂಡೆ!
ದಿನ, ರಾತ್ರಿಯೆನ್ನದೆ ದೇಹ ದಂಡನೆ ಮಾಡಿಕೊಂಡೆ!
ತದೃಷ್ಟ ನಾನೆಂದು ನನ್ನನ್ನು ನಾನೇ ಹಳಿದ್ಕೊಂಡೆ!
“ಕಂದನನ್ನು ಕಾಯೋ”! ಎಂದು ಗೊಳೋ ಎಂದು ಅತ್ತುಕೊಂಡೆ! (ಕಂ)
-ಡೆ, ಶ್ರೀ ನಿರಂಜನಾದಿತ್ಯಾನಂದದಲ್ಲಿ ಶಾಂತಿ ಕಂಡೆ!!!

ಇಪ್ಪತ್ತೊಂದರ ಬಲ ಎಪ್ಪತ್ತೊಂದಕ್ಕಿಲ್ಲ! (ಒ)   6(3774)

-ಪ್ಪದಿದ್ದರೆ ಈ ಮಾತಿಗೆ ಆಗುವುದಿಲ್ಲ! (ಇ)
-ತ್ತೊಂದುಕಾಲ ಬಲದ ಪ್ರದರ್ಶನಕ್ಕೆಲ್ಲ!
ಣಿದ ಶರೀರಕ್ಕೀಗ ಆ ಬಲವಿಲ್ಲ! (ಕ)
-ರಗಿತದು ಪ್ರಕೃತಿ ಧರ್ಮದಂತೀಗೆಲ್ಲ!
ಲಾಬಲವೆಂಬುದು ಸ್ಥೂಲ ದೇಹಕ್ಕೆಲ್ಲ!
ಕ್ಷ್ಯದಲ್ಲಿಟ್ಟಿದ ದೇಹ ಮೋಹ ಬಿಡ್ರೆಲ್ಲ!
ಲ್ಲಾ ಕಾಲ ಆತ್ಮನಲ್ಲಿ ವ್ಯತ್ಯಾಸವಿಲ್ಲ! (ತ)
-ಪ್ಪದೇ ಸದಾ ಮಾಡ್ಬೇಕಾತ್ಮ ಚಿಂತನೆಯೆಲ್ಲ! (ಮ)
-ತ್ತೊಂದು ಬಾರಿ ಹುಟ್ಟಲೇಬಾರದು ನಾವೆಲ್ಲ!
ತ್ತ ಸಾಯುಜ್ಯ ಪಡೆಯಬೇಕು ನಾವೆಲ್ಲ! (ಹ)
-ಕ್ಕಿರುವುದು ಅದಕ್ಕೆ ನಮ, ನಿಮಗೆಲ್ಲಾ! (ಪು)
-ಲ್ಲ ನಿರಂಜನಾದಿತ್ಯನ ಮಾತು ಸುಳ್ಳಲ್ಲ!!!

ಇಬ್ಬರಿಷ್ಟ ಒಂದಾಯ್ತಯ್ಯಾ! (ಅ)   3(1083)

-ಬ್ಬರಾರ್ಭಟವಿನ್ನೇಕಯ್ಯಾ? (ವ)
-ರಿಸಿ ಸುಖಿಯಾಗಿರಯ್ಯಾ! (ದು)
-ಷ್ಟ ಸಹವಾಸ ಬೇಡಯ್ಯಾ!
ಒಂದಾಗಿದ್ದು ಬದುಕಯ್ಯಾ!
ದಾಸರ ದಾಸನಾಗಯ್ಯಾ! (ಆ)
-ಯ್ತಯ್ಯನಿಷ್ಟವೆಂದಿರಯ್ಯಾ! (ಅ)
-ಯ್ಯಾ, ನಿರಂಜನಾದಿತ್ಯಯ್ಯಾ!!!

ಇರಬಾರದೆಂದೆಂದಿಗೂ ಚಿಂತೆ ದರ್ಶನದಿಂದ! (ಅ)   1(97)

-ರವಿಂದ ಸುಕ ಬಂದಾಗೋಡುವ ಕತ್ತಲೆಯಿಂದ!
ಬಾಧಿಪುದು ದುಃಕ, ಕಣ್ಮರೆಯ ದರ್ಶನದಿಂದ!
ಮ್ಯದ ರೂಪ ದರ್ಶನದಿಂದ ಕ್ಷಣಿಕಾನಂದ! (ಅ)
-ದೆಂತಿಹುದು ಶಾಶ್ವತ ಸುಖದ ದರ್ಶನಾನಂದ? (ಅ)
-ದೆಂತಿಹುದೆಂದರುಹುವೆನು, ತಿಳಿ ನೀನೆನ್ನಿಂದ!
ದಿಟವನಿಟ್ತು, ಸಟೆಯನಟ್ಟಲು ಸದಾನಂದ!
ಗೂಟಕೆ ಕಟ್ಟಿ, ಮೇವೆಷ್ಟು ಹಾಕಿದರೇನಾನಂದ?
ಚಿಂತೆಯ ವಿಷಯ ಗೂಟ ಕೀಳಬೇಕದರಿಂದ!
ತೆರೆ ಹರಿದುಳಿವುದೇ ಸದಾ ದರ್ಶನಾನಂದ!
ರ್ಶನವಿದೇ ಶಾಶ್ವತವಾಗಿಹುದದರಿಂದ! (ದ)
-ರ್ಶನವಿದಾಗಿ ಸದಾ ಸುಖಿಯಾದರೆ ಆನಂದ!
ಯನಾನಂದದ ದರ್ಶನಾಸೆ ಬಿಡದರಿಂದ! (ಅ)
-ದಿಂಬಿನ ದರ್ಶನವಲ್ಲ! ತ್ವರೆ ಮಾಡಿದರಿಂದ!
ತ್ತ ನಿರಂಜನಾದಿತ್ಯ ದರ್ಶನ ಸದಾನಂದ!!!

ಇರಬೇಕಾದಂತೆ ನೀನಿಬಲ್ಲೆ! (ಊ)   6(4177)

-ರಲ್ಲೆಲ್ಲಾ ಓಡಾಡಿ ಸುತ್ತಾಡಬಲ್ಲೆ!
ಬೇಡವಾದರೆ ಇರಬಲ್ಲೆ ಇಲ್ಲೆ!
ಕಾಗೆಗಳದಿಲ್ಲಿ ಬಹಳ ಹಲ್ಲೆ!
ದಂಪತಿಯಾಗಿರ್ಬಾರದೇಕೂರಲ್ಲೇ? (ಸು)
-ತೆ, ಸುತಾದಿಗಳೊಂದಿಗಿರು ಅಲ್ಲೆ!
ನೀನೀಗ ನನ್ನಿಷ್ಟದಂತಿರಲೊಲ್ಲೆ!
ನಿನ್ನನ್ನೊತ್ತಾಯ ನಾನು ಮಾಡಲೊಲ್ಲೆ! (ಕ)
-ರಗಲಿ ಸಂಚಿತ ಈ ಜನ್ಮದಲ್ಲೇ!
ಳಲುವುದೇಕೆ ಸಂಸಾರದಲ್ಲೇ? (ಒ)
-ಲ್ಲೆ ನಿರಂಜನಾದಿತ್ಯನಾಗ್ಲೇಕೊಲ್ಲೆ???

ಇರಲೆನಗೆ ನಿರತ ನಿನ್ನ ಸೇವೆ ಒಂದೇ! (ಎ)   1(178)

-ರಗಲಾರಿಗೆ? ಗತಿ ನಿನ್ನಡಿಯೊಂದೇ! (ಎ)
-ಲೆ ಮರೆಯ ಕಾಯಾಗಿರಲಿನ್ನು ಮುಂದೆ!
ಗೆಗೇಡಿಗೀಡು ಮಾಡದಿರು ತಂದೆ!
ಗೆಜ್ಜೆ, ತಾಲಾದಿಂದಾನಂದಿಸಿದೆನ್ನಿಂದೆ!
ನಿನಗದೀಗ ಬೇಡಾಯ್ತದೇಕೆ ತಂದೆ?
ಮಿಸಲೀ ಮನಸು ನಿನ್ನಲಿ ಮುಂದೆ!
ಪ್ಪೇನಿದ್ದರೂ ನೀ ಕ್ಷಮಿಸೆನ್ನ ತಂದೆ!
ನಿನ್ನಿಷ್ಟದಂತಿರಬೇಕೆಂಬಾಸೆಯೊಂದೇ! (ಎ)
-ನ್ನದೀಪ್ರಾರ್ಥನೆಯನಂಗೀಕರಿಸಿಂದೇ!
ಸೇರಿಸೆನ್ನನು ನಿನ್ನೊಳಗೆ ಈಗಿಂದೇ! (ಎ)
-ವೆಯಿಕ್ಕದೇ ನೋಡುವೆನಾನಂದದಿಂದೆ!
ಒಂದಲ್ಲದೆರಡೆನಗೆ ಬೇಡ ತಂದೆ!
ಬೇವ ನಿರಂಜನಾದಿತ್ಯನವನೊಂದೇ!!!

ಇರಲೊಂದು ದಾರಿ, ಸೇರು ಗುರಿ! [ಪ]   5(2873)

-ರಧರ್ಮ ನಿನಗಪಾಯಕಾರಿ! (ಹಾ)
-ಲೊಂದುತ್ತಮಾಹಾರ ಗುಣಕಾರಿ!
ದುಷ್ಟ ಪಾನೀಯನಾರೋಗ್ಯಕಾರಿ!
ದಾಯಾದಿ ಮತ್ಸರ ಲಯಕಾರಿ! (ಹ)
-ರಿನಾಮಕೀರ್ತನಾನಂದಕಾರಿ!
ಸೇವೆ ದೇವನದ್ದಾದಾಯಕಾರಿ! (ಕು)
-ರುಕುಲ ನಾಶಕ್ಕಸೂಯೆ ದಾರಿ!
ಗುಣಾತೀತನಾಗುವುದೇ ಗುರಿ! (ಅ)
-ರಿ ನಿರಂಜನಾದಿತ್ಯಾ ಶ್ರೀ ಹರಿ!!!

ಇರಿಸಿದಂತಿದ್ದಾನೆ ಸೂರ್ಯ! (ಅ)   5(2726)

-ರಿತವ್ನಂತಿದ್ದಾಗ್ಬೇಕು ಕಾರ್ಯ! (ದಾ)
-ಸಿ ಮೀರಾಳಂತಿರ್ಬೇಕು ಭಾರ್ಯ!
ದಂಭ, ದರ್ಪಗಳಲ್ಲಿ ಶೌರ್ಯ! (ತಿ)
-ತಿಕ್ಷೆ, ವೈರಾಗ್ಯವಿದ್ದವಾರ್ಯ! (ಗೆ)
-ದ್ದಾತರಿಗಳಾ ಗುರುವರ್ಯ! (ನೆ)
-ನೆ ಗೋವಿಂದನನ್ನೆಂಬಾಚಾರ್ಯ!
ಸೂಳೆ ಮನಸ್ಸಿಗಿಲ್ಲೌದಾರ್ಯ! (ಆ)
-ರ್ಯ ನಿರಂಜನಾದಿತ್ಯಾ ಸೂರ್ಯ!!!

ಇರಿಸಿದಂತಿದ್ದು ನಿತ್ಯ ಪೂಜೆಯಿಂದ ದೇವರಾಗು!   6(4323)

ರಿಸಿ, ಮುನಿಗಳ ವೇದ ಘೋಷ ಕೇಳುವವನಾಗು!
ಸಿರಿ, ಸಂಪತ್ಸಾಮ್ರಾಜ್ಯಗಳಿಗಾಶಿಸದವನಾಗು!
ದಂಭ, ದರ್ಪದಿಂದಾರನ್ನೂ ಕಡೆಗಾಣದವನಾಗು!
ತಿತಿಕ್ಷೆ, ವೈರಾಗ್ಯಗಳಭ್ಯಾಸ ಮಾಡುವವನಾಗು! (ಕ)
-ದ್ದು ತಿಂದು ಒಡಲ ಬೆಳೆಸಿ ಬದುಕದವನಾಗು!
ನಿತ್ಯಾ ನಿತ್ಯಾಗಳರಿವಿನಿಂದ ಬಾಳುವವನಾಗು!
ತ್ಯಜಿಸಿ ದುರಭ್ಯಾಸಗಳನ್ನೆಲ್ಲಾ ಸತ್ಸಂಗಿಯಾಗು!
ಪೂರ್ವಾಪರ ಚಿಂತೆ ಬಿಟ್ಟಗಿನ ಕರ್ತವ್ಯಾನಾಗು! (ಪ್ರ)
-ಜೆಗಳ್ನಾವ್ಶಿವನ ರಾಜ್ಯದಲ್ಲೆಂದರಿತವನಾಗು! (ಬಾ

)
-ಯಿಂದಂದಂತೆ ಕೈಯಿಂದಲೂ ಸತ್ಕರ್ಮನಿರತನಾಗು!
ತ್ತಾತ್ರೇಯನುಪದೇಶವಿದೆಂದರಿತವನಾಗು!
ದೇಶ, ವಿದೇಶಕ್ಕಿದನ್ವಯವೆಂದರಿತವನಾಗು!
ರ್ಣಾಶ್ರಮ “ಸತ್ಯ”ಕ್ಕಿಲ್ಲವೆಂದರಿತವನಾಗು!
ರಾಮ, ಕೃಷ್ಣರೇ ಸಾಕ್ಷಿಯೆಂದರಿತಿರುವವನಾಗು!
ಗುರು ನಿರಂಜನಾದಿತ್ಯ ದತ್ತನಿಗೆ ಶಿರಬಾಗು!!!

ಇರಿಸಿದಂತಿರಬೇಕಯ್ಯಾ! (ಅ)   1(264)

-ರಿಯಲುದಾಸೀನನಾಗಯ್ಯಾ!
ಸಿಡಕು ಮಾತಾಡದಿರಯ್ಯಾ!
ದಂಭಾಚಾರ ಸಾಕುಮಾಡಯ್ಯಾ!
ತಿಳಿದು ನೀ ತಿದ್ದಿಕೊಳ್ಳಯ್ಯಾ!
ವಿಯಂತಿರಲೆತ್ನಿಸಯ್ಯಾ!
ಬೇಕು, ಬೇಡ ನೂಕಿಬಿಡಯ್ಯಾ!
ರ್ಮನಿಷ್ಠೆ ಬಲಿಯಲಯ್ಯಾ! (ಅ)
ಯ್ಯಾ! ನಿರಂಜನಾದಿತ್ಯಮ್ಮಯ್ಯಾ!!!

ಇರಿಸಿದಂತಿರ್ಪವನಿಗೇನು ಚಿಂತೆ? (ಅ)   6(3866)

-ರಿತಿದನಿರು ಬೆಕ್ಕಿನ ಮರಿಯಂತೆ!
ಸಿಕ್ಕಿದ್ದುಂಡು ತೃಪ್ತನಾಗಿರದರಂತೆ!
ದಂಭ ತೋರಿದರೆ ನಾಯಿ ಬಾಯಿಗಂತೆ!
ತಿಳಿದಿದನು ಬಾಳಿದಳ್ಸೀತಾಮಾತೆ! (ಅ)
-ರ್ಪಣೆಯಾಗಿದ್ದಳು ರಾಮನಿಗಾ ಸೀತೆ!
ನವಾಸಕ್ಕೂ ಅಂಜಲಿಲ್ಲಾ ಭೂಜಾತೆ!
ನಿಶಿ, ದಿನ ರಾಮಧ್ಯಾನಾಸಕ್ತೆ ಸೀತೆ! (ಯೋ)
-ಗೇಶ್ವರಿ ಎನಿಸಿ ಆದಳು ವಿಖ್ಯಾತೆ! (ತ)
-ನುಜರೀರ್ವರಿಂದ ನಿಂದೆಯಿಂದ ಮುಕ್ತೆ!
ಚಿಂತಾಂತರಂಗಾತೀತಳಾ ಸತೀ ಸೀತೆ! (ಸೀ)
-ತೆ ನಿರಂಜನಾದಿತ್ಯಗದಿತಿಯಂತೆ!!!

ಇರುಳು ಕಂಡ ಬಾವಿಯಲ್ಲಿ ಹಗಲು ಬಿದ್ದ! (ಮ)   3(1368)

-ರುಳು ಮಾತುಗಳಾಲಿಸಿ ಮೈಮರೆತುಬಿದ್ದ! (ಗೋ)
-ಳು ಸಹಿಸಲಾಗದೆ ಸಹಾಯಿಯಾಗಿ ಬಿದ್ದ!
ಕಂಗೆಟ್ಟವರಿಗೆ ದಿಕ್ಕು ತೋರಹೋಗಿ ಬಿದ್ದ! (ಬ)
-ಡವರಿಗಾಧಾರವಾಗ್ಯಾಧಾರ ತಪ್ಪಿ ಬಿದ್ದ!
ಬಾಯಿ ಬಡಾಯಿಗಳಿಗೆ ಬಲಿಯಾಗಿ ಬಿದ್ದ!
ವಿಷ ಮಿಶ್ರಾನ್ನವೆಂದರಿಯದೆ ತಿಂದು ಬಿದ್ದ!
ಜಮಾನಗಿರಿ ಎಲ್ಲರಿಗಿತ್ತು ತಾ ಬಿದ್ದ! (ಮ)
-ಲ್ಲಿಗೆಯ ಮಾಲೆಗಳಿಗೆ ಮನಸೋತು ಬಿದ್ದ!
ಣ್ಣು ಹಂಪಲುಗಳರ್ಪಣೆಗೆ ಹಿಗ್ಗಿ ಬಿದ್ದ! (ಹಾ)
-ಲು ಮೊಸರು ಬಡಿಸಿ ಬಡವಾಗಿ ತಾ ಬಿದ್ದ!
ಬಿಗಡಾಯಿಸಿದೆ ಕಾಲವೆಂದರಿತೂ ಬಿದ್ದ! (ಬಿ)
-ದ್ದ ನಿರಂಜನಾದಿತ್ಯ ತಾನೆಂದರಿತು ಎದ್ದ!!!

ಇರುಳು ಕಂಡ ಬಾವಿಯಲ್ಲಿ ಹಗಲು ಬಿದ್ದ! [ಮೀ]   3(1369)

-ರುವುದಕ್ಕಾಗದು ಪ್ರಾರಬ್ಧವೆಂಬುದು ಸಿದ್ಧ! (ಹಾ)
-ಳು ಬಾವಿಯ ರಾತ್ರಿನೋಡಿ ಎಚ್ಚರವಾಗಿದ್ದ!
ಕಂಡೂ ಕಾಣದಂತಾಗಿ ಹಗಲೇ ತಾನು ಬಿದ್ದ! (ಮೃ)
-ಡನನುಗ್ರಹವಾದಾಗವನು ಮೇಲಕ್ಕೆದ್ದ!
ಬಾಲಧ್ರುವರಾಯ ಪರಮಪದದಿಂದೆದ್ದ!
ವಿಶ್ವಾಮಿತ್ರ ಬ್ರಹ್ಮ ಋಷಿ ತಾನೆಂದೆನುತೆದ್ದ!
ಮ ಪಾಶ ಹರಿದು ಮಾರ್ಕಂಡೇಯ ತಾನೆದ್ದ! (ಮ)
-ಲ್ಲಿಕಾರ್ಜುನನಿಂದರ್ಜುನನೆಬ್ಬಿಸಿಕೊಂಡೆದ್ದ!
ರಿಭಜನಾ ಬಲದಿಂದ ಪ್ರಹ್ಲಾದನೆದ್ದ!
ಜರಾಜ ಕಷ್ಟದಿಂದ ಬಿಡಿಸಿಕೊಂಡೆದ್ದ! (ಮೇ)
-ಲುಸಿರೆಳೆದ ಸತ್ಯವಾನ ಜೀವದಿಂದದ್ದೆ!
ಬಿಡದಿದ್ದರೆ ಗುರುವಾದ ವಿಜಯ ಸಿದ್ಧ! (ಎ)
-ದ್ದ ನಿರಂಜನಾದಿತ್ಯ ಜೀವನ್ಮುಕ್ತಾತ್ಮ ಸಿದ್ಧ!!!

ಇರುವವನೊಬ್ಬ ಗುರುದೇವ ದತ್ತ! (ಅ)   3(1053)

-ರುಣ, ಕಿರಣ, ಕಾಂತಿ ಸ್ವರೂಪ ದತ್ತ!
ರದಾಪ್ರಿಯ ಶ್ರೀ ರಂಗನಾಥ ದತ್ತ!
ನಜಭವ, ಶ್ರೀ ಹರಿ ಹರ ದತ್ತ!
ನೊಸಲ್ಗಣ್ಣನೆಂಬ ಕಾಲಾಂತಕ ದತ್ತ (ಅ)
-ಬ್ಬರಾರ್ಭಟದರಿಕುಲ ಕಾಲ ದತ್ತ!
ಗುಹೇಶ್ವರನಾದಾಪ್ತ ಬಾಂಧವ ದತ್ತ! (ಗ)
-ರುಡಾರೂಢ, ವರ ಯೋಗಾರೂಢ ದತ್ತ!
ದೇಶ, ಕಾಲಾತೀತ ಜಗನ್ನಾಥ ದತ್ತ!
ರ ಯೆಹೋವಲ್ಲಾದ್ಯನಂತಾತ್ಮ ದತ್ತ!
ಡ ಸೇರಿಪ ತಾರಕನಾಮ ದತ್ತ! (ಇ)
-ತ್ತತ್ತೆತ್ತೆತ್ತ ನಿರಂಜನಾದಿತ್ಯ ದತ್ತ!!!

ಇರುವಾಗ ಬೆರೆತಿರುವುದಿಲ್ಲ! [ಊ]   3(1265)

-ರು ಬಿಟ್ಟ ಮೇಲೆ ಬಾಯ್ಬಿಡುವರೆಲ್ಲ!
ವಾದ, ಭೇದಗಳಿಗಾಗೆಡೆಯಿಲ್ಲ!
ತಿ ಯಾರಿನ್ನೆಮಗೆಂಬರಾಗೆಲ್ಲ!
ಬೆರಗಾಗುವರಾರೀ ಮೂತಿಗೆಲ್ಲ? (ಖ)
-ರೆಯ ಪ್ರೇಮವಿದ್ದರಾಗುವುದೆಲ್ಲ!
ತಿಳಿದೊಲಿಸ ಬೇಕಾತ್ಮನನ್ನೆಲ್ಲ! (ಗು)
-ರು ಕೃಪೆಗಾಗಿ ಭಜಿಸಬೇಕೆಲ್ಲ! (ಆ)
-ವುದೂ ಅತುರದಿಂದಾಗುವುದಿಲ್ಲ! (ಕಾ)
-ದಿದ್ದಿಷ್ಟ ಸಿದ್ಧಿ ಪಡೆಯಬೇಕೆಲ್ಲ! (ತ)
-ಲ್ಲಣ, ನಿರಂಜನಾದಿತ್ಯಗೇನಿಲ್ಲ!!!

ಇರ್ಬೇಕಾದಂತಿಟ್ಟಿರ್ಪಾಗೇಕ್ಚಿಂತೆ? (ಬ)   6(3674)

-ರ್ಬೇಕೀ ವಿವೇಕ ಗುರುವಿನಂತೆ!
ಕಾಲಕ್ತಕ್ಕ ಲೀಲೆಂದ್ರೆ ನಿಶ್ಚಿಂತೆ!
ದಂಭಾಚಾರವಿರಬಾರದಂತೆ!
ತಿರುಪತಿ ನೀನಿರುವೂರಂತೆ! (ಮೆ)
-ಟ್ಟಿಲು ಮನದಲ್ಲೇ ಹತ್ಬೇಕಂತೆ! (ಏ)
-ರ್ಪಾಡಿದಕ್ಕೇನೂ ಖರ್ಚಿಲ್ಲವಂತೆ!
ಗೇಯ್ಮೆಗದ್ರಿಂದ ತೊಂದ್ರೆಯಾಗ್ದಂತೆ (ಸಾ)
-ಕ್ಚಿಂತೆ! ಮಾಡು ಸತತಾತ್ಮಾ ಚಿಂತೆ! (ಮಾ)
-ತೆ ಶ್ರೀ ನಿರಂಜನಾದಿತ್ಯನಂತೆ!!!

ಇರ್ವಷ್ಟು ಕಾಲವಿರ್ಬೇಕಾದಂತಿದ್ರಾಯ್ತು! [ಸ]   5(3072)

-ರ್ವರಂತರ್ಯಾಮಿಯ ಮರೆಯದಿದ್ರಾಯ್ತು! (ಅ)
-ಷ್ಟು, ಇಷ್ಟೆನ್ನುವತೃಪ್ತಿಯಿಲ್ಲದಿದ್ರಾಯ್ತು!
ಕಾಯಮೋಹ ಕಡಿಮೆಯಾಗುತ್ತಿದ್ರಾಯ್ತು! (ಅ)
-ಲಕ್ಷ್ಯವಧೂತನನ್ನು ಮಾಡದಿದ್ರಾಯ್ತು!
ವಿವೇಕ ವೈರಾಗ್ಯ ಸತತವಿದ್ರಾಯ್ತು! (ಮೂ)
-ರ್ಬೇರ್ಬೇಂದರಿಯದೇಕವೆಂದರಿತ್ರಾಯ್ತು!
ಕಾರಣಕರ್ತನ ಪಾದ ಹಿಡಿದ್ರಾಯ್ತು!
ದಂಡಪಾಣಿಯಯ್ಯಗೆ ಶರಣಾದ್ರಾಯ್ತು!
ತಿನ್ನುವ ಚಪಲಕಡಿಮೆಯಾದ್ರಾಯ್ತು!
“ದ್ರಾಮೆಂಬ” ಬೀಜದರ್ಥವರಿತಿದ್ರಾಯ್ತು! (ಆ)
-ಯ್ತು, ನಿರಂಜನಾದಿತ್ಯತಾನದೀಗಾಯ್ತು!!!

ಇರ್ಸಿಕೊಂಡಂತಿರುವೆ ನಿನ್ನಲ್ಲಿ ನಾನು! (ಆ)   6(3467)

-ರ್ಸಿಕೊಳ್ಬೇಕು ನನ್ನೆಲ್ಲಾ ಸುಗುಣ ನೀನು!
ಕೊಂಚವೂ ಸಂದೇಹ ಪಡಬಾರ್ದು ನೀನು!
ಡಂಭಾಚಾರ ಮಾಡುವವನಲ್ಲ ನಾನು!
ತಿರುಗುತಿಹೆ ಜಗವ ನಿತ್ಯ ನಾನು! (ಗು)
-ರುವೆಂದು ಸದಾ ಸ್ಮರಿಸು ನನ್ನ ನೀನು!
ವೆಸನವಾವುದಕ್ಕೂ ಪಡ್ಬೇಡ ನೀನು!
ನಿನ್ನ ಸುಖ, ದುಃಖದಲ್ಲಿ ಭಾಗಿ ನಾನು! (ನಿ)
-ನ್ನ ಸರ್ವಸ್ವವೂ ತ್ರಿಕಾಲದಲ್ಲೂ ನಾನು!
(ಮ)-ಲ್ಲಿಕಾರ್ಜುನೆನ್ನಿಂದ ಬೇರಲ್ಲ ನೀನು!
ನಾದ, ಬಿಂದು, ಕಲಾತೀತ ನಾನು, ನೀನು!
(ಅ)-ನುಪಮಾತ್ಮ ನಿರಂಜನಾದಿತ್ಯ ಭಾನು!!!

ಇಲಿಗಳಿಲ್ಲದ ಮನೆಯಾಗು! [ಮ]   5(2940)

-ಲಿನವಿಲ್ಲದ ಮಾಲೀಕನಾಗು!
ರ್ವವಿಲ್ಲದರಸು ನೀನಾಗು! (ಊ)
-ಳಿಗವಿತ್ತು ಕೂಳಿಗನುವಾಗು! (ತ)
-ಲ್ಲಣಗೊಳ್ಳದ ಹೊಯ್ಸಳನಾಗು!
ಯಾನಿಧಿ ದಧೀಚಿ ನೀನಾಗು!
ರಣ ಭಯವಿಲ್ಲದಾತ್ಮಾಗು!
ನೆಮ್ಮದಿ ಸದಾ ಉಳ್ಳವನಾಗು!
ಯಾಜ್ಞ್ಯವಲ್ಕ್ಯನಂತೆ ಜ್ಞಾನಿಯಾಗು! (ಆ)
-ಗು ನಿರಂಜನಾದಿತ್ಯ ನೀನಾಗು!!!

ಇಲ್ಲಾ ಪೂಜ ಮನಸಿನಲ್ಲಿ! (ಇ)   1(282)

-ಲ್ಲಾವ ಪೂಜೆ ಅದಿಲ್ಲದಲ್ಲಿ!
ಪೂಜೆ, ಕಂಡಾಗ ಸ್ಥೂಲದಲ್ಲಿ!
ಜಾತಿ, ನಿತ್ಯುಚ್ಛ ಭಕ್ತಿಯಲ್ಲಿ!
ನೋಪೂಜೆ ಮರೆಯಾದಲ್ಲಿ!
ಡೆಸಿದಂತಿರವನಲ್ಲಿ!
ಸಿಕ್ಕದಿರು ಸಂಶಯದಲ್ಲಿ!
ಲವಿಂದಿರಬೇಕೆಲ್ಲೆಲ್ಲಿ! (ಇ)
-ಲ್ಲಿ! ನಿರಂಜನಾದಿತ್ಯನಲ್ಲಿ!!!

ಇಳಿತ, ಭರತಳಿದಾಗಳೆಯಾಳ! (ಕು)   5(3188)

-ಳಿತಾಗ, ಮಲಗಿದಾಗಳೆಯ್ಬೇಡಾಳ!
ತ್ವ ನಿಶ್ಚಲ, ಕೊಂದಾಗ ವೃತ್ತಿಗಳ!
ಕ್ತ ನಿರ್ಮೂಲಮಾಡ್ಬೇಕಾರರಿಗಳ!
ಘುವೀರಗರಿ ರಾವಣ ದುರುಳ!
ರಳಗಾಗ್ಬಗೆದ ಹರಿ ಕರುಳ! (ಸೀ)
-ಳಿತು ನಕ್ರನ ಚಕ್ರ ಕೇಳ್ಯಾನೆಯ್ಗೋಳ!
ದಾಸಿ ಮೀರಾಬಾಯಿಗೊಲಿದ ಗೋಪಾಲ!
ರ್ವದಿಂದಾಗ್ವುದೆಲ್ಲಕ್ಕೆ ಕಿರುಕುಳ! (ಗೆ)
-ಳೆತನಕ್ಕಿರ್ಬೇಕ್ಬುದ್ಧಿ ಬಹು ನಿರ್ಮಲ!
ಯಾದವರಾಯನ ಹೃದಯ ವಿಶಾಲ! (ಬಾ)
-ಳ, ನಿರಂಜನಾದಿತ್ಯ ಬಹು ದಯಾಳ!!!

ಇವತ್ತೇನು ಬರೆದಿದ್ದೀರಿ? (ಭ)   4(2406)

-ವಬಂಧ ಹರಿದೊಗೆಯಿರಿ! (ಚಿ)
-ತ್ತೇಕಾಗ್ರತೆಗಾಗ್ದುಡಿಯಿರಿ!
ನುಡಿ, ನಡೆಯಲ್ಲೊಂದಾಗಿರಿ! (ಸಾಂ)
-ಬನ ಧ್ಯಾನ ಮಾಡುತ್ತಲಿರಿ! (ನೆ)
-ರೆಯವ್ರಲ್ಲನ್ಯೋನ್ಯವಾಗಿರಿ!
ದಿವ್ಯ ಜೀವನ ನಡೆಸಿರಿ! (ತ)
-ದ್ದೀಪ್ಸಿತಾತ್ಮಾರ್ಥ ಸಾಧಿಸಿರಿ! (ಗು)
-ರಿ ನಿರಂಜನಾದಿತ್ಯ ಹರಿ!!!

ಇವರು ಬಂದರೆಂದಾನಂದವಿಲ್ಲ! (ಅ)   6(3335)

-ವರು ಹೋದರೆಂದು ವ್ಯಸನವಿಲ್ಲ! (ಬ)
-ರುವುದು, ಹೋಗ್ವುದವ್ನಿಚ್ಛೆಯಂತೆಲ್ಲಾ!
ಬಂದವರಲ್ಲಿ ಅಪ್ತತೆಯೂ ಇಲ್ಲ! (ಹೋ)
ವರಾರಲ್ಲೂ ವಿರೋಧವೂ ಇಲ್ಲ! (ಯಾ)
-ರೆಂದು ಬಂದೆಷ್ಟುಕಾಲವೆಂದಾರ್ಬಲ್ಲ?
ದಾರಿ ನೇರಮಾಡ್ಬೇಕ್ಬಂದವರೆಲ್ಲಾ!
ನಂದ ಕಂದ ಬುದ್ಧಿಕೊಡ್ಲವ್ರಿಗೆಲ್ಲಾ!
ರಿದ್ರ, ಶ್ರೀಮಂತ, ಭೇದ ಬೇಕಿಲ್ಲ!
ವಿಧಿ, ವಿಲಾಸಕ್ಕಾರೂ ಹೊಣೆಯಲ್ಲ! (ಬ)
-ಲ್ಲ ನಿರಂಜನಾದಿತ್ಯಗೊಪ್ಪಿಸೆಲ್ಲಾ!!!

ಇವರೇ ನಿರಂಜನನ ಆಪ್ತರು!   1(33)

ನವಾಸಿಯಾದರೂ ಸೇವಿಪರು!
ರೇಗಾಟ, ಕೂಗಾಟವಿಲ್ಲದಿಹರು!
ನಿತ್ಯ ಸಂಕೀರ್ತನೆಯ ಮಾಡುವರು!
ರಂಗು ಥಳಕಿಲ್ಲದಿರುತಿಹರು!
ಗಳಾಕಾಸ್ಪದವೀಯದಿಹರು!
ಯ ಭಯದಿಂದ ವರ್ತಿಪರು!
ಡಿಯಲವನಿಷ್ಟವೆನ್ನುವರು!
ದರವೆಲ್ಲರಿಗೆ ತೋರುವರು! (ಆ)
-ಪ್ತ, ನಿರಂಜನನೆಂದರಿತಿಹರು!
ರುಚಿಸರಿತರ ಗುರುವರರು!!!

ಇವಳೇ ತಾನೇ ಸೀತಾಲಕ್ಷ್ಮಿ?   4(1624)

ರ್ಣಾತೀತಳೀ ವರಲಕ್ಷ್ಮಿ! (ಏ)
-ಳೇಳೆಂಬಳೀ ವಿಜಯಲಕ್ಷ್ಮಿ!
ತಾಳ್ತಾಳೆಂಬಳೀ ಗಜಲಕ್ಷ್ಮಿ! (ನೀ)
-ನೇ ನಾನೆಂಬಳೀ ಜ್ಞಾನಲಕ್ಷ್ಮಿ! (ದಾ)
-ಸೀಸಮಾನಳೀ ತ್ಯಾಗಲಕ್ಷ್ಮಿ!
ತಾಯಿ ರೂಪಳೀ ಭಾಗ್ಯಲಕ್ಷ್ಮಿ! (ಕಾ)
-ಲ ಸ್ವರೂಪಳೀ ಮಹಾಲಕ್ಷ್ಮಿ! (ಲ)
-ಕ್ಷ್ಮಿ, ನಿರಂಜನಾದಿತ್ಯಾ ಲಕ್ಷ್ಮಿ!!!

ಇಷ್ಟ ನೆನವೇರುವುದು! (ಕ)   6(4297)

-ಷ್ಟ ಪರಿಹಾರಾಗುವುದು!
ನೆನಪು ನಿನ್ನದಿಹುದು! (ಪ)
-ರಮ ಗುರು ನೀನಹುದು!
ವೇಷ ನಿನಗೇನಿಹುದು? (ಕ)
-ರುಣಾಕರ ನೀನಹುದು! (ಸಾ)
-ವು ನಿನಗಿಲ್ಲದಿಹುದು! (ಇ)
-ದು ನಿರಂಜನಾದಿತ್ಯದು!!!

ಇಷ್ಟ ಶಕ್ತಿ ಹೆಚ್ಚಬೇಕಯ್ಯಾ! (ದು)   2(695)

-ಷ್ಟ ಶಕ್ತ ಅಡಗುವುದಯ್ಯಾ!
ಕ್ತಿ ಆಶಾನಾಶದಿಂದಯ್ಯಾ! (ಮು)
-ಕ್ತಿಗಾಗಿ ಸ್ವಶಕ್ತಿ ಬೇಕಯ್ಯಾ!
ಹೆಮ್ಮೆಗಿದಳವಡದಯ್ಯಾ! (ನಿ)
-ಚ್ಚಳದ ಭಕ್ತಿ ಮುಖ್ಯವಯ್ಯಾ!
ಬೇರೆಯವ ಮಾತೇಕಯ್ಯಾ?
ರ್ಮಾತ್ಮಾರ್ಥಕಾಗಿ ಮಾಡಯ್ಯಾ! (ಅ)
-ಯ್ಯಾಪ್ತ ನಿರಂಜನಾದಿತ್ಯಯ್ಯಾ!!!

ಇಷ್ಟಮೂರ್ತಿ ಎಲ್ಲೆಲ್ಲಿಹನೆಂದು ಯಾತ್ರೆ ಸಾಗಲಿ! (ಕ)   6(4158)

-ಷ್ಟ ಸುಖಗಳೆಣಿಸದೇ ಅದು ಸಾಗುತ್ತಿರಲಿ!
ಮೂರು ಮೂರ್ತಿಗಳೊಂದೆಂದರಿತು ಅದು ಸಾಗಲಿ! (ಕೀ)
-ರ್ತಿ, ಅಪಕೀರ್ತಿಗಳಿಗಾಶಿಸದೇ ಅದಾಗಲಿ!
ಡರುಗಳಿಗೆದೆಗೆಡದೇ ಅದು ಸಾಗಲಿ! (ಹ)
-ಲ್ಲೆ ಯಾರ ಮೇಲೂ ಮಾಡದೆ ಅದು ಸಾಗುತ್ತಿರಲಿ! (ಸ)
-ಲ್ಲಿಸುತ್ತಾ ಶ್ರದ್ಧಾ ಭಕ್ತಿಯಿಂದ ಸೇವೆ ಅದಾಗಲಿ!
ಗಲು ರಾತ್ರಿಯೆಂಬ ಭೇದವಿಲ್ಲದೇ ಸಾಗಲಿ!
ನೆಂಟನೂ ಭಂಟನೂ ಅವನೆಂದು ನಂಬಿ ಸಾಗಲಿ!
ದುಷ್ಕೂಟದಲ್ಲಿ ಬೆರೆಯದೇ ಆ ಯಾತ್ರೆ ಸಾಗಲಿ!
ಯಾರೇನೆಂದರೂ ಕೋಪಮಾಡದೇ ಅದು ಸಾಗಲಿ! (ಪಾ)
-ತ್ರೆ, ಪದಾರ್ಥ, ಮೂಟೆಗಳಿಲ್ಲದೇ ಅದು ಸಾಗಲಿ!
ಸಾಯುಜ್ಯದ ಗುರಿಗಾಗಿ ಯಾತ್ರೆ ಸಾಗುತ್ತಿರಲಿ!
ಗನಮಣಿಯಾದರ್ಶದಲ್ಲಿ ಸಾಗುತ್ತಿರಲಿ! (ಒ)
-ಲಿದು ನಿರಂಜನಾದಿತ್ಯ ಅನುಗ್ರಹ ಮಾಡಲಿ!!!

ಇಷ್ಟವಿದ್ದರೆ ಕಷ್ಟ ಕಾಣುವುದಿಲ್ಲ! (ಕ)   4(1543)

-ಷ್ಟ ಕಂಡರೆ ಇಷ್ಟವಲ್ಲಿರುವುದಿಲ್ಲ!
ವಿಚಾರಿಗಿದರರಿವಾಗದೇನಿಲ್ಲ! (ಸ)
-ದ್ದಡಗಿದರೆ ಗದ್ದಲವಲ್ಲೇನಿಲ್ಲ! (ಬೆ)
-ರೆತಾಗ ವಿರಸದ ಸುಳಿವಲ್ಲಿಲ್ಲ!
ರ್ತವ್ಯನಿಷ್ಠನಿಗಾವ ಭಯವಿಲ್ಲ (ಭ್ರ)
-ಷ್ಟನಾದವನಿಗಿಹಪರ ತಾನಿಲ್ಲ!
ಕಾಮ್ಯರ್ಥಿಗೆ ಅಶಾಂತಿ ತಪ್ಪುವುದಿಲ್ಲ! (ಉ)
-ಣುವಾಗ ಅಡಿಗೆಯ ಯೋಚನೆಯಿಲ್ಲ! (ಹಾ)
-ವು ಸತ್ತಾಗಾಯುಧದಗತ್ಯವೇನಿಲ್ಲ! (ಮು)
-ದಿಯಾದರೂ ಮುಕ್ತನೆನ್ನುವ ಹಾಗಿಲ್ಲ! (ಬ)
-ಲ್ಲ ನಿರಂಜನಾದಿತ್ಯಾತ್ಮ ತಾನೆಲ್ಲೆಲ್ಲ!!!

ಇಷ್ಟವಿಲ್ಲದಿದ್ರೆ ನೀನೇ ನಾನು ಸ್ಪಷ್ಟ!   6(3413)

(ಕ)-ಷ್ಟ, ನಷ್ಟಗಳಿಗೆಲ್ಲಾ ಕಾರಣ ಇಷ್ಟ!
ವಿಷಯಿ ತಾನಾಗುವನು ಯೋಗಭ್ರಷ್ಟ!
(ಗೆ)-ಲ್ಲಬೇಕು ಬಲ್ಲವ ತನ್ನ ಇಷ್ಟಾನಿಷ್ಟ!
ದಿವ್ಯ ಜೀವನದ ರೀತಿ ಇದು ಶ್ರೇಷ್ಠ!
(ನಿ)-ದ್ರೆ, ಮೈಥುನಾದಿಗಳೆಲ್ಲವೂ ಕನಿಷ್ಠ!
ನೀಚತನದಿಂದಾಗಿ ಮಾನವ ದುಷ್ಟ!
ನೇಮ, ನಿಷ್ಠಾ-ನಾರದಾ ಸದಾ ಸಂತುಷ್ಟ!
ನಾರಾಯಣನಿಂದಂತ್ಯ ಅವ್ನ ಸಂಕಷ್ಟ!
(ಮ)-ನುಜನಿದನ್ನರಿಯದ್ದು ದುರದೃಷ್ಟ!
ಸ್ಪಟಿಕ ಮಣಿಯಂತಿರ್ಬೇಕಾತ್ಮ ನಿಷ್ಠ!
(ಸ್ಫ)-ಷ್ಟ, ನಿರಂಜನಾದಿತ್ಯಾನಂದ ಆಪ್ತೇಷ್ಟ!!!

ಇಷ್ಟು ದಿನವಿದ್ದೇನುದ್ಧಾರವಾಯ್ತು? (ನಿ)   4(1456)

-ಷ್ಟುರ ಆರದೇನು ಕಡಿಮೆಯಾಯ್ತು?
ದಿವ್ಯ ಜೀವನವಾರಿಗೆ ಬೇಕಾಯ್ತು?
ಶ್ವರ ಸುಖದಾಸೆಯೇ ಹೆಚ್ಚಾಯ್ತು!
ವಿಕಲ್ಪ ಸ್ವಭಾವ ಪ್ರಬಲವಾಯ್ತು! (ಕ)
-ದ್ದೇ ಜೀವಿಸುವಭ್ಯಾಸಧಿಕವಾಯ್ತು! (ನಾ)
-ನು, ನನ್ನದೆಂಬ ಸ್ವಾರ್ಥಪಾರವಾಯ್ತು! (ಶ್ರ)
-ದ್ಧಾ, ಭಕ್ತಿ ಭಾವನೆಗಳಿಲ್ಲದಾಯ್ತು!(ಪ)
-ರನಿಂದಾಸಕ್ತ್ಯಪರಿಮಿತವಾಯ್ತು!
ವಾಸುದೇವನ ಭಜನೆ ಬೇಡಾಯ್ತು! (ಆ)
-ಯ್ತು ನಿರಂಜನಾದಿತ್ಯನುದ್ಧಾರಾಯ್ತು!!!

ಇಷ್ಟುದಾಸೀನ ನಿನಗೇಕಪ್ಪಯ್ಯಾ? (ಎ)   4(2181)

-ಷ್ಟು ಕಾಲ ಹೀಗಿರಬೇಕ್ನಾನಪ್ಪಯ್ಯಾ?
ದಾರಿ ತಪ್ಪಿರುವೆನೇ ನಾನಪ್ಪಯ್ಯಾ?
ಸೀತಾರಾಮ ನೀನಲ್ಲವೇನಪ್ಪಯ್ಯಾ? (ಅ)
-ನವರತ ದರ್ಶನ ಕೊಡಪ್ಪಯ್ಯಾ!
ನಿನ್ನ ದಾಸನಲ್ಲವೇ ನಾನಪ್ಪಯ್ಯಾ?
ನಗೆ ಬೇರಾರು ಗತಿಯಪ್ಪಯ್ಯಾ? (ಭೋ)
-ಗೇಚ್ಛೆಯಿಂದ ಬಂದಿಲ್ಲ ನಾನಪ್ಪಯ್ಯಾ!
ರುಣೆ ತೋರಿ ಕಾಪಾಡ್ಬೇಕಪ್ಪಯ್ಯಾ! (ಕ)
-ಪ್ಪ, ಕಾಣಿಕೆ ನಿನಗೇತಕ್ಕಪ್ಪಯ್ಯಾ? (ಅ)
-ಯ್ಯಾ ನಿರಂಜನಾದಿತ್ಯನಾಗಪ್ಪಯ್ಯಾ!!!

ಇಷ್ಟೂಟ ಮಾಡ್ಯೆಷ್ಟೋ ವರ್ಷವಾಯ್ತು! [ಎ]   4(2399)

-ಷ್ಟೂರು ಸುತ್ತಿದ್ರೂ ಕಷ್ಟ ಹೆಚ್ಚಾಯ್ತು! (ಕೂ)
-ಟ, ನೋಟದಿಂದ ಪೇಚಾಟವಾಯ್ತು!
ಮಾತ್ಕತೆಯಿಂದ ಹೊತ್ತು ಹಾಳಾಯ್ತು! (ಕೂ)
-ಡ್ಯೆಲ್ಲರೊಡನಾಡ್ಯಪಮಾನಾಯ್ತು! (ಅ)
-ಷ್ಟೋತ್ತರ ಕೇಳಿ ದೃಷ್ಟಿ ತೆರೆಯ್ತು!
ರ ಗುರುವೇ ಗತಿಯೆಂದಾಯ್ತು (ಹ)
-ರ್ಷ ಮನಸ್ಸಿಗೆ ಸಾಕಷ್ಟುಂಟಾಯ್ತು!
ವಾದ, ವಿವಾದಗಳ್ಬೇಡವಾಯ್ತು! (ಆ)
-ಯ್ತು ನಿರಂಜನಾದಿತ್ಯಾನಂದಾಯ್ತು!!!

ಇಹದಲ್ಲಿ ಪರಲೋಕ ಕಾಣಪ್ಪಾ!   3(1038)

ತ್ತಿಂದ್ರಿಯದಾಟ ಇಹ ಕಾಣಪ್ಪಾ!
ತ್ತ ಮನವಾಗೆ ಪರ ಕಾಣಪ್ಪಾ! (ಎ)
-ಲ್ಲಿದ್ದರಲ್ಲೇ ದೇವನಿಹ ಕಾಣಪ್ಪಾ!
ರಿ ಪರಿಯಾಸೆ ಇಹ ಕಾಣಪ್ಪಾ! (ವ)
-ರ ಗುರು ಚರಣಾಶ್ರಯ ಕಾಣಪ್ಪಾ!
ಲೋಭ, ಮೋಹ ತ್ಯಾಗ ಪರ ಕಾಣಪ್ಪಾ!
ರ್ತನ ಮರವೆ ಇಹ ಕಾಣಪ್ಪಾ!
ಕಾಮೇಶ್ವರ ಧ್ಯಾನ ಪರ ಕಾಣಪ್ಪಾ! (ಹ)
-ಣ, ಕಾಸಿನಾಸೆಯೇ ಇಹ ಕಾಣಪ್ಪಾ! (ಅ)
-ಪ್ಪಾ ನಿರಂಜನಾದಿತ್ಯಾತ್ಮ ಕಾಣಪ್ಪಾ!!!

ಶ್ರೀ ಶ್ರೀ ನಿರಂಜನಾನಂದ ಸರಸ್ವತಿ
ಅವಧೂತ ಶ್ರೀ ಶ್ರೀ ನಿರಂಜನಾನಂದ ಸರಸ್ವತಿ