ಆ ಅಸ್ತ್ರ ಈ ಅಸ್ತ್ರ ಬ್ರಹ್ಮಾಸ್ತ್ರ! 3(1392)
ಅನಾದಿಮಧ್ಯಾಂತ ಬ್ರಹ್ಮಾಸ್ತ್ರ! (ವ)
-ಸ್ತ್ರ ಕಿತ್ತೊಗೆವುದು ಬ್ರಹ್ಮಾಸ್ತ್ರ!
ಈರ್ಷೆಯುಟ್ಟುವುದು ಬ್ರಹ್ಮಾಸ್ತ್ರ!
ಆಸೂಯಾರಿಪುದು ಬ್ರಹ್ಮಾಸ್ತ್ರ! (ಶಾ)
-ಸ್ತ್ರ ಸಮ್ಮತವಿದು ಬ್ರಹ್ಮಾಸ್ತ್ರ! (ತಾಂ)
ಬ್ರ ವರ್ಣಸಾರಂಗ ಬ್ರಹ್ಮಾಸ್ತ್ರ! (ಬ್ರ)
-ಹ್ಮಾನಂದ ಭರಿತ ಬ್ರಹ್ಮಾಸ್ತ್ರ! (ಶಾ)
-ಸ್ತ್ರ, ಶ್ರೀ ನಿರಂಜನಾದಿತ್ಯಾಸ್ತ್ರ!!!
ಆ ಊರು, ಈ ಊರು ಗುರುವಾಯೂರು! 4(1870)
ಊರವರಾಡುವರು, ಹಾಡುವರು!
ರುಕ್ಮಿಣೀಶನಾ ಪರಿಚಾರಕರು!
ಈಶ್ವರಾರ್ಪಣಾ ಬುದ್ಧಿಯುಳ್ಳವರು!
ಊಳಿಗ ಮಾಡಿ ತೃಪ್ತರಾಗುವರು!
ರುಜು ಮಾರ್ಗದಲ್ಲಿರಿಸೆನ್ನುವರು!
ಗುಡಿ ನಿನಗೀ ದೇಹವೆನ್ನುವರು!
ರುಚಿ ಪ್ರಸಾದ ನಿನ್ನದೆನ್ನುವರು!
ವಾಸವಾಗಿರ್ಪೆ ನೀನಿಲ್ಲೆನ್ನುವರು!
ಯಾಥಪತಿಯಾಗಿರುತ್ತೆನ್ನುವರು! (ಇ)
ರು, ನಿರಂಜನಾದಿತ್ಯಾಗ್ಯೆನ್ನುವರು!!!
ಆ ಗುಂಡೀಗುಂಡಿ, ಹೊರಗೊಳಗುಂಡಿ! 4(2426)
ಗುಂಡಿಗೆ ತನ್ಕ ಗಂಡು, ಹೆಣ್ಣಾಗುಂಡಿ! (ನ)
-ಡೀಲಿಕ್ಕಾಗ್ದಡಿಗೆಡುವ ತನ್ಕುಂಡಿ! (ಹಾ)
-ಗುಂಡ್ಹೀಗುಂಡಿ, ಗುಂಡಿ ಸೇರ್ವಾಗ್ಲೂ ಉಂಡಿ! (ನಾ)
-ಡಿನಲ್ಲೂ ಉಂಡಿ, ಕಾಡಿನಲ್ಲೂ ಉಂಡಿ!
ಹೊಡೆದಾಡಿ ಗಂಡಾಗುಂಡಿ ಮಾಡ್ಯುಂಡಿ!
ರಕ್ಕಸನಾಗಿ ಕಕ್ಕಸ್ಸೆಲ್ಲಾ ಉಂಡಿ!
ಗೊಬ್ಬರಗುಂಡಿಯ ಗಬ್ಬನ್ನೂ ಉಂಡಿ! (ಹ)
-ಳತು, ಹುಳತದ್ದೆಲ್ಲವನ್ನೂ ಉಂಡಿ!
ಗುಂಡಾಗಿ ಬೆಳೆದು ಸೇರುವುದ್ಗುಂಡಿ! (ಹಿ)
-ಡಿ, ನಿರಂಜನಾದಿತ್ಯಾನಂದನಡಿ!!!
ಆ ಮಠ, ಈ ಮಠ, ಜಂಝಾಟ! 4(1554)
ಮನಕಿದೆಲ್ಲಾ ಪರದಾಟ! (ಕಂ)
-ಠ ಶೋಷಣೆಯಿಂದಾಗದೂಟ!
ಈಶ್ವರನೆಲ್ಲೆಲ್ಲಿಹ ದಿಟ!
ಮದೋನ್ಮತ್ತನಾಗಿಲ್ಲಿ ಕಾಟ! (ಪಾ)
-ಠಕ್ಕಡಚಣ್ಯಯೋಗ್ಯ ಕೂಟ!
ಜಂಗಮಕ್ಕಾಸೆ ಬಹು ನೋಟ!
ಝಾಡಿಸಬೇಕೀ ಮಾಯೆಯಾಟ! (ದಿ)
-ಟೆ ನಿರಂಜನಾದಿತ್ಯ ಮಠ!!!
ಆ ಮತ, ಈ ಮತವೆಂದೇಕೆ ಗುದ್ದಾಟವಯ್ಯಾ? 1(437)
ಮತಾಚಾರ್ಯರೊಳಹೊಕ್ಕು ನೋಡಿದಿಯೇನಯ್ಯಾ?
ತಮಾಷೆ ಮಾತನಾಡಿದರೇನು ಫಲವಯ್ಯಾ?
ಈಗಿನಾಗಿನ ಗ್ರಂಥ ಠೀಕೆ ಸಾಕುಮಾಡಯ್ಯಾ?
ಮನ ನಿನ್ನದೆಂತಿಹುದೆಂದು ವಿಮರ್ಶಿಸಯ್ಯಾ!
ತತ್ವ ಚಿಂತನೆ ಮಾಡ್ಯಾರೂಢನಾಗಬೇಕಯ್ಯಾ!
ವೆಂಗ್ಯಮಾತಿನಿಂದ ಜ್ಞಾನ ಸಿದ್ಧಿಯಾಗದಯ್ಯಾ!
ದೇಶ, ಕಾಲ, ಸ್ಥಿತಿ, ಗತಿಯಂತವತಾರಯ್ಯಾ!
ಕೆಟ್ಟ ಮಾಯೆಯ ಹುಟ್ಟಡಗಿಸಿ ಬದುಕಯ್ಯಾ!
ಗುದ್ದಾಟ, ಒದ್ದಾಟಗಳಿಂದ ಅಶಾಂತಿಯಯ್ಯಾ! (ಎ)
-ದ್ದಾಗ ಕೂತಾಗಲೆಲ್ಲಾ ಶಿವನಾಮ ಹೇಳಯ್ಯಾ!
ಟಗರು ಕಾಳಗ ಶಿವಜೀವೈಕ್ಯವಲ್ಲಯ್ಯಾ!
ವರ ಬಸವೇಶ್ವರ ಆಡಿ, ಮಾಡಿಸಿದ್ಧಯ್ಯಾ! (ಅ)
-ಯ್ಯಾ! ನಿರಂಜನಾದಿತ್ಯಾಮೃತ ಮತವಿದಯ್ಯಾ!!!
ಆ ಮುಖ, ಈ ಮುಖ, ದತ್ತ ಮುಖ! 4(2172)
ಮುದ್ದು ಮುಖಾ ಗುರುದತ್ತ ಮುಖ! (ಮು)
-ಖ ಮೂರೊಂದಾಗಲಾ ದತ್ತ ಮುಖ!
ಈರೈದಿಂದ್ರ್ಯ ಜಯಾ ದತ್ತ ಮುಖ!
ಮುನಿಜನಾನಂದಾ ದತ್ತ ಮುಖ! (ಸು)
-ಖದುಃಖೇಕರಸಾ ದತ್ತ ಮುಖ!
ದತ್ತತ್ರಿಋಷಿಗಾ ದತ್ತ ಮುಖ! (ಹ)
-ತ್ತವತಾರೆತ್ತಿತಾ ದತ್ತ ಮುಖ!
ಮುಪ್ಪು, ಸಾವಿಲ್ಲದ್ದಾ ದತ್ತ ಮುಖ!
ಖಗ, ನಿರಂಜನಾದಿತ್ಯಾ ಮುಖ!!!
ಆ ಮೂರ್ತಿಯನ್ನು ನಾನು ನೋಡಿಲ್ಲ! 6(3664)
ಮೂರ್ತಿಯಿದನ್ನು ನೀನೂ ನೋಡಿಲ್ಲ! (ಮೂ)
-ರ್ತಿಗಳ್ಸಂಧಿಸದದಾಗ್ವುದಿಲ್ಲ! (ಪ್ರ)
-ಯತ್ನ ಸಫಲ ಲಭ್ಯದಂತೆಲ್ಲಾ! (ಇ)
-ನ್ನುಳಿದ ಕಾರಣವೇನೂ ಇಲ್ಲ!
ನಾಳೆ ನೋಡೀತೆನ್ನುವ ಹಾಗಿಲ್ಲ! (ತ)
-ನು ಇರುತ್ತೋ, ಸಾಯುತ್ತೋ ಗೊತ್ತಿಲ್ಲ!
ನೋಡ್ಲಿಕ್ಕೀಗಭ್ಯಂತರವೇನಿಲ್ಲ! (ಪ)
-ಡಿಸ್ಬೇಕ್ಸಾರ್ಥಕ ಈ ಕಾಲ ಎಲ್ಲಾ! (ಪು)
-ಲ್ಲ, ನಿರಂಜನಾದಿತ್ಯನ್ಯನಲ್ಲ!!!
ಆ ಶಾಸ್ತ್ರೀಶಾಸ್ತ್ರಿ ಬಟ್ಟೆಗಿಸ್ತ್ರಿ! (ದೇ) 3(1390)
-ಶಾಧೀಶರಿಗಗತ್ಯಾ ಇಸ್ತ್ರಿ!
-ಸ್ತ್ರೀಯರಿಗೂಬೇಕೀಗಾ ಇಸ್ತ್ರಿ!
ಶಾಲಾಮಕ್ಕಳ ಪ್ರಾಣಾ ಇಸ್ತ್ರಿ! (ಭಾ)
-ಸ್ತ್ರಿಕಾಭ್ಯಾಸೊಂದುತ್ತಮ ಇಸ್ತ್ರಿ!
ಬಸಿರ ಸ್ವಚ್ಛತೆಗಾ ಇಸ್ತ್ರಿ! (ಹೊ)
-ಟೆ ಪಾಡಿಗೊಂದುದ್ಯೋಗಾ ಇಸ್ತ್ರಿ! (ಯೋ)
-ಗಿಯಾಗಲಿಕ್ಕೂ ಬೇಕಾ ಇಸ್ತ್ರಿ! (ಶಾ)
-ಸ್ತ್ರಿ ಶ್ರೀ ನಿರಂಜನಾದಿತ್ಯೇ ಸ್ತ್ರಿ!!!
ಆಂಜನೇಯಭಕ್ತ! ಬಾ! ಬೇಗ ಬಾ!! 1(331)
ಜನ್ಮ ನಿನ್ನದು ಧನ್ಯ! ಬೇಗ ಬಾ!!
ನೇಮವಾಗಿದೆ ಸೇವಾ!! ಬೇಗ ಬಾ!!
ಯಶಸ್ಸು ನಿನಗಿದೆ! ಬೇಗ ಬಾ!!
ಭಕ್ತಿ ನಿನ್ನದಾದರ್ಶ! ಬೇಗ ಬಾ!! (ಶ)
-ಕ್ತ! ಕರ್ಮನಿಷ್ಠಾಸಕ್ತ! ಬೇಗ ಬಾ!!
ಬಾ! ದರ್ಶನಕಾಗಿ ಬಾ! ಬೇಗ ಬಾ!!
ಬೇಕಿಲ್ಲ ನಿನ್ನ ಮೂರ್ತಿ! ಬೇಗ ಬಾ!!
ಗತಿಸುತಿದೆ ಕಾಲ! ಬೇಗ ಬಾ!!
ಬಾ! ನಿರಂಜನಾದಿತ್ಯಗಾಗಿ ಬಾ!!!
ಆಂಧನಿಗೆ ದರ್ಶನಾನಂದ ಕನಸಿನಲಪ್ಪಾ! 2(514)
ಧರಣಿಯಲಿ ಗುರು ಲೀಲೆ ವಿಚಿತ್ರ ಕಾಣಪ್ಪಾ!
ನಿರ್ಮಲ ಭಾವದಿಂದ ಸದಾ ಭಜಿಸುವನಪ್ಪಾ!
ಗೆಳೆತನ ಅವನದು ನಿಷ್ಕಾಮ ಭಕ್ತಿಯಪ್ಪಾ!
ದಯೆ ಅಪಾರವಾಗಿ ಕಣ್ಣು ಕುರುಡಾಯ್ತೇನಪ್ಪಾ? (ಸ್ಪ)
-ರ್ಶ ಮಾತ್ರದಿಂದಾತನಿಗೆ ತೃಪ್ತಿಯಾಗುವುದಪ್ಪಾ!
ನಾಮ ಭಜನೆ ಅವನಲಿ ತುಂಬಿರುವುದಪ್ಪಾ! (ಆ)
-ನಂದವಿದರಿಂದ ಆತ ಸದಾ ಸಂತೋಷಿಯಪ್ಪಾ!
ದತ್ತನವನಿಗೆ ಸದ್ಗತಿ ಕೊಡದಿರನಪ್ಪಾ!
ಕಣ್ಣು ಕುರುಡಾದರೂ ಸದ್ಗುಣ ಸಂಪನ್ನನಪ್ಪಾ!
ನಯ, ವಿನಯವನದು ಮಾರ್ಗದರ್ಶಕವಪ್ಪಾ!
ಸಿರಿತನಕಾಸೆ ಪಡುವವನಾತನಲ್ಲಪ್ಪಾ!
ನಡೆ, ನುಡಿಯಿಂದೆಲ್ಲರನೊಲಿಸಿರುವನಪ್ಪಾ!
ಲಕ್ಷ್ಯ ಅವನದು ಸದ್ಗುರು ಪಾದಸೇವೆಯಪ್ಪಾ! (ಅ)
-ಪ್ಪಾ! ನೀನೆಲ್ಲರ ಕಣ್ಣಪ್ಪ ನಿರಂಜನಾದಿತ್ಯಪ್ಪಾ!!!
ಆಕಾರಕ್ಕೂ, ಆಚಾರಕ್ಕೂ ನೆಂಟು! 6(3907)
ಕಾಮನೆಗಳು ದೇಹಕ್ಕೆ ಉಂಟು!
ರಮಿಸಿದ್ರದ್ರಲ್ಲಿ ಭವದಂಟು! (ತ)
-ಕ್ಕೂಳಿಗದಿಂದ ಶಾಂತಿಯ ಗಂಟು!
ಆತ್ಮಾನಾತ್ಮ ವಿಚಾರ ಟೇಕುಂಟು!
ಚಾತುರ್ವರ್ಣಾಶ್ರಮಾಚಾರಕ್ಕುಂಟು! (ಪ)
-ರಮಾರ್ಥಕ್ಕಿದರಗತ್ಯವುಂಟು! (ಒ)
ಕ್ಕೂಟಕ್ಕಿದರಿಂದ ನೆರವುಂಟು!
ನೆಂಟ, ಭಂಟರ ಸೌಹಾರ್ದವುಂಟು! (ಅಂ)
-ಟು ನಿರಂಜನಾದಿತ್ಯಗೇನುಂಟು???
ಆಕಾಶಕ್ಕೆ ಸೋಪಾನ ರಚಿಸಲೆತ್ತಿಸಬೇಡ! 6(4111)
ಕಾರ್ಯತತ್ಪರನಾಗಿ ಮುಕ್ತನಾಗಿದಿರಬೇಡ!
ಶತುಗಳಿಗೆ ಒಳಗೆ ಎಡೆ ಕೊಡಲೇಬೇಡ! (ಬೆ)
-ಕ್ಕೆ ನಿರ್ನಾಮವಾದಮೇಲಾರಿಗೂ ಹೆದರಬೇಡ!
ಸೋಲು ಬಾಳಲ್ಲಿದರಿಂದೆಂಬುದ ಮರೆಯಬೇಡ!
ಪಾಪಿ ಕಾಮನನ್ನೆಂದಿಗೂ ಸ್ಮರಿಸಲೇ ಬೇಡ!
ನತದೃಷ್ಟನಾದೀತನಾರನ್ನೂ ಸುಖವಾಗಿಡ! (ಹ)
-ರನನ್ನೂ ಕೆಣಕೀ ನೀಚಗಾಯ್ತು ಫಾಲಾಗ್ನಿ ಕುಂಡ!
ಚಿನ್ಮಯ ಮಾರುತಿ ಶಿವನನ್ನಾತನೇನೂ ಮಾಡ!
ಸರ್ವ ಕಲ್ಯಾಣಕರ್ತನಿವನೇ! ಸಂದೇಹ ಬೇಡ! (ಲೀ)
-ಲೆ ಇವನದನ್ನು ವರ್ಣಿಸಲಾರೆ ನರ ಮೂಡ! (ಪ)
-ತ್ನಿ ಪಾರ್ವತೀದೇವಿಯಲ್ಲಿವನ ವಿಶ್ವಾಸ ಗಾಢ!
ಸದಾಶಿವನ ಕೈಲಾಸ ಸಾಮ್ರಾಜ್ಯ ಅತೀ ಗೂಢ!
ಬೇಡವುದದನ್ನು ತೋರಿಸೀಗೆಂದೀ ದೇಹ ಜಡ! (ಮೃ)
-ಡ ನಿರಂಜನಾದಿತ್ಯ ಮಾಡಬಾರದೇಗ ತಡ!!!
ಆಕಾಶದಲ್ಲೇನು ನೋಡುತ್ತೀ? (ಸಾ) 4(1687)
-ಕಾರಾತ್ಮನ ನೋಡು ಕತ್ತೆತ್ತೀ! (ದೇ)
-ಶ ದೇಶಾಧೀಶಾತೆಂಬ ಖ್ಯಾತೀ!
ದಯಾಂಬುಧಿಯೆಂಬ ಪ್ರಖ್ಯಾತೀ! (ಸೊ)
-ಲ್ಲೇನಿಲ್ಲದೆ ನೋಡೆಂಬ ಪ್ರೀತೀ! (ಅ)
-ನುಪಮಾತ್ಮ ನಾನೆಂಬ ಜ್ಯೋತೀ!
ನೋವಿಗಂಜಬೇಡಂಬ ರೀತೀ! (ಕಂ)
-ಡು ಧನ್ಯ ತಾನಾದ ಮಾರುತೀ! (ಇ)
-ತ್ತೀ, ನಿರಂಜನಾದಿತ್ಯಕೃತೀ!!!
ಆಕ್ರಮಣ ನೀತಿ ಲೋಕ ವೃತ್ತಿ! 4(1908)
ಕ್ರಮವಲ್ಲೆಂದರೆ ಕ್ರೋಧ ವೃತ್ತಿ!
ಮನ ಕ್ಲೇಶದಿಂದ ಯುದ್ಧ ವೃತ್ತಿ! (ರ)
-ಣರಂಗದಲ್ಲತಾಚ್ಯಾರ ವೃತ್ತಿ!
ನೀಚ ಸ್ವಾರ್ಥಕ್ಕಾಗೀಕ್ರೂರ ವೃತ್ತಿ!
ತಿರಿತಿರಿಗೀ ರಾಕ್ಷಸೀ ವೃತ್ತಿ!
ಲೋಕ ಶಾಂತಿಗೆ ಬೇಕೊಳ್ಳೇ ವೃತ್ತಿ!
ಕರ್ತವ್ಯ ಪಾಲನೆಯೇ ಸದ್ವೃತ್ತಿ!
ವೃತ್ತಿ ನಿರೋಧವೇ ಯೋಗ ವೃತ್ತಿ! (ವೃ)
-ತ್ತಿ, ನಿರಂಜನಾದಿತ್ಯ ನಿವೃತ್ತಿ!!!
ಆಗ ಸರಳೆ, ಈಗ ತರಲೆ! 6(3696)
ಗತಿಕೆಡ್ಸಿತೀಗ ವಿಧಿ ಲೀಲೆ!
ಸದಾಶಿವಗಚ್ಚುಮೆಚ್ಚಾ ಬಾಲೆ!
ರಮಿಸಿತವಳ ಭವ ಜ್ವಾಲೆ! (ಕ)
-ಳೆದುಕೊಂಡಳು ಶಿವನ ಮಾಲೆ!
ಈಗದರಿಂದಾಗಿ ತಲೆ ಶೂಲೆ!
ಗತಿಯೇನವಳಿಗಿನ್ನು ಮೇಲೆ?
ತಪ್ಪು ತಿದ್ದಿಕೊಂಡಾಗ್ಬೇಕ್ಸುಶೀಲೆ! (ಪ)
-ರ ಶಿವಗೆ ಶರಣಾಗ್ಲೀಗಲೇ! (ಬಾ)
-ಲೆ ನಿರಂಜನಾದಿತ್ಯಗಾಮೇಲೆ!!!
ಆಗತಕ್ಕದ್ದಾಗುತ್ತಿರಲು ನಿನಗೇಕೆ ಜಂಭ? 4(2148)
ಗಣನಾಯಕ ತಾನಾಗಿರುತಿಹನು ಹೇರಂಬ!
ತನ್ನ ಚಿತ್ತಕ್ಕೆ ಬಂದಾಗ ಮಾಡನವ ವಿಳಂಬ! (ಅ)
-ಕ್ಕ ಪಕ್ಕದವರೇನಾಡಿದರೇನು ನನಗೆಂಬ! (ಗು)
-ದ್ದಾಡಿ, ಒದ್ದಾಡಿ, ಭೋಗಿಸಿರೀಗ ಪ್ರಾರಬ್ಧವೆಂಬ!
ಗುರು ವಚನ ರುಚಿಯಾಗದೀಗವರಿಗೆಂಬ! (ಸು)
-ತ್ತಿ, ಬೇಸತ್ತು ಸುಸ್ತಾದಾಗನಾಥ ನಾನಾದೆನೆಂಬ! (ಪ)
-ರಮಾರ್ಥಿಯಿದನರಿತಲಿಪ್ತನಾಗಬೇಕೆಂಬ! (ಬ)
-ಲು ಕಷ್ಟವೀಸಿ ಪಾರಾಗಲೀ ಸಂಸಾರಾರ್ಣವೆಂಬ!
ನಿನ್ನ ನೀ ತಿಳಿದಾತ್ಮಾನಂದದಲ್ಲಿರು ನೀನೆಂಬ! (ಮ)
-ನಸೇಂದ್ರಿಯಗಳಾಟಕ್ಕೆ ಮರುಳಾಗಬೇಡೆಂಬ!
ಗೇಲಿಗೀಡಾಗುವೆ ನೀನು ಈ ದುಸ್ಸಂಗದಿಂದೆಂಬ!
“ಕೆಟ್ಟಮೇಲ್ಬುದ್ಧಿ, ಅಟ್ಟಮೇಲ್ಸಿದ್ಧಿ” ಯೆಂಬರಿವೆಂಬ!
ಜಂಗಮ, ಸ್ಥಾವರಗಳೆಲ್ಲಾ ಮಾಯಾಧೀನವೆಂಬ!
ಭಗವಾನ್ ನಿರಂಜನಾದಿತ್ಯಾನಂದ ತಾನೆಂಬ!!!
ಆಗತಕ್ಕದ್ದಾಗುವುದಪ್ಪಾ! 2(960)
ಗತಿಸುತಿದಿಂತು ಕಾಲಪ್ಪಾ!
ತಲ್ಲಣಿಸದಿರು ನೀನಪ್ಪಾ! (ಮಿ)
-ಕ್ಕ ಯೋಚನೆ ಮಾಡಬೇಡಪ್ಪಾ! (ಮು)
-ದ್ದಾಡಪ್ಪನ ಪಾದಪದ್ಮಪ್ಪಾ!
ಗುಡಿಯವನದೀ ದೇಹಪ್ಪಾ! (ಕಾ)
-ವುದವನ ಕರ್ತವ್ಯವಪ್ಪಾ! (ಮು)
-ದದಿಂದವನ ಭಜಿಸಪ್ಪಾ! (ಅ)
-ಪ್ಪಾ! ಶ್ರೀ ನಿರಂಜನಾದಿತ್ಯಪ್ಪಾ!!!
ಆಗದಿದ್ದರೀಗಳುವುದೇಕೆ? (ಯೋ) 4(2343)
-ಗ ಸಾಧನೆ ಬಿಟ್ಟಿರುವುದೇಕೆ? (ಆ)
-ದಿತ್ಯೋದಯಕ್ಕೆ ಸಂಶಯವೇಕೆ? (ಇ)
-ದ್ದದ್ದನ್ನುಂಬಾನಂದ ಬೇಕದಕೆ! (ಶ)
-ರೀರ ಮೋಹ ಬಿಡಬೇಕದಕೆ! (ರಂ)
-ಗನಾಥ ಸಹಾಯಕನದಕೆ! (ಕೀ)
-ಳು, ಮೇಲೆಂದು ಜಗಳಾಡ್ವುದೇಕೆ? (ಸಾ)
-ವು ಸಿದ್ಧ, ರಾಜಮನೆತನಕೆ! (ವಿ)
ದೇಹ ಮುಕ್ತನಾಗಬೇಕದಕೆ! (ಶಂ)
-ಕೆ, ನಿರಾಂಜನಾದಿತ್ಯನಲ್ಲೇಕೆ???
ಆಗಬೇಕಾದದ್ದಾಗಲೇಬೇಕು? (ಹೋ) 5(3047)
-ಗಬೇಕಾದದ್ದು ಹೋಗಲೇಬೇಕು!
ಬೇಕು, ಬೇಡವೆನ್ನದಿರಬೇಕು!
ಕಾರ್ಯತತ್ಪರತೆ ಹೆಚ್ಚಬೇಕು!
ದತ್ತ ಜಪ ಸದಾ ಮಾಡಬೇಕು! (ಗು)
-ದ್ದಾಡಕ್ಕೆಡೆಗೊಡದಿರಬೇಕು!
ಗಗನ ಸದೃಶನಾಗಬೇಕು!
ಲೇವಾದೇವಿಯಿಲ್ಲದಿರಬೇಕು! (ಬೇ)
-ಕು, ನಿರಂಜನಾದಿತ್ಯನಾಗ್ಬೇಕು!!!
ಆಗಬೇಕಾದುದಾಯಿತು! ಆಗುತಿದೆ! ಆಗಲಿದೆ! 1(84)
ಗತಿಸಿದುದಕಾಗೀಗ ಚಿಂತಿಸಿ ಫಲವೇನಿದೆ!
ಬೇಕು, ಬೇಡೆಂದರೆ ನಮ್ಮಿಚ್ಛೆಯೇನು ನಡೆಯುತಿದೆ?
ಕಾಲಕಾಲಕ್ಕೇನಾಗಬೇಕೋ ಅದೇ ಆಗುತಿದೆ!
ದುಸ್ತರವಿದರ ಕಾರಣ ತಿಳಿಯದಂತಾಗಿದೆ!
ದಾರಿ, ಬಂದುದಾನಂದದಿ ಸ್ವೀಕರಿಸುವುದಾಗಿದೆ!
ಯಿನ್ನೇನೂ ಉಪಾಯವಿದಕೆ ತೋಚದಂತೆ ಆಗಿದೆ!
ತುದಿ, ಮೊದಲೆಲ್ಲಿ? ಮನದ ಭಾಂತಿ ಬಹಳಾಗಿದೆ!
ಆಗವುದೆಲ್ಲಾಗುತಿರಲೆಂದು ಇರಬೇಕಾಗಿದೆ!
ಗುರಿಯಾಗಿರುವ ಚಿರಶಾಂತಿಗೀ ಕೃಪೆಯಾಗಿದೆ!
ತಿರಿರಿಗಿ ಮನಕರಗಿ ಮಾಡುವುದೇನಿದೆ?
ದೆವ್ವ ಕಾಟಗಳೆಂಬ ಭ್ರಮೆಯ ಬಿಡಬೇಕಾಗಿದೆ!
ಆನಂದವಿದು ಗುರುವಿಗೆಂದರಿಯಬೇಕಾಗಿದೆ!
ಗಮನಾಗಮನ ನಿರ್ಗಮನ ಆವನದಾಗಿದೆ!
ಲಿಂಗ ದೇಹದಲವನ ಆಟ ಬಹಳವಾಗಿದೆ! (ಎ)
-ದೆಗುಂದದೆ ನಿರಂಜನನ ನೆನೆಯಬೇಕಾಗಿದೆ!!!
ಆಗಬೇಕಾದುದೇ ಆಗುತಿರುವಾಗ ಬೇರಾವ ಯೋಚನೆ ಏಕೆ? 1(12)
ಗತಿ, ಸ್ಥಿತಿಗಳೆಲ್ಲ ಗೋಚರವಾದೊಂದದ್ಭುತ ಶಕ್ಕಿಯೆಂದೆಂದರಿಯದೇಕೆ?
ಬೇಕೆನ್ನುವುದು ಸಿಗುತಿಲ್ಲ ಬೇಡೆಂದರದು ಬೆನ್ನ ಬಿಡುವುದಿಲ್ಲವೆನೆ ಚಿಂತಿಪುದೇಕೆ?
ಕಾಮ್ಯವಲ್ಲದ ನಿಷ್ಕಾಮ ಕರ್ಮವನೇ ಮಾಡುತಿರಲದೇಕೆ ಕಾಟ ತಪ್ಪದಿರುವುದೇಕೆ?
ದುಷ್ಕರ್ಮ ಧರ್ಮಬಾಹಿರವೆಂದರೂ ಅದಕೆಲ್ಲೆಲ್ಲೂ ಜಯವಾಗುತಿರುವುದೇಕೆ?
ದೇಶ ವಿದೇಶಗಳೆಲ್ಲಾ ಗುರುದೇವನಧೀನವಾಗಿರೆಲ್ಲರಲ್ಲನ್ಯೋನ್ಯವಿಲ್ಲವೇಕೆ?
ಆದಂತಾಗಲೆಂದಿದ್ದರೂ, ಸದಾ ಗುರುಸ್ಮರಣೆಗೈದರೂ ಶಾಂತಿ ಇಲ್ಲವದೇಕೆ?
ಗುರುಹಿರಿಯರುಪದೇಶ ನಂಬಿ ಬದುಕಿದರೂ ನಂಬಿಕೆ ಸಾರ್ಥಕವಾಗದೇಕೆ?
ತಿರುಗುತಿಹ ಕಾಲಚಕ್ರದ ಗತಿಯಿಂದೆಲ್ಲಾ ಸರಿಯಾಗುತಿದೆಂದರದು ಕಾಣದೇಕೆ?
ರುಕ್ಮಿಣೀಮಣನುದ್ಧರಿಸುವನು ಸಜ್ಜನರೆಂಬ ಸತ್ತಪ್ರದರ್ಶನವಾಗದೇಕೆ?
ವಾಸನೆಗಳಿಂದೆನ್ನ ಬಿಡಿಸೆಂದು ಬೇಡಿದರೂ ಅದರಲ್ಲೇ ಅದ್ದಿ ಕೆಡಿಸುವುದೇಕೆ?
ಗತಿವಿಹೀನನಾದೆನಗೆ ಸದ್ಗತಿ ತೋರಿ ಕಾಪಾಡೆಂದರೂ ದುಃಸ್ಥಿತಿ ಬಿಡಿಸದಿಹುದೇಕೆ?
ಬೇಡುವುದಿಲ್ಲ ನಾನಿನ್ನ ನೀಡುತಕ್ಕುದನಿತ್ತು ದುಃಖ ಶಾಂತಿ ಮಾಡದಿರುವುದೇಕೆ?
ರಾಮಾಯಣ, ಭಾರತ, ಭಾಗವತ ಕಥೆಗಳ ದೈವಿಕದ ಅನುಭವ ಕೊಡದಿರುವುದೇಕೆ?
ವನವಾಸ ಉಪವಾಸಗಳೆಲ್ಲ ತವಪ್ರಸಾದವೆಂದಿದ್ದರೂ ಕರುಣೆ ಬಾರದದೇಕೆ?!
ಯೋಚನೆ ಬಿಡಿಸಿ ಸದಾ ನಿರ್ಯೋಚನೆಯಲಿರಿಸೆಂದರೂ ಹಾಗಿರಿಸದಿಹುದೇಕೆ?
ಚಪಲಗಳ ನಿರ್ಮೂಲಗೊಳಿಸುತ ಭೇದ ನಿಜ ಬೋಧದಲಿರಿಸದಿರುವುದೇಕೆ?
ನೆರೆನಂಬಿಹೆನು ನಾ, ನಿನ್ನ! ಎನ್ನ ನೀ ಕೈಬಿಡಬೇಡೆಂದತ್ತರೂ ಕನಿಕರವಿಲ್ಲವೇಕೆ?
ಏನಾಗಬೇಕೋ ಅದೇ ಆಗಲಿ! ಪ್ರತಿಭಟಿಸಿ ಬದುಕುವ ಭ್ರಾಂತಿ ನನಗೇಕೆ?
ಕೆಸರು ಮೊಸರಾಗುವುದು ಮೊಸರು ಕೆಸರಾಗುವುದು “ನಿರಂಜನನಿಚ್ಛೆ” ಬೇರೆ ಮಾತೇಕೆ???
ಆಗಲಿ ನಿನ್ನಿಷ್ಟದಂತಾಗಲಿ! (ಹ) 4(2106)
-ಗಲಿರುಳ್ನಿನ್ನ ಧ್ಯಾನ ಸಾಗಲಿ! (ಬ)
-ಲಿದೆನ್ನ ಜನ್ಮ ಪಾವನಾಗಲಿ!
ನಿನ್ನ ಕೀರ್ತಿ ಪತಾಕೆಯೇರಲಿ! (ನ)
-ನ್ನಿಷ್ಟದಂತೆಲ್ಲಾ ಜಯವಾಗಲಿ! (ದು)
-ಷ್ಟರಿಷ್ಟಗಳಡಗಿ ಹೋಗಲಿ! (ಚಿ)
-ದಂಬರಾನಂದವೆನಗಾಗಲಿ!
ತಾಳ್ಮೆ ವಿಫಲವಾಗದಿರಲಿ! (ರಂ)
-ಗನಾಥನೆನ್ನಾಪ್ತನಾಗಿರಲಿ! (ಶೂ)
-ಲಿ ನಿರಂಜನಾದಿತ್ಯನಾಗಲಿ!!!
ಆಗಿದೆ, ಸಾಗಿದೆ, ಮುಗಿಯಲಿದೆ! (ಯೋ) 5(2728)
-ಗಿರಾಜನಾಜ್ಞಾನುಸಾರವಾಗಿದೆ! (ತಂ)
-ದೆ ಅವನೆಂಬ ನಂಬಿಗೆಯಾಗಿದೆ!
ಸಾಮಿಪ್ಯ ದಾಟ ಮುಂದಕ್ಕೆ ಸಾಗಿದೆ! (ಬಿ)
-ಗಿದಪ್ಪಿ ತದ್ರೂಪವಾಗ್ಲಿಕ್ಸಾಗಿದೆ! (ಒಂ)
-ದೆನುತ ಬೆರೆತಿರಲು ಸಾಗಿದೆ!
ಮುನೀಶ್ವರನಾಗಿ ಮುಗಿಯಲಿದೆ! (ಸಂ)
-ಗಿ ನಿಸ್ಸಂಗಿಯಾಗಿ ಮುಗಿಯಲಿದೆ!
ಯಮ, ನಿಯಮವೂ ಮುಗಿಯಲಿದೆ! (ನ)
-ಲಿನಲಿದೀ ಬಾಳು ಮುಗಿಯಲಿದೆ! (ತಂ)
-ದೆ ನಿರಂಜನಾದಿತ್ಯಗೇನ್ಬೇಕಿದೆ???
ಆಗಿನಂತೀಗಿಲ್ಲ ಈಗಿನಂತಾಗಿಲ್ಲ! 5(2828)
ಗಿಟ್ಟಿಸಿಕೊಳ್ಳಬೇಕೀ ಜ್ಞಾನವನ್ನೆಲ್ಲ!
ನಂಬಿಗೆಗಸಾಧ್ಯವಾದುದಾವುದಿಲ್ಲ!
ತೀರಾ ಬೆಳ್ಳಗಿದ್ದುದೀಗ ಕೆಂಪಾಯ್ತಲ್ಲ!
ಗಿರಿದಾವರೆಯಲ್ಲೀ ಮಾರ್ಪಾಟಾಯ್ತಲ್ಲ! (ಅ)
-ಲ್ಲ ಸಲ್ಲದ ಮಾತಲ್ಲೇನೂ ಹುರುಳಿಲ್ಲ!
ಈಶ್ವರ ಸಾಕ್ಷಾತ್ಕಾರ ಪಡೆಯಿರೆಲ್ಲ!
ಗಿರಿ, ಗುಹೆ ಸುತ್ತಿದರಾಗ್ವುದಿದಲ್ಲ!
ನಂಜುಂಡನಾದರ್ಶದಿಂದ ಬಾಳ್ಬೇಕೆಲ್ಲ!
ತಾಳ್ಮೆಯಿಂದ ಶಿಖರವೇರ್ಬೇಕ್ನಿವೆಲ್ಲ!
ಗಿರಿಜಾಂಬೆ ಕಾಪಾಡುವಳ್ನಿಮ್ಮನೆಲ್ಲ! (ಪು)
-ಲ್ಲ ನಿರಂಜನಾದಿತ್ಯ ಶಿವೇಚ್ಛೆಯೆಲ್ಲಾ!!!
ಆಗಿನಂತೆ ಈಗಿಲ್ಲಾ! 1(394)
ಗಿಡ ಕಿತ್ತದ್ದಾಯ್ತಲ್ಲಾ!
ನಂಬಿಗೆ ಹಾಲಾಯ್ತಲ್ಲಾ!
ತೆಗಳಿಕೆ ಹೆಚ್ತಲ್ಲಾ!
ಈರ್ಷಾಸೂಯೆ ಹುಟ್ಟಲ್ಲಾ!
ಗಿರೀಶಗಾಸಕ್ತಿಲ್ಲಾ! (ಅ)
-ಲ್ಲಾದಿತ್ಯ ಬೇಕಾಗಿಲ್ಲಾ!!!
ಆಗುವಾ, ನಾವೀರ್ವರೊಂದಾಗುವಾ! 5(2943)
ಗುರಿ ಸೇರಿ ಸುಖವಾಗಿರುವಾ!
ವಾದ, ವಿವಾದವಿಲ್ಲದಿರುವಾ!
ನಾವೇಕೆ ವೃಥಾ ದೂರವಿರುವಾ?
ವೀತರಾಗಿಗಳಾಗೊಂದಾಗಿರ್ವಾ! (ಸ)
-ರ್ವರ ಮಾರ್ಗದರ್ಶಕರಾಗಿರ್ವಾ! (ಯಾ)
-ರೊಂದಿಗೂ ಜಗಳಾಡದಿರುವಾ!
ದಾಸರಿಗೆ ದಾಸರಾಗಿರುವಾ!
ಗುರು ಸ್ವರೂಪ ನಾವಾಗಿರುವಾ! (ಸೇ)
-ವಾ ನಿರಂಜನಾದಿತ್ಯಗೀಯುವಾ!!!
ಆಗುವುದೆಲ್ಲಾಗ್ಲಿ, ಪಾದ ಸೇರ್ಲಿ! 5(2827)
ಗುರುಕೃಪೆ ಮಾತ್ರ ಸದಾ ಇರ್ಲಿ! (ನೋ)
-ವು ಮನಸ್ಸಿಗೆಂದೂ ಆಗದಿರ್ಲಿ! (ನಿಂ)
-ದೆ, ವಂದನೆ ನಿರ್ಲಕ್ಷ್ಯವಾಗಿರ್ಲಿ! (ಎ)
-ಲ್ಲಾ ದೇವರೂ ಒಂದೆಂಬರಿವಿರ್ಲಿ! (ಸಾ)
-ಗ್ಲಿ, ನಾಮಸ್ಮರಣೆ ಸದಾ ಆಗ್ಲಿ!
ಪಾನಾನ್ನ ದೇಹಧಾರಣೆಗಿರ್ಲಿ!
ದತ್ತಸ್ವರೂಪ ತನ್ನದಾಗಿರ್ಲಿ!
ಸೇವೆ ಸ್ವರೂಪಸಿದ್ಧಿಗಾಗಿರ್ಲಿ! (ಬ)
-ರ್ಲಿ ನಿರಂಜನಾದಿತ್ಯ ತಾನಿರ್ಲಿ!!!
ಆಗೊಲ್ಲ ಈಗೊಲ್ಲ ಬೇಕಾಗೊಲ್ಲ! 4(1764)
ಗೊಲ್ಲ ಬಾಲ ಶ್ರೀ ಕೃಷ್ಣಾ ಪ್ರಪುಲ್ಲ! (ಎ)
-ಲ್ಲರ ಮನೆಯಲ್ಲೂ ಬೇಕಾಗೊಲ್ಲ!
ಈರೇಳು ಲೋಕನಾಥಾ ಪ್ರಪುಲ್ಲ!
ಗೊಲ್ಲ ನಲ್ಲೆಯರ್ಗೆ ಬೇಕಾಗೊಲ್ಲ! (ಮ)
-ಲ್ಲಮರ್ದನ ಗೋಪಾಲಾ ಪ್ರಪುಲ್ಲ!
ಬೇಡಿದ್ದೀಯಲಿಕ್ಕೆ ಬೇಕಾಗೊಲ್ಲ!
ಕಾಮಧೇನು ಸಮಾನಾ ಪ್ರಪುಲ್ಲ!
ಗೊಡ್ಡಾವನೀಂಟಲ್ಕೆ ಬೇಕಾಗೊಲ್ಲ! (ಗೊ)
-ಲ್ಲ ನಿರಂಜನಾದಿತ್ಯಾ ಪ್ರಪುಲ್ಲ!!!
ಆಗ್ಬಾರದ್ದು ಆಗ್ಬೇಕೆಂದ್ರಾದೀತಾ? (ಈ) 6(3757)
-ಗ್ಬಾ ಅಂದ್ರೆ ಸೂರ್ಯೋದಯ ಆದೀತಾ? (ಇ)
-ರದಿದ್ದ್ರೊಂದು ನೇಮ ಜಗತ್ತು ಇದ್ದೀತಾ? (ಕ)
-ದ್ದು ತಿನ್ನುತ್ತಿದ್ದ್ರೆ ಗುದ್ದು ತಪ್ಪೀತಾ?
ಆಚಾರ ಕೆಟ್ರೆ ಆಚಾರ್ಯಾದೀತಾ? (ಆ)
-ಗ್ಬೇಕಾದದ್ದು ಆಗ್ದಿದ್ದರಾದೀತಾ? (ಬೇ)
-ಕೆಂಬಾತ್ಮಾನಂದ ಬಾರ್ದಿದ್ದ್ರಾದೀತಾ? (ನಿ)
-ದ್ರಾಹಾರ ಬಿಟ್ಟದುಕ್ಲಿಕ್ಕಾದೀತಾ?
ದೀಪವಿಲ್ಲದೆ ಓದ್ಲಿಕ್ಕಾದೀತಾ?
ತಾರೆ ನಿರಂಜನಾದಿತ್ಯಾದೀತಾ???
ಆಗ್ಬೇಕಾದದ್ದಾಗ್ತಿರ್ವಾಗೇಕಾತುರ ಕಾತುರ? (ಸಾ) 6(3819)
-ಗ್ಬೇಕಾಗಿದೆ ದಾರಿ ಊರಿಗಿನ್ನೂ ಸ್ವಲ್ಪ ದೂರ!
ಕಾಲಚಕ್ರ ಹರಿಸುವುದು ಭೂಮಿಯ ಭಾರ!
ದಯೆ ದಾಕ್ಷಿಣ್ಯಗಳೆಂಬುದಿಲ್ಲದದು ಕ್ರೂರ! (ಮು)
-ದ್ದಾಡಿಸುತಿದೆ, ಒದ್ದಾಡಿಸುತಿದೆ ಜೀವರ! (ಆ)
-ಗ್ತಿದೆ ಹೀಗೆ ಎಲ್ಲೆಲ್ಲೂ ಅನಾದಿಯಿಂದ ತರ! (ಇ)
-ರ್ವಾಗ ಜೀವದಲ್ಲರಿತಿರೆಬೇಕೀ ವಿಚಾರ!
ಗೇಯ್ಮೆ ಜೀವರಿಗಾಗಿಹುದು ಬಹಳ ತರ!
ಕಾಮ್ಯ ಕರ್ಮಗಳಿಂದತ್ಯವಾಗದು ಸಂಸಾರ!
ತುರಿಯಾತೀತವೆಂಬ ಸ್ಥಿತಿಯೇ ನಿರಾಕಾರ!
ರಮಾಲೋಲ, ಉಮಾಲೋಲರೆಲ್ಲರೂ ಸಾಕಾರ!
ಕಾಲ ಲೀಲೆಯಲ್ಲವರ ಮಹಿಮೆ ಅಪಾರ! (ಎಂ)
-ತು ಬಣ್ಣಿಸಬಲ್ಲನವರ ಆಟ ಚತುರ! (ನಿ)
-ರತ ನಿರಂಜನಾದಿತ್ಯಗರಿವೀ ವಿಚಾರ!!!
ಆಗ್ಬೇಕಾದದ್ದಾದೀತೆಂದಿರ್ಪವಗೆ ನಿಶ್ಚಿಂತೆ! (ಹೋ) 5(3263)
-ಗ್ಬೇಕ್ಬರ್ಬೇಕೆಂಬ ಸಂಕಲ್ಪವೆಲ್ಲಾ ಸದಾ ಚಿಂತೆ!
ಕಾರಣಕರ್ತನಿಷ್ಟದಂತೆಲ್ಲಾಗ್ವಾಗೇಕ್ಚಿಂತೆ?
ದಶರಥನಿದ ಮರೆತಿದ್ರಿಂದಾಯ್ತು ಚಿಂತೆ! (ಒ)
-ದ್ದಾಡಿಸಿತು ಮಗನ ವನವಾಸದ ಚಿಂತೆ!
ದೀನಾನಾಥ ನಾಥನಿಷ್ಟದಂತಾಯ್ತೆಂದ್ರೇನ್ಚಿಂತೆ? (ಚಿಂ)
-ತೆಂಬುದು ಮಿಥ್ಯಾ ಮೋಹ ವ್ಯವಹಾರದ ಸಂತೆ!
ದಿವ್ಯ ಜೀವನದಿಂದಿದು ಪರಿಹಾರವಂತೆ! (ದ)
-ರ್ಪ, ದಂಭ ಸಮರ್ಪಣೆಯಾದರಾನಂದವಂತೆ!
ವಜ್ರಮುಷ್ಟಿಯ ಹೊಡೆತಕ್ಕಾಗಾರಿದಿರಂತೆ?
ಗೆಲ್ಬೇಕಿಂದ್ರಿಯಗಳ ಗುರುಕೃಪೆಯಿಂದಂತೆ!
ನಿಶಿ, ದಿನ ನಾಮಸ್ಮರಣೆ ಮಾಡಬೇಕಂತೆ! (ನಿ)
-ಶ್ಚಿಂತೆಗಿದು ಅತ್ಯಂತ ಸುಲಭ ದಾರಿಯಂತೆ! (ಜೊ)
-ತೆಗಾರ ನಿರಂಜನಾದಿತ್ಯನಾಗುವನಂತೆ!!!
ಆಗ್ಬೇಕ್ನೀನ್ಸುಗುಣ ಗಣಿ! 5(2902)
ಗಳಿಕೆಯಿಂದಾಗ್ಬೇಕೀ ಗಣಿ!
ಬೇರಿನ್ಯಾರಲ್ಲ ನಿನ್ನ ಧಣಿ! (ಏ)
-ಕ್ನೀನಾಗಿಲ್ಲ ರಾಮನ ರಾಣಿ? (ಏ)
-ನ್ಸುಖಕ್ಕಾಗೀ ಮಿಥ್ಯ ಧರಣಿ?
ಗುರು ನಿನಗಾ ವೀರಾಗ್ರಣಿ! (ರ)
-ಣಧೀರ, ರಘುವೀರಾ ತ್ರಾಣಿ!
ಗರ್ವ ಬಿಟ್ಟಾಗು ಶ್ರೀ ರಮಣಿ! (ಗ)
-ಣಿ ನಿರಂಜನಾದಿತ್ಯ ವಾಣಿ!!!
ಆಗ್ಮಾಡ್ದಡ್ಗೆ ಈಗುಂಡಾ ಮೇಲ್ತೇಗು! (ಈ) 6(3710)
-ಗ್ಮಾಡ್ಬೇಕಾದದ್ದೀಗ್ಲೇ ಮಾಳ್ಪವ್ನಾಗು! (ಮಾ)
-ಡ್ದ ಕರ್ಮ ಫಲಾಮೇಲುಂಬವ್ನಾಗು! (ಗ)
-ಡ್ಗೆಯಿರ್ಪಾಗ ಹಾಲ್ತುಂಬುವವ್ನಾಗು!
ಈಡಿಗನಾಗದಿರ್ಪವನಾಗು!
ಗುಂಜಾ ನರಸಿಂಹನೇ ನೀನಾಗು! (ಬ)
-ಡಾಯಿ ಕೊಚ್ಚಿಕೊಳ್ಳದವನಾಗು!
ಮೇಷ, ಮೀನವೆಣಿಸದವ್ನಾಗು! (ತೇ)
-ಲ್ತೇಲಿ ಮುಳುಗದೆಲೆ ನೀನಾಗು! (ಆ)
-ಗು, ನಿರಂಜನಾದಿತ್ಯ ನೀನಾಗು!!!
ಆಗ್ಲಿಂದು ಪಾದಪೂಜೆ ಆನಂದದಿಂದ! (ಹೋ) 6(4052)
-ಗ್ಲಿಂತೆಲ್ಲಾ ಪಾಪದೋಷಗಳದರಿಂದ!
ದುರ್ಮರಣಕ್ಕೀಡಾಗದಿರಲದ್ರಿಂದ!
ಪಾಶ ಸಂಸಾರದ್ದು ಹರಿಯಲದ್ರಿಂದ!
ದತ್ತ ಸಾಕ್ಷಾತ್ಕಾರವಾಗಲದರಿಂದ!
ಪೂರ್ಣಾಯುರಾರೋಗ್ಯವುಂಟಾಗುದ್ರಿಂದ! (ಬಂ)
-ಜೆಯರ್ಪುತ್ರವತಿಯರಾಗಲದ್ರಿಂದ!
ಆಗಲಿಷ್ಟಾರ್ಥವೆಲ್ಲಾ ಸಿದ್ಧಿ ಅದ್ರಿಂದ!
ನಂಬಿಗೆಗಿಂಬು ದೊರಕಲದರಿಂದ!
ದಡ ಸೇರುವ ಶಕ್ತಿ ಬರಲದ್ರಿಂದ! (ಕಾ)
-ದಿಂದೇ ದರ್ಶನ ಪಡೆಯಿರದಿರಿಂದ!
ದತ್ತ ಶ್ರೀ ನಿರಂಜನಾದಿತ್ಯ ತಾನೆಂದ!!!
ಆಚಾರ ವಿಚಾರವೇ ಸಂಸ್ಕಾರ! 3(1120)
ಚಾರುತರ ಸಂಸ್ಕಾರಾಪ್ತಾಕಾರ!
ರಘುಪತಿಯದಾದರ್ಶಾಚಾರ!
ವಿಚಾರಾಶಾದೂರ ರಘುವೀರ!
ಚಾಪ, ಬಾಣ, ಧರ ರಣಧೀರ!
ರಕ್ಕಸರವನಿಗೆ ನಿಸ್ಸಾರ!
ವೇದ ವೇದ್ಯಾತ್ಯ ವೇದಾಂತಸಾರ!
ಸಂತ ಪಂಥಕ್ಕಿವ ಸದಾಧಾರ! (ಸಂ)
-ಸ್ಕಾರಿ ಮಾರುತಿಯ ಪ್ರೇಮಾಗಾರ! (ವ)
-ರದ ನಿರಂಜನಾದಿತ್ಯಾಕಾರ!!!
ಆಚಾರ, ವಿಚಾರ, ಹಾಸು, ಹೊಕ್ಕಿಂದ ಬಾಳು ಬಟ್ಟೆ! 6(4356)
ಚಾತುರ್ವರ್ಣಾಶ್ರಮ ಧರ್ಮಗಳನ್ನಿದಕ್ಕಾಗಿಟ್ಟೆ!
ರಹಸ್ಯವರಿಯದೇ ಹೊಡೆದಾಡಿ ನೀನು ಕೆಟ್ಟೆ!
ವಿದ್ಯಾದೇವಿಯನ್ನು ಮೂರುಕಾಸಿಗೆ ಮಾರಿಬಿಟ್ಟೆ!
ಚಾಡಿ, ಚೌರ್ಯಾದಿಯಿಂದಂತರಂಗ ಕೆಡಿಸಿಬಿಟ್ಟೆ!
ರಘುರಾಮನಾದರ್ಶಗಳನ್ನು ಮರೆತುಬಿಟ್ಟೆ!
ಹಾಲಿಗೆ ನೀರು ಬೆರಸಿ ಮಾರಿ ಜೀವಿಸಿ ಬಿಟ್ಟೆ!
ಸುರಭಿಯನ್ನು ನೇಗಿಲಿಗೆ ಕಟ್ಟಿ ಉತ್ತು ಕೆಟ್ಟೆ!
ಹೊಲ, ಮನೆಗಾಗಿ ಮಾಡಬಾರದ್ದು ಮಾಡಿ ಬಿಟ್ಟೆ! (ಠ)
-ಕ್ಕಿಂದನ್ಯರಾಸ್ತಿ, ಪಾಸ್ತಿ, ಸ್ವಾಧೀನಪಡಿಸಿ ಬಿಟ್ಟೆ!
ದರಿದ್ರಾವಸ್ಥೆ ಹೋಗಲಾಡಿಸಲಾರದೇ ಕೆಟ್ಟೆ!
ಬಾಯಿರುಚಿಗಾಗೀಗ ರೋಗಕ್ಕಾಮಂತ್ರಣ ಕೊಟ್ಟೆ! (ಕೂ)
-ಳು ಸಿಕ್ಕದವನಾಗಿ ಕಂಗೆಟ್ಟು ಸಾಯಲಾಗ್ಬಿಟ್ಟೆ!
ಬಸವನಂತೆ ಶಿವಸೇವೆಗೀಗಬಳೆತೊಟ್ಟೆ! (ಬಿ)
-ಟ್ಟೆಲ್ಲಾವೃತ್ತಿ ಶ್ರೀ ನಿರಂಜನಾದಿತ್ಯನಾಗಿಬಿಟ್ಟೆ!!!
ಆಜ್ಞಾಪಾಲನೆ ಎಲ್ಲಿ ತನಕ? 6(3581)
ಜ್ಞಾನ ನೆಲೆ ನಿಲ್ಲುವ ತನಕ!
ಪಾಪ, ಪುಣ್ಯವಿಲ್ಲದ ತನಕ!
ಲಕ್ಷ್ಯ ಸಿದ್ಧಿಯಾಗುವ ತನಕ!
ನೆಟ್ಟದ್ದು ಫಲಿಸುವ ತನಕ!
ಎಚ್ರವೂ ಕನ್ಸೆನ್ನುವ ತನಕ! (ಅ)
-ಲ್ಲಿಲ್ಲೆಲ್ಲೆಲ್ಲಿ ತಾನಾಗ್ವ ತನಕ!
ತಳಮಳ ಅಳಿವ ತನಕ!
ನಷ್ಟ, ಕಷ್ಟಕ್ಕಂಜದ ತನಕ! (ಲೋ)
-ಕ ನಿರಂಜನಾದಿತ್ಯಪ್ಪ ತನ್ಕ!!!
ಆಜ್ಞಾಪಾಲನೆ ಜಪ ತಪವಮ್ಮಾ! 2(498)
ಜ್ಞಾನ, ಧ್ಯಾನಕಿದತ್ಯಗತ್ಯವಮ್ಮಾ! (ಅ)
-ಪಾಯವಿದಿಲ್ಲದಿರೆ ತಪ್ಪದಮ್ಮಾ!
ಲಘುವಾಗಿದ ಭಾವಿಸಬೇಡಮ್ಮಾ!
ನೆನಪಿನಿಂದ ಆಜ್ಞೆ ಪಾಲಿಸಮ್ಮಾ!
ಜಪವಿದಕಿಂತ ದೊಡ್ಡದಲ್ಲಮ್ಮಾ!
ಪತಿ ಮಾತು ಬಿಟ್ಟಾವ ತಪವಮ್ಮಾ?
ತನಯನುನ್ನತಿ ಪಿತನಿಂದಮ್ಮಾ! (ಅ)
-ಪಚಾರವನಿಗಾಗ ಬಾರದಮ್ಮಾ!
ವರ್ತಿಸಬೇಕವನಿಷ್ಟದಂತಮ್ಮಾ! (ಅ)
-ಮ್ಮಾ ನಿರಂಜನಾದಿತ್ಯನಾಜ್ಞೆಯಮ್ಮಾ!!!
ಆಜ್ಞಾಪಾಲನೆ ಪರಮೌಷಧಿ! 4(1941)
ಜ್ಞಾನವೃದ್ಧಿಗಿದಾಧಾರೌಷಧಿ!
ಪಾಪ ಪರಿಹಾರಕ್ಕಾರ್ಯೌಷಧಿ!
ಲಕ್ಷ್ಯ ಸಿದ್ಧಿಗಿದು ಸಿದ್ಧೌಷಧಿ!
ನೆಮ್ಮದಿಗಿದೊಂದ ಮೌಲ್ಯೌಷಧಿ!
ಪತಿತೆಗಿದು ಪಾವನೌಷಧಿ!
ರಕ್ತಶುದ್ಧಿಗಿದು ರಸೌಷಧಿ!
ಮೌನಾಪೇಕ್ಷಿಗಿದು ಮಹೌಷಧಿ!
ಷಡ್ರಿಪು ನಾಶಕ್ಕಾಶ್ವಾಸೌಷಧಿ! (ವ್ಯಾ)
-ಧಿಗೆ ನಿರಂಜನಾದಿತ್ಯೌಷಧಿ!!!
ಆಜ್ಞಾಪಾಲನೆಯೇ ಅನನ್ಯಾ ಭಕ್ತಿ! 1(289)
ಜ್ಞಾನೋದಯಕಿದೇ ಪರಮ ಶಕ್ತಿ!
ಪಾಮರನೂ ಪಾರಾಗಲಿದೇ ಶಕ್ತಿ!
ಲಯವಾಗ್ದುದಿದರಿಂದ ಕುಯುಕ್ತಿ!
ನೆನೆಯುತಿರಬೇಕು ಸದ್ಗುರೂಕ್ತಿ!
ಯೇಸು ಸಾರಿದ ದಶಾಜ್ಞಾಮರೋಕ್ತಿ!
ಅಹಿಂಸಾ ಸಿದ್ಧಿಗಿರಬೇಕೀ ಶಕ್ತಿ!
ನಯನುಡಿಯಾಡಿದರಲ್ಲ ಭಕ್ತಿ!
ನ್ಯಾಯವಿದು ಧರ್ಮ ಸಮ್ಮತದೋಕ್ತಿ!
ಭಕ್ತಿಯೋಗಕಿರಬೇಕೀ ಆಸಕ್ತಿ! (ಶ)
-ಕ್ತಿ, ನಿರಂಜನಾದಿತ್ಯನಲೀ ಭಕ್ತಿ!!
ಆಜ್ಞಾಪಿಸಲೇಕೆ? ಅವಿಧೇಯನೆನಲೇಕೆ? 1(230)
ಜ್ಞಾನಿಯಾಜ್ಞಾಪಿಸುವುದಿಲ್ಲದರಿಯದೇಕೆ?
ಪಿರಿದ, ಕಿರಿದಿಲ್ಲದಂತಿರಬಾರದೇಕೆ?
ಸದಾ ನಿಜದಲಿರುವವನ ಚಿಂತೆಯೇಕೆ?
ಲೇಸದೇ ಶಾಂತಿ ಜೀವನಕೆಂದರಿಯದೇಕೆ?
ಕೆಸರೆಂದರಿತರೂ ಹೆಜ್ಜೆಯಿಡುವುದೇಕೆ?
ಅವಿಧೇಯತೆಗಾಗಿ ನಿನಗುದ್ರೇಕವೇಕೆ?
ವಿಧೇಯ ನಾನಾಗುವುದು ನನ್ನಾವ ಸುಖಕೆ?
ಧೇನು ಒದೆದರೂ ಮೊಲೆ ಹಿಂಡೂವುದೇಕೆ?
ಯತಿಯಾಗಿದಕೆ ವ್ಯಥೆಪಡುವುದೇಕೆ?
ನೆಗಡಿಯಾದರೌಷಧಿ ಮಾಡಬಾರದೇಕೆ?
ನನ್ನಂತಿರುವ ನಿಶ್ಚಿಂತನಾಗಲಿಲ್ಲವೇಕೆ?
ಲೇಪವಿಲ್ಲದ ಮನಸಿನ್ನೂ ಬಂದಿಲ್ಲವೇಕೆ? (ಏ)
-ಕೆ? ನಿರಂಜನಾದಿತ್ಯ ಮರೆಯಾದನದೇಕೆ???
ಆಟ, ನೋಟ, ಊಟವೆಲ್ಲಾ ಸಾಕು! [ಕಾ] 3(1254)
-ಟವಾದ ಮೇಲುದೇಕಿರಬೇಕು?
ನೋವಿಲ್ಲದಿದ್ದರದೊಂದೇ ಸಾಕು! (ದಿ)
-ಟದಲ್ಲಿ ಸದಾ ಲಯಿಸಬೇಕು!
ಊರಿಂದೂರಿಗಲೆದಾಟ ಸಾಕು! (ಊ)
-ಟಕ್ಕಾಗ್ಯೇಕೆ ಬದುಕಿರಬೇಕು? (ಸ)
-ವೆದರೀ ಪ್ರಾರಭ್ದ ಕರ್ಮ ಸಾಕು! (ಎ)
-ಲ್ಲಾದಕ್ಕೂ ಗುರು ಕರುಣೆ ಬೇಕು!
ಸಾರ್ಥಕವಾದರೀ ಜನ್ಮ ಸಾಕು! (ಸಾ)
-ಕು, ನಿರಂಜನಾದಿತ್ಯಾಗಬೇಕು!!!
ಆಟ, ನೋಟ, ಕಾಟ ಕಾಣಯ್ಯ! (ಪು) 4(2185)
-ಟವಿಟ್ಟಪ್ಪಟ ನೀನಾಗಯ್ಯಾ! (ಮ)
-ನೋಮಯ ಕೋಶ ಹರಿಯಯ್ಯಾ! (ಗೂ)
-ಟಕ್ಕದನ್ನಾಮೇಲ್ಬಿಗಿಯಯ್ಯಾ!
ಕಾಟವಾಗ ತಪ್ಪುವುದಯ್ಯಾ! (ನಾ)
-ಟಕವೀಗ ಸಾಕು ಮಾಡಯ್ಯಾ!
ಕಾಲಾನ್ಕೂಲವಿಹುದೀಗಯ್ಯಾ! (ಗ)
-ಣನಾಯಕನಿಷ್ಟವಿದಯ್ಯಾ! (ಅ)
-ಯ್ಯಾ, ನಿರಂಜನಾದಿತ್ಯಾಗಯ್ಯಾ!!!
ಆಟ್ಟಡಿಗೆ, ಕೊಟ್ಟೂಟ ಸಂತೃಪ್ತಿ! (ಪ) 2(836)
-ಟ್ಟಣದ ಕಟ್ಟಳತೆ ಸಂತುಷ್ಟಿ! (ಮ)
-ಡಿ, ಮೈಲಿಗೀ ಬಾಳಿಗೆ ಸಂತುಷ್ಟಿ!
ಗೆಲುವು, ಸೋಲುಗಳು ಸಂತುಷ್ಟಿ!
ಕೊರಗು, ಮೆರಗೆಲ್ಲಾ ಸಂತುಷ್ಟಿ! (ಹ)
-ಟ್ಟೂರಿಟ್ಟೂರು ಕೊಟ್ಟೂರು ಸಂತುಷ್ಟಿ! (ದಿ)
-ಟ, ಸಟೆ ಬಾಯ್ಹರಟೆ ಸಂತುಷ್ಟಿ!
ಸಂಗ, ಭಂಗ, ಅಭಂಗ ಸಂತುಷ್ಟಿ!
ತುದಿ, ಪುಧ್ಯ, ಆದ್ಯಂತ ಸಂತುಷ್ಟಿ! (ಪು)
-ಷ್ಟಿ ನಿರಂಜನಾದಿತ್ಯ ಸಂತುಷ್ಟಿ!!!
ಆಡದವರು ನೋಡುವರಯ್ಯಾ! (ಅ) 1(279)
-ಡಗುವರು ಆಡಿದವರಯ್ಯಾ!
ದರ್ಶನ ಅನಿರೀಕ್ಷಿತವಯ್ಯಾ! (ಅ)
-ವರಿವರಾಕ್ಷೇಪ ವ್ಯರ್ಥವಯ್ಯಾ! (ಆ)
-ರು ಬಲ್ಲರು ಭವಿಷ್ಯವನಯ್ಯಾ?
ನೋಡುವಾಸೆಗೆ ತಾಳ್ಮೆ ಬೇಕಯ್ಯಾ! (ಆ)
-ಡುತಾಡುತಶಾಂತಿಯಹುದಯ್ಯಾ!
ವರ ಪ್ರಸಾದ ಜಪದಿಂದಯ್ಯಾ! (ಆ)
-ರ ಹಂಗು ದತ್ತನಿಗೆ? ಹೇಳಯ್ಯಾ! (ಅ)
-ಯ್ಯಾ! “ಜೈ ನಿರಂಜನಾದಿತ್ಯ” ನ್ನಯ್ಯಾ!
ಆಡಮ್ಮಾ, ಸರಿಯಗಿ ಹಾಡಮ್ಮಾ! (ಬಿ) 5(2818)
-ಡಬೇಡ ಪಾತ್ರ ಚಿಕ್ಕದೆಂದಮ್ಮಾ! (ನ)
-ಮ್ಮಾತ್ಮತೃಪ್ತಿಯಾದರಾಯಿತಮ್ಮಾ!
ಸಭಾಂಗಣವಿದೆಲ್ಲರದಮ್ಮಾ!
ರಿಯಾಯ್ತಿ ಯಾರದಾರಿಗೇನಮ್ಮಾ? (ಮಾ)
-ಯಾಧೀನವೀ ಜಗತ್ತೆಲ್ಲವಮ್ಮಾ!
ಗಿಡ, ಮರಕ್ಕೂ ಸ್ಥಾನವುಂಟಮ್ಮಾ!
ಹಾಲೂ, ಸಕ್ಕರೆ ಸೇರಿ ಪಾಯ್ಸಮ್ಮಾ! (ಉಂ)
-ಡ ಮೇಲದ ಕೊಂಡಾಡುವರಮ್ಮಾ! (ಅ)
-ಮ್ಮಾ, ನಿರಂಜನಾದಿತ್ಯಾನಂದಮ್ಮಾ!!!
ಆಡಳಿತ ಮಂಡಳಿಯಾದರ್ಶ ಕರ್ತವ್ಯ! 6(4036)
ಡಮ್ಬಾಚಾರಕ್ಕೆಡೆಕೊಡದಿರ್ಪ ಕರ್ತವ್ಯ! (ಹ)
-ಳಿದಾರನ್ನೂ ನೋಯಿಸದಿರುವ ಕರ್ತವ್ಯ!
ತತ್ವ ಸಿದ್ಧಿಗಾಗಿ ದುಡಿಯುವ ಕರ್ತವ್ಯ!
ಮಂದಿರದ ಪತಿವ್ರತೆ ಕಾಯ್ವ ಕರ್ತವ್ಯ! (ನ)
-ಡತೆ ಪರಿಶುದ್ಧವಾಗಿಡುವ ಕರ್ತವ್ಯ! (ತು)
-ಳಿಯದನ್ಯ ಮತೀಯರನ್ನಿರ್ಪ ಕರ್ತವ್ಯ!
ಯಾಗ ಗುರುಸೇವೆಯೆಂದರಿವ ಕರ್ತವ್ಯ!
ದಶೇಂದ್ರಿಯ ನಿಗ್ರಹದಭ್ಯಾಸ ಕರ್ತವ್ಯ! (ದ)
-ರ್ಶನಕ್ಕಾಗಿ ಸತತ ಕಾಯುವ ಕರ್ತವ್ಯ!
ಕಡೆಗೆ ಸಾಯುಜ್ಯಾನಂದಿಸುವ ಕರ್ತವ್ಯ! (ಕ)
-ರ್ತನಿಗಿಂತುತ್ತಮಾತ್ಮಜರಪ್ಪ ಕರ್ತವ್ಯ! (ಸೇ)
-ವ್ಯ ನಿರಂಜನಾದಿತ್ಯನಾಗುವ ಕರ್ತವ್ಯ!!!
ಆಡಿ ಮಡಿವವರಿಗಿಂತ (ಮಾ) 5(2939)
-ಡಿ ಮಡಿವವರ್ಹೆಚ್ಚಲೆಂತ!
ಮನಃಪೂರ್ವಕ ಪ್ರಾರ್ಥಿಸೆಂತ! (ಅ)
-ಡಿಗಡಿಗಾಶೀರ್ವಾದವೆಂತ!
ವರದರಾಜ ಸಾಕ್ಷಿಯೆಂತ!
ವರ ಗುರುದತ್ತ ತಾನೆಂತ!
ರಿಸಿ, ಮುನಿಗಳಿಷ್ಟವೆಂತ! (ಆ)
-ಗಿಂದಾಗ ಎಚ್ಚರಿಪೆನೆಂತ! (ನಿಂ)
-ತ ನಿರಂಜನಾದಿತ್ಯನೆಂತ!!!
ಆಡಿದ್ರೆ ಜಗಳ, ಹಾಡಿದ್ರೆ ಜೋಗುಳ! 6(3471)
ಡಿಕ್ಕಿ ಹೊಡೆಯಿತೆಂದ್ರೆ ತಂದೆ ಬೈಗಳ!
(ನಿ)-ದ್ರೆ ಬಾರದಿದ್ದ್ರೆಲ್ಲರಿಗೂ ಕಿರುಕುಳ!
ಜವಾಬ್ದಾರಿ ದೇವರಿಗಂತೂ ಬಹಳ!
ಗತಿ, ಸ್ಥಿತಿಗಳಿರಬೇಕು ಸರಳ! (ಅ)
-ಳವಟ್ಟು ತತ್ವ ಬಾಳ್ವವರು ವಿರಳ!
ಹಾನಿ ಮಾಳ್ಪನು ಎಲ್ಲರಿಗೂ ದುರುಳ!
(ಕ)-ಡಿ, ಬಡಿ, ಎನ್ನುತ್ತಾರ್ಭಟಿಪಾ ಮರುಳ!
(ಬಂ)-ದ್ರೆ ಮಳೆ, ಕಾದ್ರೆ ಬಿಸ್ಲಾದ್ರೆ ಕಳವಳ!
ಜೋಡಿ ಸರಿಯಾಗಿರ್ದಿದ್ರೆ ರೈತನುಳ!
ಗುಟ್ಟು ರಟ್ಟಾದಮೇಲೆ ಹಿಟ್ಟು ಹೇರಳ!
(ಕೇ)-ಳ ನಿರಂಜನಾದಿತ್ಯನ್ಯ ಮಾತುಗಳ!!!
ಆಡು ಬಾ, ಕೂಡು ಬಾ, ಮುದ್ದಾಡು ಬಾ (ಬಿ) 4(2053)
-ಡು ನೀನೀಗಾ ಸಂಗಾತಿಗಳ ಬಾ!
ಬಾಯ್ತುಂಬಾ ಬೆಣ್ಣೆ ನಿನಗೀವೆ ಬಾ! (ದು)
-ಕೂಲವುಡ್ಸಿ, ಹೂ ಮುಡಿಸ್ವೆನು ಬಾ! (ಕಂ)
-ಡು ಅದನ್ನಾನಂದಿಸುವೆನು ಬಾ!
ಬಾ, ಬಾ, ಬಾಲ ಗೋಪಾಲಕೃಷ್ಣ ಬಾ!
ಮುದ್ದು, ಮುಖವ ಮುದ್ದಾಡ್ವೆನು ಬಾ! (ಮ)
-ದ್ದಾದ ಮೇಲೆಲ್ಲಾದ್ರೂ ಹೋಗೀಗ ಬಾ! (ಹು)
-ಡುಗಾಟ ಮಾಡದೆ ಬೇಗೋಡಿ ಬಾ!
ಬಾ, ನಿರಂಜನಾದಿತ್ಯಾನಂದ ಬಾ!!!
ಆಡ್ದೇ, ಮಾಡ್ದೇ, ನಿನ್ನ ನೆನಪೆನ್ನ ದೀಕ್ಷೆ! (ಕಾ) 6(3616)
-ಡ್ದೇ, ಬೇಡ್ದೇ, ನೀನೀವುದೆನ್ನ ನಿತ್ಯ ಭಿಕ್ಷೆ!
ಮಾಯ ಮೋಹದಿಂದ ಪಾರಾಗಲ್ನೀ ರಕ್ಷೆ! (ಬಾ)
-ಡ್ದೇ ಇರ್ಬೇಕೀ ಕುಸುಮವೆಂದಿದ್ರಪೇಕ್ಷೆ!
ನಿರಪರಾಧಿಗಳಿಗಾಗ್ಬಾರ್ದು ಶಿಕ್ಷೆ! (ನಿ)
-ನ್ನ ನಂಬಿದವರನ್ನು, ಮಾಡ್ಬಾರ್ದುಪೇಕ್ಷೆ! (ನೀ)
-ನೆಮ್ಮ ಮೇಲೆ ಬೀರ್ನಿನ್ನ ಕೃಪಾಕಟಾಕ್ಷೆ!
ನಮಗೆ ಬೇಕಿಲ್ಲ ಚಿತ್ರಕನ ನಕ್ಷೆ!
ಪೆತ್ತವಳಲ್ಲವೇ ನಮ್ಮನ್ನು ಫಾಲಾಕ್ಷೆ? (ತ)
-ನ್ನ ಮಕ್ಕಳ ಕಾಪಾಡಲವಳೇ ದಕ್ಷೆ!
ದೀನರನ್ನು ಮಾಡಬಾರದು ಪರೀಕ್ಷೆ! (ದೀ)
-ಕ್ಷೆ, ನಿರಂಜನಾದಿತ್ಯನಿಗೆಲ್ಲರೀಕ್ಷೆ!!!
ಆತುರದ ಗಾಂಧಾರಿ ನೀನಾಗಬೇಡ! 6(4149)
ತುರ್ತು ಪರಿಸ್ಥಿತಿಗೆ ಹೇತುವಾಗ್ಬೇಡ!
ರಣರಂಗದ ಕದ ತೆರೆಯಬೇಡ!
ದಶೇಂದ್ರಿಯಕ್ಕೆ ಗುಲಾಮನಾಗಬೇಡ!
ಗಾಂಢಿವಕ್ಕೆ ಬಲಿಯಾಗಿ ಸಾಯಬೇಡ!
ಧಾರಿಣಿಗೆ ರಕ್ತಾಭಿಷೇಕ ಮಾಡ್ಬೇಡ!
ರಿಸಿ ಕುಲಕ್ಕೆ ಕಳಂಕ ತರಬೇಡ!
ನೀತಿ, ರೀತಿ, ಬಿಟ್ಟು ಕಷ್ಟ, ನಷ್ಟ ಬೇಡ!
ನಾಸ್ತಿಕನೆಂದೆಂದಿಗೂ ಆಗಲೇಬೇಡ!
ಗಡ್ಬಿಡಿಯಿಂದ ಗಡಿಗೆಯೊಡೆಯ್ಬೇಡ!
ಬೇಹುಶಾರಿಂದೆಂದೇನೂ ಮಾಡಲೇಬೇಡ! (ಮಾ)
-ಡ ನಿರಂಜನಾದಿತ್ಯ ಹಗೆಂದೂ ಮಾಡ!!!
ಆತುರದಿಂದಾಯ್ತು ತಪ್ಪಳತೆ ಬಲ್ಲವನಿಂದ! 6(3870)
ತುರೀಯಾತೀತನಾಗುವುದು ಸುಲಭವಲ್ಲೆಂದ!
ರಚಿಸಿದರೆ ಏನಾಯ್ತು ಗ್ರಂಥಕೋಟಿಯನ್ನೆಂದ! (ಅಂ)
-ದಿಂದು ಜಗತ್ತಿನಲ್ಲೆಲ್ಲೆಲ್ಲೂ ಇದೇ ಕಥೆಯಿಂದ!
ದಾರಿ ನಡೆದು ಬಾಯಾರಿದಾಗ್ಬಾವಿ ಮಾತೇಕೆಂದ? (ಹೋ)
-ಯ್ತು, ಭಕ್ತಿ, ವಿಶ್ವಾಸೋತ್ಸಾಹಗಳು ಮನಸ್ಸಿನಿಂದ!
ತನ್ನ ಮಗ ತನ್ನಂತಾಗದಿದ್ದರಾರ ತಪ್ಪೆಂದ! (ತ)
-ಪ್ಪ ತನಯನದ್ದೆನ್ನುವುದು ಯಾವ ನ್ಯಾಯವೆಂದ! (ಕೇ)
-ಳದಿರುವುದು ಮೊರೆಯ ಅಪ್ಪನಿಗೊಪ್ಪದೆಂದ!
ತೆರೆ ಹರಿದು ಬರಲೀಗ ಹರಿ ಹೊರಗೆಂದ!
ಬರೀ ಮಾತಿನುಪಚಾರದಿಂದ ಫಲವೇನೆಂದ! (ಬ)
-ಲ್ಲವರು ಆಡಿದಂತಿರದಿದ್ದರಧರ್ಮವೆಂದ!
ವರ ಭೀಷ್ಮ ಪ್ರತಿಜ್ಞೆಯಾದರ್ಶವಿರಬೇಕೆಂದ!
ನಿಂದಾ, ಸ್ತುತಿಗಳಿಗೆ ಕುಗ್ಗ, ಹಿಗ್ಗಬಾರದೆಂದ!
ದರ್ಶನ ನಿರಂಜನಾದಿತ್ಯನಿತ್ತು ಕಾಯಲೆಂದ!!!
ಆತುರವಾಗಿ ಏನೂ ಮಾಡಬೇಡ! (ಕೂ) 4(1865)
-ತು ವ್ಯರ್ಥವಾಗಿ ಕಾಲ ತಳ್ಳಬೇಡ!
ರಜೆಯೆಂದು ಜಾಸ್ತಿ ನಿದ್ರಿಸಬೇಡ!
ವಾತಾವರಣ ಹಾಳು ಮಾಡಬೇಡ! (ಬಿ)
-ಗಿ ತಪ್ಪಿ ಯಾವ ಮಾತೂ ಆಡಬೇಡ!
ಏರಿಳಿತದ ಬಾಳಿಗಂಜಬೇಡ!
ನೂರಾರು ದಾರಿಗಳಲ್ಲೋಡಬೇಡ!
ಮಾತಾ, ಪಿತರನ್ನು ನೋಯಿಸಬೇಡ! (ಕ)
-ಡ ಮಾಡಿ ಯಾವುದನ್ನೂ ತರಬೇಡ!
ಬೇರೆಯವರಾಸ್ತಿಗಾಶಿಸಬೇಡ! (ಮೃ)
-ಡ, ನಿರಂಜನಾದಿತ್ಯಾವಧೂತಾಡ!!!
ಆತ್ಮ ಚಿಂತನೆ ಇಲ್ಲ, ವಂಚನೆ ತಪ್ಪಿಲ್ಲ! (ಮಾ) 6(3690)
-ತ್ಮನೆ, ಮಠ, ಆಸ್ತಿ, ಪಾಸ್ತಿಯದ್ದೇ ಎಲ್ಲೆಲ್ಲ!
ಚಿಂತಿಸುವರು ಇದು ಸಿಕ್ಕದಾದಾಗೆಲ್ಲಾ!
ತಪ್ಪೆಣಿಸುವರನ್ಯರ ಮೇಲಿದಕ್ಕೆಲ್ಲಾ!
ನೆರಳೀವ ಮರವನ್ನೇ ಕಡಿವರೆಲ್ಲಾ!
ಇಷ್ಟಾರ್ಥ ತನ್ನದು ಸಿದ್ಧಿಸ್ಲಿಕ್ಕಾಗಿದೆಲ್ಲಾ! (ಕೊ)
-ಲ್ಲಲಿಕ್ಕೂ ಹೇಸರು ಬಡಬಗ್ಗರನ್ನೆಲ್ಲಾ!
ವಂದನಾರಾಧನೆಗಳ್ಬೇಕಿವರಿಗೆಲ್ಲಾ!
ಚರ್ಚಾಕೂಟಗಳಲ್ಲಿವರಾಸಕ್ತಿ ಎಲ್ಲಾ!
ನೆನೆಯರಿವರುಪಕಾರಿಗಳನ್ನೆಲ್ಲಾ!
ತತ್ವ ಜ್ಞಾನದಿಂದ ಸುಖಿಗಳಾಗ್ಬೇಕೆಲ್ಲಾ! (ಮು)
-ಪ್ಪಿಗೆ ಮೊದಲೇ ಸಾಧಿಸ್ಬೇಕಿದನ್ನೆಲ್ಲಾ! (ಬ)
-ಲ್ಲ ನಿರಂಜನಾದಿತ್ಯನಾದೇಶ ಸುಳ್ಳಲ್ಲ!!!
ಆತ್ಮ ತೃಪ್ತಿಯ ಸೇವೆ ಸಂಪತ್ತು! (ಆ) 4(1811)
-ತ್ಮನಾತ್ಮ ಜ್ಞಾನ ಮಹಾ ಸಂಪತ್ತು!
ತೃಣ ಸಮಾನ ಲೋಕ ಸಂಪತ್ತು! (ಪ್ರಾ)
-ಪ್ತಿ ನಿತ್ಯಾಭ್ಯಾಸದಿಂದಾ ಸಂಪತ್ತು!
ಯದುಪನುಪದೇಶಾ ಸಂಪತ್ತು!
ಸೇವಾಭಾಗ್ಯತ್ಯಮೌಲ್ಯ ಸಂಪತ್ತು! (ಸ)
-ವೆಸುವುದು ಪ್ರಾರಬ್ಧಾ ಸಂಪತ್ತು!
ಸಂಜೀವಿನಿ ಸಮಾನಾ ಸಂಪತ್ತು!
ಪವಿತ್ರಾತ್ಮಾನುಗ್ರಹಾ ಸಂಪತ್ತು! (ಸೊ)
-ತ್ತು, ನಿರಂಜನಾದಿತ್ಯಾ ಸಂಪತ್ತು!!!
ಆತ್ಮ ಪುರಾಣಾರ್ಥವೇನು ಶಿವ? [ಆ] 3(1090)
-ತ್ಮ ನೀನೆನ್ನುವುದದೆಲೆ ಜೀವ!
ಪುಸ್ತಕವಿದನೀ ನೋಡು ಶಿವ!
ರಾಮನಾಮಿಗದೇಕೆಲೆ ಜೀವ? (ಪ್ರಾ)
-ಣಾಧಾರವದೆಂದಿಹೆನು ಶಿವ! (ಅ)
-ರ್ಥವದರಂತರಾರ್ಥಾನು ಜೀವ?
ವೇದಾಂತವೆಂದರದೇನು ಶಿವ? (ಅ)
-ನುಮಾನವಿನ್ನೂ ಉಂಟೇನು ಜೀವ?
ಶಿವಾನಂದಾರಾಮ ತಾನೆ ಶಿವ? (ಶಿ)
-ವ ನಿರಂಜನಾದಿತ್ಯ ಸಂಜೀವ!!!
ಆತ್ಮಾಭಿಮಾನಿ ತಾನೆಂತಿಹನು? (ಆ) 6(4343)
-ತ್ಮಾನಾತ್ಮ ಚಿಂತನೆಯಲ್ಲಿಹನು!
ಭಿನ್ನ, ಭೇದಗಳಿಲ್ಲದಿಹನು!
ಮಾನಾಪಮಾನ ಸಹಿಸಿಹನು!
ನಿತ್ಯತೃಪ್ತ ತಾನಾಗಿರುತ್ತಿಹನು!
ತಾಳ್ಮೆಯುಳ್ಳವ ತಾನಾಗಿಹನು!
ನೆಂಟ ತಾನೆಲ್ಲರಿಗಾಗಿಹನು!
ತಿತಿಕ್ಷೆ, ವೈರಾಗ್ಯದಿಂದಿಹನು!
ಹರಿ, ಹರ ರೂಪಿಯಾಗಿಹನು! (ಭಾ)
-ನು ನಿರಂಜನಾದಿತ್ಯಾಗಿಹನು!!!
ಆತ್ಮೀಯರೂರವರಂತಲ್ಲ! (ಆ) 4(2071)
-ತ್ಮೀಯರಿಗಾಡಂಬರವಿಲ್ಲ! (ಭ)
-ಯ, ಭಕ್ತಿಯುತರವರೆಲ್ಲ!
ರೂಢಿಯೇ ಪ್ರಾಮುಖ್ಯವರ್ಗಲ್ಲ!
ರಗಳೆ ಮಾಡ್ವವರವ್ರಲ್ಲ! (ದೈ)
-ವ ಗುರುವೇ ಅವರಿಗೆಲ್ಲ!
ರಂಗಿನ ಮಾತವಗ್ಬೇಕಿಲ್ಲ!
ತಪ್ಪು ಹುಡ್ಕುವವರವ್ರಲ್ಲ! (ಬ)
-ಲ್ಲ ನಿರಂಜನಾದಿತ್ಯನೆಲ್ಲ!!!
ಆತ್ಮೀಯರೆಂದಾದರಿಸಿದ್ದಾಯ್ತು! (ಬಾ) 4(2437)
-ತ್ಮೀದಾರರನ್ನನಾದರಿಸ್ಯಾಯ್ತು! (ಸಾ)
-ಯಲೂ ಅದಕ್ಕಾಗಿನಿರ್ಧರಾಯ್ತು! (ಯಾ)
-ರೆಂದ್ರೂ ಚಿತ್ತ ಚಂಚಲಾಗದಾಯ್ತು! (ಸ)
-ದಾ ಗುರುಧ್ಯಾನ ಮನಸ್ಸಿಗಾಯ್ತು!
ದತ್ತ ಸ್ವರೂಪದರಿವುಂಟಾಯ್ತು! (ಅ)
-ರಿಗಳ ಕಡೆಗೆ ನಿರ್ಲಕ್ಷ್ಯಾಯ್ತು!
ಸಿಕ್ಕಿದ್ದುಂಬಭ್ಯಾಸ ಸ್ಥಿರವಾಯ್ತು! (ಗು)
-ದ್ದಾಟವೆಂದೆಂದಿಗೂ ಬೇಡವಾಯ್ತು! (ಆ)
-ಯ್ತು, ನಿರಂಜನಾದಿತ್ಯಾನಂದಾಯ್ತು!!!
ಆದರನಾದರ ದೂರೆಲ್ಲಿ! (ಇ) 1(276)
-ದರಿಯದೆ ದುಃಖ ಅಲ್ಲಿಲ್ಲಿ! (ಇ)
-ರಲಾಸೆ ಅನಾದರಲ್ಲಿಲ್ಲಿ!
ನಾಮ ತುಂಬಲಾದರಲಿಲಲ್ಲಿ! (ಇ)
-ದಕಂತರ್ಮುಖಿಯಾಗಲ್ಲಿಲ್ಲಿ!
ರಸ, ವಿರಸ ಮನದಲ್ಲಿ!
ದೂರದಿರನ್ಯರನಲ್ಲಿಲ್ಲಿ! (ಇ)
-ರೆಯಿಂತಾದರೆವಿಹುದಲ್ಲಿ! (ಇ)
-ಲ್ಲಿ, ನಿರಂಜನಾದಿತ್ಯಲ್ಲಿ!!!
ಆದರೋಪಚಾರಾತುರರೇ ಹೆಚ್ಚು! 6(3355)
ದರ್ಶನಾನಂದಾತುರರಿಲ್ಲ ಹೆಚ್ಚು!
ರೋಗವಾಸಿಯಾಗ್ಲೆಂಬವರೂ ಹೆಚ್ಚು!
ಪರಮಾರ್ಥಕ್ಕಾಗಿರ್ಪವ್ರಿಲ್ಲ ಹೆಚ್ಚು!
ಚಾಡಿ ಹೇಳ್ವಭ್ಯಾಸದವರೂ ಹೆಚ್ಚು!
ರಾಮ ಭಜನೆ ಮಾಳ್ಪವ್ರಿಲ್ಲ ಹೆಚ್ಚು!
ತುಟಿಮುಚ್ಚದೆ ಹರಟ್ಟವ್ರೂ ಹೆಚ್ಚು!
(ವಿ)-ರಕ್ತರಾಗಿರುವವರಿಲ್ಲ ಹೆಚ್ಚು!
ರೇಗಾಡಿ, ಕೂಗಾಡುವವರೂ ಹೆಚ್ಚು!
ಹೆರರ್ತನ್ನವ್ರೆನ್ನದವ್ರಿಲ್ಲ ಹೆಚ್ಚು!
(ಹೆ)-ಚ್ಚು, ನಿರಂಜನಾದಿತ್ಯಾನಂದ ಹೆಚ್ಚು!!!
ಆದರ್ಶ ಗೃಹಸ್ಥ ಶ್ರೀ ಕೃಷ್ಣ! 4(1911)
ದಯಾಮಯಾ ಗೋಪಾಲ ಕೃಷ್ಣ! (ದ)
-ರ್ಶನಾನಂದ ಮುಕುಂದಾ ಕೃಷ್ಣ!
ಗೃಹಿಣೀ ಸಮೇತಾತ್ಮಾ ಕೃಷ್ಣ! (ಅ)
-ಹರ್ನಿಶಿ ಸೇವಾತುರಾ ಕೃಷ್ಣ! (ಸ್ವ)
-ಸ್ಥ ಚಿತ್ತಾ ಗುರುಭಕ್ತ ಕೃಷ್ಣ!
ಶ್ರೀಪಾದ ಪೂಜಾಸಕ್ತಾ ಕೃಷ್ಣ!
ಕೃತಿಯಲ್ಲೆಲ್ಲಾ ತೋರ್ಪಾ ಕೃಷ್ಣ! (ಪೂ)
-ಷ್ಣ ನಿರಂಜನಾದಿತ್ಯಾ ಕೃಷ್ಣ!!!
ಆದರ್ಶಪತೀ ಉಮಾಪತಿ! 4(2168)
ದಯಾಮಯಾ ಮಾಯಾಧಿಪತಿ! (ದ)
-ರ್ಶನಾನಂದಾತ್ಮಾರಾಮ ಪತಿ!
ಪತಿತ ಪತೀ ಪಶುಪತಿ!
ತೀರ್ಥ, ಕ್ಷೇತ್ರ ಪತೀ ಶ್ರೀಪತಿ!
ಉದಾತ್ತ ಪತೀ ದತ್ತ ಪತಿ!
ಮಾಲಾ, ಕಮಂಡ್ಲು ಧರಾಪತಿ!
ಪರಮಾತ್ಮಾವಧೂತ ಪತಿ! (ಗ)
-ತಿ, ನಿರಂಜನಾದಿತ್ಯ ಪತಿ!!!
ಆದಿ ಗುರು ಕಾಣಯ್ಯ ನೀನು! (ಆ) 3(1284)
-ದಿ ಮಧ್ಯಾಂತ ರಹಿತ ನೀನು!
ಗುಣಾತೀತಾತ್ಮಾರಾಮ ನೀನು! (ವ)
-ರುಣೇಂದ್ರಾದಿಗಳಾತ್ಮ ನೀನು!
ಕಾಮಹರ ಗಿರೀಶ ನೀನು! (ತೃ)
-ಣ ಕಾಷ್ಠಗಳಲ್ಲೆಲ್ಲಾ ನೀನು! (ಅ)
-ಯ್ಯ ಲೋಕಗಳಿಗೆಲ್ಲಾ ನೀನು! (ಪು)
-ನೀತ ದತ್ತಾತ್ರೇಯಾತ್ಮ ನೀನು! (ನೀ)
-ನು ನಿರಂಜನಾದಿತ್ಯ ಭಾನು!!!
ಆದಿ, ಅಂತ್ಯ, ಸಹಜಾನಂದ! 6(3865)
ದಿವ್ಯ ಜೀವನ ಸದಾನಂದ!
ಅಂದಿಂದು ಇದೊಂದೇ ಆನಂದ!
ತ್ಯಜಿಸಬೇಕು ಮಿಥ್ಯಾನಂದ!
ಸತ್ತು ಹುಟ್ಟುವುದೀ ಆನಂದ!
ಹರಿ, ಹರರಮರಾನಂದ!
ಜಾತಿ, ಮತಾತೀತಾತ್ಮಾನಂದ!
ನಂದ ನಂದನಗಿದಾನಂದ! (ಕಂ)
-ದ ನಿರಂಜನಾದಿತ್ಯಾನಂದ!!!
ಆದಿತ್ಯನ ಹೊಟ್ಟೆ, ಬಟ್ಟೆ ಪೂರ್ತಿ ಎಂದು? 6(4200)
ದಿನ, ರಾತ್ರಿ ಅವನ ಯಾತ್ರೆ ಎಂದೆಂದು!
ತ್ಯಜಿಸಿಹನವ ವಿಶ್ರಾಂತಿ ಬೇಡೆಂದು!
ನಯನ ಜ್ವಲಿಸುತಿದೆ ಸಾಕ್ಷಿಯೆಂದು!
ಹೊಮ್ಮುತಿದೆ ಕಿರಣ ಕಲ್ಲಾಣಕ್ಕೆಂದು! (ಹೊ)
-ಟ್ಟೆ ತಣ್ಣಗಿಟ್ಟಿಹ ವಾರಿಧಿಯ ತಿಂದು!
ಬಯಲೇ ಬಟ್ಟೆ ಆ ದಿಗಂಬರಗಿಂದು! (ಹೊ)
-ಟ್ಟೆ, ಬಟ್ಟೆಯ ಚಿಂತೆ ಅವಗಿಲ್ಲೆಂದೆಂದು!
ಪೂರ್ತಿ, ಸ್ಫೂರ್ತಿ, ಕೀರ್ತಿಸ್ವರೂಪ ತಾನೆಂದು! (ಆ)
-ರ್ತಿಯಿಂದೆಲ್ಲವ ಕ್ಯಾ ದೇವ ತಾನೆಂದು!
ಎಂಟು ಕುದುರೇ ಗಾಡಿ ತನಗೇಕೆಂದು! (ಬಂ)
-ದು ನಿರಂಜನಾದಿತ್ಯನಿಹನಿಲ್ಲಿಂದು!!!
ಆದಿತ್ಯನನೊಲಿಸಿದಳು ಭಾರತದ ಕುಂತಿ! 1(60)
ದಿಟವೋ, ಸಟೆಯೋ? ಕಳೆಯುವರಾರು ಈ ಭ್ರಾಂತಿ!
ತ್ಯಜಿಸಿದಳರ್ಕನರ್ಭಕನನಾ ಕನ್ಯೆ ಕುಂತಿ!
ನಮಿಸಿದೊಡನಾಯ್ತು ಅವಳಿಗೆ ಪುತ್ರ ಪ್ರಾಪ್ತಿ!
ನೊದು, ಬೇದು, ಬೆಂಡಾದವರಿಗೆ ಇಲ್ಲ ಈ ಶಾಂತಿ!
ಲಿಪಿ ಬ್ರಹ್ಮನದರಿಯದೆ ಅಳಿದಿದೆ ಸ್ಪೂರ್ತಿ!
ಸಿಥಿಲವಾಗುತಲಿದೆ ಅದರಿಂದಾಗಿ ಭಕ್ತಿ!
ದಯೆದೋರಿ ನೀಡೆನಗದನರಿಯುವಾ ಶಕ್ತಿ!
(ಇ) -ಳುಹದಿರೀ ಶಂಕೆಯನು ನನಗೊಲ್ಲಾತ್ಮ ತೃಪ್ತಿ!
ಭಾರತ ಸುಳ್ಳೆನಲಾರೆ ; ಬೇಡೆನಗಾ ಕುಯುಕ್ತಿ!
ರವಿಯ ಮೇಲಿರುವುದೆನಗೆ ಅಪಾರ ಪ್ರೀತಿ!
ತರಣಿ ಕರುಣಾಮಯನು, ಆತ ಶಿವ ಶಕ್ತಿ!
ದರ್ಶನಾನುಗ್ರಹವೇ ಕಳೆಯಬೇಕೀ ಅಶಾಂತಿ!
ಕುಂದನೆಣಿಸಬಾರದಯ್ಯಾ! ನಾನು ಶರಣಾರ್ತಿ!
ತಿರುಕ ನಿರಂಜನನಿಷ್ಟ, ನೀನೇ ಗುರುಮೂರ್ತಿ!!!
ಆದಿತ್ಯನೇನೆನಗಿತ್ತ? (ಅ) 1(94)
-ದಿದೊಂದೆಂದುತ್ತರವಿತ್ತ! (ಅ)
-ತ್ಯಗತ್ಯದಾರೋಗ್ಯವಿತ್ತ!
ನೇಮಾನುಷ್ಠಾನವಿತ್ತ!
ನೆನೆವಾವಕಾಶವಿತ್ತ!
ನಂಬಿಸಿ ನೆಮ್ಮದಿ ಇತ್ತ!
ಗಿರಿಯಂಥಾ ಮನವಿತ್ತ! (ಅ)
-ತ್ತ ರಿಲ್ಲದಾನಂದವಿತ್ತ!!!
ಆದಿತ್ಯಾಕ್ಷಿ, ಸರ್ವಸಾಕ್ಷಿ! (ಇ) 1(293)
-ದಿರದಕ್ಷಿ ಬದಿರಾಕ್ಷಿ!
ತ್ಯಾಗದಕ್ಷಿ, ಯೋಗದಕ್ಷಿ! (ಈ)
-ಕ್ಷಿಸುವಕ್ಷಿ, ಅಪೇಕ್ಷಾಕ್ಷಿ!
ಸಗುಣಾಕ್ಷಿ, ಬಂಧನಾಕ್ಷಿ! (ಈ)
-ರ್ವರ ಅಕ್ಷಿ, ಸೇರುವಾಕ್ಷಿ!
ಸಾನಂದಾಕ್ಷಿ, ಕ್ಷಣಿಕಾಕ್ಷಿ! (ಈ)
-ಕ್ಷಿ, ನಿರಂಜನಾದಿತ್ಯಾಕ್ಷಿ!!!
ಆದಿತ್ಯಾಮೃತ ಧನ್ವಂತರೀ ಕೃಪೆಯಿಂದಯ್ಯಾ! (ಹ) 4(2116)
-ದಿನಾಲ್ಕು ಲೋಕಕ್ಕಿದಾಧಾರವಾಗಿರ್ಪುದಯ್ಯಾ! (ಸ)
-ತ್ಯಾಸತ್ಯ ಅನುಭವದಿಂದರಿಯಬೇಕಯ್ಯಾ! (ಅ)
-ಮೃತ ಸಮಾನವಿದೆಲ್ಲಾ ರೋಗಗಳಿಗಯ್ಯಾ! (ಸ)
-ತತವಿದರ ಉಪಯೋಗ ಮಾಡಬೇಕಯ್ಯಾ!
ಧರ್ಮ, ಕರ್ಮದ ಸಾರವಿದರಲ್ಲಿಹುದಯ್ಯಾ! (ಮ)
-ನ್ವಂತರದಿಂದಲೂ ಇದಕ್ಕೆ ಪ್ರಾಶಸ್ತ್ಯವಯ್ಯಾ!
ತಪ್ಪು ಮಾಡಿ ಕಪ್ಪು ಬಳ್ಕೊಂಡರಾರ ತಪ್ಪಯ್ಯಾ? (ಪ)
-ರೀಕ್ಷೆಯಲ್ಲಿ ಜಯ ಭಕ್ತಿ, ವಿಶ್ವಾಸದಿಂದಯ್ಯಾ!
ಪೆತ್ತ ತಾಯಿಗೆರಡೆಣಿಸಬಹುದೇನಯ್ಯಾ? (ಬಾ)
-ಯಿಂದೆಷ್ಟುಪಚಾರ ಹೇಳಿದರೂ ವ್ಯರ್ಥವಯ್ಯಾ! (ಸ)
-ದಮಲಾಂತಃಕರಣದಿಂದ ಸೇವೆ ಮಾಡಯ್ಯಾ! (ಅ)
-ಯ್ಯಾ! ನಿರಂಜನಾದಿತ್ಯಾನಂದ ಅಮೃತವಯ್ಯಾ!!!
ಆದಿಯೇನೇ ನೀ ನಾನಾದಿಯೇನೇ? (ಆ) 4(2490)
-ದಿ, ಮಧ್ಯಾಂತ ರಹಿತಾದಿಯೇನೇ?
ಯೇಸು ದಿನ ಹೀಗಿರುವುದೇನೇ?
ನೇರದಾರಿ ಹಿಡೀಬಾರದೇನೇ?
ನೀಚ ಸಂಗ ಬಿಡಬಾರದೇನೇ?
ನಾನಾರೆಂದರಿತಿರುವೆಯೇನೇ?
ನಾದ, ಬಿಂದು, ಕಲಾತೀತಲ್ವೇನೇ?
ದಿಗಂಬರನಾನೆಂದರಿಯ್ದೇನೇ? (ಛಾ)
-ಯೇಶ್ವರಿಯೆಂಬವಳ್ನೀನಲ್ವೇನೇ? (ನೀ)
-ನೇ, ಶ್ರೀ ನಿರಂಜನಾದಿತ್ಯ ನಾನೇ!!!
ಆದಿಶಕ್ತಿ, ಭಯ, ಭಕ್ತಿ, ಸದಾ ಸ್ಫೂರ್ತಿ! 1(194)
ದಿವ್ಯ ಜ್ಯೋತಿ ವಿಶ್ವಪ್ರೀತಿ, ಕೃಪಾಮೂರ್ತಿ! (ಅ)
-ಶಕ್ತಿ ಹತಿ, ಹರ ಭೀತಿ, ಚಿರ ಕೀರ್ತಿ! (ಭ)
-ಕ್ತಿ, ಮುಕುತಿ, ರೀತಿ, ನೀತಿ, ಏಕ ಜಾತಿ! (ಗ)
-ಭಸ್ಥಿ ಸ್ಥಿತಿ, ಅಂತ್ಯ ಕ್ರಾಂತಿ, ಭ್ರಾಂತಿ ಶಾಂತಿ!
ಯತಿಪತಿ, ಅಜಗತಿ, ನಿಜಮತಿ!
ಭರ್ತಿ ತೃಪ್ತಿ! ಛಾಯಾಪತಿ, ಧರ್ಮಜ್ಞತಿ! (ರ)
-ಕ್ತಿ, ವಿರಕ್ತಿ, ಕರ್ಮಾಸಕ್ತಿ, ಸ್ವಸ್ಥವೃತ್ತಿ!
ಸಸ್ಯ ಜಾತಿ, ವರ್ಣದಾತಿ, ರಂಗನರ್ತಿ!
ದಾರಿಗಾರ್ತಿ, ಶಿವಶಕ್ತಿ, ಲೋಕನಾಥಿ!
ಸ್ಫೂರ್ತಿ, ಕೀರ್ತಿ, ಗುರುಮೂರ್ತಿ, ಮಾಯಾತೀತಿ! (ಅ)
-ರ್ತಿ ನಿರಂಜನಾದಿತ್ಯ ನಾಮ “ಅನ್ವರ್ಥಿ”!!!
ಆಧುನಿಕ ಸಂತಾನ ನಿರೋಧ ಕ್ರಮಕ್ರಮ! 3(1164)
ಧುರ ಧೀರೇಂದ್ರಿಯ ವಿಜಯಾಕ್ರಮಾವಿಕ್ರಮ
ನಿರ್ಮಲಾನ್ನಾಸನ ಪ್ರಾಣಾಯಾಮಾದರ್ಶ ಕ್ರಮ!
ಕರ್ಮ, ಧರ್ಮಾಚರೆಣೆಗಿದತ್ಯುತ್ತಮ ಕ್ರಮ!
ಸಂತಾನ ಮಿತಗೊಳಿಸಲಿಕ್ಕಿದಾರ್ಯ ಕ್ರಮ!
ತಾಪ, ಕೋಪಗಳಡಗಲಿಕ್ಕೆ ಬೇಕೀ ಕ್ರಮ!
ನಶ್ವರವ ಗೆದ್ದೀಶ್ವರನಾಗಲಿಕ್ಕೀ ಕ್ರಮ!
ನಿಶ್ಚಲ ತತ್ವಸ್ಥಿತಿಯೂರ್ಜಿತಕ್ಕಾಪ್ತ ಕ್ರಮ!
ರೋಗ ನಿವಾರಣೆಗಿದೊಂದೇ ಪ್ರಸಿದ್ಧ ಕ್ರಮ!
ಧನ್ವಂತರಿಯುಪದೇಶಿಸುವಧ್ಯಾತ್ಮ ಕ್ರಮ!
ಕ್ರಯ ವಿದಕ್ಕಪಾರವೆಂಬನುಭವ ಕ್ರಮ!
ಮರೆಯದೆಲ್ಲರೂ ಪಾಲಿಸಬೇಕಿಂಥಾ ಕ್ರಮ! (ಅ)
-ಕ್ರಮದಿಂದಾಗ್ವರಿಷ್ಟ ತಪ್ಪಿಸುವುದೀ ಕ್ರಮ!
ಮಹಾತ್ಮಾ ನಿರಂಜನಾದಿತ್ಯಾತ್ಮಾನಂದಾ ಕ್ರಮ
ಆನಂದಾ ಶಿವಪೂಜಾನಂದ! (ಅ) 2(562)
-ನಂಗಭಂಗನಂಗಾಂಗಾನಂದ! (ಸ)
-ದಾಶಿವ ಸೇವಾ ಲಭ್ಯಾನಂದ!
ಶಿವಗುರು ಶಂಕರಾನಂದ! (ಭ)
-ವರೋಗ ಹರ ಶಿವಾನಂದ!
ಪೂರ್ಣವಾ ಶಿವ ನಾಮಾನಂದ! (ಅ)
-ಜಾದಿ ವಂದ್ಯ ಸುಂದರಾನಂದ! (ಆ)
-ನಂದಾ ಲಿಂಗ ಪೂಜತ್ಯಾನಂದ! (ಪಾ)
-ದ ನಿರಂಜನಾದಿತ್ಯಾನಂದ!!!
ಆನಂದಾನಂದವಯ್ಯಾ! 2(668)
ನಂದನಾನನವಯ್ಯಾ!
ದಾರಿ ತೋರಿಹನಯ್ಯಾ! (ಆ)
-ನಂದೆನ್ನಿಂದೆಂದನಯ್ಯಾ! (ನಂ)
-ದಕಂದ ಗೋವಿಂದಯ್ಯಾ!
ವರ ಗೀತಾತ್ಮಾತಯ್ಯಾ! (ಅ)
-ಯ್ಯಾ! ನಿರಂಜನನಯ್ಯಾ!!!
ಆನನಾ ಸುಂದರಾನನಾ! (ಆ) 2(623)
-ನನಾನಂದ ನಂದಾನನಾ!
ನಾರಾಯಣಾದಿತ್ಯಾನನಾ!
ಸುಂದರಾ ಸುರಮ್ಯಾನನಾ!
ದರ್ಶನಾನಂದದಾನನಾ!
ರಾಮ ಶ್ಯಾಮಾನಂದಾನನಾ!
ನಮೋ ರಾಧಾರಾಮಾನನಾ!
ನಾರಾಯಣಾ ನಿರಂಜನಾ!!!
ಆನಾಯಿ ಕಚ್ಚುತ್ತೆ; ಈನಾಯಿ ಮೆಚ್ಚುತ್ತೆ! 6(4286)
ನಾಯಿ ಹೆಸರು ಎರಡಕ್ಕೂ ಒಪ್ಪುತ್ತೆ! (ಬಾ)
-ಯಿ ಬೊಗಳೆರಡಕ್ಕೂ ಭೇದವಿರುತ್ತೆ!
ಕಳ್ಳಕಾಕರನ್ನವು ಹೊರಗಟ್ಟುತ್ತೆ! (ಹು)
-ಚ್ಚು ಬಂದರೆರಡೂ ಪ್ರಾಣ ತೆಗೆಯುತ್ತೆ! (ಸ)
-ತ್ತೆತ್ತಿನ ಮಾಂಸವನ್ನೆರಡೂ ತಿನ್ನುತ್ತೆ!
ಈಶ್ವರೇಚ್ಛೆಯಿಂದೆರಡೂ ಸತ್ತುಹೋಗುತ್ತೆ!
ನಾಯಿಗಳಲ್ಲೂ ತಾರತಮ್ಯವಿರುತ್ತೆ! (ಬಾ)
ಯಿಯಿಂದಾಡದಿದ್ದರೂ ಬುದ್ಧಿಯಿರುತ್ತೆ!
ಮೆಚ್ಚಿದವರಿಗಾಗಿ ಪ್ರಾಣ ಕೊಡುತ್ತೆ! (ಅ)
-ಚ್ಚುಮೆಚ್ಚಾಗಿ ಪಾದದಡಿಯಲ್ಲಿರುತ್ತೆ! (ಮ)
-ತ್ತೆ ನಿರಂಜನಾದಿತ್ಯನನ್ನು ಸೇರುತ್ತೆ!!!
ಆನ್ಯರುನ್ನತಿಗಸಹನೇಕಪ್ಪಯ್ಯಾ! (ಮಾ) 2(567)
-ನ್ಯತೆ ನಿನಗದರಿಂದೇನಾಯ್ತಪ್ಪಯ್ಯಾ! (ಕ)
-ರುಬೆಂಬುದತಿಹೇಯಗುಣವಪ್ಪಯ್ಯಾ! (ನಿ)
-ನ್ನ ಏಳಿಗೆ ನೀ ಸಾಧಿಸಬೇಕಪ್ಪಯ್ಯಾ!
ತಿರುಪತಿ ದಾಸ ನೀನಲ್ಲೇನಪ್ಪಯ್ಯಾ!
ಗಡಿಬಿಡಿ ನಿನಗೆ ಒಪ್ಪದಪ್ಪಯ್ಯಾ!
ಸಜ್ಜನ ನೀನಂತಿರಬಾರದಪ್ಪಯ್ಯಾ!
ಹರಿ ಸರ್ವಾಂತರ್ಯಾಮಿ ನೋಡಪ್ಪಯ್ಯಾ!
ನೇಮದಿಂದವನ ನೀ ಭಜಿಸಪ್ಪಯ್ಯಾ!
ಕರ್ಮಕ್ಕೆ ತಕ್ಕ ಫಲ ಬಪ್ಪುದಪ್ಪಯ್ಯಾ! (ಅ)
-ಪ್ಪನಂತೆ ನೀನಾಗಬೇಡವೇನಪ್ಪಯ್ಯಾ! (ಅ)
-ಯ್ಯಾ! ನಿರಂಜನಾದಿತ್ಯ ವೆಂಕಟಪ್ಪಯ್ಯಾ!!!
ಆಪತ್ತಿಂದೆದ್ದಮರನಾಗು! 4(2002)
ಪರಮಾರ್ಥಸಾಧಕನಾಗು! (ಇ)
-ತ್ತಿಂದತ್ತೋಡಾಡದವನಾಗು! (ತಂ)
-ದೆ, ತಾಯಿಯ ಸೇವಕನಾಗು! (ಇ)
-ದ್ದದರಲ್ಲಿ ಸಂತೃಪ್ತನಾಗು!
ಮತ್ಸರ ಮಾಡದವನಾಗು! (ಧೀ)
-ರ ಸತ್ಯ ಹರಿಶ್ಚಂದ್ರನಾಗು!
ನಾನಾರೆಂದರಿತವನಾಗು!(ಬಾ)
-ಗು, ನಿರಂಜನಾದಿತ್ಯನಾಗು!!!
ಆಪತ್ತು ಬಂದಾಗಾಪ್ತರೂ ವೈರಿಗಳು! 6(3361)
ಪತಿಯರೂ ಕೇಳರ್ದ್ರೌಪದಿಯ ಗೋಳು!
(ಸ)-ತ್ತು ಹೋದಮೇಲೇಕೆ ದಿನ, ರಾತ್ರಿಯಳು?
ಬಂದಾಪತ್ತು ಕಳೆವವರ್ಬಂಧುಗಳು!
ದಾರಿದ್ರ್ಯ ನಿವಾರಿಸ್ಬೇಕು ದಾನಿಗಳು!
ಗಾದೆ ಹೇಳಿ ಬಾಧಿಸ್ಬಾರ್ದುದಾರಿಗಳು!
(ಲಿ)-ಪ್ತರಾಗದೇ ಬಾಳ್ಬೇಕು ಸಂಸಾರಿಗಳು!
ರೂಪ, ಲಾವಣ್ಯವೆಲ್ಲಾ ನೀರ್ಗುಳ್ಳೆಗಳು!
ವೈರಾಗ್ಯದಿಂದ ಧನ್ಯರು ಜೀವಿಗಳು!
ರಿಪುಗಳಾರರಿಂದೆಲ್ಲಾ ಕಷ್ಟಗಳು!
ಗಣೇಶನಿಂದಾಗ್ಬೇಕ್ಪರಿಹಾರಗಳು!
(ಕೇ)-ಳು ನಿರಂಜನಾದಿತ್ಯ ಹಿತೋಕ್ತಿಗಳು!!!
ಆಪತ್ಸಿ ತಿಯತಿರೇಕಕ್ಕೆ ಸ್ಥಾನ, ಮಾನವಿಲ್ಲ! 6(4192)
ಪರಮಾರ್ಥವಿದಕ್ಕೆ ಬೆಂಬಲ ನೀಡಬೇಕೆಲ್ಲ! (ಚಿ)
-ತ್ಸ್ಥಿ ಸೌಖ್ಯದಿದ್ದ್ರಿಂದಲ್ಲದೆ ಮತ್ತೊಂದ್ರಿಂದಲ್ಲ!
ಯಜ್ಞಕ್ಕಾಹುತಿ ಮಲ ಬೀಳದಿರ್ಲಿ! ನೋಡ್ಕೊಳ್ಳ್ಯೆಲ್ಲಾ!
ತಿರ್ತಿರಿಗನ್ಯಾಯಕ್ಕವಕಾಶ ಕೊಡ್ಬೇಡ್ನೀವೆಲ್ಲ!
ರೇಗಾಟ, ಕೂಗಾಟಗಳಿಗಂಜಬೇಡಿ ನೀವೆಲ್ಲ!
ಕರ್ತವ್ಯ ನಿಷ್ಠೆಯಿಂದ ಮತ ನೀಡ್ಬೇಕು ನೀವೆಲ್ಲ! (ಬೆ)
-ಕ್ಕೆ ಯಿಲ್ಲದೇ ಹಕ್ಕು ಸಾಧಿಸಬೇಕು ನಿಷ್ಠರೆಲ್ಲ!
ಸ್ಥಾವರ ಜಂಗಮಾತ್ಮನೇ ದೇವರು ನಮಗೆಲ್ಲ!
ನಶಿಸುವ ಕಲ್ಲು, ಮರದ ಗೊಂಬೆ ದೇವರಲ್ಲ!
ಮಾಡಿ ಧನ್ಯರಾಗಬೇಕಾತ್ಮ ಚಿಂತನೆಯಿಂದೆಲ್ಲ!
ನಶ್ವರದಾಟಕ್ಕನಾಸಕ್ತರಾಗ್ಬೇಕು ನೀವೆಲ್ಲ!
ವಿಶ್ವರೂಪ ದರ್ಶನವಿಂತು ಪಡೆಯ್ಬೇಕ್ನಿವೆಲ್ಲ! (ಎ)
-ಲ್ಲರಲ್ಲೂ ನಿರಂಜನಾದಿತ್ಯಾನಂದನಿಲ್ಲದಿಲ್ಲ!!!
ಆಪದ್ಬಾಂಧವನಿವನಯ್ಯಾ! 4(2481)
ಪತಿತನಾಗಲ್ಬಿಡನಯ್ಯಾ! (ಮ)
-ದ್ಬಾಂಧವನಾ ದತ್ತಾತ್ರೇಯಯ್ಯಾ!
ಧರ್ಮ, ಕರ್ಮ ಬಲ್ಲವನಯ್ಯಾ!
ವರ ಗುರೀರೇಳ್ಲೋಕಕ್ಕಯ್ಯಾ!
ನಿಶಿ ದಿನ ಧ್ಯಾನ ಮಾಡಯ್ಯಾ! (ಭ)
-ವರೋಗ ವೈದ್ಯನಿವನಯ್ಯಾ! (ಗಾ)
-ನಲೋಲ ವೇಣುಗೋಪಾಲಯ್ಯಾ! (ಅ)
-ಯ್ಯಾ, ನಿರಂಜನಾದಿತ್ಯೆಲ್ಲಯ್ಯಾ!!!
ಆಪ್ತ ಮಂತ್ರ ಜಪಿಸುತ್ತಲಿಪ್ತನಾಗಯ್ಯಾ! (ಗು) 5(3163)
-ಪ್ತವಾಗಿದು ಸತತ ಸಾಗುತ್ತಿರಲಯ್ಯಾ!
ಮಂಡೆ ಬೋಳ್ಸಿ ಯತಿಯಾಗ್ಬೇಕೆಂದಿಲ್ಲವಯ್ಯಾ!
ತ್ರಯಮೂರ್ತಿ ದತ್ತನಾಜ್ಞೆಯಂತಿದ್ರಾಯ್ತಯ್ಯಾ!
ಜನನ, ಮರಣವದರಿಂದಂತ್ಯವಯ್ಯಾ!
ಪಿಸುಣರ ಮಾತೆಂದಿಗೂ ಕೇಳ್ಬಾರದಯ್ಯಾ!
ಸುಷುಪ್ತಿ ಸುಖ ಸಮಾಧಿಯಿಂದಾಗಲಯ್ಯಾ! (ಚಿ)
-ತ್ತಶುದ್ಧಿಯಾಗದೆ ಇದು ಸಿದ್ಧಿಸದಯ್ಯಾ! (ಒ)
-ಲಿದರೆ ಗುರುರಾಜ ಎಲ್ಲಾ ಸಾಧ್ಯವಯ್ಯಾ! (ಆ)
-ಪ್ತನವನೊಬ್ಬನೇ ಈರೇಳು ಲೋಕಕ್ಕಯ್ಯಾ!
“ನಾನೇ ನೀನು” ಅನ್ನುವ ಉದಾರಿನ್ಯಾರಯ್ಯಾ?
ಗರ್ವ ವಿವರ್ಜಿತನಿದನರಿವನಯ್ಯಾ! (ಅ)
-ಯ್ಯಾ, ನಿರಂಜನಾದಿತ್ಯಗಿದು ಸಿದ್ಧಿಯಯ್ಯಾ!!!
ಆಪ್ತನಹಿತವನ್ನೆಂದಿಗೂ ಮಾಡ! [ಲಿ] 5(2969)
-ಪ್ತನವನೆಂದು ತಿಳಿಯಲೂ ಬೇಡ!
ನಶ್ವರದಾಸೆಗವ ಲಕ್ಷ್ಯಗೊಡ!
ಹಿರಿಯನಲ್ಲಿ ತಪ್ಪೆಣಿಸಬೇಡ!
ತನ್ನಂತೆ ನಿನ್ನನ್ನವ ಮಾಡ್ಡೇ ಬಿಡ!
ವರ ಗುರುವಿಗೆದುರಾಡಬೇಡ! (ಇ)
-ನ್ನೆಂದೂ ಪ್ರಸಾದವನ್ನುಪೇಕ್ಷಿಸಬೇಡ!
ದಿವ್ಯಾದರ್ಶವಿದು, ಮರೆಯಬೇಡ!
ಗೂಡು ಖಾಲಿಯಾದಾಗೊದ್ದಾಡಬೇಡ!
ಮಾಡು ಸಚ್ಛ, ಗಿಳಿಯಿರ್ಪಾಗ ಗೂಡ! (ಮಾ)
-ಡ, ನಿರಂಜನಾದಿತ್ಯಹಿತ ಮಾಡ!!!
ಆಪ್ತಮಿತ್ರಹೋಬಿಲ ನರಸಿಂಹಯ್ಯಾ! (ಗು) 4(2275)
-ಪ್ತವಾಗಿರುವನವನೆಲ್ಲರಲ್ಲಯ್ಯಾ! (ಸ್ವಾ)
-ಮಿಯವನೀರೇಳು ಲೋಕಗಳಿಗಯ್ಯಾ!
ತ್ರಯಮೂರ್ತಿ ಸ್ವರೂಪನಾಗಿಹನಯ್ಯಾ! (ಅ)
-ಹೋರಾತ್ರಿಯವನ ಭಜಿಸಬೇಕಯ್ಯಾ!
ಬಿಡದೇ ರಕ್ಷಿಪನು ಭಕ್ತರನ್ನಯ್ಯಾ!
ಲಕ್ಷ್ಮಿಯವನ ಚರಣ ದಾಸಿಯಯ್ಯಾ! (ವೈ)
-ನತೇಯಗಲ್ಲಿ ದರ್ಶನವಿತ್ತನಯ್ಯಾ! (ಹಿ)
-ರಣ್ಯಕಶ್ಯಪನುದರ ಬಗೆದಯ್ಯಾ!
ಸಿಂಹಾಸನಕ್ಕೇರಿಸಿದ ಮಗನಯ್ಯಾ!
ಹರಿನಾಮ ಸ್ಮರಣಾ ಫಲವಿದಯ್ಯಾ! (ಅ)
-ಯ್ಯಾ, ನಿರಂಜನಾದಿತ್ಯಾ ನರಸಿಂಹಯ್ಯಾ!!!
ಆಪ್ತರ ಅಪಚಾರ ಅಲಕ್ಷ್ಯ! (ಆ) 6(3376)
-ಪ್ತರಾದವರಿಗೆ ಅದೇ ಭಕ್ಷ್ಯ! (ತೋ)
-ರಬಾರದವರಲ್ಲಿ ಉಪೇಕ್ಷ್ಯ!
ಅವರ ವಿರುದ್ಧಾಡ್ಬಾರ್ದು ಸಾಕ್ಷ್ಯ!
ಪಕ್ಷ ಬುದ್ಧಿಗೆ ಸಿದ್ಧಿ ಸದ್ಲಕ್ಷ್ಯ!
ಚಾರು ಚರಣತೀರ್ಥ ಸಂಪ್ರೋಕ್ಷ! (ವ)
-ರಗುರು ದೃಷ್ಟಿ ಸದಾ ಸಮೀಕ್ಷ್ಯ!
ಅದಕ್ಕೆ ಯಾವುದೂ ಇಲ್ಲಪೇಕ್ಷ! (ಫಾ)
-ಲ ಲೋಚನನಾದರ್ಶವೇ ಲಕ್ಷ್ಯ! (ಲ)
-ಕ್ಷ್ಯ ನಿರಂಜನಾದಿತ್ಯಗೆ ಭಕ್ಷ್ಯ!!!
ಆಯಿತವರಿಗೆಚ್ಚರ! [ಹೋ] 3(1095)
-ಯಿತೊಳಗಿನಹಂಕಾರ!
ತತ್ವಾರ್ಥ ಜ್ಞಾನ ವಿಚಾರ!
ವರ ಗುರು ಮಂತ್ರೋಚ್ಚಾರ! (ಉ)
-ರಿಸಿತೆಲ್ಲಾ ಸೇಚ್ಛಾಚಾರ!
ಗೆಳೆಯನಿಚ್ಛೋಪಚಾರ! [ಅ]
-ಚ್ಚಳಿಸಿತೆಲ್ಲಪಚಾರ! (ಹ)
-ರ ನಿರಂಜನಾದಿತ್ಯಾರ!!!
ಆಯ್ತೇನನುದಿನದಭ್ಯಾಸ? (ಹೋ) 4(2420)
-ಯ್ತೇನೊಳಗಿನ ದುರಭ್ಯಾಸ? (ಅ)
-ನವರತ ಮಾಡ್ನಿಧಿಧ್ಯಾಸ! (ಅ)
-ನುಪಮಾತ್ಮನಾಗಿ ಸನ್ಯಾಸ!
ದಿಗಂಬರನಾಗಿ ಪ್ರವಾಸ! (ನಿ)
-ನಗಾಗೀಗವ ಶ್ರೀನಿವಾಸ!
ದರ್ಶನವೀವಾ ಗಿರಿವಾಸ! (ಅ)
-ಭ್ಯಾಗತರಾದರಿಪಾ ಶ್ರೀಶ! (ದಾ)
-ಸ ನಿರಂಜನಾದಿತ್ಯ ವ್ಯಾಸ!!!
ಆರ ಕಂಬನಿಗನುಗ್ರಹವಯ್ಯಾ? (ಆ) 1(397)
-ರದಾಗಿದೆ ಉರಿ ಕಠಣವಯ್ಯಾ?
ಕಂಗೆಡುತಿದ್ದಾರೆ ಭಕ್ತಜನಯ್ಯಾ!
ಬಲಗುಂದಿಹರನ್ನವಿಲ್ಲದಯ್ಯಾ!
ನಿನಗೇಕಿನ್ನೂ ದಯೆಬಂದಿಲ್ಲಯ್ಯಾ?
ಗತ ವೈಭವ ಬರಲೆಂಬರಯ್ಯಾ! (ಅ)
-ನುಭವಿಸಲಾರರೀ ವಿಯೋಗಯ್ಯಾ!
ಗ್ರರಾಜ ನೀನಾಗಿರುವೆಯಯ್ಯಾ!
ಹಸುಳೆಗಳಭೀಷ್ಟ ಸಲಿಸಯ್ಯಾ!
ವರ ದಯಾಮಯ ಗುರು ನೀನಯ್ಯಾ! (ಅ)
-ಯ್ಯಾ! ನಿರಂಜನಾದಿತ್ಯ ಬಾ ಬೇಗಯ್ಯಾ!!!
ಆರ ನೆನೆದಾರಿಗೇನು ಸುಖ? (ಪ) 5(2659)
-ರಮಾತ್ಮನಿಂದೆಲ್ಲರಿಗೂ ಸುಖ! (ನೆ)
-ನೆದ್ರೆ ನಿನ್ನಲವನನ್ನು ಸುಖ!
ನೆಲೆ ಬೇರೊಂದಿದೆಂದ್ರಾಗ್ದು ಸುಖ! (ಸ)
-ದಾ ನೀನೇ ಅವನಾಗಿದ್ದ್ರೆ ಸುಖ! (ಅ)
-ರಿಗಳಾರೂ ಸತ್ತ್ರೆ ನಿತ್ಯ ಸುಖ! (ಯೋ)
-ಗೇಶ ನೀನಾದ್ರೆ ಪರಮ ಸುಖ! (ಅ)
-ನುಮಾನ ಪಟ್ಟರಾಗದಾ ಸುಖ!
ಸುಖ, ದುಃಖ ಸಮಾದ್ರಾತ್ಮ ಸುಖ! (ಸ)
-ಖ, ನಿರಂಜನಾದಿತ್ಯಗಾ ಸುಖ!!!
ಆರಡಿ ನಾ ನಿನ್ನಡಿದಾವರೆಯಲ್ಲಿ! 5(2647)
ರಸಭರಿತದೂಟವಿರ್ಪುದದ್ರಲ್ಲಿ! (ಅ)
-ಡಿಗಡಿಗಮ್ಲೇರಿ ನಿದ್ರಿಪೆನದ್ರಲ್ಲಿ!
ನಾಮ, ಗೋತ್ರ ವಿಚಾರಿಪರಿಲ್ಲದ್ರಲ್ಲಿ!
ನಿತ್ಯ ನಿರ್ಮಲ ಸಚ್ಚಿದಾನಂದದ್ರಲ್ಲಿ! (ನ)
-ನ್ನವ್ರನ್ಯರವ್ರೆಂಬ ಭೇದವಿಲ್ಲದ್ರಲ್ಲಿ! (ಉ)
-ಡಿಗೆ, ತೊಡಿಗೆಯಾಡಂಬ್ರವಿಲ್ಲದ್ರಲ್ಲಿ!
ದಾಸರ ದಾಸರಿಗಾಶ್ರಯವದ್ರಲ್ಲಿ!
ವರ ಗುರುಭಕ್ತಿಗೆ ಗೌರವದ್ರಲ್ಲಿ! (ಧ)
-ರೆಯರ್ಸನಾದ್ರೂ ನಮ್ರ ಸೇವಕದ್ರಲ್ಲಿ! (ಜ)
-ಯಪರಮೇಶ್ವರನೆಂಬ ನಾದದ್ರಲ್ಲಿ! (ಇ)
-ಲ್ಲಿ, ನಿರಂಜನಾದಿತ್ಯನಿರ್ಪೆಡೆಯಲ್ಲಿ!!!
ಆರತಿ ಹೊತ್ತಿಗೆ ಅವಧೂತ ಬಂದ! 2(744)
ರಮ್ಯವಾದೊಂದು ವಾಹನದಲ್ಲಿ ಬಂದ!
ತಿರುಕ ವೇಷದಲ್ಲಿ ಅವನು ಬಂದ!
ಹೊರಗಿಂದೊಳಗೆ ನೋಡುತ್ತಾತ ಬಂದ! (ಅ)
-ತ್ತಿತ್ತ, ದಿಟ್ಟಿಸದೆ ನೆಟ್ಟಗಾತ ಬಂದ!
ಗೆಜ್ಜೆ, ತಾಳ, ಭಜನೆ ಕೇಳುತ್ತ ಬಂದ!
ಅವನೇ ತಾನಾಗ್ಯಾನಂದದಿಂದ ಬಂದ!
ವರ ತೇಜಸ್ವಿಯಾಗಿ ಅವನು ಬಂದ!
ಧೂಪವಾಘ್ರಾಣಿಸುತ್ತಾ ಸನ್ಯಾಸಿ ಬಂದ!
ತಲೆ ಕೂದಲು ಕೆದರಿಕೊಂಡು ಬಂದ!
ಬಂದ, ನಿಂದ, ಕುಳಿತ ಆನಂದದಿಂದ!
ದತ್ತ ನಿರಂಜನಾದಿತ್ಯ ನಿತ್ಯಾನಂದ!!!
ಆರದಾರಿಗದೆಷ್ಟು ಸಹಾಯ? [ಪ] 4(2446)
-ರಮಾತ್ಮನೆಲ್ಲರಿಗೆ ಸಹಾಯ!
ದಾದಿ ಅಸುಗೂಸಿಗೆ ಸಹಾಯ! (ಸಿ)
-ರಿಸದಾ ಶ್ರೀಹರಿಗೆ ಸಹಾಯ! (ತ್ಯಾ)
-ಗ, ಯೋಗಸಾಧಕಗೆ ಸಹಾಯ! (ಈ)
-ದೆಮ್ಮೆ ಹಾಲ್ಮಾರ್ವವಗೆ ಸಹಾಯ! (ನಿ)
-ಷ್ಟುರೋಕ್ತಿ ದುಷ್ಟನಿಗೆ ಸಹಾಯ!
ಸತ್ಸಂಗ ಸಜ್ಜನಗೆ ಸಹಾಯ!
ಹಾಡು, ಪಾಡುವವಗೆ ಸಹಾಯ! (ಜೀ)
-ಯ, ನಿರಂಜನಾದಿತ್ಯಪ್ರಮೇಯ!!!
ಆರರಿವರೆನ್ನ ಕಷ್ಟ ಗುರುದೇವಾ? (ಪ) 4(2078)
-ರಮಾತ್ಮ ನೀನಲ್ಲದಾರು ಗುರುದೇವಾ? (ದಾ)
-ರಿ ತೋರಬಾರದೇ ವರ ಗುರುದೇವಾ? (ಭಾ)
-ವ ಶುದ್ಧವಾಗುವುದೆಂತು ಗುರುದೇವಾ? (ಕ)
-ರೆದರೂ ಬರಬಾರದೇ ಗುರುದೇವಾ? (ನ)
-ನ್ನಭೀಷ್ಟ ಸಿದ್ಧಿಪುದೆಂದು ಗುರುದೇವಾ?
ಕರಮುಗಿದ್ಪ್ರಾರ್ಥಿಪೆನು ಗುರುದೇವಾ! (ದು)
-ಷ್ಟತನವೆನ್ನಲ್ಲೇನಿದೆ ಗುರುದೇವಾ? (ಮ)
-ಗು ನಾನಲ್ಲವೇ ನಿನಗೆ ಗುರುದೇವಾ? (ಇ)
-ರುತಿರುವೆ ನಿನಗಾಗಿ ಗುರುದೇವಾ! (ಇಂ)
-ದೇ ಹೋಗಲೆನ್ನ ದುಃಖಸದ್ಗುರುದೇವಾ! (ದೇ)
-ವಾ ನಿರಂಜನಾದಿತ್ಯ ಮಹಾನುಭಾವಾ!!!
ಆರಾಮ ಶ್ರೀರಾಮ ಸೀತಾರಾಮ ನಾಮ! 1(369)
ರಾಗ, ತಾಳ ಸೇರಿ ಭಜಿಸಲಾರಾಮ!
ಮನ ಕರಗಿ ಸೀತಾರಾಮನಾರಾಮ!
ಶ್ರೀ ಗುರುನಾಮ ಶ್ರೀರಾಮನಿಗಾರಾಮ!
ರಾಮನಾಮ ಗುರು ಹೃದಯಕಾರಾಮ!
ಮತ್ಸರವಿಲ್ಲದಭೇದ ರೂಪಾರಾಮ!
ಸೀತಾರಾಮ, ಶ್ರೀ ಗುರು ರಾಮಾತ್ಮಾರಾಮ!
ತಾರಕನಾಮ, ಮಾರುತಿ ಪ್ರೇಮಾರಾಮ!
ರಾಕ್ಷಸ ಭೀಮ, ರಾಜಾರಾಮ ಶ್ರೀರಾಮ!
ಮರ, ಮರವೆಂದ ವಾಲ್ಲೀಕಿಗಾರಾಮ!
ನಾಮಾಮೃತ ಪಾನವೆಲ್ಲರಿಗಾರಾಮ!
{ಒ}
ಮಮ ನಿರಂಜನಾದಿತ್ಯಾ ಗುರುರಾಮ!
ಮಮ ಗುರು ನಿರಂಜನಾದಿತ್ಯಾರಾಮ!
ಆರಾಮವಾಗಿದ್ದೀಯೇನಮ್ಮಾ ಭಾಮಾ? 4(1894)
ರಾಮನಾಮ ಬರೆಯುತ್ತಿರು ಭಾಮಾ!
ಮಕ್ಕಳೇಳಿಗೆಗದು ದಾರಿ ಭಾಮಾ!
ವಾದ ಅಶಾಂತಿಗೆ ಕಾರಣ ಭಾಮಾ! (ಯೋ)
-ಗಿನಿಯಾಗಿ ಜನ್ಮ ಸಾಗಿಸು ಭಾಮಾ! (ಎ)
-ದ್ದೀಗಿಂದಾನಂದವಾಗಿ ಇರು ಭಾಮಾ! (ಛಾ)
-ಯೇಶ್ವರಿಯೇ ನೀನಾಗಿ ಇರು ಭಾಮಾ!
ನಮಿಸು ಶ್ರೀಪಾದಕ್ಕಾಗಾಗ ಭಾಮಾ! (ದು)
-ಮ್ಮಾನದಿಂದೇನೂ ಫಲಿವಿಲ್ಲ ಭಾಮಾ!
ಭಾವ, ಭಕ್ತಿಯೇ ಬಾಹುಬಲ ಭಾಮಾ! (ರಾ)
-ಮಾ ನಿರಂಜನಾದಿತ್ಯ ಸತ್ಯಭಾಮಾ!!!
ಆರಿಂದಾರಿಗೆ ಅಡ್ಡಿಯಪ್ಪಾ! [ಊ] 2(551)
-ರಿಂದೂರಿಗೇಕೆ ಹೋಗಲಪ್ಪಾ?
ದಾರಿ ಎಲ್ಲಿರಿಗೊಂದೇ ಅಪ್ಪಾ! (ಹ)
-ರಿಗುಣಗಾನವ ಮಾಡಪ್ಪಾ! (ಹ)
-ಗೆತನ ಬಿಟ್ಟು ಬದುಕಪ್ಪಾ!
ಅನ್ಯರೇನಂದರೇನಾಯ್ತಪ್ಪಾ? (ಬ)
-ಡ್ಡಿ ಸಹಿತ ತೆರಬೇಕಪ್ಪಾ! (ಭ)
-ಯವೇಕೆ ನಿನಗಿನಿತಪ್ಪಾ? (ಅ)
-ಪ್ಪಾ! ನಿರಂಜನಾದಿತ್ಯಾಗಿಪ್ಪಾ!!!
ಆರಿಂದೇಕೆಂದಾಯಿತೆಂತೀ ಸೃಷ್ಟಿ? (ಆ) 4(1972)
-ರಿಂದಾಗುವುದರಿಯಲೀ ಸೃಷ್ಟಿ?
ದೇವರಿಂದಾಯಿತೆಂಬರೀ ಸೃಷ್ಠಿ! (ಏ)
-ಕೆಂದರವನಿಚ್ಛೆಂಬರೀ ಸೃಷ್ಟಿ! (ಎಂ)
-ದಾಯ್ತೆಂದರೆ ಹಿಂದೆಂಬರೀ ಸೃಷ್ಠಿ!
ಯಿದೆಂತೆನೆ ಲೀಲೆಂಬರೀ ಸೃಷ್ಟಿ! (ಇಂ)
-ತೆಂದು ತೋರುವವರಾರೀ ಸೃಷ್ಟಿ? (ಅ)
-ತೀತನಾದಾಗೆಲ್ಲಿದೆ ಈ ಸೃಷ್ಟಿ?
ಸೃಷ್ಟಿ, ಸ್ಥಿತಿ, ಲಯ, ಮನೋ ಸೃಷ್ಟಿ! (ಸೃ)
-ಷ್ಟಿ, ನಿರಂಜನಾದಿತ್ಯಾತ್ಮ ದೃಷ್ಟಿ!!!
ಆರಿಗಾರಧಿಕಾರಿ ಹೇಳಯ್ಯಾ? (ಅ) 4(1775)
-ರಿವಿಲ್ಲದಂಧಕಾರಾ ಗೋಳಯ್ಯಾ! (ತ)
-ಗಾದೆಗಾರಧಿಕಾರಿಯೇನಯ್ಯಾ? (ಪ)
-ರ ಹಿಂಸಾತ್ಮಧಿಕಾರಿಯೇನಯ್ಯಾ? (ಅ)
-ಧಿಕಾಸೆಯವಧಿಕಾರ್ಯೇನಯ್ಯಾ?
ಕಾಮುಕನಧಿಕಾರಿಯೇನಯ್ಯಾ? (ಹ)
-ರಿ ವಿರೋಧ್ಯಧಿಕಾರಿಯೇನಯ್ಯಾ?
ಹೇಡಿ ಜೀವಧಿಕಾರಿಯೇನಯ್ಯಾ? (ಥ)
-ಳಕಿನವಧಿಕಾರಿಯೇನಯ್ಯಾ? (ಅ)
-ಯ್ಯಾ ನಿರಂಜನಾದಿತ್ಯಾನಂದಯ್ಯಾ!!!
ಆರಿಗಾರಾಪ್ತರೆಂದರುಹಪ್ಪಾ! (ಅ) 3(1193)
-ರಿಯದಾಗಿಹದು ನಿನ್ನಾಟಪ್ಪಾ!
ಗಾಢ ಪ್ರೇಮವಾರಿಗಿಹುದಪ್ಪಾ?
ರಾಗ, ರೋಗ ಹೆಚ್ಚಾಗಿಹುದಪ್ಪಾ! (ಆ)
-ಪ್ತನಾತ್ಮನೆಂದಾರರಿವರಪ್ಪಾ? (ಬಾ)
-ರೆಂದರೆ ಬರದೇಕಿಹುದಪ್ಪಾ?
ದಯೆಯುಂಟಾಗಲಿ ನಿನಗಪ್ಪಾ! (ಮ)
-ರುಳು ಮಾಡದಿರೆನ್ನ ನೀನಪ್ಪಾ!
ಹಗಲಿರುಳೆನ್ನೊಡನಿರಪ್ಪಾ! (ಅ)
-ಪ್ಪಾ, ನಿರಂಜನಾದಿತ್ಯ ಬಾರಪ್ಪಾ!!!
ಆರಿಗಾರೂ ಕಾದು ಫಲವಿಲ್ಲ! (ಅ) 6(4229)
-ರಿತಿದ ಬಿಡು ಆಸೆಯನ್ನೆಲ್ಲ!
ಗಾಳಿ, ಮಳೆ ಪ್ರಕೃತಿಯಂತೆಲ್ಲ! (ಮಾ)
-ರೂ ಅಧಿಕಾರ ಮಾಳ್ಪ ಹಾಗಿಲ್ಲ!
ಕಾಲಕ್ಕೆ ತಕ್ಕಂತಿರಬೇಕೆಲ್ಲ!
ದುರಹಂಕಾರಿ ಏನು ಮಾಡಬಲ್ಲ? (ವಿ)
-ಫಲನಾಗಿ ಅಳುತ್ತಿರಬಲ್ಲ! (ಬ)
-ಲ ಪ್ರದರ್ಶನ ಸುಖವೇನಿಲ್ಲ!
ವಿಶ್ವವ್ಯಾಪಿಯ ಸ್ಮರಿಸಿರೆಲ್ಲಾ! (ಫು)
-ಲ್ಲ ನಿರಂಜನಾದಿತ್ಯನಂತೆಲ್ಲಾ!!!
ಆರು ಚಿರಂಜೀವಿಯಾದರೇನು? (ಕ) 4(2253)
-ರುಣೆಯಿಂದ ನೆರವಾದರೇನು? (ಸಂ)
-ಚಿತದಿಂದ ಬಿಡಿಸಿದರೇನು? (ಶ್ರೀ)
-ರಂಗನುತ್ತರ ಹೇಳುವನೇನು?
ಜೀವರಾಧಾರವನಲ್ಲವೇನು?
ವಿಶ್ವಾಸ ಕೆಡಿಸಬಹುದೇನು?
ಯಾದವೇಂದ್ರನ ಗೀತೆ ಸುಳ್ಳೇನು?
ದರ್ಶನಾನುಗ್ರಹ ಮಾಡ್ಬೇಡ್ವೇನು? (ಯಾ)
-ರೇನೆಂದರದರಿಂದಾಗ್ವುದೇನು? (ಭಾ)
-ನು ನಿರಂಜನಾದಿತ್ಯನಾಗ್ನೀನು!!!
ಆರು ತಿಂಗಳ ಮಾತು ಈಗೇತಕಯ್ಯಾ? (ಆ) 2(471)
-ರು ಅರಿವರಾಗೇನಾಗುವುದೆಂದಯ್ಯಾ?
ತಿಂದರೀಗೀಗಿನ ಹಸಿವೆ ಶಾಂತಯ್ಯಾ! (ಆ)
ಗಣೌತಣದ ಪುರಾಣವೀಗೇಕಯ್ಯಾ? (ಅ)
-ಳವಡಿಸಿಕೊಳ್ಳೀಗಿನ ಬಾಳನಯ್ಯಾ!
ಮಾಡೀಗಿಂದ ಶ್ರೀಗುರು ಸೇವೆಯನಯ್ಯಾ!
ತುರೀಯ ಸ್ಥಿತಿ ಬಂದಾಗ ಬರಲಯ್ಯಾ!
ಈರ್ಷ್ಯಾಸೂಯೆ ಮೊದಲೀಗ ಹೋಗಲಯ್ಯಾ!
ಗೇಣು ಹೊಟ್ಟೆ ಬಟ್ಟೆಗಾಗಿದೇತಕಯ್ಯಾ!
ತತ್ವಚಿಂತನೆ ಮಾಡದಿರಬೇಡಯ್ಯಾ!
ಕಷ್ಟ ನಷ್ಟಗಳಿಗಳಬಾರದಯ್ಯಾ! (ಅ)
-ಯ್ಯಾ! ನಿರಂಜನಾದಿತ್ಯಳುವನೇನಯ್ಯಾ!!!
ಆರೆಂತಿರಬೇಕೆಂದರಿತವರಾರು? 3(1006)
ರೆಂಬೆಯ ಕೊಬೆಗಂಟಿಸಿದವರಾರು?
ತಿರೆಯಲ್ಲಿ ನೀರಿರಿಸಿದವರಾರು?
ರಮ್ಯ ರಂಗಲರ್ಗಳಿಗಿತ್ತವರಾರು?
ಬೇಸರಾನಂದ ಮನಕ್ಕಿತ್ತವರಾರು?
ಕೆಂಡದಲ್ಲುರಿಯಿರಿಸಿದವರಾರು?
ದತ್ತ ಗುರು ಚಿತ್ತವಲ್ಲದೆ ಮತ್ಯಾರು? (ಇ)
-ರಿಸಿದಂತಿರದಿದ್ದರೆ ಕೇಳ್ವರಾರು?
ತತ್ವವಿದರಿತರೆ ದುಃಖಿಗಳಾರು?
ವರ ಪರಬ್ರಹ್ಮಾನಂದಕ್ಕಿದಿರಾರು?
ರಾಮ ರಾಮೆನುತವನಲ್ಲೊಂದಾಗಿರು! (ಇ)
-ರು ನಿರಂಜನಾದಿತ್ಯನಿಷ್ಟವೆಂದಿರು!!!
ಆರೊಳಗೆಷ್ಟಿದ್ದರೇನು? 5(2593)
ರೊಟ್ಟಿಗೆ ಹಿಟ್ಟು ಬೇಡ್ವೇನು? (ಕ)
-ಳವಳದಿಂದಾಗ್ವುದೇನು? (ನ)
-ಗೆಮೊಗದಿಂದಿರು ನೀನು! (ಸೃ)
-ಷ್ಟಿಸಿದಾತ ದೇವ ತಾನು! (ಸ)
-ದ್ದಡಗಿಸಿ ಬಾಳು ನೀನು! (ಯಾ)
-ರೇನೆಂದರೆ ನಿನಗೇನು? (ನೀ)
-ನು ನಿರಂಜನಾದಿತ್ಯಾನು!!!
ಆರೋಗ್ಯ ಮುಖಾ ಗುರು ಮುಖ! 4(2173)
ರೋಗ ರಹಿತಾ ಶುದ್ಧ ಮುಖ! (ಭಾ)
-ಗ್ಯವಿದೆಲ್ಲರಿಗೀವ ಮುಖ!
ಮುಟ್ಟು, ಮಡಿಯೆನ್ನದಾ ಮುಖ!
ಖಾರ, ಹುಳಿಯಭೇದ ಮುಖ!
ಗುಣದೋಷರಿಯದಾ ಮುಖ! (ಕ)
-ರುಣಾಪೂರ್ಣಾ ಗಣೇಶ ಮುಖ!
ಮುಕುಂದಾನಂದ ಕಂದ ಮುಖ! (ಸು)
-ಖ ನಿರಂಜನಾದಿತ್ಯ ಮುಖ!!!
ಆರೋಪಿಸಿದೆನ್ನಬೇಡಯ್ಯಾ! 4(1997)
ರೋಷ ನಿನಗೆ ಸಲ್ಲದಯ್ಯಾ!
ಪಿತನೆಲ್ಲರಿಗೆ ನೀನಯ್ಯಾ! (ಪು)
-ಸಿಮಾತ ನಾನಂದಿಲ್ಲವಯ್ಯಾ! (ಕಂ)
-ದೆರೆದು ಕಾಪಾಡಬೇಕಯ್ಯಾ! (ನಿ)
-ನ್ನಬಿಟ್ಟರಾರು ಗತಿಯಯ್ಯಾ?
ಬೇಯುತಿದೆ ಬಂಗ್ಲಾ ದೇಶಯ್ಯಾ (ತ)
-ಡಮಾಡದುದ್ಧಾರ ಮಾಡಯ್ಯಾ! (ಅ)
-ಯ್ಯಾ, ನಿರಂಜನಾದಿತ್ಯಾರ್ಯಯ್ಯಾ!!!
ಆರ್ಯಾನುಸಾರಿ, ಕಾರ್ಯಾನುಸಾರಿ! (ಮ) 5(3192)
-ರ್ಯಾದಾ ರಾಮಚಂದ್ರ ಅಸುರಾರಿ!
ನುಡಿದಂತಿದ್ದಾ ಧರ್ಮಾಧಿಕಾರಿ!
ಸಾಯುಜ್ಯವಿತ್ತಾಂಜನೇಯಾಕಾರಿ!
ರಿಸಿ, ಮುನಿಗಳುಪಕಾರಿ!
ಕಾದ ದಾಸಿ ಶಬರಿಯೋದ್ಧಾರಿ! (ಸೂ)
-ರ್ಯಾನುಗ್ರಹ ಪಡೆದ ಉದಾರಿ! (ಅ)
-ನುಪಮ ಮಕ್ಕಳಪ್ಪ ಸಂಸಾರಿ!
ಸಾಮಗಾನ ಪ್ರಿಯ ನರಹರಿ!
ರಿಸಿ ನಿರಂಜನಾದಿತ್ಯೆಂದರಿ!!!
ಆರ್ಯೋಕ್ತ್ಯನು ಭವವಾಗಬೇಕು (ಸೂ) 3(1129)
-ರ್ಯೋ ಪಾಸನಾ ಫಲ ಕಾಣಬೇಕು! (ಭ)
-ಕ್ತ್ಯನುಕೂಲ ಮಾಡಿ ಕೊಡಬೇಕು! (ಅ)
-ನುಮಾನ ನಿರ್ನಾಮವಾಗಬೇಕು!
ಭಜನೆ ಹೆದ್ದಾರಿಯಾಗಬೇಕು!
ವರ ಗುರುಲೀಲೆ ನೋಡಬೇಕು!
ವಾದ ಭೇದಳಿದು ಹೋಗಬೇಕು!
ಗಮನಾತ್ಮನತ್ತ ಬರಬೇಕು!
ಬೇಗ ಬೇಗ ದಾರಿ ಸಾಗಬೇಕು! (ಬೇ)
-ಕು ನಿರಂಜನಾದಿತ್ಯಾಗಬೇಕು!!!
ಆರ್ಶೀದಿಸುವ ಮನಸ್ಸೆನಗಿಲ್ಲ! 6(4171)
ಶೀತೋಷ್ಣಗಳ ಬಾಧೆ ನನಗೇನಿಲ್ಲ! (ಓ)
-ರ್ವನೇ ನಾನೆಲ್ಲೆಲ್ಲೂ ಇರುತ್ತಿರ್ಪೆನಲ್ಲಾ!
ದಿನ, ರಾತ್ರಿ ಭೇದ ನನಗಿಲ್ಲವಲ್ಲಾ!
ಸುರನಾರಿಯರಾಸೆ ನನಗೇನಿಲ!
ವರ ಮೌನಿ ಗುರು ನಾನಾಗಿದ್ದೇನಲ್ಲಾ!
ಮದ ಮತ್ಸರದ ಸೋಂಕು ನನಗಿಲ್ಲ! (ತ್ರಿ)
-ನಯನ ನಾನೆಂದರೆ ನಗಬೇಕಿಲ್ಲ! (ಭು)
-ಸ್ಸೆನ್ನುವ ಸರ್ಪದ ಭೀತಿ ನನಗಿಲ್ಲ!
ನರನೂ, ನಾರಿಯೂ ನಾನಾಗಿದ್ದೇನಲ್ಲಾ! (ತ್ಯಾ)
-ಗಿಯಾ, ಯೋಗಿಯೂ ನಾನೇ ಆಗಿದ್ದೇನಲ್ಲಾ! (ಫು)
-ಲ್ಲ ನಿರಂಅಜನಾದಿತ್ಯ ಸಾಮಾನ್ಯಲ್ಲ!!!
ಆಲಿಂಗನಾನಂದ ನೀಡೌ ಗುರುವೇ! 5(3094)
ಲಿಂಗ ಭೇಧ ನಿಮಗಿಲ್ಲ ಗುರುವೇ!
ಗತಿವಿಹೀನ ನಾನೀಗ ಗುರುವೇ!
ನಾಮಸ್ಮರಣೆ ಬಿಟ್ಟಿಲ್ಲ ಗುರುವೇ!
ನಂಬಿಗೆ ಕೆಡಿಸಬೇಡಿ ಗುರುವೇ!
ದರ್ಶನವೀಗಾಗ್ಲೇಬೇಕು ಗುರುವೇ!
ನೀವೆನ್ನ ತಾಯ್ತಂದೆ, ಬಂಧು ಗುರುವೇ! (ಮಾ)
-ಡೌ ನರಜನ್ಮ ಸಾರ್ಥಕ ಗುರವೇ!
ಗುಣಾತೀತನಾಗ್ಮಾಡೆನ್ನ ಗುರುವೇ! (ಕ)
-ರುಣಾಮೂರ್ತಿ ದತ್ತಾತ್ರೇಯ ಗುರುವೇ! (ನೀ)
-ವೇ, ಶ್ರೀ ನಿರಂಜನಾದಿತ್ಯ ಗುರುವೇ!!!
ಆಳ ಬಯಸುವರೆಲ್ಲಾ! (ಆ) 4(1850)
-ಳಬಲ್ಲವರೆಲ್ಲೂ ಇಲ್ಲಾ!
ಬಣ್ಣದ ಮಾತಾಡ್ವರೆಲ್ಲಾ! (ನ್ಯಾ)
-ಯ ದೊರಕಿಸುವರಿಲ್ಲಾ!
ಸುಖಿಗಳೆಲ್ಲರಾಗಿಲ್ಲಾ!
ವಸ್ತ್ರಾನ್ನಾಭಾವ ಹೋಗಿಲ್ಲಾ! (ಕೆ)
-ರೆ ನೀರು ಸಾಕಾಗುತ್ತಿಲ್ಲಾ! (ಬ)
-ಲ್ಲಾ, ನಿರಂಜನಾದಿತ್ಯೆಲ್ಲಾ!!!
ಆಳಲ್ಲಿರ್ಪ ನಿಷ್ಠೆ ಆಳ್ವವನಲ್ಲಿಲ್ಲ! (ಹ) 6(4041)
-ಳಸಲನ್ನ ಹಾಕಿದ್ರೂ ತಿನ್ನುವನೆಲ್ಲಾ! (ಸ)
-ಲ್ಲಿಸುವನು ಸೇವೆ ದಿನ, ರಾತ್ರಿಯೆಲ್ಲಾ! (ದ)
-ರ್ಪ ತೋರ್ಪನಾಳ್ವವನಿವನ ಮೇಲೆಲ್ಲಾ!
ನಿರ್ವಂಚನೆಯ ಸ್ವಭಾವಾಳ್ವವಗಿಲ್ಲ! (ನಿ)
-ಷ್ಠೆಯ ಬದಲಾಗಿ ದುಷ್ಟತನವೆಲ್ಲಾ!
ಆಳಿನ ಗೋಳ ಕೇಳ್ವಾಳುವವನಿಲ್ಲ! (ಆ)
-ಳ್ವವವನ ಕಿವಿ ಹಿತ್ತಾಳೆಯಾಯಿತಲ್ಲಾ!!
ವಜ್ರ ವೈಢೂರ್ಯಗಳಾಸೆ ಆಳಿಗಿಲ್ಲ!
ನತದೃಷ್ಟನ ಪ್ರೀತಿಸುವವರಿಲ್ಲಾ! (ಎ)
-ಲ್ಲಿ ನೋಡಿದರೂ ಇದೇ ಪಾಡಾಯಿತಲ್ಲಾ! (ಪು)
-ಲ್ಲ ನಿರಂಜನಾದಿತ್ಯ ತಿದ್ದಲೀಗೆಲ್ಲಾ!!!
ಆಳಾಗಿಹೆನು ನಾನು ನಿನಗೆ! (ಹಾ) 3(1231)
-ಳಾದರೆ ಅಪಕೀರ್ತಿ ನಿನಗೆ! (ಹೇ)
-ಗಿರಬೇಕೆಂದರುಹು ನನಗೆ!
ಹೆರವಳಲ್ಲ ನಾನು ನಿನಗೆ! (ಅ)
-ನುಭವದರಿವಿಲ್ಲ ನನಗೆ!
ನಾನೇನೂ ಹೇಳಲಾರೆ ನಿನಗೆ! (ಅ)
-ನುದಿನ ಸೇವೆ ನೀಡು ನನಗೆ!
ನಿನ್ನ ಕರ್ತವ್ಯ ಗೊತ್ತು ನಿನಗೆ!
ನನ್ನನಂತ ಸಾಷ್ಟಾಂಗ ನಿನಗೆ! (ಗಂ)
-ಗೆ ನಿರಂಜನಾದಿತ್ಯನಡಿಗೆ!!!
ಆಳಿ ಬಾಳಿ ಅಳಿದವರೆಷ್ಟೋ! (ಕೂ) 3(1112)
-ಳಿಲ್ಲದೆ ಪ್ರಾಣ ಬಿಟ್ಟವರೆಷ್ಟೋ!
ಬಾಳಿದು ವ್ಯರ್ಥವೆಂದವರೆಷ್ಟೋ! (ಕಾ)
-ಳಿಕಾ ಪೂಜೆ ಮಾಡಿದವರೆಷ್ಟೋ!
ಅದೂ ವಿಫಲವಾದವರೆಷ್ಟೋ! (ಬ)
-ಳಿಕ ವಿಚಾರ ಗೈದವರೆಷ್ಟೋ!
ದರ್ಶನಾರ್ಥ ತಿಳಿದವರೆಷ್ಟೋ! (ಭ)
-ವ ರೋಗ ಗುಣವಾದವರೆಷ್ಟೋ! (ತೆ)
-ರೆ ಮರೆಯಾಗುಳಿದವರೆಷ್ಟೋ! (ಎ)
-ಷ್ಟೋ? ನಿರಂಜನಾದಿತ್ಯನಂತೆಷ್ಟೋ?!!!
ಆಳಿದವರು ಅಳಿಯುವರು! (ಅ) 3(1304)
-ಳಿದವರು ಎದ್ದು ಆಳುವರು!
ದತ್ತನಿಷ್ಟ ಬಲ್ಲವರು ಯಾರು?
ವನವಾಸಕ್ಕಾಗಿ ಹೋಗುವರು! (ತಿ)
-ರುಗಿ ಬಂದು ಊರು ಸೇರುವರು!
ಅಪ್ಪನಾಜ್ಞೆ ಮೀರುವವರಾರು? (ಬಾ)
-ಳಿ, ಬಳಲಿ, ಬರಡಾಗುವರು! (ಆ)
-ಯುಷ್ಯ ವ್ಯರ್ಥವಾಯಿತೆನ್ನುವರು!
ವರ ಗುರು ಬೋಧೆ ಕೇಳುವರು! (ಗು)
-ರು ನಿರಂಜನಾದಿತ್ಯಾಗುವರು!!!
ಆಳಿದವರು ಬಾಳಿಲ್ಲ! (ಬಾ) 6(3302)
-ಳಿದವರಾರೂ ಆಳಿಲ್ಲ!
ದಬ್ಬಾಳಿಕೆಯೇ ಎಲ್ಲೆಲ್ಲಾ!
ವಸ್ತ್ರಾನ್ನಕ್ಕೆ ಗತಿಯಿಲ್ಲ!
ರುಜುಮಾರ್ಗ ಬಿಟ್ಟರೆಲ್ಲಾ!
ಬಾಳಿಂತಾದ್ರೆ ಸುಖವಿಲ್ಲ! (ಉ)
-ಳಿ ಗಾಲ ಸ್ವಾತಂತ್ರಕ್ಕಿಲ್ಲ (ಬ)
-ಲ್ಲ ನಿರಂಜನಾದಿತ್ಯೆಲ್ಲಾ!!!
ಆಳಿನ ಗೋಳಾಳುವವ ಕೇಳದಿದ್ದರನ್ಯಾಯ! (ಕೂ) 6(4270)
-ಳಿಗೂ ಗತಿಯಿಲ್ಲದಂತಾದಾಗೆಲ್ಲಿಂದ ಕಂದಾಯ?
ನಶಿಸದಂತೆ ನೋಡಿಕೊಳ್ಳಬೇಕವನಾದಾಯ!
ಗೋವು ಸಂರಕ್ಷಣೆಗೆ ಕೊಡಬೇಕೆಲ್ಲಾ ಸಹಾಯ! (ಹಾ)
-ಳಾಸರವುಗಳು ಹೇಗಾಗುವುದು ವ್ಯವಸಾಯ? (ಉ)
-ಳುವ ಕೆಲಸಕ್ಕವುಗಳದ್ದೇ ಪ್ರಥಮಾಧ್ಯಾಯ!
ವಸನ, ಅಶನಕ್ಕೆ ಬೇಕ್ಸರಳ ಸಂಪ್ರದಾಯ! (ಅ)
-ವರಿವರನುಕರಣಾ ಜೀವನ ದುಃಖಮಯ!
ಕೇಶವನ ದಾಸ ದಾಟಬೇಕು ವಿಜ್ಞಾನಮಯ! (ಒ)
-ಳ, ಹೊರಗಿನ ಕೊಳೆ ತೊಳೆಯಲ್ಕಿದೇ ಸಮಯ!
ದಿನಕರನಂತಾಗಬೇಕೆಲ್ಲರೂ ಲೋಕಪ್ರಿಯ! (ಎ)
-ದ್ದರೂ, ಕೂತರೂ ಅವನ ಹಾಗಿರಬೇಕು ಧ್ಯೇಯ! (ಧ)
-ರಣಿಯಮರರಾಗುವೆವು ನಾವಾಗ ನಿಶ್ಚಯ!
ನಾಯಾನ್ಯಾಯ ತೀರ್ಮಾನಕ್ಕಾಗ ಕೇಳೋಣ ಹರಿದು!
ಯಮನಯ್ಯ ನಿರಂಜನಾದಿತ್ಯಾನಂದ ಧೊರೆಯ!!!
ಆಳಿರೋ ನಿನ್ನ ನೀನಾಳಿರೋ! (ಹೇ) 4(1583)
-ಳಿ, ಕೇಳಿ ಬರಿದಾಗದಿರೋ!
ರೋಗಿಯಾಗದೆಚ್ಚರಾಗಿರೋ!
ನಿತ್ಯ ನೇಮ ನಿಷ್ಠೆಯಿಂದಿರೋ! (ಚಿ)
-ನ್ನದೊಡವೆಯಾಸೆ ಬಿಟ್ಟರೋ!
ನೀಲಮೇಘಶ್ಯಾಮನಾಗಿರೋ!
ನಾಮ, ರೂಪಾತೀತನಾಗಿರೋ! (ಬಾ)
-ಳಿ ಬ್ರಹ್ಮಾನಂದಾತ್ಮನಾಗಿರೋ! (ಇ)
-ರೋ ನಿರಂಜನಾದಿತ್ಯಾಗಿರೋ!!!
ಆಳುವ ಹುಚ್ಚಿಗಿಂತ ಗೋಳ್ಹಕೊಳ್ವ ಹುಚ್ಚು ಹೆಚ್ಚು! (ಆ) 6(4162)
ಳುಗಳ ಪ್ರಾಣ ಹಿಂಡಿ ದುಂಡಾವರ್ತಿಯಾಟ ಹೆಚ್ಚು! (ಭ)
-ವಸಾಗರದಲ್ಲದ್ದುವ ಜಲಕ್ರೀಡೆಯೇ ಹೆಚ್ಚು!
ಹುಚ್ಚರಾಸ್ಪತ್ರೆಗಳ ಶಂಖುಸ್ಥಾಪನೆಯೇ ಹೆಚ್ಚು! (ಬೆ)
-ಚ್ಚಿ, ಚುಚ್ಚಿ, ಕಚ್ಚಾಡಿ ಹೊಡೆಸಿಕೊಳ್ಳುವುದೇ ಹೆಚ್ಚು! (ಆ)
-ಗಿಂದೇಗಿನವರೆಗೂ ಸತ್ತ ಅನಾಥರೇ ಹೆಚ್ಚು!
ತಮ್ಮ, ತಮ್ಮೈಹಿಕಾನಂದಾಕಾಂಕ್ಷೀ ಜನರೇ ಹೆಚ್ಚು!
ಗೋವು ಹತ್ಯೆ ಪ್ರತಿದಿನ ಎಲ್ಲೆಡೆಯಲ್ಲೂ ಹೆಚ್ಚು! (ಗೋ)
-ಳ್ಹದಿಲ್ಲಿಂದನ್ಯ ದೇಶಗಳ್ಗಾಗುವ ರಫ್ತು ಹೆಚ್ಚು!
ಕೊಲೆ ಸುಲಿಗೆಗಳಿಗಾಶ್ರಯದಾತರೇ ಹೆಚ್ಚು! (ಆ)
-ಳ್ವವರೇ ಹೀಗಾದ್ರೆ ಪ್ರಜೆಗಳ ಬಾಳಿಗೆ ಕಿಚ್ಚು!
ಹುಸಿ ಮಾಯೆಗೆ ಕಟ್ಟು ಬಿದ್ದೆಲ್ಲಕ್ಕೂ ಹೊಟ್ಟೆಕಿಚ್ಚು! (ಬಿ)
-ಚ್ಚು ಮನಸ್ಸಿನಾತ್ಮ ಧ್ಯಾನದಿಂದ ತಣ್ಣಗಾ ಕಿಚ್ಚು!
ಹೆದರದೆಡರುಗಳಿಗೆ ಜಯಜ್ಯೋತಿ ಹಚ್ಚು! (ಹ)
-ಚ್ಚು, ನಿರಂಜನಾದಿತ್ಯೋದಯದಲ್ಲಿದನ್ನು ಹಚ್ಚು!!!
ಆಳುವವರೀವರು ಭರವಸೆ! (ಬಾ) 6(3605)
-ಳುವವರಿಗಾಗಿಹುದು ನಿರಾಸೆ!
ವರ್ತಕನೀವುದು ಹರಕು ದೋಸೆ! (ಅ)
-ವನ ಪೆಟ್ಟಿಗೆ ತುಂಬಾ ಬಿಟ್ಟಿ ಪೈಸೆ!
ರೀತಿ, ನೀತಿ, ಹೀಗಾಗಿ ಶನಿದೆಸೆ!
ವಸನಾಶನವಿಲ್ಲದೆ ದುರ್ದೆಸೆ! (ಕ)
-ರುಣೆಯೆನ್ನುವುದು ಬರೀ ಕನಸೇ!
ಭಗವಂತನಿಗಿದೊಂದು ತಮಾಷೆ! (ಪ)
-ರಮಾರ್ಥ ಜೀವನಕ್ಕಾಗಿದೆ ಹಿಂಸೆ!
ವಚನಭ್ರಷ್ಟನಾಗ್ಬೇಡ್ವೋ ಅರಸೇ! (ಆ)
-ಸೆ, ನಿರಂಜನಾದಿತ್ಯಗೆ ನಿರಾಸೆ!!!
ಆವ ಜನ್ಮದ ಸುಕೃತ ಫಲವಿದೋ! 6(3528)
ವರ ಗುರು ಮಹಿಮೇಯರಿವಾಗದೋ!
ಜನ್ಮವೆಷ್ಟವನಿಗಾಗಿ ಕಳೆದುದೋ!
(ತ)-ನ್ಮಯತೆಯೆಂದನುಗ್ರಹವಾಗುವುದೋ!
ದತ್ತನ ಆಜ್ಞೆ ಎಂದಿಗೆ ಬರುವುದೋ!
ಸುಖ, ಶಾಂತಿ ಅದರಿಂದಾಗ್ಬೇಕಿಹುದು!
ಕೃಪೆಗಾಗಿ ಪ್ರಾರ್ಥಿಸುತ್ತಿರುತ್ತಿಹುದು!
ತಪ್ಪುಗಳಿಗೆ ಕ್ಷಮೆ ಬೇಡುತ್ತಿಹುದು!
ಒನೆ ಲಿನೆ ಮಿಸಿ
ಲಭ್ಯಕ್ಕೆ ಕಾಲ ಕಾಯಬೇಕಾಗಿಹುದು!
ವಿಕಲ್ಪ, ಸಂಕಲ್ಪವಿಲ್ಲದಂತಿಹುದು!
ದೋಷ ನಿರಂಜನಾದಿತ್ಯಗೇನಿಹುದು???
ಆವನ? ಈವನ! ತಂದೆಯಾದವನ! 4(2254)
ವರಭಕ್ತಿಯಿಂದ ಪತಿತ ಪಾವನ! (ಅ)
-ನವರತವನದಾದರೆ ದರ್ಶನ!
ಈಸಬಹುದೀ ಸಂಸಾರ ಜೀವನ!
ವರ ಗುರುದತ್ತನೆನಿಸಿದವನ!
ನರಕ ಯಾತನೆ ತಪ್ಪಿಸುವವನ!
ತಂಗಾಳಿ ಸಮಾನ ತಂಪನೀಯುವನ! (ಎ)
-ದೆಒಳಗೆಲ್ಲರಲ್ಲಿರ್ಪ ಚೇತನನ!
ಯಾತ್ರೆಯಿದಕಾಗ್ಯಾಗಬೇಕೆಂಬವನ!
ದರಿದ್ರಗೂ ಸುಲಭವಿದೆಂಬವನ!
ವಸುಧೇನಪ್ಪನಿನಿತೆನ್ನುವನ!
ನಳಿನಸಖ ನಿರಂಜನಾದಿತ್ಯನ!!!
ಆವಾಹನೆ ವಿಸರ್ಜನೆಗಳನಿತ್ಯ! 2(792)
ವಾಸನಾನಾಶಕದು ಅತಿ ಅಗತ್ಯ!
ಹರಿ ರೂಪಸಿದ್ಧಿಗೀಅಭ್ಯಾಸಗತ್ಯ!
ನೆನೆನೆನೆಯುತದಾಗುವುದು ಸತ್ಯ!
ವಿಷಕ್ಕಮೃತೌಷಧಿಯೆಂಬುದು ಸತ್ಯ!
ಸರ್ವನಾಮ, ರೂಪೈಕ್ಯಜ್ಞಾನ ಅಗತ್ಯ! (ಆ)
-ರ್ಜನೆಯ ಉದ್ಯೋಗಗಳಿದಕಗತ್ಯ!
ನೆರೆ ಗುರುಕರಣೆ ಅತ್ಯಂತಗತ್ಯ!
‘ಗತಿ ನೀನೆಂಬ’ನನ್ಯ ಭಕ್ತ್ಯತ್ಯಗತ್ಯ! (ಒ)
-ಳಮುಖಿ ಸುಖಿಯಾಗ್ವುದಿದರಿಂ ಸತ್ಯ!
ನಿಶ್ಯಾತ್ಮಾರಾಮ ಸುಖಕೀ ಮುಖಗತ್ಯ! (ಸ)
-ತ್ಯ ನಿರಂಜನಾದಿತ್ಯಗೀ ಮುಖಗತ್ಯ!!!
ಆವಾಹನೆ ವಿಸರ್ಜನೆಯ ದೇವರಾಟದ ಗೊಂಬೆ! 6(4133)
ವಾಸನೆಗಳಿಂದ ತುಂಬಿಸಲ್ಪಟ್ಟ ಅದೊಂದು ಗೊಂಬೆ!
ಹಗಲಿರುಳು ಕುಣಿಸಿದಂತೆ ಕುಣಿಯುವ ಗೊಂಬೆ!
ನೆನೆವವರನ್ನು ನೆನೆನೆನೆದಳಿಸುವ ಗೊಂಬೆ!
ವಿಕಲ್ಪ, ಸಂಕಲ್ಪಗಳ ಹೆಚ್ಚಿಸುವದೊಂದು ಗೊಂಬೆ!
ಸತಿ, ಪತಿಯರ ಮತಿಗೆಡಿಪ ಮೋಸದ ಗೊಂಬೆ! (ದು)
-ರ್ಜನರ ದುಷ್ಕುತ್ಯಗಳಿಗಿದೊಂದು ಸಾಕ್ಷಿಯ ಗೊಂಬೆ! (ಮ)
-ನೆ, ಮನೆ; ಬೀದಿ, ಬೀದಿ; ಗಲ್ಲಿ, ಗಲ್ಲಿ; ಅಲೆವ ಗೊಂಬೆ!
ಯಮ ನಿಯಮಾದ್ಯಷ್ಟಾಂಗ ಯೊಂಗದಿಂದ ದೇವರೆಂಬೆ!
ದೇವರಿಂತಾದವಗೆ ಜರಾಜನ್ಮ ದುಃಖವಿಲ್ಲೆಂಬೆ!
ವರ ಗುರು ರೂಪ ಮೂರುಲೋಕಗಳಿಗಿವನೆಂಬೆ!
ರಾಗ, ದ್ವೇಷರಹಿತನಾದ ವಿಶುದ್ಧನಿವನೆಂಬೆ! (ದಿ)
-ಟಾವನ್ನು ಹೇಳಿದರಾರೂ ಸಿಟ್ಟು ಮಾಡಬೇಡಿರೆಂಬೆ!
ದರ್ಶನಕ್ಕಾಟದ ಗೊಂಬೆಗೇಕೆ ಕಪ್ಪ, ಕಾಣಿಕೆಂಬೆ!
ಗೊಂಬೆಯಿದರಿಂದಾರಿಗೆಂದೇನಾಗಿದೆ ಹೇಳಿರೆಂಬೆ!
ಬೆಕ್ಕೆ ಸುಟ್ಟ ನಿರಂಜನಾದಿತ್ಯ ದತ್ತ ದೇವರೆಂಬೆ!!!
ಆವಾಹನೆ, ವಿಸರ್ಜನೆ, ಮನತನ! 6(3656)
ವಾಙ್ಮಾನಕೆ ಪರಮಾತ್ಮನೊಡೆತನ!
ಹಗಲಿರುಳ್ಮಾಡ್ಬೇಕವನ ಚಿಂತನ!
ನೆನಪು ನಶ್ವರದ್ದಾದರೆ ಪತನ!
ವಿವೇಕ, ವೈರಾಗ್ಯ, ಪರಮಾರ್ಥ ಸಾಧನ!
ಸತ್ತು, ಹುಟ್ಟುವುದು ಸಂಸಾರ ಬಂಧನ! (ನಿ)
-ರ್ಜನ ಪ್ರದೇಶದಲ್ಧ್ಯಾನಿಸ್ಬೇಕವನ! (ಮ)
-ನೆ, ಮಠಗಳಲ್ಲಿ ಅಶಾಂತಿ ಜೀವನ!
ಮನೋವೃತ್ಯಳಿದ್ಮೇಲೆ ಶಿವ ದರ್ಶನ! (ಮ)
-ನಶ್ಯಾಂತಿಗಾಗಿ ಸಾಕಾರವೊಂದು ವಿಧಾನ!
ತತ್ವಜ್ಞ ನೋಡುವನು ತನ್ನಲ್ಲವನ! (ಮ)
-ನಸ್ಸಾನಲ್ಲೆಂದ ನಿರಂಜನಾದಿತ್ಯನ!!!
ಆಶಾ ನಾಶವೇ ಈಶತ್ವ! 6(3588)
ಶಾರೀರಿಕವೇ ಜೀವತ್ವ!
ನಾಶವಾಗದ್ದೇ ಬ್ರಹ್ಮತ್ವ! (ನಾ)
-ಶವಾಗುವುದೇ ನರತ್ವ!
ವೇದಾಂತವೇ ನಿಜತತ್ವ!
ಈರೈದಿಂದ್ರ್ಯಾತೀತಾ ತತ್ವ!
ಶಾಕ್ತಾ ಶಕ್ತರೆಲ್ಲಾ ತತ್ವ! (ತ)
-ತ್ವ ನಿರಂಜನಾದಿತ್ಯತ್ವ!!!
ಆಶಾ ಪೂರ್ತಿಯಾಯ್ತೆಂದವರಾರೂ ಇಲ್ಲ! 6(3613)
ಶಾಸ್ತ್ರಜ್ಞರೂ ಅತೃಪ್ತಿಯಿಂದ ಸತ್ತ್ರೆಲ್ಲ!
ಪೂರ್ಣಾಯುಗಳಿಗುಳಿವಾಸೆ ತಪ್ಪಿಲ್ಲ! (ಕೀ)
-ರ್ತಿಗಾಗ್ಯೇನೇನೋ ಮಾಡಿದವರೇ ಎಲ್ಲಾ!
ಯಾಗಗಳಿಂದ್ಲೂ ಮಮಕಾರ ಹೋಗ್ಲಿಲ್ಲ! (ಆ)
ಯ್ತೆಂದು ಹಿಗ್ಗಿ, ಕುಗ್ಗಿಹೋದವರೇ ಎಲ್ಲಾ!
ದರ್ಶನವಾಯ್ತೆಂದವ್ರು ಸ್ವಾರ್ಥಿಗ್ಳಾದ್ರೆಲ್ಲಾ!
ವರ ಗುರುವಿನಂತಾದವ್ರ ಹೆಸ್ರಿಲ್ಲ!
ರಾಮದಾಸ ಹನುಮಂತಾದವ್ರಿಲ್ಲ!
ರೂಪಕ್ಕಂಟಿಕೊಂಡು ಕಾಣದೇ ಬಿದ್ದ್ರೆಲ್ಲಾ!
ಇಹ, ಪರಾತೀತಾತ್ಮ ಅತೃಪ್ತನಲ್ಲ! (ಪು)
-ಲ್ಲ ನಿರಂಜನಾದಿತ್ಯಗೇನೂ ಬೇಕಿಲ್ಲ!!!
ಆಶಾತುರನಿಗಿಲ್ಲಾರಾಮ! (ಪಿ) 4(1489)
-ಶಾಚಿ ಮನಕಿರ್ಪುದಾ ಕಾಮ!
ತುಕಾರಾಮ ಸತತಾರಾಮ!
ರಕ್ಕಸ ರಾವಣಗಾ ಕಾಮ!
ನಿರ್ಮಲಾಂತಃಕರಣಾ ರಾಮ! (ಭೋ)
-ಗಿಯ ಜೀವನವೆಲ್ಲಾ ಕಾಮ! (ಉ)
-ಲ್ಲಾಸಿ ತಾಪಸಿ ಸದಾರಾಮ!
ರಾಗ, ದ್ವೇಷಗಳೆಲ್ಲಾ ಕಾಮ! (ರಾ)
-ಮ ನಿರಂಜನಾದಿತ್ಯಾರಾಮ!!!
ಆಶಾತುರರೆಲ್ಲಾ ಬಂದು ಕಾದಿರ್ತಾರಾ? 6(4301)
ಶಾಸ್ತ್ರಿಗಳೆಲ್ಲಾ ಶಾಸ್ತ್ರಾರ್ಥರಿತಿರ್ತಾರಾ?
ತುರಿಯಾಶ್ರಮದವರೆಲ್ಲಾ ಮುಕ್ತರಾ?
ರಘುರಾಮನ ಭಕ್ತರೆಲ್ಲಾ ಕಂಡರಾ? (ಮ)
-ರೆಯದಿರಯ್ಯಾ! ಎಲ್ಲಾ ಪೂರ್ವ ಸಂಸ್ಕಾರ! (ಉ)
-ಲ್ಲಾಸದಿಂದ ಸರಿಪಡಿಸೀಗಾಚಾರ!
ಬಂಧು, ಬಲಗ, ನಮಗೆಲ್ಲಾ ಶಂಕರ!
ದುಡಿವವಗಾಗುವುದು ಸಾಕ್ಸಾತ್ಕಾರ!
ಕಾತುರಾತುರದಿಂದಾಗ ಕಾಮ ಹರ!
ದಿವ್ಯ ಜ್ಞಾನಾನಂದ ಯೋಗೀಶ ಸುಂದರ! (ಕ)
-ರ್ತಾಕರ್ತ ಭಾವವಿರುವವ ಕಿಂಕರ! (ರಾ)
-ರಾಜಿಪ ನಿರಂಜನಾದಿತ್ಯ ಶಂಕರ!!!
ಆಶಾನಾಶಕ್ಕೆ ನಿರಾಶಾನುಗ್ರಹ! 4(1423)
ಶಾಶ್ವತಾನಂದಕ್ಕಿದನುಗ್ರಹ!
ನಾಮಸ್ಮರಣೆಗಿದೊಂದನುಗ್ರಹ! (ಪಾ)
-ಶ ಹರಿಸುವ ಪರಮಾನುಗ್ರಹ! (ಬೆ)
-ಕ್ಕೆಗೀಡಾಗದಾನಂದಿಪನುಗ್ರಹ!
ನಿನ್ನುನ್ನತಿಗಿದವನನುಗ್ರಹ! (ವಿ)
-ರಾಗಿಯಾಗಲಿದವನನುಗ್ರಹ!
ಶಾಪವೆಂತಾಗುವುದೀ ಅನುಗ್ರಹ? (ತ)
-ನು ಭಾವ ಸಾಯಲಿಕ್ಕೀ ಅನುಗ್ರಹ! (ಉ)
-ಗ್ರ ನರಸಿಂಹಾವತಾರನುಗ್ರಹ!
ಹರಿ ನಿರಂಜನಾದಿತ್ಯಾನುಗ್ರಹ!!!
ಆಶಾನಾಶವಾಗದೆ ಶಾಂತಿ ಇಲ್ಲ! 4(2470)
ಶಾರೀರಿಕ ಸುಖ ಶಾಶ್ವತವಲ್ಲ!
ನಾಮಜಪೈಹಿಕಸುಖಕ್ಕೇನಲ್ಲ! (ವ)
-ಶವಾಗಬೇಕು ಇಂದ್ರಿಯಗಳೆಲ್ಲ! (ಭ)
-ವಾಬ್ಧಿ ದಾಟ್ಲಕ್ಕೆ ಬೇರೆ ದಾರಿಯಿಲ್ಲ!
ಗಣಪತಿ ನಿನ್ನಿಂದ ದೂರವಿಲ್ಲ! (ಕಂ)
-ದೆರೆದು ನೋಡ್ಬೇಕುಪನಿಷತ್ತೆಲ್ಲ! (ಅ)
-ಶಾಂತಚಿತ್ತನಿಗೆ ಸಾಯುಜ್ಯವಿಲ್ಲ!
ತಿಳಿದಿದ ಸಾಧಿಸ್ಬೇಕು ನೀವೆಲ್ಲ!
ಇನ್ನೇನೂ ಹೇಳಲಿಕ್ಕೆ ಬಾಯಿ ಇಲ್ಲ! (ಪು)
-ಲ್ಲ ನಿರಂಜನಾದಿತ್ಯಾನಂದವೆಲ್ಲ!!!
ಆಶಾಪಾಶ ಹರಿದವಗಿಲ್ಲ ಭಯ! 6(4195)
ಶಾಸ್ತ್ರ ಪುರಾಣಗಳೆಲ್ಲಾ ಆಶಾಮಯ!
ಪಾರಮಾರ್ಥದಿಂದ ಭವ ಭವ ಜಯ!
ಶರಣನಿಗೆ ಬೇಕಿಲ್ಲ ಲೋಕ ತ್ರಯ!
ಹರಿ, ಹರಾದಿಗಳವನಲ್ಲಿ ಲಯ!
ರಿದ್ಧಿ, ಸಿದ್ಧಿಗಳಲ್ಲ ಅವನ ಧ್ಯೇಯ!
ದಶೇಂದ್ರಿಯ ನಿಗ್ರಹದಿಂದಭುದಯ!
ವರಗುರು ಸೇವೆಗೆ ಅವನ ಕಾಯ! (ತ್ಯಾ)
-ಗಿ ಆಬಾಲ ವೃದ್ಧಾದಿಗಳ್ಗೆಲ್ಲಾ ಪ್ರಿಯ! (ಎ)
-ಲ್ಲರಿಗಾಗಿರುವುದವನ ಸಮಯ!
ಭಗವಂತನಿಗಾತ ಪ್ರಿಯ ತನಯ! (ಪ್ರಿ)
-ಯ ನಿರಂಜನಾದಿತ್ಯ ಸದಾ ತನ್ಮಯ!!!
ಆಶೀರ್ವಾದ ಪಡೆಯುವ ಬಗೆ ಹೇಗೆ? (ಫಾ) 6(4034)
-ಶೀ ಆಜ್ಞೆ ಕೊಟ್ಟಾಶೀರ್ವದಿಸೆಂದ್ರೆ ಹೇಗೆ? (ಗ)
-ರ್ವಾದಿಗಳ ಬಿಟ್ಟು ಪೂರ್ಣ ಶರಣಾಗೆ!
ದರಿದ್ರನಾದ್ರೂ ಸದಾಚಾರಿ ತಾನಾಗೆ!
ಪತಿಸೇವೆ ನಿಷ್ಕಳಂಕವಾಗಿ ಆಗೆ! (ನ)
-ಡೆಯಂತೆ ನುಡಿ ಸತತವಿರಲಾಗೆ!
ಯುಕ್ತಿ ಭಕ್ತಿಯಲ್ಲಿ ಬೆರೆಸದಿರ್ಲಾಗೆ!
ವರ ಗುರುವೇ ದೇವರೆಂದರಿವಾಗೆ!
ಬಲವಂತವಿಲ್ಲದೇ ಸೇವೆಯೆಸಗೆ!
ಗೆಳೆಯ ನೆನಿಸಿ ವಂಚಿಸದಿರ್ಲಾಗೆ!
ಹೇರಳವಿದ್ದು ಉದಾರಿ ತಾನಾಗೆ!
ಗೆಳೆಯ ನಿರಂಜನಾದಿತ್ಯನಂತಾಗೆ!!!
ಆಸಕ್ತಿ ಇಲ್ಲದ ಶಕ್ತಿ ವ್ಯರ್ಥ! 6(3325)
ಸಕ್ತಿ ಶಕ್ತಿಯಿಲ್ಲದಿದ್ರೆ ವ್ಯರ್ಥ! (ಭ)
-ಕ್ತಿಯಿಂದ ಸಕಲ ಪುರುಷಾರ್ಥ!
ಇರ್ಬಾರದು ಭಕ್ತನಿಗೆ ಸ್ವಾರ್ಥ! (ಎ)
-ಲ್ಲರಲ್ಲಿಹ ಶ್ರೀರಾಮ ಸಮರ್ಥ!
ದರ್ಶನಾನಂದಪಡೆದ ಪಾರ್ಥ!
ಶಕ್ತಿ ದುರುಪಯೋಗಿಪ ಧೂರ್ತ! (ಭು)
-ಕ್ತಿ ಸುಖವೊಂದೇ ಅವನಿಷ್ಟಾರ್ಥ!
ವ್ಯವಹಾರವನದ್ದೆಲ್ಲಾ ಸ್ವಾರ್ಥ!
(ಸಾ)-ರ್ಥಕ ನಿರಂಜನಾದಿತ್ಯಾತ್ಮಾರ್ಥ!!!
ಆಸಕ್ತಿಯಿದ್ದರೂ ಆತಂಕವೇಕಯ್ಯಾ? 1(342)
ಸತತ ನಿನ್ನದೇ ಚಿಂತೆ ನನಗಯ್ಯಾ! (ವ್ಯ)
-ಕ್ತಿ ನಿನ್ನದೇ ಕಣ್ಣ ಮುಂದಿರುವುದಯ್ಯಾ!
ಯಿನಿತಾದರೂ ವೃತ್ತಿಯಡಗಿಲ್ಲಯ್ಯಾ! (ಎ)
-ದ್ದ ಹೊತ್ತು ಸರಿಯಾಗಿತ್ತಲ್ಲವೇನಯ್ಯಾ?
ರೂಢಿಯಂತೆಲ್ಲಕ್ಕೂ ಸಿದ್ಧವಾಗಿತ್ತಯ್ಯಾ!
ಆದರೆಲ್ಲವೂ ಹಿಂದು ಮುಂದಾಯ್ತಯ್ಯಾ!
ತಂದಿರಿಸುವರಾಹಾರೆನ್ನ ಮುಂದಯ್ಯಾ!
ಕನಿಕರ ನಿನ್ನದನುಪಮವಯ್ಯಾ!
ವೇದ್ಯ ನಿನಗಾನೇನ ಅರುಹಲಯ್ಯಾ?
ಕಮಲಸುಖ ನೀನಿನ್ನೂ ಬಂದಿಲ್ಲಯ್ಯಾ! (ಅ)
-ಯ್ಯಾ! ನಿರಂಜನಾದಿತ್ಯನಿಷ್ಟವಿದಯ್ಯಾ!!!
ಆಸೆ ಬಿಟ್ಟವ ದ್ವೇಷ ಬಿಟ್ಟಾನು! (ಪೈ) 4(1703)
-ಸೆ ಬಚ್ಚಿಟ್ಟವ ಮತಿ ಕೆಟ್ಟಾನು! (ನಂ)
-ಬಿಗೆ ಇಟ್ಟವ ಸುಖ ಪಟ್ಟಾನು! (ಕೊ)
-ಟ್ಟಣವಿಟ್ಟವ ಅಕ್ಕಿ ಕೊಟ್ಟಾನು!
ವಸ್ತ್ರ ಕೊಟ್ಟವ ರೇಶ್ಮೆ ಉಟ್ಟಾನು! (ಉ)
-ದ್ವೇಗ ಸುಟ್ಟವ ಭೋಗ ಬಿಟ್ಟಾನು! (ವಿ)
-ಷವನ್ನಿಟ್ಟವ ಕೆಟ್ಟು ಹುಟ್ಯಾನು!
ಚಿತ್ತಗೊಟ್ಟುವ ಬುತ್ತಿ ಕಟ್ಯಾನು! (ಕೆ)
-ಟ್ಟಾಳ್ಗಳಿಟ್ಟವ ಕಷ್ಟ ಪಟ್ಟಾನು! (ಮ)
-ನು ನಿರಂಜನಾದಿತ್ಯೋತ್ಕೃಷ್ಟಾನು!!!
ಆಸೆ ಬಿಟ್ಟೀಶನಾದ ಮೇಲಿನ್ನೇನು? (ನೊ) 4(2305)
-ಸೆ ಮೇಲ್ಪುಟ್ಟುದವ ಸಾಮಾನ್ಯನೇನು?
ಬಿಸಿಲಂಗಿಗ್ಬಿಸಿಲ ಭಯವೇನು? (ಮು)
-ಟ್ಟೀಶ್ವರನ ಮೈಲಿಗೆನ್ಬಹುದೇನು? (ವ)
-ಶವಾದ ಮೇಲಿಂದ್ರಿಯ ಜೀವನೇನು?
ನಾಮ, ರೂಪಾತೀತಾತ್ಮನಲ್ಲವೇನು?
ದರ್ಶನವಾದ್ಮೇಲ್ದುಃಖವಿದೆಯೇನು? (ಉ)
-ಮೇಶ, ರಮೇಶ ಗುರುವಲ್ಲವೇನು? (ಕ)
-ಲಿಮಲವಿಲ್ಲದಾತವನಲ್ವೇನು? (ಇ)
-ನ್ನೇನೆಂದು ಬಣ್ಣಿಸಲವನ ನಾನು? (ತಾ)
-ನು ನಿರಂಜನಾದಿತ್ಯನಾಗಿಹನು!!!
ಆಸೆಗಂತ್ಯವಿದೆಯೇನಯ್ಯಾ? 4(2147)
ಸೆರೆ ಜೀವಗಿದರಿಂದಯ್ಯಾ!
ಗಂಗಾಧರನ ಭಜಿಸಯ್ಯಾ!
ತ್ಯಜಿಸೆಲ್ಲಾಸೆಗಳನ್ನಯ್ಯಾ!
ವಿಚಾರಾತ್ಮನದ್ದು ಮಾಡಯ್ಯಾ!
ದೆವ್ವಗಳೇನೂ ಮಾಡವಯ್ಯಾ (ಕಾ)
-ಯೇಚ್ಛೆಯಿಂದೆಲ್ಲಾ ಕಷ್ಟವಯ್ಯಾ!
ನಮಿಸು ಗುರುಪಾದಕ್ಕಯ್ಯಾ! (ಅ)
-ಯ್ಯಾ! ನಿರಂಜನಾದಿತ್ಯಾಪ್ತಯ್ಯಾ!!!
ಆಸೆಗಳಿಲ್ಲದ್ದು ವಿಮಲ! 6(3788)
ಸೆಜ್ಜೆವನೆಯೊಲ್ಲದ್ವಿಮಲ!
ಗರ್ವಾತೀತವಾದದ್ದ್ವಿಮಲ! (ನಾ)
-ಳಿನ ಚಿಂತೆಯಿಲ್ಲದ್ದ್ವಿಮಲ! (ನ)
-ಲ್ಲ, ನಲ್ಲೆ ಭೇದೊಲ್ಲದ್ದ್ವಿಮಲ! (ಇ)
-ದ್ದು ಇಲ್ಲದಂತಿದ್ದದ್ವಿಮಲಅ!
ವಿಕಲ್ಪ ಅಳಿದದ್ದ್ವಿಮಲ!
ಮಹಾ ವಾಕ್ಯ ಲಕ್ಷ್ಯದ್ದ್ವಿಮಲ! (ಬಾ)
-ನಿರಂಜನಾದಿತ್ಯಮಾಲ!!
ಆಸೆಗಳೇನಿವೆ ನನಗೆ? 5(2844)
ಸೆಕೆ, ಚಳಿಯೊಂದೇ ನನಗೆ!
ಗತಿ ಗುರುದತ್ತ ನನಗೆ! (ಹ)
-ಳೇ ದೇಹವೀಗಿದೆ ನನಗೆ!
ನಿತ್ಯಪೂಜೆ, ಭಿಕ್ಷೆ ನನಗೆ! (ಸಾ)
-ವೆನಗಿಲ್ಲ ನಿಜ ನನಗೆ!
ನಶ್ವರವೀ ಮಾಯೆ ನನಗೆ!
ನರನ ಸಾರಥ್ಯ ನನಗೆ! (ಹೀ)
-ಗೆ ನಿರಂಜನಾದಿತ್ಯನಾಗೆ!!!
ಆಸೆಯಾದಾಗ ದೋಸೆಯಿಲ್ಲ! (ದೋ) 6(4006)
-ಸೆ ಇರುವಾಗ ಆಸೆ ಇಲ್ಲ!
ಯಾಕ್ತಾಗಿದೆ ಹೀಗೆ ಗೊತ್ತಿಲ್ಲ!
ದಾನಿಯಲ್ಲಿ ಲೋಭವೇನಿಲ್ಲ!
ಗತಿಗೇಡು ದೀನನಿಗೆಲ್ಲಾ!
ದೋಷವಿವನೆಣಿಸ್ಬಾರ್ದಲ್ಲಾ!
ಸೆರೆ ಸಂಸಾರದ್ದು ತಪ್ಲಿಲ್ಲ!
ಇದಕ್ಕಾಸೆ ಕಾರಣವೆಲ್ಲಾ! (ಬ)
-ಲ್ಲ ನಿರಂಜನಾದಿತ್ಯನೆಲ್ಲ!!!
ಆಸೆಯಿಲ್ಲ, ವೇಷವಿಲ್ಲ, ದೋಷವಿಲ್ಲ! 5(2882)
ಸೆರೆ, ಸೇಂದಿ ಆತ ಕುಡಿಯುವುದಿಲ್ಲ! (ಬಾ)
-ಯಿಯಿಂದವನೇನನ್ನೂ ಹೇಳುವುದಿಲ್ಲ! (ಎ)
-ಲ್ಲರೊಡನಿದ್ದೂ ಲಿಪ್ತನವನಾಗಿಲ್ಲ!
ವೇದಿಕೆ ಹತ್ತಿ ಭಾಷಣ ಮಾಳ್ಪುದಿಲ್ಲ! (ಶೋ)
-ಷಣೆ ಆತ ಯಾರನ್ನೂ ಮಾಡುವುದಿಲ್ಲ!
ವಿಧಿ, ಹರಿ, ಹರ, ಭೇದವನಲ್ಲಿಲ್ಲ! (ಗು)
-ಲ್ಲನ್ನೆಬ್ಬಿಸಿ ಆತ ಕುಣಿಯುವುದಿಲ್ಲ!
ದೋಬಿಯಂತವನ ನಿತ್ಯ ಕರ್ಮವೆಲ್ಲ! (ವಿ)
-ಷವಿಟ್ಟಾರನ್ನೂ ಆತ ಕೊಲ್ಲುವುದಿಲ್ಲ!
ವಿಚಾರದಲ್ಲೇ ಅವನಾಸಕ್ತಿಯೆಲ್ಲ! (ಪು)
-ಲ್ಲ ನಿರಂಜನಾದಿತನ ರೀತಿದೆಲ್ಲ!!!
ಆಸೇ! ಸಾಕಾಗಿಲ್ಲವೇ ತಮಾಷೆ? 6(3959)
ಸೇರಿ ಗಂಡನ, ಮಾಡು ಶುಶ್ರೂಷೆ!
ಸಾಲ, ಸೋಲವಾದ್ರೂ ಹೊಯ್ತೇ ತೃಷೆ?
ಕಾರ್ಪಣ್ಯದಿಂದ ತಪ್ಪಿದೆ ಭಾಷೆ!
ಗಿಡ, ಮರಕ್ಕುಂಟೇ ಅಭಿಲಾಷೆ? (ಬ)
-ಲ್ಲವಳಾಗಿ ಆಗೀಗ ನಿರ್ದೋಷೆ!
ವೇಳೆ ಹಾಳ್ಮಾಡುತಿದೆ ಪರಿಷೆ!
ತಪ್ಪೊಪ್ಪಿ ಸ್ವೀಕರಿಸೀಗ ಘೋಷೆ!
ಮಾತೆಯಾಗಿ ಆಗ್ವಾರ್ದು ಕಿಲ್ಬಿಷೆ! (ದೋ)
-ಷೆ! ನಿರಂಜನಾದಿತ್ಯಗೆ ಕೊಡ್ಭಾಷೆ!!!
ಆಸ್ತಿಕ ಭಾವನಾ ಪುರಾತನಾ! (ನಾ) 3(1255)
-ಸ್ತಿಕತೆಗೀಶ್ವರನೇ ಕಾರಣಾ!
ಕರ್ಮಕ್ಕಿರದಾಯ್ತು ಸಂಭಾವನಾ!
ಭಾರಹೊತ್ತು ಸುಸ್ತಾಯ್ಯು ಜೀವನಾ!
ವರ ಗುರು ದೇವ ಸದಾ ಮೌನಾ!
ನಾರಾಯಣಗೇಕಿಲ್ಲ ಕರುಣಾ?
ಪುಣ್ಯ, ಪಾಪದಿಂದಾಯ್ತು ಜನನಾ! (ಪಾ)
-ರಾಗುವುದಕ್ಕಿನ್ನಾವ ಸಾಧನಾ?
“ತತ್ವಮಸಿ” ಸ್ಥಿತಿಯೇ ಪಾವನಾ! (ಘ)
-ನಾ, ನಿರಂಜನಾದಿತ್ಯ ಚಿಂತನಾ!!!
ಆಸ್ತಿಕನಾಗಿಲ್ಲ, ನಾಸ್ತಿಕನಲ್ಲ! 4(1959)
ಸ್ತಿಮಿತ ಬುದ್ಧಿಗಿನ್ನೂ ಬಂದಿಲ್ಲ!
ಕರ್ಮಕ್ಕೆ ಕರ್ತನ ಬೆಂಬಲವಿಲ್ಲ!
ನಾಮ, ರೂಪಗಳನ್ನೆನೂ ನಂಬಿಲ್ಲ! (ತ್ಯಾ)
-ಗಿಯಾದರೂ ಯೋಗ ಸಿದ್ಧಿಯಾಗಿಲ್ಲ! (ಅ)
-ಲ್ಲಸಲ್ಲದ ಮಾತುಗಳಾಡುತ್ತಿಲ್ಲ!
ನಾಮಸ್ಮರಣೆಯನ್ನೇನೂ ಬಿಟ್ಟಿಲ್ಲ! (ಆ)
-ಸ್ತಿ, ಪಾಸ್ತಿಗಾಗಿ ಹೊಡೆದಾಡುತ್ತಿಲ್ಲ!
ಕರ್ತವ್ಯನಿಷ್ಠೆಯಿನ್ನೆಂತೋ? ಗೊತ್ತಿಲ್ಲ! (ಅ)
-ನನ್ಯ ಭಕ್ತಿಗೇನೂ ಕಮ್ಮಿಯಾಗಿಲ್ಲ! (ನ)
-ಲ್ಲ ನಿರಂಜನಾದಿತ್ಯನಂತಾಗಿಲ್ಲ!!!
ಆಸ್ವಾಮಿಸ್ವಾಮಿ, ಸರ್ವಾಂತರ್ಯಾಮಿ! 2(919)
ಸ್ವಾನುಭಾವಾನಂದ ಶಿವ ಸ್ವಾಮಿ!
ಮೀನಾಗಿಷ್ಟಾಬ್ಧಿವಾಸ ಶ್ರೀ ಸ್ವಾಮಿ!
ಸ್ವಾಮಿಗಿಷ್ಟಾಪ್ತಾಂಜನೇಯ ಸ್ವಾಮಿ! (ಅ)
-ಮಿತ ಪರಾಕ್ರಮಿ ಗುಹ ಸ್ವಾಮಿ!
ಸಚ್ಚಿದಾನಂದಾನಂದಾತ್ಮ ಸ್ವಾಮಿ! (ಸ)
-ರ್ವಾಂಗ ಸುಂದರ ಶ್ರೀರಾಮ ಸ್ವಾಮಿ!
ತತ್ವಾರ್ಥ ದಕ್ಷಿಣಾಮೂರ್ತಿ ಸ್ವಾಮಿ! (ವೀ)
-ರ್ಯಾನುಗ್ರಹ ಗ್ರಹ ಸೂರ್ಯ ಸ್ವಾಮಿ! (ಪ್ರೇ)
-ಮಿ ಶ್ರೀ ನಿರಂಜನಾದಿತ್ಯ ಸ್ವಾಮಿ!!!
ಆಹಾರಾನ್ವೇಷಣದಿರುವೆ! 1(368)
ಹಾಳು ಹೊಟ್ಟೆಗಲೆದಿರುವೆ!
ರಾಗ ದ್ವೇಷವಿಲ್ಲದಿರುವೆ! (ಅ)
-ನ್ವೇಷಣ ಮುಗಿಸದಿರುವೆ! (ವಿ)
-ಷವನು ಸೇವಿಸದಿರುವೆ! (ಗ)
-ಣದಿ ಹೊಡೆದಾಡದಿರುವೆ!
ದಿಟವ ಮರೆಯದಿರುವೆ! (ತಿ)
-ರುಗುತಿದ್ಧಾನಂದದಿರುವೆ! (ಸೇ)
-ವೆ ನಿರಂನಗೆಂದಿರುವೆ!!!
ಅವಧೂತ ಶ್ರೀ ಶ್ರೀ ನಿರಂಜನಾನಂದ ಸರಸ್ವತಿ