ಶರಣರು, ಸಂತರು, ಬದುಕಿದ್ದಾಗ ಅವರ ಅಪಾರ ಶಿಷ್ಯವರ್ಗವನ್ನುದ್ದೇಶಿಸಿ ಕೊಡುವ ಉಪದೇಶ, ಸಮಾಜಕ್ಕೆ ಅವರು ನೀಡುವ ಭೋಧಾಮೃತಗಳ ದಿವ್ಯಾನುಭವವು ಸಾರ್ಥಕತೆಯನ್ನು ಪಡೆಯುವುದು, ಅವರ ಕಾಲಾನಂತರದಲ್ಲಿ. ಶ್ರೀ ನಿರಂಜನ ಯೋಗಿಗಳು ಈಗ ನಮ್ಮ ನಡುವೆ ಇಲ್ಲ. ಆದರೆ ಶರದೃತುವಿನ ಮಳೆಹನಿ ನಿಂತ ನಂತರ ಸೂರ್ಯನ ಬೆಳಕು ಹೆಚ್ಚು ಹೆಚ್ಚು ನಿರ್ಮಲವಾಗಿ ಪ್ರಕಾಶಿಸುವಂತೆ, ಅವರ ಅಮರವಾಣಿಯ ಮೂಲಕ, ಮತ್ತಷ್ಟು ಪ್ರಜ್ವಲವಾಗಿ ಬೆಳಗುತ್ತ ನಂಬಿದ ಸಾವಿರಾರು ಜನರ ಬಾಳಿಗೆ ದಿವ್ಯ ಚೇತನ ರೂಪದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಬುದ್ಧ, ಬಸವ ಅಲ್ಲಮ, ಪುರಂದರ, ಕನಕ ಮೊದಲಾದ ಎಲ್ಲಾ ಮಹಾಸಂತರ ಸಂದೇಶಗಳಂತೆ, ಅವರ ವಾಣಿಯೂ ಭಕ್ತಾದಿಗಳ ಹೃದಯದಲ್ಲಿ ಅಮೃತವನ್ನು ಸಿಂಪಡಿಸುತ್ತದೆ.

ಶ್ರೀ ರಮಣ ಮಹರ್ಷಿಗಳಂತೆ ಶ್ರೀ ನಿರಂಜನಾನಂದರೂ ಮೌನಯೋಗಿಗಳಾಗಿದ್ದರು. ಮೌನದಲ್ಲೆ ಶಬ್ದದ ನಾದಶಕ್ತಿಯನ್ನು ಮಿಡಿಯುತ್ತಿದ್ದರು. ಮಾತಿಗಿಂತ ಮೌನಕೊಡುವ ಅರ್ಥಶಕ್ತಿ ಮಿಗಿಲಾದುದು ಎಂಬುದು ಅವರನ್ನು ಕಂಡವರಿಗೆಲ್ಲ ಅನುಭವವಾಗಿದೆ. ಶಿಷ್ಯರು, ಸಂದರ್ಶಕರು, ಸಾಮಾನ್ಯಜನರು ಕೇಳಿದ ಪ್ರಶ್ನೆಗಳಿಗೆ ಅವರು ಸ್ಲೇಟಿನ ಮೇಲೆ ಬರೆದು ಪರಿಹಾರ ಸೂಚಿಸುತ್ತಿದ್ದರು. ಹಿರಿಯರು, ಕಿರಿಯರು, ಮಕ್ಕಳು, ಯಾರೇ ಬರಲಿ, ಸದಾ ಪ್ರೀತಿ ವಾತ್ಸಲ್ಯಗಳ ನಗು ಮುಖದಿಂದ ಬರಮಾಡಿಕೊಳ್ಳುತ್ತ, ಅವರವರ ಭಾವನೆಗಳಿಗನುಗುಣವಾಗಿ, ತಮ್ಮ ಬರಹದ ಮೂಲಕ ವ್ಯಕ್ತಗೊಳಿಸಿ ಸಾಕ್ಷಾತ್ಕಾರ ಮಾಡಿಕೊಳ್ಳುತ್ತಿದ್ದರು.

ಮಂಡ್ಯದ ಶ್ರೀನಿವಾಸಪುರ (ಉಮ್ಮಡಹಳ್ಳಿ)ದ ಬಳಿಯಿರುವ ಈಗಿನ ಅಸಿಟೇಟ್ ನಗರದಲ್ಲಿ ಶ್ರೀನಿರಂಜನ ಕುಟೀರವು ಅಧ್ಯಾತ್ಮಿಕ ಅನುಭವದ ಚಿಂತನೆಗಳು ಭಕ್ತಿ ಭಾವನೆಗಳ ತವರಾಗಿ ಪಾವನ ಕ್ಷೇತ್ರವಾಗಿರುವುದು. ಶ್ರೀ ಗುರುಗಳ ಆರಾಧ್ಯ ದೈವ ಶ್ರೀ ದತ್ತಾತ್ರೇಯ ಸ್ವಾಮಿ ಸಾನಿಧ್ಯದಿಂದ ಶ್ರೀ ನಿರಂಜನಾನಂದ ಸರಸ್ವತಿಯವರು, ಶ್ರೀ ಗುರು ದತ್ತಾತ್ರೇಯ ಸ್ವಾಮಿಯಲ್ಲಿಟ್ಟಿದ್ದ ಅನನ್ಯ ಸಮರ್ಪಣಭಾವದಿಂದ ಒಂದು ಅತ್ತಿ ಸಸಿಯನ್ನು ನೆಟ್ಟರು. ಅದು ಗಿಡವಾಗಿ ಮರವಾಗಿ ಬೆಳೆದು, ದತ್ತಾತ್ರೇಯನ ಆಕಾರದಲ್ಲಿ ಮೂರು ಕವಲುಗಳಾಗಿ ಒಡೆದು ಬೆಳೆಯಿತು. ದತ್ತಾತ್ರೇಯನು ಸೃಷ್ಟಿ, ಸ್ಥಿತಿ, ಲಯ ಸ್ವರೂಪರಾದ ತ್ರಿಮೂರ್ತಿಗಳ ತ್ರಿಶಕ್ತಿಯ ಸಂಕೇತ. ಮೂರು ಶಕ್ತಿಗಳು ಒಗ್ಗೂಡಿ ಈ ಜಗತ್ತನ್ನು ನಿಯಂತ್ರಿಸುತ್ತದೆಂಬ ಭಾರತೀಯ ತತ್ವ ಚಿಂತನೆಯ ಪ್ರತೀಕ. ದತ್ತಾತ್ರೇಯ ಸ್ವಾಮಿಯನ್ನು ಆ ಅತ್ತಿಮರದಲ್ಲಿ ಆಹ್ವಾನಿಸಿ ಪ್ರತಿಷ್ಠಾಪಿಸಿದ ಶ್ರೀ ಗುರು ನಿರಂಜನರು ನಿರ್ಮಲ ಭಕ್ತಿ, ಜ್ಞಾನ ವೈರಾಗ್ಯಗಳಿಂದ ಅವನನ್ನು ಆರಾಧಿಸಿದರು. ಅದರ ಫಲವೇ ಶ್ರೀ ನಿರಂಜನ ಕ್ಷೇತ್ರ. ಆ ಫಲದ ಪ್ರಯೋಜನವನ್ನು ಸಮಸ್ತ ಜನರ ಕಲ್ಯಾಣಕ್ಕೆ ಮೀಸಲಾಗಿರಿಸಿ ಅವರು "ನನ್ನ ಅನುಪಸ್ಥಿತಿಯಲ್ಲಿ ಉಪಸ್ಥಿತಿಯನ್ನು ಕಾಣು'' ಎಂಬ ಮಾತಿನಂತೆ ಕಣ್ಮರೆಯಾದ ಮೇಲೂ ಅವರು ಜೀವಂತವಾಗಿ ಜನಸ್ತೋಮದ ನಡುವೆ ನಿಂತಿದ್ದಾರೆ. ಅದೇ ಪ್ರೀತಿ, ಅದೇ ವಾತ್ಸಲ್ಯ, ಅದೇ ನಗು!

ಶ್ರೀ ಶ್ರೀ ನಿರಂಜನಾನಂದ ಸರಸ್ವತಿ
ಅವಧೂತ ಶ್ರೀ ಶ್ರೀ ನಿರಂಜನಾನಂದ ಸರಸ್ವತಿ

Visitor
Not connected to database